ಪ್ರತಿಯೊಬ್ಬರ ಜೀವನದಲ್ಲೂ ವಿವಾಹ ಒಂದು ಮಹತ್ವದ ಘಟ್ಟ. ಆಧುನೀಕತೆ ಮತ್ತು ಬದಲಾಗಿರುವ
ಜೀವನ ಶೈಲಿಯ ಕಾರಣದಿಂದಾಗಿ ಇಂದು ದಿನೇ ದಿನೇ ಯುವಕ ಯುವತಿಯರು ತಮ್ಮ
ಬಾಳಸಂಗಾತಿಗಳನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಂದು ಮಹಿಳೆಯುಪುರುಷನಿಗೆ ಸರಿ ಸಮಾನಳಾಗಿ ದುಡಿಯುತ್ತಿರುವುದರಿಂದ ಕೆಲಸದ ಸ್ಥಳದಲ್ಲಿಯೇ ಬಾಳ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಜಾತಿಗಳ ವಿನಾಶದಿಂದಲೇ ಮಾತ್ರ ಸಮಾನತೆಯ ಸಮಾಜವನ್ನು ಕಟ್ಟಬಹುದೆಂದು ಬಾಬಾ ಸಾಹೇಬರು ದಶಕಗಳ ಹಿಂದೆಯೇ ಹೇಳಿದ್ದರು. ಆದರೆ ನಮ್ಮ ಸಮಾಜದಲ್ಲಿ ಈಗಲೂ ಆಳವಾಗಿ ಬೇರೂರಿರುವ ಜಾತಿ , ಮೇಲು ,ಕೀಳು ಎಂಬ ಮನೋಭಾವನೆ ಇಂದಿಗೂ ಜೀವಂತವಾಗಿದ್ದು ಶೋಷಿತ ಸಮುದಾಯಗಳನ್ನು ಇನ್ನೂ ದೂರ ತಳ್ಳುತ್ತಿದೆ. ಈಗ ಅದರಲ್ಲೂ ದಲಿತ ವರ್ಗದವರೇ ಅವರ ಸಮುದಾಯದ ಮತ್ತೊಂದು ಜಾತಿಯ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವಂತ ಅನಿಷ್ಠ ಘಟನೆಗಳೂ ನಡೆಯುತ್ತಿವೆ. ಇದೆಲ್ಲ ಮಾಡುತ್ತಿರುವುದು ಅವಿದ್ಯಾವಂತರೋ ಅಶಿಕ್ಷಿತರೋ ಅಲ್ಲ ಬದಲಿಗೆ ಶಿಕ್ಷಣ ಇರುವವರೇ ಮಾಡುತ್ತಿದ್ದಾರೆ.
ದೇಶದಲ್ಲಿ ಜಾತಿಯ ಕಾರಣದಿಂದಲೇ ಅಥವಾ ಯುವತಿ ತನಗಿಷ್ಟ ಬಂದ ಯುವಕನನ್ನು ಪ್ರೇಮಿಸಿ ಮದುವೆ ಆದ ಕಾರಣಕ್ಕೆ ವರ್ಷಕ್ಕೆ ಸಾವಿರಾರು ಕೊಲೆಗಳು, ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಇಂತಹ ಆತಂಕದ ಸಂದರ್ಭದಲ್ಲಿ ನಮ್ಮ ನ್ಯಾಯಾಂಗವು ಪ್ರೇಮಿಗಳ ಪರ ಗಟ್ಟಿ ನಿಲುವು ತೆಗೆದುಕೊಂಡು ಅವರಿಗೆ ಕಾನೂನಿನ ಅಭಯ ಒದಗಿಸಿರುವುದು ದೇಶದಲ್ಲಿ ಜಾತ್ಯಾತೀತ ವ್ಯವಸ್ಥೆ ಇನ್ನೂ ಬಲಿಷ್ಠವಾಗಿರುವುದರ ದ್ಯೋತಕವಾಗಿದೆ. ಪ್ರೇಮಿಗಳಿಬ್ಬರ ವಿವಾಹದ ಕುರಿತು ವಿಚಾರಣೆ ನಡೆಸಿದ ದೇಶದ ಸರ್ವೋಚ್ಚ ನ್ಯಾಯಾಲಯ ಅಂತರ್ಜಾತಿ ವಿವಾಹಗಳು ಜಾತಿ ಮತ್ತು ಸಮುದಾಯದ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ. ವಿದ್ಯಾವಂತ ಯುವ ಜನಾಂಗವು ತಮ್ಮ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುವುದರಿಂದ ಜಾತಿ ಕಟ್ಟುಪಾಡುಗಳು ಕಡಿಮೆ ಆಗುತ್ತಿವೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ. ಇಂದು ವಿವಾಹದ ಕಾರಣದಿಂದ ಯುವಕ, ಯುವತಿಯರು ಹಿರಿಯರಿಂದ ಬೆದರಿಕೆಗಳನ್ನು
ಎದುರಿಸುತ್ತಿದ್ದು ನ್ಯಾಯಾಲಯಗಳು ಈ ಯುವ ಜನಾಂಗದ ನೆರವಿಗೆ ಬರುತ್ತಿವೆ ಎಂದು ಉನ್ನತ
ನ್ಯಾಯಾಲಯ ಹೇಳಿದೆ.
ಈ ಕುರಿತು ಪೋಲೀಸ್ ತನಿಖಾ ಅಧಿಕಾರಿಗಳಿಗೆ ಸಲಹೆ ನೀಡುವುದು ಮತ್ತು ಸಾಮಾಜಿಕವಾಗಿ ಸೂಕ್ಷ್ಮವಾಗಿರುವ ಇಂತಹ ಪ್ರಕರಣಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಕೆಲವು ಮಾರ್ಗಸೂಚಿಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಪೋಲೀಸರಿಗೆ ನೀಡುವುದು ಮುಂದಿನ ಆದ್ಯತೆ ಆಗಬೇಕು ಎಂದು ಅದು ಹೇಳಿದೆ. ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ ರಾಯ್ ಅವರ ನ್ಯಾಯಪೀಠ ಈ ಹೇಳಿಕೆ ನೀಡಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಹಿರಿಯರ ಇಚ್ಚೆಗೆ ವಿರುದ್ಧವಾಗಿ
ತನ್ನ ಆಯ್ಕೆಯ ಯುವಕನನ್ನು ಮದುವೆಯಾದ ಮಹಿಳೆಯ ಪೋಷಕರು ನೀಡಿದ ದೂರನ್ನು ಅನ್ನು
ಕೋರ್ಟು ರದ್ದುಪಡಿಸಿದೆ.
ಉನ್ನತ ನ್ಯಾಯಾಲಯವು ತನ್ನ ಇತ್ತೀಚಿನ ತೀರ್ಪಿನಲ್ಲಿ, ಯುವತಿಯ ಪೋಷಕರು ಮದುವೆಯನ್ನು ಒಪ್ಪಿಕೊಂಡು ಅವಳೊಂದಿಗೆ ಮಾತ್ರವಲ್ಲದೆ ಅವಳ ಪತಿಯೊಂದಿಗೆ ಸಹ ಉತ್ತಮ
ಬಾಂಧವ್ಯವನ್ನು ಹೊಂದುವ ತಿಳುವಳಿಕೆ ಹೊಂದಿರುತ್ತಾರೆಂದು ನಂಬಿದೆ ಎಂದು
ಹೇಳಿದೆ. ಅದು, ಕೋರ್ಟಿನ ದೃಷ್ಟಿಯಲ್ಲಿ, ಮುಂದಿರುವ ಏಕೈಕ ಮಾರ್ಗವಾಗಿದೆ.
ಮಗುವನ್ನು ಮತ್ತು ಅಳಿಯನನ್ನು ಜಾತಿ ಮತ್ತು ಧರ್ಮದ ಕಾರಣಕ್ಕೆ ದೂರವಿರಿಸುವುದು
ಉತ್ತಮ ಸಾಮಾಜಿಕ ನಡವಳಿಕೆಯಲ್ಲ ಎಂದು ನ್ಯಾಯಪೀಠ ಮಹಿಳೆಯ ಪೋಷಕರಿಗೆ ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಉನ್ನತ ನ್ಯಾಯಾಲಯವು ವಿದ್ಯಾವಂತ ಯುವಕರು ಮತ್ತು ಯುವತಿಯರು ತಮ್ಮ ಜೀವನ
ಸಂಗಾತಿಗಳನ್ನು ಅವರೇ ಆರಿಸಿಕೊಳ್ಳುತ್ತಿದ್ದಾರೆ, ಜಾತಿ ಮತ್ತು ಧರ್ಮದ ಹಿಂದಿನ ಕಟ್ಟುಪಾಡುಗಳನ್ನು ತೊಡೆದು ಹಾಕುತ್ತಿದೆ ಎಂದು ಕೋರ್ಟ್ ಹೇಳಿದೆ. ಈ ಮಧ್ಯೆ, ಯುವಕರು ಹಿರಿಯರಿಂದ ಬೆದರಿಕೆಗಳನ್ನು ಎದುರಿಸಿದರೆ ನ್ಯಾಯಾಲಯಗಳು ಯುವಕರ ನೆರವಿಗೆ ಬರುತ್ತವೆ ಎಂಬ ಸ್ಪಷ್ಟನೆಯನ್ನು ನೀಡಿದೆ. ಉನ್ನತ ನ್ಯಾಯಾಲಯಗಳ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿ, ಇಬ್ಬರು ವಯಸ್ಕ ವ್ಯಕ್ತಿಗಳು ವಿವಾಹವಾಗಲು ಪರಸ್ಪರ ಒಪ್ಪಿಕೊಂಡ ಮೇಲೆ ಕುಟುಂಬ ಅಥವಾ ಸಮುದಾಯದ ಒಪ್ಪಿಗೆಯ ಅಗತ್ಯವಿಲ್ಲ ಮತ್ತು ಅವರು ಉದಾರವಾಗಿಯೇ ಒಪ್ಪಿಗೆಯನ್ನು ನೀಡಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ. ವ್ಯಕ್ತಿಯ ಆಯ್ಕೆಯು ಘನತೆಯ ಅವಿಭಾಜ್ಯ ಭಾಗವಾಗಿದೆ ಎಂದು ಉನ್ನತ ನ್ಯಾಯಾಲಯದ 2017 ರ ತೀರ್ಪಿನಲ್ಲಿ ಉಲ್ಲೇಖಿಸಿದೆ.
ವೈವಾಹಿಕ ಸಂಬಂಧಗಳು ಗೌಪ್ಯತೆಯ ವಲಯದೊಳಗೆ ಇರುತ್ತವೆ, ನಂಬಿಕೆಯ ವಿಷಯಗಳು ಸಹ
ಅವುಗಳ ಮೇಲೆ ಕನಿಷ್ಠ ಪರಿಣಾಮ ಬೀರುತ್ತವೆ. ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಭಾರತದ ಸಂವಿಧಾನದ 21 ನೇ ಪರಿಚ್ಚೇದದಲ್ಲಿ ನೀಡಲಾಗಿದ್ದು 2018 ರ ಹಾದಿಯಾ ಪ್ರಕರಣದ ತೀರ್ಪನ್ನು ಕೂಡ ನ್ಯಾಯಪೀಠ ಉಲ್ಲೇಖಿಸಿದೆ. ತೀರ್ಪು ಬರೆದ ನ್ಯಾಯಮೂರ್ತಿ ಕೌಲ್, ಅವರು ದೂರನ್ನು ವಿಚಾರಣೆ ಮಾಡುವಾಗ ತನಿಖಾಧಿಕಾರಿಯು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದರೆ ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪ ಅಗತ್ಯವಿರಲಿಲ್ಲ ಎಂದು ಹೇಳಿದರು. ತನಿಖಾಧಿಕಾರಿಯು
ಮಹಿಳೆಯ ಹೇಳಿಕೆಯನ್ನು ದಾಖಲಿಸಲು ಪೋಲೀಸ್ ಠಾಣೆಗೆ ಬರಲು ಹೇಳಿರುವುದು ಪೋಷಕರ
ಸುಳ್ಳು ದೂರನ್ನು ಪುರಸ್ಕರಿಸಿ ಅಳಿಯನನ್ನು ಕಾನೂನಿನ ಕುಣಿಕೆಯಲ್ಲಿ ಸಿಲುಕಿಸುವ ಸಲುವಾಗಿ ಎಂದು ಕೋರ್ಟು ಸಂದೇಹಿಸಿದೆ. ಮದುವೆಯ ಪ್ರಮಾಣಪತ್ರವನ್ನು ಅವರು ಪೋಲೀಸರಿಗೆ ನೀಡಿದ್ದು ಮಾತುಕತೆ ನಡೆಸಿರುವುದರಿಂದ ತನಿಖಾಧಿಕಾರಿಯು ಮತ್ತೆ ಒಬ್ಬಳನ್ನೇ ಠಾಣೆಗೆ ಬರಲು ಹೇಳಿರುವುದು ಒತ್ತಡ ಹೇರುವ ತಂತ್ರ ಎಂದು ಕೋರ್ಟು ಹೇಳಿದ್ದು ತನಿಖಾಧಿಕಾರಿಗಳಿಗೆ ಇಂತಹ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ತರಬೇತಿ ನೀಡಲು ಶಿಫಾರಸು ಮಾಡಿದೆ.
ತನಿಖಾಧಿಕಾರಿಯು ದಂಪತಿಗಳ ಮನೆಗೆ ಭೇಟಿ ನೀಡಿ ಅಲ್ಲಿಯೇ ಹೇಳಿಕೆ ದಾಖಲಿಸಿಕೊಳ್ಳಬಹುದಿತ್ತು. ಆದರೆ ಪೋಲೀಸ್ ಠಾಣೆಗೆ ಬರಲು ಹೇಳಿರುವುದು ನಿಸ್ಸಂದೇಹವಾಗಿ ಯುವತಿಯ ಮೇಲೆ ಒತ್ತಡವನ್ನು ಹೇರಲು ಎಂದು ಕೋರ್ಟು ತಿಳಿಸಿದೆ. ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ಸಲಹೆ ನೀಡುವುದು ಮಾತ್ರವಲ್ಲದೆ
ಪೊಲೀಸ್ ಸಿಬ್ಬಂದಿಯ ಅನುಕೂಲಕ್ಕಾಗಿ ಇಂತಹ ಪ್ರಕರಣಗಳನ್ನು ನಿಭಾಯಿಸಲು ತರಬೇತಿ ಕಾರ್ಯಕ್ರಮವನ್ನು ಸರ್ಕಾರವು ರೂಪಿಸಬೇಕು ಎನ್ನಲಾಗಿದೆ. ಮುಂದಿನ ಎಂಟು ವಾರಗಳಲ್ಲಿ ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ, ಇಂತಹ ಸಾಮಾಜಿಕ ಸೂಕ್ಷ್ಮ ಪ್ರಕರಣಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಕೆಲವು ಮಾರ್ಗಸೂಚಿಗಳನ್ನು ರೂಪಿಸುತ್ತೇವೆ ಎಂದು ನ್ಯಾಯಪೀಠ ಹೇಳಿದೆ.