ಕಾಂಗ್ರೆಸ್ ಒಂದು ಕಡೆ ತನ್ನದೇ ಆಂತರಿಕ ಹೊಯ್ದಾಟಗಳಲ್ಲಿ ಮುಳುಗಿದ್ದರೆ, ಬಿಜೆಪಿ ಕೂಡ ಅದರ ಜನವಿರೋಧಿ ನೀತಿಗಳಿಂದಾಗಿ ಜನಪ್ರಿಯತೆ ಕಳೆದುಕೊಂಡಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಯ ಹೊತ್ತಿಗೆ ಬಿಜೆಪಿ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಲಿದೆ ಎಂಬ ಸಾಮಾನ್ಯ ಲೆಕ್ಕಾಚಾರಗಳಿವೆ.
ಆದರೆ, ಅಂತಹ ಲೆಕ್ಕಾಚಾರಗಳು ಎಷ್ಟರಮಟ್ಟಿಗೆ ನಿಜವಾಗಬಹುದು? ನಿಜಕ್ಕೂ ಬಿಜೆಪಿ ಬಲ ಕ್ಷೀಣಿಸುತ್ತಿದೆಯೇ? ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಬಿಜೆಪಿಯ ಆಡಳಿತದ ಲೋಪಗಳನ್ನು ಜನರಿಗೆ ಮನವರಿಕೆ ಮಾಡಿ ಮೋದಿ ಆಡಳಿತದ ವಿರುದ್ಧ ಪ್ರಬಲ ಆಡಳಿತ ವಿರೋಧಿ ಅಲೆಯನ್ನು ಎಬ್ಬಿಸಬಲ್ಲವೆ? ಎಂಬುದು ಕೇಳಬೇಕಾದ ಪ್ರಶ್ನೆ.
ಆದರೆ, ಅಂತಹ ಪ್ರಶ್ನೆಗಳಿಗಿಂತ ಪ್ರತಿಪಕ್ಷಗಳ ಪಾಳೆಯದಲ್ಲಿ ಭಾರೀ ಭರವಸೆಯ, ಆತ್ಮವಿಶ್ವಾಸದ ಹೇಳಿಕೆಗಳೇ ಸದ್ದು ಮಾಡುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಅಗತ್ಯ ವಸ್ತು ಬೆಲೆ ಏರಿಕೆ, ಕರೋನಾ ಪರಿಸ್ಥಿತಿ ನಿಭಾಯಿಸುವಲ್ಲಿ ಆಡಳಿತದ ವೈಫಲ್ಯ, ಕೃಷಿ ಕಾಯ್ದೆಗೆ ರೈತ ವಿರೋಧ ಮುಂತಾದ ವಿಷಯಗಳನ್ನೇ ಮುಂದಿಟ್ಟುಕೊಂಡು, ಈಗಲೇ ಚುನಾವಣೆ ಬಂದರೂ ದೇಶದ ಜನತೆ ಮೋದಿಯವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎನ್ನುತ್ತಿದ್ದಾರೆ. ಅವರ ಪಕ್ಷದ ಹಲವು ನಾಯಕರು ಕೂಡ ಅದೇ ಮಾತನ್ನು ಜಪಿಸುತ್ತಿದ್ದಾರೆ.
ಆದರೆ, ಕಾಂಗ್ರೆಸ್ ಅಧಿನಾಯಕರೊಂದಿಗೆ ಆಪ್ತ ಸಂಪರ್ಕದಲ್ಲಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ನೀಡಿದ ಇತ್ತೀಚಿನ ಹೇಳಿಕೆ ಆ ನಾಯಕರ ಅಂತಹ ಹೇಳಿಕೆಗಳು ಎಷ್ಟು ಪೊಳ್ಳು ಮತ್ತು ಮೋದಿ- ಶಾ ಜೋಡಿ ದೇಶದ ಮತದಾರರ ಮೇಲೆ ಮತ್ತು ಚುನಾವಣಾ ವ್ಯವಸ್ಥೆಯ ಮೇಲೆ ಹೊಂದಿರುವ ಪ್ರಭಾವ ಎಂತಹದ್ದು ಎಂಬುದನ್ನು ಸಾರಿ ಹೇಳಿದೆ. ಕನಿಷ್ಟ ಇನ್ನೂ ಒಂದೆರಡು ದಶಕಗಳ ಕಾಲ ಬಿಜೆಪಿ ದೇಶದ ರಾಜಕಾರಣದ ಕೇಂದ್ರದಲ್ಲಿ ಇರಲಿದೆ. ರಾಹುಲ್ ಗಾಂಧಿಯವರು ಊಹಿಸಿದಂತೆ ಅದನ್ನು ಈಗಿಂದೀಗಲೇ ಬದಿಗೆ ಸರಿಸುವುದು ಸಾಧ್ಯವಿಲ್ಲ. ಹಾಗೊಂದುಕೊಂಡಿದ್ದರೆ ಅದು ಭ್ರಮೆ ಅಷ್ಟೇ ಎಂಬರ್ಥದ ಪ್ರಶಾಂತ್ ಮಾತುಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

ಇದೀಗ ‘ದ ಇಂಡಿಯನ್ ಎಕ್ಸ್ ಪ್ರೆಸ್’ನ ಸಂಪಾದಕೀಯ ಸಲಹೆಗಾರ್ತಿ ಕೋಮಿ ಕಪೂರ್, ಬಿಜೆಪಿಯ ರಾಜಕೀಯ ಪ್ರಾಬಲ್ಯ ಮತ್ತು ಕಾಂಗ್ರೆಸ ಸೇರಿದಂತೆ ಪ್ರತಿಪಕ್ಷಗಳಿಗೂ ಮತ್ತು ಬಿಜೆಪಿಗೂ ಮೂಲಭೂತವಾಗಿ ಇರುವ ವ್ಯತ್ಯಾಸದ ಕುರಿತು ತಮ್ಮ ಅಂಕಣದಲ್ಲಿ ವಿಶ್ಲೇಷಿಸಿದ್ದಾರೆ.
ಭಾರೀ ಪ್ರಯತ್ನ ಮತ್ತು ಪ್ರಚಾರದ ಹೊರತಾಗಿಯೂ ಬಿಜೆಪಿ ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಎದುರಿಸಿದ ಸೋಲಿನ ಮುಖಭಂಗ ಮತ್ತು ಇತ್ತೀಚಿನ ವಿವಿಧ ಉಪ ಚುನಾವಣೆಗಳಲ್ಲಿ ಅದು ಅನುಭವಿಸಿದ ಹಿನ್ನಡೆಯ ಹಿನ್ನೆಲೆಯಲ್ಲಿ ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಅಲ್ಲದಿದ್ದರೂ, ಹಿನ್ನಡೆಯಂತೂ ಅಗಲಿದೆ ಎಂದು ಹೇಳಬಹುದು. ಆದರೆ, ಪ್ರಧಾನಿ ಮೋದಿ ಪಕ್ಷದ ಇತ್ತೀಚಿನ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ತಮ್ಮ ಪಕ್ಷ ತನ್ನ ಪ್ರಾಬಲ್ಯ ಕಾಯ್ದುಕೊಳ್ಳಲಿದೆ. ಅದಕ್ಕಿರುವ ಕೇಡರ್ ಬಲ ಮತ್ತು ವಿಸ್ತಾರ ಕಾರ್ಯಕರ್ತರ ಜಾಲದ ಹಿನ್ನೆಲೆಯಲ್ಲಿ ಇತರೆ ಪಕ್ಷಗಳಿಗಿಂತ ಹೆಚ್ಚು ಬಲಿಷ್ಠವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನೆಲೆರಹಿತ ಪರಿಸ್ಥಿತಿ ಮತ್ತು ಬಿಜೆಪಿಯ ಪ್ರಬಲ ಕಾರ್ಯಕರ್ತರ ನೆಟ್ ವರ್ಕ್ ಹಿನ್ನೆಲೆಯಲ್ಲಿ ನೋಡಿದರೆ, ಮೋದಿಯವರ ಮಾತು ಕೇವಲ ಸ್ವಪ್ರತಿಷ್ಠೆಯ ಮಾತು ಎನ್ನಲಾಗದು.
ಮೋದಿ ತಮ್ಮ ಪಕ್ಷದ ಕಾರ್ಯಕಾರಿಣಿಯಲ್ಲಿ ಪಕ್ಷದ ಪ್ರಾಬಲ್ಯದ ಕುರಿತು ಇಂತಹ ಮಾತು ಮಾಡುವ ಮೂಲಕ ತಮ್ಮ ಬೆಂಬಲಿಗರು ಮತ್ತು ಕಾರ್ಯಕರ್ತರಿಗೆ ಒಂದು ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ. ಆದರೆ, ಬಿಜೆಪಿಯ ಪ್ರಾಬಲ್ಯದ ಕುರಿತು ಕೇವಲ ಅದರ ನಾಯಕರು ಮಾತ್ರ ಹೇಳುತ್ತಿಲ್ಲ, ಬದಲಾಗಿ ಪ್ರಶಾಂತ್ ಕಿಶೋರ್ ಮತ್ತು ಮಮತಾ ಬ್ಯಾನರ್ಜಿಯಂತಹ ಬಿಜೆಪಿಯ ಟೀಕಾಕಾರರು, ಪ್ರತಿಸ್ಪರ್ಧಿಗಳೂ ಹೇಳಿದ್ದಾರೆ ಎಂಬುದು ಗಮನಾರ್ಹ. ಮಮತಾ ಮತ್ತು ಪ್ರಶಾಂತ್ ಅವರು ಗೋವಾದ ಚುನಾವಣಾ ಪೂರ್ವ ಸಿದ್ಧತೆಗಳಲ್ಲಿ ತೊಡಗಿರುವಾಗಲೇ ಅವರು ಬಿಜೆಪಿಯ ಶಕ್ತಿಯ ಬಗ್ಗೆ ಹೇಳಿರುವ ಮಾತುಗಳು, ದುರಾಡಳಿತ, ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಿದ ಜನವಿರೋಧಿ ನೀತಿಗಳು, ಕೋಮು ವಿಭಜನೆಯ ಹೀನಾಯ ಪ್ರಯತ್ನಗಳು, ದೇಶದ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿ ಸರ್ವಾಧಿಕಾರಿ ವರಸೆ ಪ್ರದರ್ಶಿಸುತ್ತಿರುವುದು, ಸಂವಿಧಾನಿಕ ಸಂಸ್ಥೆಗಳ ದುರುಪಯೋಗ, ತನಿಖಾ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡಿರುವುದು ಮುಂತಾದ ಕಾರಣಗಳಿಂದಾಗಿ ಬಿಜೆಪಿಯ ವೈಭವದ ದಿನಗಳು ಮುಗಿದು ಹೋದವು ಎಂದು ಬೀಗುತ್ತಿರುವವರ ಲೆಕ್ಕಾಚಾರಗಳು ಎಷ್ಟು ಪೊಳ್ಳು ಎಂಬ ಬಗ್ಗೆ ಗಮನ ಸೆಳೆದಿವೆ.
“ಮುಖ್ಯವಾಗಿ ಪ್ರಧಾನಿ ಮೋದಿಯವರು ತಮ್ಮ ಆಪ್ತ ಅಮಿತ್ ಶಾ ಅವರ ನೆರವಿನೊಂದಿಗೆ ದೇಶದ ಚುನಾವಣಾ ರಾಜಕಾರಣದ ಚಹರೆಯನ್ನೇ ಬದಲಾಯಿಸಿದ್ದಾರೆ. ದೇಶದಲ್ಲಿ ಕಳೆದ 70 ವರ್ಷಗಳಿಂದ ಚಾಲ್ತಿಯಲ್ಲಿದ್ದ ಒಂದು ಚುನಾವಣೆಯ ಬಳಿಕ ಮುಂದಿನ ಚುನಾವಣೆ ಬರುವವರೆಗೆ ಆರಾಮ ಕುರ್ಚಿಗೆ ಒರಗಿ ವಿಶ್ರಾಂತ ರಾಜಕಾರಣ ಮಾಡುವ ವೆಸ್ಟ್ ಮಿನಿಸ್ಟರ್ ಶೈಲಿಯ ರಾಜಕಾರಣದ ಬದಲಾಗಿ, ಈಗ ಬಿಜೆಪಿಯ ವರ್ಷದ 365 ದಿನವೂ ಚುನಾವಣಾ ತಯಾರಿಯಲ್ಲೇ ಇರುವ ಶೈಲಿ ಚಾಲ್ತಿಗೆ ಬಂದಿದೆ. ಕುಗ್ರಾಮದ ಕಾರ್ಯಕರ್ತನಿಂದ ಆರಂಭವಾಗಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ಪ್ರಧಾನಿಯವರೆಗೆ ಪಕ್ಷದ ಪ್ರತಿಯೊಬ್ಬರೂ ಪ್ರತಿ ದಿನವೂ ಚುನಾವಣಾ ತಂತ್ರಗಾರಿಕೆಯಲ್ಲೇ ಮುಳುಗಿರುವ, ಚುನಾವಣೆಯನ್ನೇ ಮುಂದಿಟ್ಟುಕೊಂಡು ಪ್ರತಿ ಕೆಲಸ, ಪ್ರತಿ ಕಾಯ್ದೆ-ಕಾನೂನು, ನೀತಿ-ನಿರೂಪಣೆ ರೂಪಿಸುವ ಮಟ್ಟಿನ ಬದಲಾವಣೆಯನ್ನು ದೇಶದ ರಾಜಕಾರಣದಲ್ಲಿ ಬಿಜೆಪಿಯ ಈ ಜೋಡಿ ನಾಯಕರು ತಂದಿದ್ದಾರೆ. ಹಾಗಾಗಿ ಇಂದು ಬಿಜೆಪಿ ಕೇವಲ ಚುನಾವಣಾ ಕಾಲದಲ್ಲಿ ಮಾತ್ರ ಸಕ್ರಿಯವಾಗಿ, ಉಳಿದಂತೆ ಮಲಗಿಬಿಡುವ ಪಕ್ಷವಲ್ಲ. ಬದಲಾಗಿ ಅದೊಂದು ವಿರಮಿಸದ ಚುನಾವಣಾ ಯಂತ್ರ. ತನ್ನ ವಿರುದ್ಧದ ಎಲ್ಲಾ ದನಿಗಳನ್ನು ನಿರಂತರವಾಗಿ ದಮನ ಮಾಡುತ್ತಾ, (ಅದು ತನ್ನದೇ ಪಕ್ಷದ ಆಂತರಿಕ ಭಿನ್ನ ದನಿಗಳಾದರೂ), ಸರ್ಕಾರದ ನಿರ್ಧಾರಗಳಲ್ಲಿ ರಾಜಕೀಯ ಲಾಭವೊಂದನ್ನೇ ಮುಖ್ಯವಾಗಿ ಪರಿಗಣಿಸುತ್ತಾ ಬೆಳೆದುನಿಂತಿರುವ ಪ್ರಬಲ ರಾಜಕೀಯ ವ್ಯವಸ್ಥೆ” ಎಂದು ಕೋನಿ ಕಪೂರ್ ವಿಶ್ಲೇಷಿಸಿದ್ದಾರೆ.

ಅದೇ ಹೊತ್ತಿಗೆ ಒಂದು ಕಡೆ ಪಕ್ಷದ ಕೇಡರ್ ಬಲ, ಪ್ರಭಾವಿ ನಾಯಕತ್ವ, ಆಡಳಿತ ಯಂತ್ರದ ಬೆಂಬಲದೊಂದಿಗೆ ಬಿಜೆಪಿಗೆ ಪೂರಕವಾಗಿ ಒದಗಿಬಂದಿರುವುದು ಪ್ರತಿಪಕ್ಷ ಕಾಂಗ್ರೆಸ್ಸಿನ ಕಂಗೆಟ್ಟ ಪರಿಸ್ಥಿತಿ. ಪಕ್ಷದ ಆಂತರಿಕ ಚುನಾವಣೆ ನಡೆಯದೆ, ಸಮರ್ಥ ನಾಯಕತ್ವ ಇಲ್ಲದೆ, ಪ್ರಭಾವಿ ಹಿರಿಯ ನಾಯಕರ ಭಿನ್ನಮತದ ಬಿಕ್ಕಟ್ಟು, ಅಧಿಕಾರದಲ್ಲಿರುವ ಒಂದೆರಡು ರಾಜ್ಯಗಳಲ್ಲೂ ಆಂತರಿಕ ಕಚ್ಚಾಟ ಮುಂತಾದ ಕಾರಣಗಳಿಂದಾಗಿ ಕಾಂಗ್ರೆಸ್ ಅತ್ಯಂತ ದುರ್ಬಲ ಪರಿಸ್ಥಿತಿಯಲ್ಲಿದೆ. ಜೊತೆಗೆ ಅದರ ಅಧಿನಾಯಕರಾದ ಸೋನಿಯಾ ಗಾಂಧಿಯವರಿಗೆ ಅನಾರೋಗ್ಯ, ವಯೋಮಾನದ ಸಮಸ್ಯೆಗಳಿಂದಾಗಿ ಪಕ್ಷದ ಪೂರ್ಣ ಜವಾಬ್ದಾರಿ ನಿಭಾಯಿಸುವುದು ಸಾಧ್ಯವಾಗುತ್ತಿಲ್ಲ. ರಾಹುಲ್ ಗಾಂಧಿಯವರಿಗೆ ಪಕ್ಷದ ಹೊಣೆ ಹೊತ್ತು ಅಧ್ಯಕ್ಷ ಸ್ಥಾನದ ಜವಾಬ್ದಾರಿಗೆ ಹೆಗಲು ಕೊಟ್ಟ ಪಕ್ಷದ ಹಿರಿಕಿರಿಯ ನಾಯಕರನ್ನು ವಿಶ್ವಾಸಕ್ಕೆ ಪಡೆದು ಪಕ್ಷ ಮುನ್ನಡೆಸುವ ವಿಶ್ವಾಸ ಮತ್ತು ತಾಳ್ಮೆ ಇಲ್ಲ. ಗಾಂಧಿ ಕುಟುಂಬದ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಅವರ ರಾಜಕೀಯ ಲೆಕ್ಕಾಚಾರಗಳು ಎಷ್ಟು ಅಪ್ರಬುದ್ಧ ಎಂಬುದಕ್ಕೆ ಇತ್ತೀಚಿನ ಪಂಜಾಬ್ ಕಾಂಗ್ರೆಸ್ ಬೆಳವಣಿಗೆಗಳಿಗಿಂತ ಬೇರೆ ಸಾಕ್ಷಿ ಬೇಕಿಲ್ಲ. ಕಾಂಗ್ರೆಸ್ ನಾಯಕರ ಇಂತಹ ಯಡವಟ್ಟುಗಳು ಮತ್ತು ಸ್ವತಃ ರಾಹುಲ್ ಗಾಂಧಿಯವರ ನಡೆ-ನುಡಿಗಳೇ ಪ್ರಧಾನಿ ಮೋದಿ ಮತ್ತು ಬಿಜೆಪಿಯ ಪ್ರಾಬಲ್ಯ ವೃದ್ಧಿಯ ಕಾರಣಗಳೂ ಎಂಬುದನ್ನು ತಳ್ಳಿಹಾಕಲಾಗದು.
ಹಾಗೇ ಕಾಂಗ್ರೆಸ್ ನ ಇಂತಹ ಆಂತರಿಕ ವೈಫಲ್ಯ ಮತ್ತು ಮಿತಿಗಳು ಕೇವಲ ಆ ಪಕ್ಷದ ಮಟ್ಟಿಗೆ ಮಾತ್ರವಲ್ಲ, ಬಿಜೆಪಿಗೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿಪಕ್ಷಗಳ ಒಕ್ಕೂಟ ರಂಗ ರಚಿಸುವ ಯತ್ನಗಳಿಗೂ ಪೆಟ್ಟುಕೊಟ್ಟಿವೆ. ರಾಹುಲ್ ಗಾಂಧಿ ಪಕ್ಷದ ನಾಯಕತ್ವ ಮತ್ತು ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ತೋರುತ್ತಿರುವ ವರಸೆಗಳು, ಪ್ರತಿಪಕ್ಷಗಳ ಪರ್ಯಾಯ ಒಕ್ಕೂಟ ರಚನೆಯ ಪ್ರಯತ್ನಗಳ ಮೇಲೆಯೂ ಪರಿಣಾಮ ಬೀರಿವೆ. ಬಿಜೆಪಿಯೇತರ ಸರ್ಕಾರದ ಪ್ರಧಾನಿ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಹುಲ್ ಹೆಸರನ್ನು ಊಹಿಸಿಕೊಳ್ಳಲು ಕಾಂಗ್ರೆಸ್ಸೇತರ ಪಕ್ಷಗಳ ನಾಯಕರು ಸಿದ್ಧರಿಲ್ಲ. ಕಾಂಗ್ರೆಸ್ ಒಳಗಿನ ಜಿ 23 ಗುಂಪು ಕೂಡ ಸಿದ್ದವಿಲ್ಲ. ಹಾಗಾಗಿ ಕಾಂಗ್ರೆಸ್ಸಿನ ನಾಯಕತ್ವ ಕುರಿತ ಬಗೆಹರಿಯದ ಬಿಕ್ಕಟ್ಟು ಬಿಜೆಪಿ ಪರ್ಯಾಯ ಶಕ್ತಿ ರಚನೆಯ ಮೇಲೂ ಪರಿಣಾಮಬೀರಿದ್ದು, ಅಂತಿಮವಾಗಿ ಆ ಪರಿಸ್ಥಿತಿ ಕೂಡ ಬಿಜೆಪಿಗೆ ಪೂರಕವಾಗಿಯೇ ಒದಗಿಬಂದಿದೆ ಎಂಬುದು ಕಪೂರ್ ಅವರ ವಿಶ್ಲೇಷಣೆ.

ಅಂತಹ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿಯೇ ಒಂದು ಕಡೆ ಟಿಎಂಸಿಯ ಮಮತಾ, ಮತ್ತೊಂದು ಎನ್ ಸಿಪಿಯ ಶರದ್ ಪವಾರ್ ಹಾಗೂ ಮಗದೊಂದು ಕಡೆ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರುಗಳು ಮಹಾರಾಷ್ಟ್ರ, ಗೋವಾ, ದೆಹಲಿ, ಹರ್ಯಾಣ, ಉತ್ತರಪ್ರದೇಶ, ಪಂಜಾಬ್ ಮುಂತಾದ ಕಡೆ ಕಾಂಗ್ರೆಸ್ ನಾಯಕರನ್ನು ಸೆಳೆದು ಪಕ್ಷ ವಿಸ್ತರಣೆಯ ಪ್ರಯತ್ನಗಳನ್ನು ನಡೆಸಿದ್ದಾರೆ. ಕಾಂಗ್ರೆಸ್ ಮತಬ್ಯಾಂಕಿಗೇ ಕೈ ಹಾಕುವ ಈ ಎಲ್ಲಾ ಪಕ್ಷಗಳ ನಾಯಕರ ಈ ಯತ್ನಗಳು ಅಂತಿಮವಾಗಿ ಬಿಜೆಪಿಗೆ ಅನುಕೂಲ ಮಾಡಿಕೊಡಲಿವೆ ಎಂಬುದು ಕೂಡ ವಾಸ್ತವ.
ನಿಜವಾಗದ ಅಚ್ಛೇದಿನ, ಅನಿರೀಕ್ಷಿತ ದುಬಾರಿ ದಿನಗಳ ಹಿನ್ನೆಲೆಯಲ್ಲಿ ಬಿಜೆಪಿಯ ವೈಭವದ ದಿನಗಳು ಮುಗಿದುಹೋದವು ಎಂಬ ಲೆಕ್ಕಾಚಾರಗಳು ಕೇವಲ ಭ್ರಮೆ ಮಾತ್ರ. ವಾಸ್ತವವಾಗಿ ಈಗಲೂ ಬಿಜೆಪಿಗೆ ಪೂರಕವಾಗಿಯೇ ದೇಶದ ರಾಜಕೀಯ ಪರಿಸ್ಥಿತಿ ಕೆಲಸ ಮಾಡುತ್ತಿದೆ ಮತ್ತು ಪ್ರಧಾನಿ ಮೋದಿ ಮತ್ತು ಶಾ ತಂತ್ರಗಾರಿಕೆ ಬದಲಾಯಿಸಿರುವ ದೇಶದ ಚುನಾವಣಾ ರಾಜಕಾರಣದ ಪ್ರತಿಫಲ ಇನ್ನೂ ದಶಕಗಳ ಕಾಲ ಬಿಜೆಪಿಯ ಪರವೇ ಇರುತ್ತದೆ ಎಂಬ ಕೋನಿ ಕಪೂರ್ ವಿಶ್ಲೇಷಣೆ ಗಮನಾರ್ಹ.






