ಸಂಘಟಿತ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡ 54 ರನ್ ಗಳ ಭಾರೀ ಅಂತರದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಐಪಿಎಲ್ ನಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 209 ರನ್ ಪೇರಿಸಿತು. ಬೃಹತ್ ಮೊತ್ತ ಬೆಂಬತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 155 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಗೆಲುವಿನೊಂದಿಗೆ ಪಂಜಾಬ್ 12 ಪಂದ್ಯಗಳಲ್ಲಿ 6 ಜಯ ಹಾಗೂ 6 ಸೋಲಿನೊಂದಿಗೆ 12 ಅಂಕ ಸಂಪಾದಿಸಿ 6ನೇ ಸ್ಥಾನದಲ್ಲಿದ್ದರೂ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಂಡರೆ, 13 ಪಂದ್ಯಗಳಿಂದ 7 ಜಯ ಹಾಗೂ 6 ಸೋಲಿನೊಂದಿಗೆ 14 ಅಂಕ ಗಳಿಸಿರುವ ಆರ್ ಸಿಬಿ 4ನೇ ಸ್ಥಾನದಲ್ಲಿ ಉಳಿದುಕೊಂಡಿದ್ದು, ಪ್ಲೇ ಆಫ್ ರೇಸ್ ನಲ್ಲಿದೆ.
ಆರ್ ಸಿಬಿ ಪರ ಗ್ಲೆನ್ ಮ್ಯಾಕ್ಸ್ ವೆಲ್ 35 ವೈಯಕ್ತಿಕ ಗರಿಷ್ಟ ರನ್ ಗಳಿಸಿದರೆ, ರಜತ್ ಪಟಿದರ್ 26, ವಿರಾಟ್ ಕೊಹ್ಲಿ 20 ಮಾತ್ರ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಕೈ ಚೆಲ್ಲಿದರು.
ಪಂಜಾಬ್ ಪರ ಕಾಗಿಸೊ ರಬಡಾ 3 ವಿಕೆಟ್ ಗಳಿಸಿದರೆ, ರಿಷಿ ಧವನ್ , ರಾಹುಲ್ ಚಾಹರ್ ತಲಾ 2 ಗಳಿಸಿದರು.