
ರಾಜ್ಯದಲ್ಲಿ ಹನಿಟ್ರ್ಯಾಪ್ ಹಂಗಾಮ ಜೋರಾಗಿದೆ. ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್ನಲ್ಲಿ ಸಿಕ್ಕಿಬಿದ್ದ ಬಳಿಕ ಮತ್ತೊಂದು ಹನಿಟ್ರ್ಯಾಪ್ ಸದ್ದು ಮಾಡುತ್ತಿದೆ. ರಾಜ್ಯದ ಪ್ರಭಾವಿ ಸಚಿವರು ಹನಿಟ್ರ್ಯಾಪ್ ಬಲೆಗೆ ಸಿಕ್ಕಿ ಬಿದ್ದಿದೆ ಎನ್ನಲಾಗ್ತಿದೆ. ತುಮಕೂರು ಭಾಗದ ರೆಬೆಲ್ ಮಿನಿಸ್ಟರ್ ವಿಡಿಯೋ ಹೊರ ಬಂದಿದ್ದು, ವಿಡಿಯೋ ನೋಡಿದ ಬಳಿಕ ಮಾತಿನ ಸಮರ ಮಾಡ್ತಿದ್ದ ಮಿನಿಸ್ಟರ್ ತಣ್ಣಗಾಗಿದ್ದಾರೆ ಅನ್ನೋ ಸುದ್ದಿ ಭಾರೀ ಸಂಚಲನ ಸೃಷ್ಟಿಸಿದೆ.

ಸಿದ್ದರಾಮಯ್ಯ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಈ ನಾಯಕರು, ಇತ್ತೀಚಿಗೆ ದಲಿತ ಸಮಾವೇಶದ ಮಾಡುವ ಬಗ್ಗೆ ಅಬ್ಬರಿಸಿದ್ದರು.ಅಷ್ಟು ಮಾತ್ರವಲ್ಲದೆ ಸಿಎಂ ಸ್ಥಾನಕ್ಕಾಗಿ ನಡೆಯುತ್ತಿದ್ದ ಪೈಪೋಟಿ ಬಗ್ಗೆಯೂ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸಿ ಎದುರಾಳಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದೀಗ ಎಲ್ಲಾ ವಿಚಾರಗಳಿಂದಲೂ ದೂರ ಉಳಿದಿರುವ ಸಚಿವರು, ಹನಿಟ್ರ್ಯಾಪ್ ವಿಡಿಯೋ ನೋಡಿದ ಬಳಿಕ ತಣ್ಣಗಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ಸಚಿವರೇ ಹನಿಟ್ರ್ಯಾಪ್ ಮಾಡಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದು, ಈ ಹಿಂದೆಯೂ ಈ ನಾಯಕರ ಮೇಲೆ ಆರೋಪ ಕೇಳಿ ಬಂದಿತ್ತು. ಆದರೆ ಆರೋಪ ನಿರಾಕರಿಸಿದ್ದರು. ಇದೀಗ ಮತ್ತೆ ಹನಿಟ್ರ್ಯಾಪ್ ಆರೋಪ ಅದೇ ಪ್ರಭಾವಿ ನಾಯಕರ ಬೆನ್ನು ಹತ್ತಿದೆ. ಕಾಂಗ್ರೆಸ್ ಪಕ್ಷದ ನಾಯಕರ ಕಣ್ಣು ಕೆಂಪಾಗಿಸಿದ್ದು, ಇನ್ನೆಷ್ಟು ನಾಯಕರ ವಿಡಿಯೋ ಇದ್ಯೋ ಅನ್ನೋ ಬಗ್ಗೆ ಚರ್ಚೆಗಳು ಶುರುವಾಗಿವೆ. ಸದ್ಯಕ್ಕೆ ವಿಡಿಯೋ ರಿಲೀಸ್ ಆಗಿದ್ದು, ನಾಯಕರನ್ನು ಮಟ್ಟ ಹಾಕಲು ನಿಯಂತ್ರಿಸಲು ಬಳಸಿಕೊಳ್ಳಲಾಗ್ತಿದೆ ಎಂದು ಆಂತರಿಕವಾಗಿ ಆಕ್ರೋಶ ವ್ಯಕ್ತವಾಗ್ತಿದೆ ಎನ್ನಲಾಗಿದೆ.