ಬೆಂಗಳೂರು: ಅಮೆರಿಕ ಮೂಲದ ಸೆಮಿಕಂಡಕ್ಟರ್ ತಯಾರಕಾ ಸಂಸ್ಥೆಗಳಾದ ಕ್ರಿಪ್ಟಾನ್ ಸಲ್ಯುಶನ್ಸ್ (Krypton Solutions) ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (texas instruments) ಕರ್ನಾಟಕದಲ್ಲಿ ತಮ್ಮ ಹೆಜ್ಜೆಗುರುತು ಹೆಚ್ಚಿಸಲು ಹೊರಟಿದೆ. ಟೆಕ್ಸಾಸ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಕ್ರಿಪ್ಟಾನ್ ಸಲ್ಯೂಷನ್ಸ್ ಕಂಪನಿ ಕರ್ನಾಟಕದಲ್ಲಿ ಹೊಸ ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್ ಘಟಕ (PCB unit) ಸ್ಥಾಪಿಸಲು ಹೊರಟಿದೆ. ಡಲ್ಲಾಸ್ನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ ತನ್ನ ಆರ್ ಅಂಡ್ ಡಿ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ರಾಜ್ಯ ನಿಯೋಗವೊಂದು ಅಮೆರಿಕದಲ್ಲಿ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಬಂದಿರುವುದು ತಿಳಿದುಬಂದಿದೆ. ಕ್ರಿಪ್ಟೋನ್ ಸಲ್ಯೂಷನ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಜೊತೆಗೆ ಇಆರ್ಬಿ ಲಾಜಿಕ್ (ERPL) ಕಂಪನಿಯೊಂದಿಗೂ ಪಾಟೀಲ್ ನೇತೃತ್ವದ ನಿಯೋಗ ಮಾತನಾಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕ್ರಿಪ್ಟೋನ್ ಸಲ್ಯೂಷನ್ಸ್ ಮೈಸೂರು ಮತ್ತು ಚಾಮರಾಜನಗರದಲ್ಲಿ ಪಿಸಿಬಿ ಫ್ಯಾಬ್ರಿಕೇಶನ್ ಘಟಕಗಳನ್ನು ಸ್ಥಾಪಿಸಬಹುದು. ಇದಕ್ಕೆ ಅಂದಾಜು 100 ಮಿಲಿಯನ್ ಡಾಲರ್ (ಸುಮಾರು 832 ಕೋಟಿ ರೂ) ಹೂಡಿಕೆ ಆಗಬಹುದು. ಟೆಕ್ಸಾಸ್ನಲ್ಲಿರುವ ಕ್ರಿಪ್ಟೋನ್ನ 40,000 ಚದರಡಿಯಷ್ಟಿರುವ ಬೃಹತ್ ಘಟಕಕ್ಕೆ ರಾಜ್ಯ ನಿಯೋಗ ಭೇಟಿ ನೀಡಿ ವೀಕ್ಷಣೆ ನಡೆಸಿತು. ಹಾಗೆಯೇ, ಡಲ್ಲಾಸ್ನಲ್ಲಿರುವ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ 300 ಎಂಎಂ ವೇಫರ್ ಫ್ಯಾಬ್ ತಯಾರಿಕಾ ಘಟಕಕ್ಕೂ ಭೇಟಿ ಕೊಟ್ಟಿತು.











