ರಾಷ್ಟ್ರೀಯ ಅಂಕಿಅಂಶ ಕಚೇರಿ (National Statistical Office) ಹೊರ ಬಿಟ್ಟಿರುವ ವರದಿಯಲ್ಲಿ ಭಾರತದ ಹಿರಿಯರ ಜನಸಂಖ್ಯೆ (60 ವರ್ಷ ಮೇಲ್ಟಟ್ಟವರು) 2031ರ ಹೊತ್ತಿಗೆ 194 ಮಿಲಿಯನ್ ತಲುಪಲಿದೆ ಎಂದು ಅಂದಾಜಿಸಿದೆ. 2021ರ ಈ ಹೊತ್ತಿಗೆ ಭಾರತದಲ್ಲಿ ಒಟ್ಟು 138 ಮಲಿಯನ್ ಮಂದಿ ಹಿರಿಯರಿದ್ದಾರೆ ಎಂದು NSO ವರದಿ ಹೇಳಿದೆ. ಈ ಸಂಖ್ಯೆ 2031ರ ಹೊತ್ತಿಗೆ ಶೇಖಡಾ 41ರಷ್ಟು ಏರಿಕೆಯಾಗಲಿದೆ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ ಅಭಿಪ್ರಾಯ ಪಟ್ಟಿದೆ.
ಈ ವರದಿಯ ಪ್ರಕಾರ 2031ರಲ್ಲಿ 93 ಮಿಲಿಯನ್ ಗಂಡಸರು ಹಾಗೂ 101 ಮಿಲಿಯನ್ ಹೆಂಗಸರು ಭಾರತದಲ್ಲಿ ಇರಲಿದ್ದಾರೆ. ಆದರೆ ಸದ್ಯ ಅಂದರೆ 2021ರಲ್ಲಿ 67 ಮಿಲಿಯನ್ ಗಂಡಸರು ಹಾಗೂ 71 ಮಿಲಿಯನ್ ಹೆಂಗಸರು ಭಾರತದಲ್ಲಿದ್ದಾರೆ. ಹೀಗಾಗಿ ಜನಸಂಖ್ಯೆಯ ನಿಯಂತ್ರಣದ ತಂತ್ರ ರೂಪಿಸದೇ ಹೋದರೆ ಮುಂದಿನ ದಿನಗಳಲ್ಲಿ ದೇಶದಲ್ಲಿ ಹಿರಿಯರ ಬದುಕು ಶೋಚನೀಯವಾಗಿರಲಿದೆ ಎಂದೂ NSO ತನ್ನ ವರದಿ ಕಳವಳ ವ್ಯಕ್ತಪಡಿಸಿದೆ. ಈ ವರದಿ ಅಗಸ್ಟ್ 5ರಂದು ಪ್ರಕಟವಾಗಿದ್ದು, 2011 ಹಾಗೂ 2036ರ ನಡುವಣ ಜನಸಂಖ್ಯಾ ಪ್ರಕ್ಷೇಪಗಳನ್ನು ಆಧರಿಸಿ ಈ ಸಂಶೋಧನೆಯನ್ನು ನಡೆಸಲಾಗಿದೆ ಎಂದು NSO ರಾಷ್ಟ್ರೀಯ ಮಾಧ್ಯಮಗಳಿಗೆ ತಿಳಿಸಿದೆ. ಅಂದಹಾಗೆ NSO, ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿ ಕೆಲಸ ನಿರ್ವಹಿಸುತ್ತದೆ. ದೇಶದ ಹಿರಿಯ ವ್ಯಕ್ತಿಗಳ ಸಮಸ್ಯೆಗಳು ಮತ್ತು ಸ್ಥಿತಿಗತಿಗಳ ಬಗ್ಗೆ ಒಳನೋಟಗಳನ್ನು ಒದಗಿಸಲು ಮತ್ತು ಹಿರಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ.
ಇದೇ ವೇಳೆ 2017ರ ವಿಶ್ವಸಂಸ್ಥೆಯ ಜಾಗತಿಕ ಜನಸಂಖ್ಯಾ ವರದಿಯನ್ನು ಉಲ್ಲೇಖಿಸಿರುವ NSO, 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ 60 ವರ್ಷ ವಯಸ್ಸು ಮೇಲ್ಪಟ್ಟ ಹಿರಿಯರು 10 ವರ್ಷದ ಮಕ್ಕಳಿಗಿಂತ ಹೆಚ್ಚಿನ ಜನಸಂಖ್ಯೆ ಹೊಂದರಲಿದೆ ಎಂದೂ ಅಭಿಪ್ರಾಯ ಪಟ್ಟಿದೆ.
2011ಕ್ಕೆ ಹೋಲಿಸಿದರೆ 2021ರ ಕೊನೆಯ ವೇಳೆಗೆ ವೃದ್ಧರ ಜನ ಸಂಖ್ಯೆಯಲ್ಲಿ 34 ಮಿಲಿಯನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ವೇಳೆ ಮುಂದಿನ ಹತ್ತು ವರ್ಷದಲ್ಲಿ 56 ಮಿಲಿಯನ್ ನಷ್ಟು ಜನಸಂಖ್ಯೆ 60 ವರ್ಷ ಮೇಲ್ಪಟ್ಟವರಲ್ಲಿ ಹೆಚ್ಚಳ ಕಾಣಲಿದೆ ಎಂದು ಉಲ್ಲೇಖ ಮಾಡಿದೆ. 2011ರಲ್ಲಿ 8.6% ಹಿರಿಯ ಜನಸಂಖ್ಯೆ ಇತ್ತು. 2021ಕ್ಕದು 10.1%ಕ್ಕೆ ಏರಿಕೆಯಾಗಿದೆ. ಸದ್ಯದ ಬೆಳವಣಿಗೆ ಗಮನಿಸಿದರೆ ಹಿರಿಯರ ಜನ ಸಂಖ್ಯೆ 2031ರ ಹೊತ್ತಿಗೆ 13.1%ಕ್ಕೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
1991ರ ಜನಗಣತಿಯ ಪ್ರಕಾರ 29.4 ಮಿಲಿಯನ್ ಹಿರಿಯ ಮಹಿಳೆಯರು ಹಾಗೂ 27.3 ಮಿಲಿಯನ್ ಹಿರಿಯ ಪುರುಷರು ಇದ್ದರು. ಆದರೆ ಕಳೆದೆರಡು ದಶಕಗಳ ಜನಸಂಖ್ಯಾ ಸ್ಫೋಟವನ್ನು ಅವಲೋಕಿಸುವಾಗ 2031ರ ಹೊತ್ತಿಗೆ ದೇಶದಲ್ಲಿ 100.9 ಮಿಲಿಯನ್ ಹಿರಿಯ ಮಹಿಳೆಯರು ಹಾಗೂ 92.9 ವೃದ್ಧ ಪುರುಷರು ದೇಶದಲ್ಲಿ ಇರಲಿದ್ದಾರೆ ಎಂದು NSO ತನ್ನ ವರದಿಯಲ್ಲಿ ಹೇಳಿದೆ. ಕಳೆದ ಒಂದು ದಶಕದಲ್ಲಿ ಉಂಟಾದ ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ವೃದ್ಧರ ಜನಸಂಖ್ಯೆಯ ಬೆಳವಣಿಗೆ ದರದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. 2011ರ ಜನಗಣತಿಗೆ ಹೋಲಿಸಿದರೆ ಹಿರಿಯ ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ದರವು ಸರಾಸರಿ ಶೇಕಡಾ 3.28ರಷ್ಟಿದೆ.
ರಾಜ್ಯವಾರು ವೃದ್ಧರ ಜನಸಂಖ್ಯೆ :
NSO ಕೊಟ್ಟಿರುವ ವರದಿ ಪ್ರಕಾರ 2021ರ ಸದ್ಯಕ್ಕೆ ದೇಶದಲ್ಲಿ ಅತಿ ಹೆಚ್ಚು ವೃದ್ಧ ಜನಸಂಖ್ಯೆ ಹೊಂದಿರುವ ಜಿಲ್ಲೆ ಕೇರಳ ಎಂದು ಹೇಳಿದೆ. ಕೇರಳದಲ್ಲಿ 138 ಮಿಲಿಯನ್ ಜನಸಂಖ್ಯೆಯ ಪೈಕಿ 16.5% ರಷ್ಟು ಜನ ಕೇರಳ ಒಂದರಲ್ಲೇ ಇದ್ದಾರೆ. ನಂತರ ಸ್ಥಾನದಲ್ಲಿ 13.6% ವೃದ್ಧ ಜನಸಂಖ್ಯೆ ಹೊಂದಿರುವ ತಮಿಳುನಾಡಿದೆ. 13.1% ಹಿಮಾಚಲಪ್ರದೇಶ 12.6% ಪಂಜಾಬ್ ಹಾಗೂ 12.4% ಹೊಂದಿರುವ ಆಂದ್ರಪ್ರದೇಶ ಕ್ರಮವಾಗಿ ಸ್ಥಾನ ಪಡೆದುಕೊಂಡೊದೆ. ಇದೇ ವೇಳೆ ಬಿಹಾರ್ನಲ್ಲಿ 7.7%, ಉತ್ತರ ಪ್ರದೇಶ 8.1% ಹಾಗೂ ಅಸ್ಸಾಂ 8.2% ವೃದ್ಧ ಜನಸಂಖ್ಯೆ ಹೊಂದಿಕೊಂಡು ದೇಶದ ವೃದ್ಧ ಜನಸಂಖ್ಯೆ ಕಡಿಮೆ ಇರುವ ರಾಜ್ಯಗಳ ಪಟ್ಟಿಯಲ್ಲಿವೆ.
NSO ನಡೆಸಿದ ಸಂಶೋಧನೆಯ ಪ್ರಕಾರ 2031ರ ಹೊತ್ತಿಗೆ ಸದ್ಯ ಹೆಚ್ಚು ವೃದ್ಧರ ಜನಸಂಖ್ಯೆ ಹೊಂದಿರುವ ಐದು ರಾಜ್ಯಗಳೇ ಹೆಚ್ಚು ಹಿರಿಯ ಜನಸಂಖ್ಯೆ ಹೊಂದಿರಲಿದೆ ಎಂದು ಅಂದಾಜಿಸಿದೆ. ಕೇರಳ 20.9%, ತಮಿಳುನಾಡು 18.2%, ಹಿಮಾಚಲ ಪ್ರದೇಶ 17.1%, ಆಂದ್ರಪ್ರದೇಶ 16.4%, ಪಂಜಾಬ್ 16.2%ಕ್ಕೆ ವೃದ್ಧರ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.
ದೇಶದ ವೃದ್ಧರ ಸಾಕ್ಷರತ ಗುಣಮಟ್ಟ ಸುಧಾರಣೆ :
ವೃದ್ಧರ ಜನಸಂಖ್ಯೆ ಏರಿಕೆಯಾಗುವುದರ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಯಸ್ಸಾದ ಪುರುಷರು ಮತ್ತು ಮಹಿಳೆಯರಲ್ಲಿ ಸಾಕ್ಷರತೆಯ ಮಟ್ಟವು ಸುಧಾರಿಸಿದೆ ಎಂದು ವರದಿ ಹೇಳಿದೆ. ಆದರೆ ಈ ಪೈಕಿ ಶೇಕಡಾ 28ರಷ್ಟು ಮಹಿಳೆಯರು ಮತ್ತು ಶೇಕಡಾ 59ರಷ್ಟು ಪುರುಷರಿದ್ದು, ಸಾಕ್ಷರತಾ ಗುಣಮಟ್ಟದಲ್ಲಿ ಮಹಿಳೆಯರಿಗಿಂತ ಪುರುಷರೇ ಮೇಲುಗೈ ಸಾಧಿಸಿದ್ದಾರೆ. ಇದೇ ವೇಳೆ ದೇಶದ ಗ್ರಮಾಂತರ ಭಾಗದಲ್ಲಿ ಮಹಿಳೆಯ ಸಾಕ್ಷರತ ಮಟ್ಟ 18% ಮಾತ್ರ. ಆದರೆ ಗ್ರಾಮಾಂತರ ಮಟ್ಟದಲ್ಲಿ ಶೇಕಡಾ 51ರಷ್ಟು ವೃದ್ಧ ಪುರುಷರು ಸಾಕ್ಷರತೆಯನ್ನು ಕಂಡುಕೊಂಡಿದ್ದಾರೆ.
ಅದ್ರಲ್ಲೂ ಚಂಢೀಗಡ್ನಲ್ಲಿ 12.7%, ದೆಹಲಿಯ 10.7% ವೃದ್ಧರು ಸಾಕ್ಷರತರಾಗಿದ್ದಾರೆ. ಇವರಡೂ 60 ವರ್ಷ ಮೇಲ್ಟಟ್ಟವರಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯಗಳಾಗಿವೆ. ಇದೇ ವೇಳೆ ಸಿಕ್ಕಿಮ್ 6.2%, ಮಿಝೋರಾಮ್ 6.3%, ದಾಮನ್ ಮತ್ತು ದಿಯೂನಲ್ಲಿ 6.5% ವೃದ್ಧ ಮಂದಿಯಷ್ಟೇ ಸಾಕ್ಷರತರಾಗಿದ್ದಾರೆ. ಅಂದಹಾಗೆ, ಈ ಬೆಳವಣಿಗೆಯನ್ನು NSO 2011ರ ಜನಗಣತಿಯ ಪ್ರಕಾರ ನಡೆಸಿದೆ.