ನವದೆಹಲಿ: ಇಂಡಿಗೋ(IndiGo) ಸಂಸ್ಥೆಯಲ್ಲಿ ಎದುರಾಗಿರುವ ಸಮಸ್ಯೆ ಇಂದು ಕೂಡ ಮುಂದುವರಿದಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ(IndiGo Flight Cancellation) ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಿಬ್ಬಂದಿ ಕೊರತೆಯಿಂದ 550ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಸಂಚಾರ ವ್ಯತ್ಯಯವಾಗಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಇಂಡಿಗೋ ಮನವಿ ಮೇರೆಗೆ ಕೇಂದ್ರ ಸರ್ಕಾರವು ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮವನ್ನು ಭಾಗಶಃ ಹಿಂತೆಗೆದುಕೊಂಡಿದೆ. ಡಿಜಿಸಿಎ ಅಪರೇಷನ್‌ನ ಅಸಿಸ್ಟೆಂಟ್ ಡೈರೆಕ್ಟರ್ ಹಿಮಾಂಶು ಶ್ರೀವಾಸ್ತವ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ. ಇದರಿಂದ ಪೈಲಟ್ ಹೆಚ್ಚಿನ ಗಂಟೆ ವಿಮಾನ ಹಾರಾಟ ನಡೆಸಲು ಲಭ್ಯವಾಗುತ್ತಾರೆ. ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ನಿಯಮದಿಂದ ಒಂದು ವಾರಕ್ಕೆ 2 ದಿನ ಪೈಲಟ್‌ಗಳಿಗೆ ರಜೆ ನೀಡಬೇಕಾಗಿತ್ತು. ತಾತ್ಕಾಲಿಕವಾಗಿ ಈ ನಿಯಮಕ್ಕೆ ವಿನಾಯಿತಿ ನೀಡಲಾಗಿದೆ. ಸದ್ಯದ ವ್ಯತ್ಯಯವನ್ನು ನೀಗಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್ನು ಕಳೆದ ಮೂರು ದಿನಗಳಿಂದ ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ದಿನವೂ ಇಂಡಿಗೋ ಕೌಂಟರ್ ಬಳಿ ಪ್ರಯಾಣಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದು, ಇದರಿಂದ ವಿಮಾನ ನಿಲ್ದಾಣ ಸಿಬ್ಬಂದಿ ಕೂಡ ಪ್ರಯಾಣಿಕರನ್ನು ನಿಯಂತ್ರಿಸಲಾಗದೇ ಪರದಾಡುತ್ತಿದ್ದಾರೆ.











