ಶತಮಾನಗಳ ಇತಿಹಾಸವಿದ್ದರೂ ಹಸಿವಿಲ್ಲದ ದಿನವನ್ನು ಕಾಣಲು ಇಂದಿಗೂ ಪರದಾಡುತ್ತಿರುವ ಭಾರತ ಇಂದು ಮೂಲತಃ ಹಸಿವಿನ ವಿರುದ್ಧ ಹೋರಾಡಬೇಕಿದೆ. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೂ ತಾಳೆಯಾಗದ ಹಂತದಲ್ಲಿ ನವ ಭಾರತ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಯತ್ನಿಸುತ್ತಿದೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಹಸಿವಿನಿಂದ ಬಳಲದೆ ಎರಡು ಹೊತ್ತಿನ ಕೂಳು ಪಡೆದೇ ತೀರುತ್ತಾನೆ ಎಂದು ಹೇಳುವ ಆತ್ಮವಿಶ್ವಾಸವನ್ನೇ ಕಳೆದುಕೊಂಡಿರುವ ಒಂದು ಆಡಳಿತ ವ್ಯವಸ್ಥೆ , ಮಾರುಕಟ್ಟೆ ಅಂಕಿಅಂಶಗಳನ್ನು ನಿರಾಕರಿಸುತ್ತಲೇ, ಬಡತನ ನಿವಾರಣೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ಪ್ರಥಮ ಸಂಸತ್ ಭಾಷಣದಲ್ಲಿ ನರೇಂದ್ರ ಮೋದಿ, ಮನಮೋಹನ್ ಸಿಂಗ್ ಸರ್ಕಾರ ಜಾರಿಗೊಳಿಸಿದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆ (ನರೇಗಾ) ಕುರಿತು ಹೀಗೆ ಲೇವಡಿ ಮಾಡಿದ್ದರು : “ ನರೇಗಾ ಯೋಜನೆಯನ್ನು ರದ್ದುಗೊಳಿಸಕೂಡದು ಎಂದು ನನ್ನ ಒಳಮನಸ್ಸು ಹೇಳುತ್ತದೆ. ಏಕೆಂದರೆ ಈ ಯೋಜನೆಯು ಹಿಂದಿನ ಕಾಂಗ್ರೆಸ್ ಸರ್ಕಾರಗಳ ವೈಫಲ್ಯಗಳನ್ನು ಸ್ಮರಿಸುವ ಸ್ಮಾರಕವಾಗಿ ಉಳಿಯಲಿದೆ. ಅಷ್ಟು ವರ್ಷಗಳು ಅಧಿಕಾರದಲ್ಲಿದ್ದ ನಂತರವೂ ನೀವು ಸಾಧಿಸಿರುವುದೇನೆಂದರೆ, ಬಡತನದ ಬೇಗೆಯಲ್ಲಿರುವ ವ್ಯಕ್ತಿಗೆ ಹಳ್ಳಿಗಳಲ್ಲಿ ಹಳ್ಳಗಳನ್ನು ತೋಡುವ ಕೆಲಸ ನೀಡಿರುವುದು ”.
ಸ್ವತಂತ್ರ ಭಾರತದ ಅತ್ಯಂತ ಜನಪ್ರಿಯ ಮತ್ತು ಕ್ರಾಂತಿಕಾರಿ ಯೋಜನೆ ಎಂದು ಜಗದ್ವಿಖ್ಯಾತವಾಗಿರುವ ನರೇಗಾ ಯೋಜನೆಯನ್ನು ಹಂತಹಂತವಾಗಿ ರದ್ದುಗೊಳಿಸುವ ನರೇಂದ್ರ ಮೋದಿ ಸರ್ಕಾರದ ಯೋಜನೆಗೆ ಈ ಮಾತುಗಳು ಪೂರಕವಾಗಿದ್ದವು. ನವ ಉದಾರವಾದ ಮತ್ತು ಜಾಗತೀಕರಣದ ದಾಳಿಗೆ ಸಿಲುಕಿ ಉದ್ಯೋಗಾವಕಾಶಗಳನ್ನು ಕಳೆದುಕೊಳ್ಳುತ್ತಿದ್ದ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳ ಯುವಪೀಳಿಗೆಗೆ ಮತ್ತು ಶ್ರಮಜೀವಿಗಳಿಗೆ, ವರ್ಷಕ್ಕೆ ಕನಿಷ್ಟ 150 ದಿನಗಳ ಕೂಲಿ ಒದಗಿಸುವ ನರೇಗಾ ಯೋಜನೆ ಸಂಜೀವಿನಿಯಂತೆ ಇಂದಿಗೂ ಫಲಕಾರಿಯಾಗುತ್ತಿದೆ. ಈ ಯೋಜನೆ ಕೇವಲ “ಹಳ್ಳ ತೋಡುವ” ಕಾಮಗಾರಿ ಅಲ್ಲ, ಬದಲಾಗಿ “ ಅನ್ನ ನೀಡುವ ” ಸಂಜೀವಿನಿ ಎಂದು ನರೇಂದ್ರ ಮೋದಿ ಸರ್ಕಾರಕ್ಕೆ ಅರ್ಥವಾಗಲು ಕೋವಿದ್ 19 ಬರಬೇಕಾಯಿತು. ಈ ಯೋಜನೆ ಇಲ್ಲದೆ ಹೋಗಿದ್ದಲ್ಲಿ ಕೋವಿದ್ 19 ಮತ್ತು ಮೋದಿ ಸರ್ಕಾರದ ಅವೈಜ್ಞಾನಿಕ ಲಾಕ್ ಡೌನ್ ಸೃಷ್ಟಿಸಿದ ವಾತಾವರಣದಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ಅಂತಿಮ ಪಯಣಕ್ಕೆ ಸಿದ್ಧರಾಗಬೇಕಿತ್ತು. ಲಾಕ್ ಡೌನ್ ಅವಧಿಯಲ್ಲಿ ಸೃಷ್ಟಿಯಾದ ಆಹಾರ ಪದಾರ್ಥಗಳ ಕೊರತೆ ಮತ್ತು ಆದಾಯದ ಕೊರತೆಯನ್ನು ನೀಗಿಸುವಲ್ಲಿ ನರೇಗಾ ಯೋಜನೆ ಮಹತ್ತರ ಪಾತ್ರ ವಹಿಸಿದ್ದನ್ನು, ಈಗ ಮೋದಿ ಸರ್ಕಾರವೂ ಸಮ್ಮತಿಸುತ್ತದೆ.
‘ ಹಸಿವು ’ ಎಂದರೇನು ಎಂದು ಅರ್ಥವಾಗದ ವ್ಯಕ್ತಿಗೆ ಅನ್ನದ ಬೆಲೆಯೂ ಅರ್ಥವಾಗುವುದಿಲ್ಲ. ತಮಗೆ ನೀಡಿದ ಅನ್ನದ ತಟ್ಟೆಯಲ್ಲಿ ಸ್ವಲ್ಪವಾದರೂ ಉಳಿಸಿ ಬಿಸಾಡುವುದನ್ನೇ ಒಂದು ಫ್ಯಾಷನ್ ಮಾಡಿಕೊಂಡಿರುವ ಶ್ರೀಮಂತರಿಗೆ ಆ ಬಿಸಾಡುವ ಅನ್ನವನ್ನು ಆಯ್ದುಕೊಳ್ಳಲು ಹತ್ತಾರು ಮಕ್ಕಳು ಕಸದ ತೊಟ್ಟಿಯ ಬಳಿ ಕಾಯುತ್ತಿರುತ್ತಾರೆ ಎಂಬ ಪರಿಜ್ಞಾನವೇ ಇರುವುದಿಲ್ಲ. ಇದ್ದರೂ ಸಹ ಆ ಹಸಿದ ಹೊಟ್ಟೆಗಳು ತಮ್ಮ ಕರ್ಮಫಲವನ್ನು ಅನುಭವಿಸುತ್ತಿವೆ ಎಂಬ ಅಹಮಿಕೆಯೊಂದಿಗೆ ತಮ್ಮ ಐಷಾರಾಮಿ ಬದುಕನ್ನು ವಿಸ್ತರಿಸಿಕೊಳ್ಳುತ್ತಿರುತ್ತಾರೆ. ಇಂತಹ ಒಂದು ಶ್ರೀಮಂತ ವರ್ಗವನ್ನು ಪ್ರತಿನಿಧಿಸುವ ಆಡಳಿತ ವ್ಯವಸ್ಥೆ ಮತ್ತು ಶ್ರೇಣೀಕೃತ ಜಾತಿ ವ್ಯವಸ್ಥೆಯೇ ಭಾರತೀಯ ಸಮಾಜದ ಮೇಲೆ ತನ್ನ ನಿಯಂತ್ರಣವನ್ನು ಸಾಧಿಸುತ್ತಾ ಬಂದಿದೆ. ಹಾಗಾಗಿಯೇ ಭಾರತದಲ್ಲಿ ತಮ್ಮ ದಿನದ ಕೂಳಿಗಾಗಿಯೂ ಕನಿಷ್ಟ ದುಡಿಮೆ ಮಾಡಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿರುವ ಕೋಟ್ಯಂತರ ಶ್ರಮಜೀವಿಗಳ ದುರ್ಭರ ಬದುಕು ಆಳುವ ಪಕ್ಷಗಳಿಗೆ ಗೋಚರಿಸುವುದಿಲ್ಲ, ಅರ್ಥವಾಗುವುದೂ ಇಲ್ಲ.
ಆಹಾರ ಮಾನವನ ಅಥವಾ ಮತ್ತಾವುದೇ ಚರಾಚರ ಜೀವಿಯ ನೈಸರ್ಗಿಕ ಹಕ್ಕು . ಮನುಷ್ಯ ತಾನು ಸೇವಿಸುವ ಆಹಾರವನ್ನು ತಾನು ಹುಟ್ಟಿ ಬೆಳೆಯುವ ಪರಿಸರದಲ್ಲೇ ರೂಢಿಸಿಕೊಂಡಿರುತ್ತಾನೆ. ತನ್ನನ್ನು ಪೋಷಿಸುವ ಸಮುದಾಯ ಅನುಸರಿಸುವ ಆಹಾರ ಪದ್ಧತಿಯನ್ನೇ ಪ್ರತಿಯೊಬ್ಬ ವ್ಯಕ್ತಿಯೂ ಅನುಸರಿಸುವುದು ನೈಸರ್ಗಿಕ ವಾಸ್ತವ. ಹಾಗಾಗಿಯೇ ಜನಸಂಸ್ಕೃತಿಗಳಲ್ಲಿರುವಷ್ಟೇ ವೈವಿಧ್ಯತೆ ಆಹಾರ ಪದ್ಧತಿಗಳಲ್ಲೂ ಇರುತ್ತದೆ. ಶಾಖಾಹಾರಿಗಳಲ್ಲಿರುವಷ್ಟೇ ವೈವಿಧ್ಯಮಯ ಆಹಾರ ಪದ್ಧತಿಗಳು ಮಾಂಸಾಹಾರಿಗಳಲ್ಲೂ ಇರುತ್ತದೆ. ತನ್ನ ಬದುಕಿಗೆ ಅವಶ್ಯವಾದ ಹಾಗೂ ತನ್ನ ದುಡಿಮೆಗೆ ಕೈಗೆಟಕುವಂತಹ ಆಹಾರ ಪದ್ಧತಿಯನ್ನು ಮನುಷ್ಯ ಅಳವಡಿಸಿಕೊಳ್ಳುತ್ತಾನೆ. ಸಾಮಾಜಿಕ ಬೆಳವಣಿಗೆಯ ಹಂತದಲ್ಲಿ ಒಂದು ನಿರ್ದಿಷ್ಟ ಜಾತಿ, ಮತ, ಪಂಥ ಅಥವಾ ಸ್ಥಳೀಯ ಜನಾಂಗೀಯ ಸಂಸ್ಕೃತಿಯ ಚೌಕಟ್ಟಿನಲ್ಲೇ ಬೆಳೆಯುವ ವ್ಯಕ್ತಿಗೆ ಆ ನಿರ್ದಿಷ್ಟ ಸಾಂಸ್ಥಿಕ ನೆಲೆಗಳ ಆಹಾರ ಪದ್ಧತಿಗಳೇ ರೂಢಿಯಾಗಿರುತ್ತದೆ. ಪೂರ್ಣ ಶಾಖಾಹಾರವನ್ನೇ ಅನುಸರಿಸುವ ಸಮುದಾಯಗಳು ನೈಸರ್ಗಿಕವಾಗಿ ಬೆಳೆಯುವ ಸೊಪ್ಪು ತರಕಾರಿಗಳಲ್ಲೇ ಭಿನ್ನ ಭೇದ ಮಾಡುವ ಒಂದು ಪ್ರವೃತ್ತಿಯನ್ನು ಭಾರತೀಯ ಸಮಾಜದಲ್ಲಿ ಇಂದಿಗೂ ಸಹ ಕಾಣಬಹುದು.
ಹಾಗೆಯೇ ಮಾಂಸಾಹಾರಿಗಳಲ್ಲೂ ಸಹ ಕೆಲವು ಪ್ರಾಣಿಗಳ ಮಾಂಸ ವರ್ಜ್ಯ ಎನಿಸಿಕೊಳ್ಳುತ್ತವೆ. ಕೆಲವು ಅಪ್ಯಾಯಮಾನವಾಗುತ್ತವೆ. ಎಲ್ಲ ಮಾಂಸಾಹಾರಿಗಳೂ ಎಲ್ಲ ಪ್ರಾಣಿಗಳನ್ನೂ ಭಕ್ಷಿಸುವುದಿಲ್ಲ ಎನ್ನುವುದು ವಾಸ್ತವ. ಆದರೆ ಎರಡೂ ಆಹಾರ ಪದ್ಧತಿಗಳಲ್ಲಿ ಸಾಮುದಾಯಿಕವಾದ ನಿರ್ಬಂಧಗಳು, ಸಾಂಸ್ಥಿಕ ನಿಬಂಧನೆಗಳು ಮತ್ತು ಸಾಮಾಜಿಕ ಕಟ್ಟಳೆಗಳು ಇರುವುದನ್ನು ಸಮಾನವಾಗಿ ಕಾಣಬಹುದು. ನಿರ್ದಿಷ್ಟ ಮತಾಚರಣೆಯ ಸಂದರ್ಭದಲ್ಲಿ ನಿಬಂಧನೆಗೊಳಪಡುವ ಆಹಾರ ಪದ್ಧತಿಗಳು, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಜಾತಿಗಳ ನೆಲೆಯಲ್ಲೂ ಕಂಡುಬರುತ್ತದೆ. ಭಾರತದಲ್ಲಿ ಜಾತಿ ವೈವಿಧ್ಯತೆ ಇರುವಷ್ಟೇ ಪ್ರಮಾಣದಲ್ಲಿ ಆಹಾರ ವೈವಿಧ್ಯತೆಯೂ ಇರುವುದನ್ನು ಚಾರಿತ್ರಿಕವಾಗಿ ದಾಖಲಿಸಬಹುದು. ಒಂದೇ ಜಾತಿಯಲ್ಲಿನ ವಿಭಿನ್ನ ಪಂಗಡಗಳು ವಿಭಿನ್ನ ಆಹಾರ ಶೈಲಿಗಳನ್ನು ರೂಢಿಸಿಕೊಂಡಿರುತ್ತವೆ.
ಇದು ಆಹಾರ ಸಂಸ್ಕೃತಿಯಲ್ಲಿ ಸಹಜವಾಗಿ ಮೂಡಿಬಂದಿರುವ ಒಂದು ಜೈವಿಕ ವೈವಿಧ್ಯತೆ. ತಾವು ಸೇವಿಸುವ ಆಹಾರದ ಮೂಲಕವೇ ತಮ್ಮ ಸಾಂಸ್ಕೃತಿಕ ನೆಲೆಗಳನ್ನು ಗುರುತಿಸಿಕೊಳ್ಳುವ ಮಟ್ಟಿಗೆ ಸಮುದಾಯಗಳು ಈ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ. ಈ ಸಾಮುದಾಯಿಕ ನೆಲೆಗಳು ಸಾಂಸ್ಥೀಕರಣಗೊಂಡಾಗ ನಿರ್ದಿಷ್ಟ ಮತ ಧರ್ಮಗಳು ತಮ್ಮದೇ ಆದ ಆಹಾರ ಸಂಹಿತೆಗಳನ್ನೂ ರೂಪಿಸುತ್ತವೆ. ಮತಶ್ರದ್ಧೆ ಉಳ್ಳವರು, ಧರ್ಮ ನಿಷ್ಠರು ಈ ಸಂಹಿತೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನೂ ಕಾಣಬಹುದು. ಇಸ್ಲಾಂ ಧರ್ಮೀಯರಲ್ಲಿ ಹಲಾಲ್ ಮಾಡದ ಆಹಾರವನ್ನು ದೇವರಿಗೆ ಅರ್ಪಿಸುವುದಿಲ್ಲ ಎಂಬ ಸಂಹಿತೆ ಜಾರಿಯಲ್ಲಿರುವಂತೆಯೇ, ಹಿಂದೂ ಧರ್ಮೀಯರಲ್ಲೂ ಕೆಲವು ತರಕಾರಿ, ಕಾಯಿಪಲ್ಲೆ ಮತ್ತು ಆಹಾರಗಳೂ ಸಹ ದೇವರ ನೈವೇದ್ಯಕ್ಕೆ ನಿಷಿದ್ಧವಾಗಿರುತ್ತದೆ. ದೋಷ ಪರಿಹಾರಾರ್ಥವಾಗಿಯೇ ಬಳಸಲಾಗುವ ಹಲವು ರೀತಿಯ ಕಾಯಿಪಲ್ಲೆಗಳು ಇಂದಿಗೂ ಪೂಜಾ ವಿಧಿವಿಧಾನಗಳಿಗೆ ನಿಷಿದ್ಧವಾಗಿಯೇ ಇರುವುದನ್ನು ಗಮನಿಸಬಹುದು. ಈ ಆಹಾರ ಸಂಹಿತೆಗಳು ಯಾವುದೇ ಮತದ, ಧಾರ್ಮಿಕ ಆಚರಣೆಯ ಆಂತರಿಕ ವಿಚಾರವಾಗಬೇಕೇ ಹೊರತು, ಸಾರ್ವಜನಿಕ ಚರ್ಚೆಯ ವಿಷಯವಾಗಬಾರದು.
ಸಾಂಸ್ಥೀಕರಣಗೊಂಡ ಧಾರ್ಮಿಕ ಆಚರಣೆಗಳು ಸಹಜವಾಗಿಯೇ ಸಮುದಾಯದ ಜನರನ್ನು ಮತಶ್ರದ್ಧೆಗೆ, ಧರ್ಮ ನಿಷ್ಠೆಗೆ ಬಂಧಿಸಿರುತ್ತವೆ. ಇಸ್ಲಾಂ ಮತ್ತು ಕ್ರೈಸ್ತ ಮತದ ಅನುಯಾಯಿಗಳು ಈ ರೀತಿಯ ಸಾಂಸ್ಥಿಕ ನಿಬಂಧನೆಗಳಿಗೆ, ನಿರ್ಬಂಧಗಳಿಗೆ ಒಳಪಟ್ಟಿರುತ್ತಾರೆ. ಹಿಂದೂಗಳ ಧಾರ್ಮಿಕ ಆಚರಣೆಗಳಲ್ಲೂ ಜನಪದೀಯ ದೇವಾನುದೇವತೆಗಳನ್ನು ವೈದಿಕಶಾಹಿಯು ಆಕ್ರಮಿಸಿಕೊಂಡಿರುವ ಸಂದರ್ಭದಲ್ಲಿ ಇದೇ ರೀತಿಯ ನಿರ್ಬಂಧಗಳು ಹೆಚ್ಚಾಗಿರುವುದನ್ನು ಗಮನಿಸಬಹುದು. ದೇವೋಪಾಸನೆಯ ಸಂದರ್ಭದಲ್ಲಿ ಅರ್ಪಿಸಲಾಗುವ ನೈವೇದ್ಯದಲ್ಲಿ ಬಳಸಬಹುದಾದ ಪದಾರ್ಥಗಳ ಪೈಕಿ ನಿಷಿದ್ಧವಾಗಿರುವುದರ ಪಟ್ಟಿ ದೊಡ್ಡದಾಗಿಯೇ ಕಂಡುಬರುತ್ತದೆ. ತಮ್ಮ ಧರ್ಮ ನಿಷ್ಠೆ ಮತ್ತು ಸಹಜವಾದ ದೈವ ಭೀತಿಗೆ ಬದ್ಧರಾಗಿ ಜನಸಾಮಾನ್ಯರು ಈ ನಿಷೇಧಗಳಿಗೊಳಪಟ್ಟೇ ತಮ್ಮ ಪೂಜಾ ಕೈಂಕರ್ಯಗಳನ್ನು ಸಲ್ಲಿಸುತ್ತಾರೆ. ವೈದಿಕಶಾಹಿಯ ಪರಿಕಲ್ಪನೆಯ ನೈವೇದ್ಯಕ್ಕೂ, ಜನಪದೀಯ ಪರಿಕಲ್ಪನೆಯ ಎಡೆ ಇಡುವ ಪದ್ಧತಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಿದರೆ, ಆಹಾರ ಬಳಕೆ ಮತ್ತು ಸೇವನೆಯ ಸುತ್ತ ಇರುವ ಸಾಂಸ್ಕೃತಿಕ ವೈವಿಧ್ಯತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ .
ಮತೀಯ ನೆಲೆಗಳನ್ನು, ಧಾರ್ಮಿಕ ಆಚರಣೆಗಳನ್ನು ಸಾಂಸ್ಥೀಕರಿಸುವ ಮೂಲಕ ಜನಸಮುದಾಯಗಳ ಮೇಲೆ, ಜನಾಂಗಗಳ ಮೇಲೆ ನಿಯಂತ್ರಣ ಸಾಧಿಸಲೆತ್ನಿಸುವ ಮತಕೇಂದ್ರಿತ ಸಾಂಸ್ಕೃತಿಕ ರಾಜಕಾರಣ ಭಾರತದ ಈ ಬಹುಸಂಸ್ಕೃತಿಯ ನೆಲೆಗಳನ್ನು ಶಿಥಿಲಗೊಳಿಸುತ್ತಿದೆ. ಸಮಸ್ತ ಹಿಂದೂಗಳು ಆಚರಿಸುವ ಉಗಾದಿ ಮತ್ತು ಸವರ್ಣೀಯೇತರರು ಆಚರಿಸುವ ವರ್ಷ ತೊಡಕು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಪಷ್ಟವಾಗಿ ಬಿಂಬಿಸುವುದಲ್ಲವೇ ? ಪಾರಂಪರಿಕವಾಗಿ ಆಚರಿಸಿಕೊಂಡು ಬಂದಿರುವ ಈ ವರ್ಷತೊಡಕು ಎಂಬ ಸಂಭ್ರಮಾಚರಣೆಗೆ ಹಲಾಲ್-ಜಟ್ಕಾ ವಿವಾದದ ಮೂಲಕ ತಡೆಯೊಡ್ಡುವ ಪ್ರಯತ್ನಗಳು ಸಫಲವಾಗುವುದಿಲ್ಲ ಎನ್ನುವುದನ್ನೂ ಹಿಂದೂ ಸಮುದಾಯ ನಿರೂಪಿಸಿದೆ. ಜನಪದೀಯ, ಗ್ರಾಮೀಣ ದೇವಾನುದೇವತೆಗಳನ್ನು ವೈದಿಕಶಾಹಿಯು ಎಷ್ಟೇ ಆಕ್ರಮಿಸಿದ್ದರೂ, ಸಾಮುದಾಯಿಕ ನೆಲೆಯಲ್ಲಿ ಅವರ್ಣೀಯ ಸಮುದಾಯಗಳು ತಮ್ಮ ಪಾರಂಪರಿಕ ಧಾರ್ಮಿಕ ಆಚರಣೆಯನ್ನು ಮುಂದುವರೆಸಿಕೊಂಡೇ ಬಂದಿರುವುದನ್ನು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಬಹುದಲ್ಲವೇ ?
ಈ ಬಹುಸಂಸ್ಕೃತಿಯ ನೆಲೆಗಳನ್ನು ಭಂಜಿಸಿ, ಏಕಸಂಸ್ಕೃತಿಯನ್ನು ಹೇರುವ ಯಾವುದೇ ಪ್ರಯತ್ನವನ್ನು ಭಾರತೀಯರಾದ ನಾವು ವಿರೋಧಿಸಲೇಬೇಕಿದೆ. ಭಾರತೀಯ ಸಮಾಜದ ನಾಡಿಮಿಡಿತವನ್ನು ಅರಿತ ಯಾರಿಗೇ ಆದರೂ ಇಲ್ಲಿನ ಬಹುತ್ವ ಸಂಸ್ಕೃತಿಯ ನೆಲೆಗಳ ಆಳ, ವಿಸ್ತಾರ ಮತ್ತು ಹರವು ಅರ್ಥವಾಗಿರಲೇಬೇಕು. ಸಮನ್ವಯ, ಸೋದರತ್ವ ಮತ್ತು ಸಹಬಾಳ್ವೆಗೆ ಈ ಸಾಂಸ್ಕೃತಿಕ ನೆಲೆಗಳೇ ಮೂಲ ಆಧಾರ ಎನ್ನುವ ವಾಸ್ತವವನ್ನು ಇನ್ನಾದರೂ ಅರ್ಥಮಾಡಿಕೊಳ್ಳಬೇಕಿದೆ. ಅನ್ಯ ಮತದ್ವೇಷವನ್ನೇ ತಮ್ಮ ರಾಜಕೀಯ ಪ್ರಣಾಳಿಕೆಯನ್ನಾಗಿ ಪರಿಗಣಿಸುವ ಮತಾಂಧ ಶಕ್ತಿಗಳ ಸಾಂಸ್ಕೃತಿಕ ರಾಜಕಾರಣ ಈ ಬಹುತ್ವದ ಬೇರುಗಳನ್ನೂ ವಿಷಪೂರಿತವಾಗಿಸುವ ನಿಟ್ಟಿನಲ್ಲಿ ಸಾಗುತ್ತಿದೆ. ಹಲಾಲ್-ಜಟ್ಕಾ ವಿವಾದ ಇಂತಹ ಒಂದು ಪ್ರಯತ್ನವಷ್ಟೇ. ಈ ವಿವಾದದ ಹಿಂದಿರುವ ಆರ್ಥಿಕ ಸಂಕೇತಗಳನ್ನೂ ಈ ಸಂದರ್ಭದಲ್ಲಿ ಪರಾಮರ್ಶಿಸಬೇಕಿದೆ.
ಹಲಾಲ್ ಮಾಂಸವನ್ನು ನಿಷೇಧಿಸುವ ಆಗ್ರಹ ಕೇವಲ ಸಾಮಾನ್ಯ ಮುಸ್ಲಿಂ ವರ್ತಕರನ್ನಷ್ಟೇ ಬಾಧಿಸುತ್ತದೆ. ಕೆಎಫ್‍ಸಿ ಯಂತಹ ಜಾಗತಿಕ ಉದ್ದಿಮೆಗಳು, ಸಂಸ್ಕರಿತ ಮಾಂಸವನ್ನು ಶೀತಲಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡುವ ವಾಲ್ ಮಾರ್ಟ್, ಡಿ ಮಾರ್ಟ್, ರಿಲೈಯನ್ಸ್, ಮೆಟ್ರೋ, ಲುಲು, ಬಿಗ್ ಬಜಾರ್, ಲಾಯಲ್ ವರ್ಲ್ಡ್ ಇನ್ನೂ ಮುಂತಾದ ಷಾಪಿಂಗ್ ಮಾಲ್‍ಗಳು ಈ ಆಗ್ರಹಕ್ಕೆ ಗುರಿಯಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ಇದು ಮಾರುಕಟ್ಟೆ ವ್ಯವಸ್ಥೆಗೆ ಧಕ್ಕೆ ಉಂಟುಮಾಡುತ್ತದೆ. ತಮ್ಮ ನಿತ್ಯ ಜೀವನಕ್ಕಾಗಿ ರಸ್ತೆ ಬದಿಗಳಲ್ಲಿ, ಸಂತೆ, ಮಾರುಕಟ್ಟೆಗಳಲ್ಲಿ ಸಣ್ಣಪುಟ್ಟ ಪ್ರಮಾಣದಲ್ಲಿ ಮಾಂಸ ಮಾರಾಟ ಮಾಡುವ ಮುಸ್ಲಿಂ ವರ್ತಕರು ಮತಾಂಧರ ದಾಳಿಗೊಳಗಾಗುತ್ತಾರೆ. ಸಣ್ಣ ಪ್ರಮಾಣದ ವ್ಯಾಪಾರಿ ನೆಲೆಗಳನ್ನು ಧ್ವಂಸಗೊಳಿಸಿ, ಬಂಡವಾಳ ಕ್ರೋಢೀಕರಣಕ್ಕೆ ನೆರವಾಗುವಂತಹ ಬೃಹತ್ ಷಾಪಿಂಗ್ ಮಾಲ್‍ಗಳನ್ನು ಪೋಷಿಸುವ, ನವ ಉದಾರವಾದದ ಆರ್ಥಿಕ ನೀತಿಗೆ ಈ ಮತಾಂಧತೆಯೂ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ತೀವ್ರಗೊಳ್ಳುತ್ತಿರುವ ಬಲಪಂಥೀಯ ರಾಜಕಾರಣ ಮತ್ತು ಸಾಂಸ್ಕೃತಿಕ ದಾಳಿಯ ಸಂದರ್ಭದಲ್ಲಿ ಇದು ನಿರೀಕ್ಷಿತ ಬೆಳವಣಿಗೆಯೇ ಆಗಿದೆ. ಆದರೆ ಭಾರತ ಇಂದು ಬೌದ್ಧಿಕವಾಗಿಯಾದರೂ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳ ಪೈಕಿ ಒಂದಾಗಿದೆ. ಭಾರತದ ಬೌದ್ಧಿಕ ಸಂಪತ್ತು ಮತ್ತು ವಿದ್ವತ್ತಿನ ಸಹಾಯದಿಂದಲೇ ಪಾಶ್ಚಿಮಾತ್ಯ ರಾಷ್ಟ್ರಗಳೂ ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿವೆ. ಆದರೆ ವಿಸ್ತರಿಸುತ್ತಿರುವ ಈ ಬೌದ್ಧಿಕ ವಲಯವನ್ನು ನಿಯಂತ್ರಿಸುವ ಪ್ರಯತ್ನಗಳ ಮೂಲಕ ಹಿಂದುತ್ವದ ಪ್ರತಿಪಾದಕರು ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತಿದ್ದಾರೆ. ತಮ್ಮ ಮತಶ್ರದ್ಧೆ ಮತ್ತು ಧರ್ಮನಿಷ್ಠೆಯನ್ನು ವ್ಯಕ್ತಿಗತ ನೆಲೆಯಿಂದ ಸಾಂಸ್ಥಿಕ ನೆಲೆಗೆ ವಿಸ್ತರಿಸಿಕೊಳ್ಳುವ ಮೂಲಕ ಸುಶಿಕ್ಷಿತ ಜನತೆಯೂ ಸಹ ಅಂಧಶ್ರದ್ಧೆಗೆ, ಅವೈಜ್ಞಾನಿಕ ಆಲೋಚನೆಗಳಿಗೆ, ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ದಲಿತ ಅಸ್ಪೃಶ್ಯ ಸಮುದಾಯಗಳ, ಬುಡಕಟ್ಟು ಜನಾಂಗಗಳ ಸಾಂಸ್ಕೃತಿಕ-ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳನ್ನು ನೇಪಥ್ಯಕ್ಕೆ ಸರಿಸಿ, ವೈದಿಕ ಪರಂಪರೆಯ ಆಚರಣೆಗಳನ್ನು ಹೇರುವ ಒಂದು ವ್ಯವಸ್ಥಿತ ಸಾಂಸ್ಕೃತಿಕ ರಾಜಕಾರಣ ವರ್ತಮಾನದ ಸಮಸ್ತ ಸಮಸ್ಯೆಗಳಿಗೂ ಕಾರಣ ಎನ್ನುವುದನ್ನು ಶೋಷಿತ ಸಮುದಾಯಗಳು ಅರ್ಥಮಾಡಿಕೊಳ್ಳಬೇಕಿದೆ.
ಭಾರತ ತನ್ನೊಡಲಿನಲ್ಲಿ ಅಸ್ಪೃಶ್ಯತೆಯಂತಹ ಅಮಾನುಷ ಶೋಷಕ ವ್ಯವಸ್ಥೆಯನ್ನು ಅರಗಿಸಿಕೊಂಡೇ ಒಂದು ಸಮನ್ವಯ-ಸೌಹಾರ್ದ ಸಮಾಜವನ್ನು ಕಟ್ಟಿಕೊಂಡು ಬಂದಿದ್ದರೆ ಅದಕ್ಕೆ ಮೂಲ ಕಾರಣ ಈ ದೇಶದ ಶೋಷಿತ ಸಮುದಾಯಗಳ ಸಹಿಷ್ಣುತೆ ಮತ್ತು ಸೋದರತ್ವದ ನೆಲೆಗಳು. ಸಾಮಾಜಿಕಾರ್ಥಿಕ ಶೋಷಣೆ ಮತ್ತು ಸಾಂಸ್ಕೃತಿಕ ಹೇರಿಕೆಯ ಹೊರತಾಗಿಯೂ ಈ ಸಮಾಜ ತನ್ನ ಬಹುತ್ವದ ನೆಲೆಗಳನ್ನು ಸಂರಕ್ಷಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಭಾರತದ ಅಲ್ಪಸಂಖ್ಯಾತ ಸಮುದಾಯದ ಮಹತ್ತರವಾದ ಕೊಡುಗೆಯೂ ಇದೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಯಾವುದೇ ಸಮಾಜದಲ್ಲಿ ಸಹಜವಾಗಿ ಇರಬಹುದಾದ ಸಾಮಾಜಿಕ-ಸಾಂಸ್ಕೃತಿಕ ಒಳಬಿರುಕುಗಳು ಭಾರತೀಯ ಸಮಾಜವನ್ನೂ ವಿಭಿನ್ನ ಕಾಲಘಟ್ಟಗಳಲ್ಲಿ ಬಾಧಿಸಿದೆ. ಈ ಒಳಬಿರುಕುಗಳನ್ನು ಸರಿಪಡಿಸಿಕೊಂಡು ಒಂದು ಸಮ ಸಮಾಜವನ್ನು ನಿರ್ಮಿಸುವ ಕಡೆಗೆ ಪಯಣಿಸುವ ಕ್ಷಮತೆ ಭಾರತೀಯ ಸಮಾಜಕ್ಕೆ ಇದೆ. ಈ ಕ್ಷಮತೆಯೇ ಭಾರತದ ಬಹುತ್ವ ಸಂಸ್ಕೃತಿಗೆ ಸುಭದ್ರ ಬುನಾದಿಯೂ ಆಗಿದೆ.
ಭಾರತವನ್ನು “ ಸರ್ವ ಜನಾಂಗದ ಶಾಂತಿಯ ತೋಟ ”ವನ್ನಾಗಿ ಕಾಪಾಡಿಕೊಂಡು ಹೋಗಲು ಈ ಬಹುತ್ವದ ನೆಲೆಗಳನ್ನು ಕಾಪಾಡಿಕೊಂಡು ಹೋಗುವುದು ಮುಖ್ಯವಾಗುತ್ತದೆ. ಸಾಂಸ್ಕೃತಿಕ ರಾಜಕಾರಣಕ್ಕೆ ಬಲಿಯಾಗಿ ತನ್ನ ಬೌದ್ಧಿಕ ಸ್ಥಿಮಿತವನ್ನೇ ಕಳೆದುಕೊಂಡಂತಿರುವ ಭಾರತದ ಸುಶಿಕ್ಷಿತ ಬೌದ್ಧಿಕವಲಯ ತನ್ನ ದಾರಿದ್ರ್ಯತೆಯನ್ನು ನೀಗಿಸಿಕೊಂಡು, ವಾಸ್ತವ ಜಗತ್ತಿನತ್ತ ಮುಖ ಮಾಡಿದರೆ ಮಾತ್ರವೇ ನವ ಭಾರತ ಬಹು ಅಪೇಕ್ಷಿತ “ ಅಮೃತಕಾಲ ”ದತ್ತ ಸಾಗಲು ಸಾಧ್ಯ.