ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಶತಕ ಹಾಗೂ ಬೌಲರ್ ಗಳ ಅಮೋಘ ಪ್ರದರ್ಶನದ ನೆರವಿನಿಂದ ರೆಸ್ಟ್ ಆಫ್ ಇಂಡಿಯಾ ತಂಡ ಇರಾನಿ ಕಪ್ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಮೊದಲ ದಿನವೇ ಮುನ್ನಡೆ ಸಾಧಿಸಿದೆ.
ರಾಜ್ ಕೋಟ್ ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡ ಮೊದಲ ಇನಿಂಗ್ಸ್ ನಲ್ಲಿ 98 ರನ್ ಗೆ ಆಲೌಟಾಯಿತು. ಇದು ಇರಾನಿ ಟ್ರೋಫಿ ಇತಿಹಾಸದಲ್ಲೇ 5ನೇ ಅತ್ಯಂತ ಕಳಪೆ ಮೊತ್ತವಾಗಿದೆ.
ನಂತರ ಮೊದಲ ಇನಿಂಗ್ಸ್ ಆರಂಭಿಸಿದ ರೆಸ್ಟ್ ಆಫ್ ಇಂಡಿಯಾ ದಿನದಾಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 205 ರನ್ ಗಳಿಸಿದೆ. ಈ ಮೂಲಕ ಮೊದಲ ದಿನವೇ 107 ರನ್ ಗಳ ಭಾರೀ ಮುನ್ನಡೆ ಪಡೆದಿದೆ.
ರೆಸ್ಟ್ ಆಫ್ ಇಂಡಿಯಾ ಕೂಡ ಒಂದು ಹಂತದಲ್ಲಿ 18 ರನ್ ಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತದಿಂದ ತತ್ತರಿಸಿತು. ಆದರೆ ಸರ್ಫರಾಜ್ ಖಾನ್ ಮತ್ತು ಹನುಮ ವಿಹಾರಿ ಮುರಿಯದ 4ನೇ ವಿಕೆಟ್ ಗೆ 180 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು.
ಸರ್ಫರಾಜ್ ಖಾನ್ 126 ಎಸೆತಗಳಲ್ಲಿ 19 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 125 ರನ್ ಗಳಿಸಿ ಔಟಾಗದೇ ಉಳಿದರೆ, ಹನುಮ ವಿಹಾರಿ 145 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 62 ರನ್ ಬಾರಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ.
ಪೂಜಾರ ವಿಫಲ
ರೆಸ್ಟ್ ಆಫ್ ಇಂಡಿಯಾ ದಾಳಿಗೆ ತತ್ತರಿಸಿದ ಸೌರಾಷ್ಟ್ರ ತಂಡದ ನಾಯಕ ಚೇತೇಶ್ವರ್ ಪೂಜಾರ (1) ಸೇರಿದಂತೆ ಬ್ಯಾಟ್ಸ್ ಮನ್ ಗಳು ಸಂಪೂರ್ಣ ವಿಫಲರಾದರು. ಧರ್ಮೆಂದ್ರಸಿನ್ಹಾ ಜಡೇಜಾ (28), ಅರ್ಪಿತ ವಸವಡ (22) ಸ್ವಲ್ಪ ಪ್ರತಿರೋಧ ಒಡ್ಡಿದರು. ರೆಸ್ಟ್ ಆಫ್ ಇಂಡಿಯಾ ಪರ ಮುಖೇಶ್ ಕುಮಾರ್ 4, ಕುಲದೀಪ್ ಸೇನ್ ಮತ್ತು ಉಮರ್ ಮಲಿಕ್ ತಲಾ 3 ವಿಕೆಟ್ ಗಳಿಸಿದರು.