ಡಾ. ಜೆ ಎಸ್ ಪಾಟೀಲ.
ಬೆಂಗಳೂರು; ಮಾ.21; ಭಾರತ ದೇಶವು ಸಾಂಪ್ರದಾಯವಾದ ಮತ್ತು ಮಡಿವಂತ ಬ್ರಾಹ್ಮಣ್ಯದ ಆಚರಣೆಗಳ ವಿರುದ್ಧ ಹೋರಾಡಿದ ಅನೇಕ ಜನ ಆಧ್ಯಾತ್ಮಿಕ ಚಿಂತಕರು ಹಾಗು ದಾರ್ಶನಿಕರನ್ನು ಕಂಡಿದೆ. ಮುಕುಂದ ರಾವ್ ಎನ್ನುವ ಲೇಖಕರು ತಮ್ಮ ಪುಸ್ತಕದಲ್ಲಿ ಭಾರತದ ಆಧ್ಯಾತ್ಮಿಕ ಇತಿಹಾಸವು ಜನಸಾಮಾನ್ಯರು ವ್ಯಾಪಕವಾಗಿ ನಂಬಿರುವ, ಬ್ರಾಹ್ಮಣ ನಂಬಿಕೆಗಳು, ಸಂಸ್ಕೃತ ಸಾಹಿತ್ಯ, ಉಪನಿಷತ್ತುಗಳು ಮತ್ತು ಗೀತೆ ಇವುಗಳನ್ನು ಮೀರಿ ಬ್ರಾಹ್ಮಣ್ಯ ಸೃಷ್ಟಿಸಿದ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದೆ ಹೆಚ್ಚು ಎಂದು ಸ್ಪಷ್ಟಪಡಿಸಿದ್ದಾರೆ. ಮುಕುಂದರಾವ್ ಅವರ ಪುಸ್ತಕದ ಸಾರಾಂಶವನ್ನು ಎಂ.ಆರ್.ನಾರಾಯಣ ಸ್ವಾಮಿ ಅವರು ಜುಲೈ ೨೭ˌ ೨೦೨೨ ರ ‘ದಿ ವೈರ್’ ವೆಬ್ ಜರ್ನಲ್ನಲ್ಲಿ ವಿಸ್ತ್ರತವಾಗಿ ಬರೆದಿದ್ದಾರೆ. ಆ ಸಾರಾಂಶದ ಬಹುತೇಕ ಭಾಗವನ್ನು ನಾನು ಇಲ್ಲಿ ಪುನಃ ವಿಮರ್ಶಿಸಿದ್ದೇನೆ.
ಶಿರಡಿಯ ಸಾಯಿಬಾಬಾ: (1838-1918) ಇವರು ಕಾಲವಾದ ನೂರಾರು ವರ್ಷಗಳ ನಂತರವೂ ಭಾರತೀಯರು ಅತ್ಯಂತ ವ್ಯಾಪಕವಾಗಿ ಗೌರವಿಸಲ್ಪಡುವ ಸಂತರಲ್ಲಿ ಒಬ್ಬರಾಗಿ ಉಳಿದಿದ್ದಾರೆ. ಸಾಯಿಬಾಬಾರನ್ನು ಇಂದಿಗೂ ಲಕ್ಷಾಂತರ ಹಿಂದೂಗಳು, ಮುಸ್ಲಿಮರು ಮತ್ತು ಇತರರು ಪೂಜಿಸುತ್ತಾರೆ. ಹಿಂದೂ ಕುಟುಂಬದಲ್ಲಿ ಜನಿಸಿ ಫಕೀರರಂತೆ ಬೆಳೆದ ಸಾಯಿಬಾಬಾ ಅವರು ವೈದಿಕ ಧರ್ಮದ ಗೊಡ್ಡು ಸಂಪ್ರದಾಯಗಳ ಕಟುವಾದ ವಿಮರ್ಶಕರಾಗಿದ್ದರು ಮತ್ತು ಹಿಂದೂ-ಮುಸ್ಲಿಂ ವಿಭಜನೆಯನ್ನು ಕಟುವಾಗಿ ವಿರೋಧಿಸುತ್ತಿದ್ದರು. ಹಿಂದೂ ಮತ್ತು ಇಸ್ಲಾಂ ಧರ್ಮಗಳ ಮುಖ್ಯ ತಿರುಳೆ ಪ್ರೀತಿ, ಸೇವೆ ಮತ್ತು ಸ್ವಾತಂತ್ರ್ಯವೆಂದು ಅವರು ನಂಬಿದ್ದರು ಎನ್ನುತ್ತಾರೆ ರಾವ್ ಅವರು.
ಸಂತ ಕಬೀರ್: ಮುಸ್ಲಿಮರು ಮತ್ತು ಹಿಂದುಗಳಿಬ್ಬರನ್ನು ಆಕರ್ಷಿಸಿದ ಇನ್ನೊಬ್ಬ ಸಂತ ಕಬೀರ್ (1398-1448/55). ಇವರು ಮುಸ್ಲಿಂ ನೇಕಾರ ಕುಟುಂಬದಲ್ಲಿ ಜನಿಸಿದರು ಅಥವಾ ಆ ಕುಟುಂಬದ ದತ್ತು ಮಗನಾಗಿದ್ದರು. ಆದ್ದರಿಂದ ಅವರು ಇಸ್ಲಾಂ ಧರ್ಮ ತತ್ವಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಆದರೆ ಅವರ ನಿತ್ಯಹರಿದ್ವರ್ಣದಂತಿರುವ ಕಾವ್ಯಗಳನ್ನು ಗಮನಿಸಿದರೆ, ಅವರು ಹಿಂದೂ ಚಿಂತನೆ ಮತ್ತು ಪುರಾಣಗಳ ನಿಕಟ ಜ್ಞಾನ ಮತ್ತು ತಿಳುವಳಿಕೆಯನ್ನು ಹೊಂದಿದ್ದರು ಎಂದು ತೋರುತ್ತದೆ. ಅವರು ಹಿಂದೂ ಮತ್ತು ಮುಸ್ಲಿಮ್ ಧರ್ಮಗಳ ಧಾರ್ಮಿಕ ಸಾಂಪ್ರದಾಯವಾದ ಮತ್ತು ಸರ್ವಾಧಿಕಾರವನ್ನು ಸಮಾನವಾಗಿ ಟೀಕಿಸುತ್ತಿದ್ದರು ಎನ್ನುತ್ತಾರೆ ಮುಕುಂದರಾವ್.

ಭಾರತೀಯರು ವ್ಯಾಪಕವಾಗಿ ನಂಬಲ್ಪಟ್ಟಿರುವುದಕ್ಕೆ ವಿರುದ್ಧವಾಗಿ, ಭಾರತದ ಆಧ್ಯಾತ್ಮಿಕ ಪ್ರಪಂಚವು ಬ್ರಾಹ್ಮಣ ನಂಬಿಕೆಗಳು, ಸಂಸ್ಕೃತ ಸಾಹಿತ್ಯ, ಉಪನಿಷತ್ತುಗಳು ಮತ್ತು ಗೀತೆ ಅಥವಾ ಜಾತಿ ವ್ಯವಸ್ಥೆಯ ಬಗ್ಗೆ ಚರ್ಚೆಗಳು ಮತ್ತು ವಿವಾದಗಳ ಬಗ್ಗೆ ಅಷ್ಟೆ ಅಲ್ಲದೆ ಅವುಗಳ ವಿರುದ್ಧ ಹೋರಾಡಿದ್ದೆ ಹೆಚ್ಚು ಎನ್ನುವ ಸಂಗತಿ ರಾವ್ ಅವರ ಪುಸ್ತಕದಲ್ಲಿದೆ. ಲೇಖಕ ಮುಕುಂದ ರಾವ್ ಅವರ ಪ್ರಕಾರ, ಭಾರತದಲ್ಲಿ ವೈದಿಕೇತರ ಆಧ್ಯಾತ್ಮಿಕ ಪ್ರಯತ್ನಗಳು ವೈದಿಕ ರೂಪಗಳನ್ನು ಮೀರಿಸಿದೆ. ಇನ್ನು ಕೆಲವು ಪ್ರಸಿದ್ಧ ಅತೀಂದ್ರಿಯಜ್ಞಾನಿಗಳು ಹಿಂದೂ ಮತ್ತು ಇಸ್ಲಾಂ ಧರ್ಮಗಳ ನಡುವಿನ ಕಂದಕಕ್ಕೆ ಸೇತುವೆಯಾಗಲು ಪ್ರಯತ್ನಿಸಿದ್ದಾರೆ ಎನ್ನುತ್ತಾರೆ ಮುಕುಂದರಾವ್.
ಒಟ್ಟಾರೆಯಾಗಿ ಭಾರತದಲ್ಲಿ ಯಾವುದೇ ಒಂದು ನಿರ್ಧಿಷ್ಟ ಸಿದ್ಧಾಂತವನ್ನು ‘ಭಾರತೀಯ ತತ್ವಶಾಸ್ತ್ರ’ ಎಂದು ಗುರುತಿಸಲು ಮತ್ತು ಪ್ರತಿಪಾದಿಸಲು ಸಾಧ್ಯವಿಲ್ಲ. ಬದಲಿಗೆ, ರಾವ್ ಪ್ರಕಾರ, ಭಾರತೀಯ ಚಿಂತನೆಯನ್ನು ಬಹುತ್ವದ ನೆಲೆಯಲ್ಲಿ ಅರ್ಥೈಸಿಕೊಳ್ಳುವ ಅಗತ್ಯವಿದೆ. ಭಾರತವು ಹಿಂದೂ, ಬೌದ್ಧ, ಜೈನˌ ಲಿಂಗಾಯತ ಮತ್ತು ಸಿಖ್ ತತ್ವಶಾಸ್ತ್ರಗಳು ಮಾತ್ರವಲ್ಲದೆ ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ವಿಚಾರಗಳನ್ನೂ ಕೂಡ ಒಳಗೊಂಡಿದೆ ಎನ್ನುತ್ತಾರೆ ರಾವ್. ವಾಸ್ತವವಾಗಿ, ಹೀಗೆ ಹೇಳುವುದು ಇಂದಿನ ಭಾರತದಲ್ಲಿ ಧರ್ಮನಿಂದನೆ ಅನ್ನಿಸಬಹುದು ಎನ್ನುವುದು ರಾವ್ ಅಭಿಪ್ರಾಯವಾಗಿದೆ.

ಸರಹಪಾದ: (100-200 ಸಿಇ) ಇವರು ಒಬ್ಬ ಸ್ವತಂತ್ರ ಚಿಂತಕ ಹಾಗು ಅತೀಂದ್ರಿಯ ತತ್ವಜ್ಞಾನಿಯಾಗಿದ್ದು, ಆತ ಸರ್ವಸಂಗ ಪರಿತ್ಯಾಗಿಗಳೆಂದು ಕರೆದುಕೊಳ್ಳುವ ಸನ್ಯಾಸಿಗಳನ್ನು ವಿಡಂಬಿಸಿದ್ದಾನೆ. ಸರಹಪಾದ ಸಮಾಜದ ಮೇಲಿನ ವೈದಿಕರ ಹಿಡಿತವನ್ನು ಮತ್ತು ಆ ಕಾಲದ ಪ್ರಬಲ ವೈದಿಕ ನಿರೂಪಣೆಗಳನ್ನು ಪ್ರಶ್ನಿಸಿದ್ದಾನೆ. ಆತನ ಬೋಧನೆಗಳನ್ನು ಅಪ್ರಸ್ತುತ ಮತ್ತು ವಿಧ್ವಂಸಕ ಎಂದು ವೈದಿಕರು ಪರಿಗಣಿಸಿದ್ದರು. “ಸನ್ಯಾಸಿಯ ನಗ್ನತೆಯು ಎಲ್ಲಾ ಬಗೆಯಲ್ಲಿ ಆತನನ್ನು ವಿಮೋಚನೆಗೊಳಿಸುತ್ತದೆ ಎನ್ನುವುದಾದಲ್ಲಿ, ನಗ್ನವಾಗಿಯೆ ಇರುವ ನಾಯಿ ಮತ್ತು ನರಿಗಳು ಆ ವಿಮೋಚನೆಗೆ ಹೆಚ್ಚು ಅರ್ಹ” ಎನ್ನುವುದು ಆತನ ವಾದವಾಗಿತ್ತು. ಆದರೂ, ಕುತೂಹಲಕರವಾಗಿ, ಆತನನ್ನು ನಂತರದಲ್ಲಿ ಮಹಾಸಿದ್ಧ, ಸಿದ್ಧರ ಸಿದ್ಧ ಮತ್ತು ಶ್ರೇಷ್ಠ ಬ್ರಾಹ್ಮಣ ಎಂದು ಗೌರವಿಸಲಾಯಿತು ಎನ್ನುತ್ತಾರೆ ರಾವ್.
ಅಭಿನವಗುಪ್ತ: (950-1016) ಭೈರವಗೂಪ್ತನನ್ನು ಒಬ್ಬ ಶೈವ ಋಷಿ ಮತ್ತು ಭಯಂಕರ ಭೈರವನ ಐಹಿಕ ಅವತಾರವೆಂದು ಪರಿಗಣಿಸಲಾಗಿತ್ತು. ಆತನನ್ನು ಭಾರತದ ಶ್ರೇಷ್ಠ ತತ್ವಜ್ಞಾನಿ, ಅತೀಂದ್ರಿಯಜ್ಞಾನಿ, ಬರಹಗಾರ ಮತ್ತು ದಾರ್ಶನಿಕರಲ್ಲಿ ಒಬ್ಬನೆಂದು ಹೇಳಲಾಗುತ್ತದೆ. ಆಧ್ಯಾತ್ಮಿಕ ಅನ್ವೇಷಣೆಗಾಗಿ, ವ್ಯಕ್ತಿಯು ಆತ ಸನ್ಯಾಸಿಯಾಗಿರಲಿ ಅಥವಾ ಗೃಹಸ್ಥನಾಗಿರಲಿ, ಬ್ರಾಹ್ಮಣನಾಗಿರಲಿ ಅಥವಾ ಬಹಿಷ್ಕೃತನಾಗಿರಲಿ ಹೃದಯದಿಂದ ಪರಿಶುದ್ಧನು ಮತ್ತು ಗಂಭೀರನು ಆಗಿರಬೇಕು ಎನ್ನುವುದು ಆತನ ಪ್ರತಿಪಾದನೆಯಾಗಿತ್ತು. ಅದು ಆ ಕಾಲದಲ್ಲಿ, ಒಂದು ಕ್ರಾಂತಿಕಾರಿ ನಡೆಯಾಗಿತ್ತು ಎನ್ನುತ್ತಾರೆ ಲೇಖಕರು.
ಬಸವಣ್ಣ: ಈ ದೇಶದಲ್ಲಿ ಜನಿಸಿದ ಅತ್ಯಂತ ಗೌರವಾನ್ವಿತ ದಾರ್ಶನಿಕರಲ್ಲಿ ಒಬ್ಬರು ಬಸವಣ್ಣ (1136-96). ಅವರು ಬ್ರಾಹ್ಮಣ ಸಂಪ್ರದಾಯಗಳು ಮತ್ತು ಅದರ ಸುತ್ತಲೂ ರಚಿಸಲಾದ ವೈದಿಕ ಧರ್ಮದ ಗ್ರಂಥಗಳು ಮತ್ತು ಆಚರಣೆಗಳ ಬಗ್ಗೆ ತೀವ್ರವಾದ ತಾತ್ಸಾರ ಹೊಂದಿದ್ದರು ಹಾಗು ಅವುಗಳನ್ನು ತೀಕ್ಷ್ಣವಾಗಿ ಟೀಕಿಸಿದರು. ಬಸವಣ್ಣ ಬ್ರಾಹ್ಮಣ ಧರ್ಮದ ಮೂಢ ಸಂಪ್ರದಾಯ, ಜಾತಿ ವ್ಯವಸ್ಥೆ ಮತ್ತು ಲಿಂಗ ತಾರತಮ್ಯವನ್ನು ಪ್ರಶ್ನಿಸಿದರು ಹಾಗು ಅವುಗಳನ್ನು ತಿರಸ್ಕರಿಸಿದರು. ಅವರು ವೇದಗಳ ಆಧ್ಯಾತ್ಮಿಕ ಅಧಿಕಾರವನ್ನು ಪ್ರಶ್ನಿಸಿ ಅವುಗಳನ್ನು ಅತ್ಯಂತ ಕ್ರೋದದಿಂದ ದಿಕ್ಕರಿಸಿದರು. ಅವರು ಹುಟ್ಟುಹಾಕಿದ ಹೊಸ ನಿರಾಕಾರ ಇಷ್ಟಲಿಂಗಾರಾಧನೆಯು ನಂತರ ಲಿಂಗಾಯತ ತತ್ವ ಎಂದು ಕರೆಯಲ್ಪಟ್ಟಿತು. ಅವರು ಶಿವ ಭಕ್ತರಲ್ಲಿ ಜಾತಿ ತಾರತಮ್ಯ ಇರಬಾರದೆಂದು ವಾದಿಸಿದರು; ಸಹಭೋಜನ ಅತ್ಯಗತ್ಯವೆಂದು ಹೇಳಿದರು. ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತು ಸಮಾಜಕ್ಕೆ ಅರ್ಪಿಸುವುದನ್ನು ದಾಸೋಹ ಎಂದು ಕರೆಯಲಾಯಿತು. ಈ ದಾಸೋಹದ ಪರಿಕಲ್ಪನೆಯು ಸಿಖ್ಖರಲ್ಲಿ ಲಂಗರ್ ಎಂದು ಕರೆಯಲ್ಪಟ್ಟಿತು ಎನ್ನುತ್ತಾರೆ ರಾವ್ ಅವರು.
ಅಲ್ಲಮ ಪ್ರಭುಗಳು: (ಸುಮಾರು 1100), ಅಲ್ಲಮರು ಚರ ಜಂಗಮರು, ಅತೀಂದ್ರಿತಜ್ಞರುˌ ವಚನಕಾರರು ಮತ್ತು ಸ್ವತಂತ್ರ ಚಿಂತಕರು ಹಾಗು ಋಷಿಯಾಗಿ ಎಲ್ಲರೂಡಗೂಡಿ ಬಾಳುವ ಸಿದ್ಧಾಂತ ಪ್ರತಿಪಾದಿಸಿದರು. ಅಲ್ಲಮರು ವೈದಿಕ ಧರ್ಮದ ಗೊಡ್ಡು ಸಂಪ್ರದಾಯಗಳನ್ನು ತಿರಸ್ಕರಿಸಿದರು ಮತ್ತು ಮೂರ್ತಿ ಪೂಜೆ, ಜಾತಿ ವ್ಯವಸ್ಥೆ, ಧಾರ್ಮಿಕ ಪದ್ಧತಿಗಳು ಹಾಗು ಆಚರಣೆಗಳನ್ನು ಪ್ರಶ್ನಿಸಿ ಅಪಹಾಸ್ಯ ಮಾಡಿದರು ಎನ್ನುತ್ತಾರೆ ರಾವ್ ಅವರು. ಭಾರತದ ಎಲ್ಲಾ ಬಗೆಯ ಶ್ರವಣಧಾರೆಗಳು ಹಾಗು ದರ್ಶನಗಳನ್ನು ಆಳವಾಗಿ ಅಭ್ಯಾಸ ಮಾಡಿದ ಮಹಾನ್ ದಾರ್ಶನಿಕರಾಗಿದ್ದ ಅಲ್ಲಮರು ಬಸವಣ್ಣನವರು ಕೈಗೊಂಡ ವೈಚಾರಿಕ ಚಳುವಳಿಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು.

ವೈದಿಕ ಧರ್ಮವು ಭಾರತದಲ್ಲಿ ಮಹಿಳೆಯನ್ನು ಕಡೆಗಣಿಸಿದ ಧರ್ಮವಾಗಿದೆ. ಆದರೆ ಭಾರತದಲ್ಲಿ ವೈದಿಕೇತರ ಸಂಪ್ರದಾಯಗಳು ಮಹಿಳಾ ಸಂತರನ್ನು ಸಹ ರೂಪಿಸಿದ್ದಿದೆ, ಅವರಲ್ಲಿ ಕೆಲವರು ಪುರುಷ ದಾರ್ಶನಿಕರಿಗಿಂತ ಪ್ರಖರ ವಿಚಾರವಾದಿಗಳಾಗಿ ಚಿರಪರಿಚಿತರಾಗಿದ್ದಾರೆ. ವೈದಿಕ ಸಂಪ್ರದಾಯದಲ್ಲಿ ಮಹಿಳೆಗೆ ಕನಿಷ್ಟ ಧಾರ್ಮಿಕ ಸಂಸ್ಕಾರವಾಗಲಿ ಅಭಿವ್ಯಕ್ತಿ ಸ್ವಾತಂತ್ರವಾಗಲಿ ಇರಲಿಲ್ಲ. ಹೆಣ್ಣನ್ನು ಅಪವಿತ್ರ ˌ ಶೂದ್ರ ಎಂದು ಪರಿಗಣಿಸಿದ ವೈದಿಕತ್ವಕ್ಕೆ ವಿರೋಧವಾಗಿ ಹುಟ್ಟಿದ ಅನೇಕ ವೈದಿಕೇತರ ಚಿಂತನೆಗಳು ಮಹಿಳಾ ತತ್ವಜ್ಞಾನಿಗಳನ್ನು ಹುಟ್ಟುಹಾಕಿತು.
ಅಕ್ಕಮಹಾದೇವಿ: ವೈದಿಕೇತರ ಮಹಿಳಾ ಸಂತರಲ್ಲಿ ಅತ್ಯಂತ ಗೌರವಾನ್ವಿತ ಹೊಂದಿದ ಸಂತೆ ಎಂದರೆ ಅಕ್ಕ ಮಹಾದೇವಿ (೧೧೩೦-೬೦), ಅವರು ಒಮ್ಮೆ ಮನಸ್ಸನ್ನು ದಿಗಂಬರಾವಸ್ಥೆಯಲ್ಲಿ ನೆಲೆಗೊಳಿಸಿಕೊಂಡು ಅಲ್ಲಮ ಪ್ರಭು ಮತ್ತು ಬಸವಣ್ಣನವರ ಅನುಭವ ಮಂಟಪಕ್ಕೆ ಬಂದರು. ಅಕ್ಕಮಹಾದೇವಿಯು ಎಲ್ಲಾ ಬೈನರಿಗಳನ್ನು ಮೀರಿ ಚಲಿಸುವ ಅಂತಿಮ ಆರ್ಕಿಟೈಪಲ್ ಕ್ವೆಸ್ಟರ್ ಎಂದು ರಾವ್ ಹೇಳುತ್ತಾರೆ. ಇಂದು, ಅಕ್ಕ ಮಹಾದೇವಿಯು ಕರ್ನಾಟಕದಲ್ಲಿ ಮನೆಮಾತಾಗಿದ್ದಾರೆ, ಅನೇಕ ರಸ್ತೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಅವರ ಹೆಸರನ್ನು ಇಡಲಾಗಿದೆ. ಆಕೆ ಅಂದು ಸಾಧಿಸಿದ್ದನ್ನು ಇಂದು ಮಾಡಲು ಇಂದಿನ ಮಹಿಳೆಗೆ ಸ್ವಾತಂತ್ರ್ಯವಿದೆಯೇ ಎಂದು ರಾವ್ ಪ್ರಶ್ನಿಸುತ್ತಾರೆ.
ಲಲ್ಲೇಶ್ವರಿ: ಶ್ರೀನಗರದ ಬಳಿ ಜನಿಸಿದ ಲಲ್ಲೇಶ್ವರಿ (1320-92) ಯವರು, ಮುಸ್ಲಿಮರಿಗೆ ಲಲ್ಲಾ ಆರಿಫಾ ಮತ್ತು ಹಿಂದೂಗಳಿಗೆ ಲಲ್ಲಾ ಯೋಗೀಶ್ವರಿಯಾಗಿ ಚಿರಪರಿಚಿತರು. ಆಕೆ ಸಂಚಾರಿ ಸನ್ಯಾಸಿಯಾಗಿದ್ದಳು. ಅಕ್ಕ ಮಹಾದೇವಿಯಂತೆ ಸಾಮಾಜಿಕ ಕಟ್ಟುಪಾಡುಗಳಿಗೆ ಮಣಿಯದೆ ಹಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದಳು ಎಂದು ರಾವ್ ಬರೆಯುತ್ತಾರೆ.
ನಂದನಾರ್: ತಮಿಳುನಾಡಿನ ತಂಜಾವೂರಿನ ನಂದನಾರ್ (700-800) ಪುಲಯ್ಯ ಎಂಬ ಜಾತಿಯಲ್ಲಿ ಜನಿಸಿದ ಮಹಾನ್ ಶಿವಭಕ್ತರಾಗಿದ್ದರು, ಅವರನ್ನು ಅಸ್ಪೃಶ್ಯರೆಂದು ಪರಿಗಣಿಸಲಾಗಿತ್ತು. ಆದಾಗ್ಯೂ, ಇಂದು, ಅನೇಕ ಶಿವ ದೇವಾಲಯಗಳಲ್ಲಿ ನಂದನಾರ್ ಅವರನ್ನು ಮಹಾನ್ ಸಂತ ಎಂದು ಪೂಜಿಸಲಾಗುತ್ತದೆ ಎನ್ನುತ್ತಾರೆ ರಾವ್.
ಸಂತ ತುಕಾರಾಂ: (1608-50) ತುಕಾರಾಂ ಭಾರತದ ಅತ್ಯಂತ ಜನಪ್ರಿಯ ಸಂತರಲ್ಲಿ ಒಬ್ಬರಾಗಿರದ್ದರು ಆದರೆ ಅವರ ಆಧ್ಯಾತ್ಮಿಕ ನಿಲುವನ್ನು ಸ್ವೀಕರಿಸಲು ಆರಂಭದಲ್ಲಿ ನಿರಾಕರಿಸಿದ ಬ್ರಾಹ್ಮಣ ಸಮುದಾಯದಿಂದ ಅವರು ಸಹ ಬ್ರಾಹ್ಮಣರ ಲಜ್ಜೆಗೆಟ್ಟ ವಿರೋಧವನ್ನು ಎದುರಿಸಬೇಕಾಯಿತು. ತುಕಾರಾಮ್ ಬರೆದ ಅಭಂಗವೆಂಬ ಬಂಡಾಯ ಕವಿತೆಗಳು ಅಂದು ವೈದಿಕರ ನಿದ್ದೆಗೆಡಿಸಿದ್ದವು. ಕೊನೆಗೆ ರಾಮೇಶ್ವರ ಭಟ್ ಮತ್ತು ಸಂಗಡಿಗರು ತುಕಾರಾಮನನ್ನು ಇಂದ್ರಾಣಿ ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಿದರು. ರವಿದಾಸ್: (ಜನನ 1371) ಸಂತ ರವಿದಾಸ ಅವರು ಸೌಮ್ಯ ಮತ್ತು ಸಹಾನುಭೂತಿಯ ಋಷಿಯಾಗಿದ್ದರು ಆದರೆ ಅವರು ವೇದಗಳ ಪಾರಮ್ಯವನ್ನು ಮತ್ತು ಬ್ರಾಹ್ಮಣರ ಆಧ್ಯಾತ್ಮಿಕ ಶಕ್ತಿಯನ್ನು ತಿರಸ್ಕರಿಸಿದರು.
ಶಂಕರದೇವ್: ಅವರ ಜೀವನ ಮತ್ತು ಬೋಧನೆಗಳು (1449-1568) ಅವರನ್ನು ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ಅಧ್ಯಾಯಗಳಲ್ಲಿ ಒಂದನ್ನಾಗಿ ಮಾಡುತ್ತವೆ. ಅವರು ವಿದ್ವಾಂಸರು, ಸಂತರು, ನಾಟಕಕಾರರು, ಕಲಾವಿದರು ಮತ್ತು ಸಮಾಜ ಸುಧಾರಕರಾಗಿದ್ದರು. ದೇವರು ಎಲ್ಲಾ ಮಾನವರಲ್ಲಿ ನೆಲೆಸಿದ್ದಾನೆ ಎಂದು ಅವರು ಭೋದಿಸಿದರು. ಮತ್ತು ಅವರು ಆ ಕಾಲದಲ್ಲಿ ತಮ್ಮ ಭೋದನೆಗಳಿಂದ, ಶೂದ್ರರು, ಬುಡಕಟ್ಟು ಜನರು ಮುಸ್ಲಿಮರನ್ನು ಕೂಡ ಪ್ರಭಾವಿಸಿದ್ದರು.
ಶಿಶುನಾಳ ಶರೀಫ: ಇವರು (1819-89) ಇಸ್ಲಾಂ ಮತ್ತು ಹಿಂದೂ ತತ್ತ್ವಶಾಸ್ತ್ರ ಬಲ್ಲ ಕವಿˌ ತತ್ವಪದಕಾರ ಮತ್ತು ಸಂತರಾಗಿದ್ದರು. ಸಮಾಜದ ಕೊಳಕುಗಳನ್ನು ತಮ್ಮ ತತ್ವಪದಗಳ ಮೂಲಕ ಮಾರ್ಮಿಕವಾಗಿ ವಿಡಂಬಿಸಿದರು. ಶರೀಫ್ ಅವರು ಧಾರ್ಮಿಕ ಗುರುತನ್ನು ಮೀರಿದ ಭಾರತದ ಶ್ರೇಷ್ಠ ಹರ್ಮೆನಿಟಿಕಲ್ ಸಂಪ್ರದಾಯದ ಉಜ್ವಲ ಉದಾಹರಣೆಯಾಗಿದ್ದರು. ಅವರು ಶಿವಭಕ್ತರಾಗಿದ್ದ ಖಾದ್ರಿಯೊಬ್ಬರಿಗೆ ಜನಿಸಿದರು.
ಷರೀಫ ಅವರು ಲಿಂಗಾಯತ ಸಂಪ್ರದಾಯ, ರಾಮಾಯಣ, ಮಹಾಭಾರತ ಮತ್ತು ಪುರಾಣಗಳನ್ನು ಶಾಲೆಯಲ್ಲಿ ಕಲಿತರು. ಸಂಪ್ರದಾಯಸ್ತ ಬ್ರಾಹ್ಮಣರು ಅವನನ್ನು ದ್ವೇಷಿಸುತ್ತಿದ್ದರು. ಜುಲೈ ೩, ೧೮೮೯ ರಂದು, ಶಿವ ಮಂತ್ರಗಳ ಪಠಣ ಮಾಡುತ್ತ, ಶರೀಫನು ತನ್ನ ದೇಹವನ್ನು ಭೂಮಿಗೆ ಅರ್ಪಿಸಿದನು; ಮುಸ್ಲಿಮರು ಕುರಾನ್ನ ಸಾಲುಗಳನ್ನು ಪಠಿಸಿದರು ಮತ್ತು ಹಿಂದೂಗಳು ವೇದಗಳಗಳನ್ನು ಪಠಿಸಿದರು. ಕರ್ನಾಟಕದ ಶಿಶುವಿನಹಾಳದಲ್ಲಿರುವ ಶರೀಫರ ಸಮಾಧಿಗೆ ಈಗ ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಭೇಟಿ ನೀಡುತ್ತಾರೆ.

ಸೂಫಿ ಸಂಪ್ರದಾಯವು ಇಸ್ಲಾಂನ ಒಂದು ಭಾಗ ಅಥವಾ ಅತೀಂದ್ರಿಯ ಆಯಾಮವಾಗಿದೆ ಮತ್ತು ಇಸ್ಲಾಂನ ಒಂದು ಪಂಥವಲ್ಲ ಎಂದು ರಾವ್ ಒತ್ತಿಹೇಳುತ್ತಾರೆ. ಸೂಫಿ ಸಂಪ್ರದಾಯದ ಶ್ರೇಷ್ಠ ಸಂಶೋಧನೆಗಳಲ್ಲಿ ಒಬ್ಬರಾದ ನಿಜಾಮುದ್ದೀನ್ ಔಲಿಯಾ (೧೨೩೮-೧೩೨೫) ಅವರು ಇತರ ಧರ್ಮಗಳ ಜನರನ್ನು ಇಸ್ಲಾಂಗೆ ಪರಿವರ್ತಿಸದೆ ಚಿಸ್ತಿ ಕ್ರಮವನ್ನು ಪ್ರಾರಂಭಿಸಿದರು. ಬುಲ್ಲೇಶ್ ಶಹಾರ (೧೬೮೦-೧೭೫೮) ಪ್ರವಾದಿ ಮೊಹಮದ್ ರಲ್ಲಿನ ಪರಿಶುದ್ಧ ನಂಬಿಕೆಯು ಆತನನ್ನು ಇತರ ಅಧ್ಯಾತ್ಮಿಕ ನಂಬಿಕೆಗಳನ್ನು ಹೊಗಳುವ ಮತ್ತು ಹೆಚ್ಚಿನದನ್ನು ಕಲಿಯುವುದಕ್ಕೆ ತಡೆಯಾಗಲಿಲ್ಲ. ಆತ ಹಿಂದುಗಳ ಮೋಕ್ಷ ಪರಿಕಲ್ಪನೆಯನ್ನು ಕೂಡ ಅಳವಡಿಸಿಕೊಂಡಿದ್ದರು ಎನ್ನುತ್ತಾರೆ ರಾವ್ ಅವರು.
ವೈದಿಕ ಧರ್ಮಕ್ಕೆ ವಿರೋಧವಾಗಿ ಹುಟ್ಟುಪಡೆದ ಈ ಸಂಗತಿಗಳು ಮತ್ತು ಸಂತರ ಮಾಹಿತಿಯು ಸಂಪೂರ್ಣವಾಗಿ-ಸಂಶೋಧಿಸಿದ ಪುಸ್ತಕದಿಂದ ಆಯ್ದ ಕೆಲವು ಪ್ರಾತಿನಿಧಿಕ ಉದಾಹರಣೆಗಳಾಗಿವೆ. ಆದರೆ ನಮ್ಮ ಋಷಿಮುನಿಗಳು ನಂಬಿದ ಸಾರಸಂಗ್ರಹಿ ಹಿಂದೂ ಧರ್ಮವನ್ನು ತಿಳಿಯಲು ಇಷ್ಟು ಸಾಕು; ಅವರ ಆಲೋಚನಾ ಪ್ರಕ್ರಿಯೆಯಲ್ಲಿ ಕೋಪ, ಕಾಮ, ಲೋಭ ಅಥವಾ ದ್ವೇಷಕ್ಕೆ ಅವಕಾಶವಿರಲಿಲ್ಲ ಎನ್ನುವ ಮಾತುಗಳ ಮೂಲಕ ರಾವ್ ಅವರು ಭಾರತದಲ್ಲಿ ವೈದಿಕೇತರ ಸಾಹಿತ್ಯದ ಹಿರಿಮೆ ಮತ್ತು ಗರಿಮೆಯನ್ನು ಮಾರ್ಮಿಕವಾಗಿ ವಿವರಿಸಿದ್ದಾರೆ.
~ಡಾ. ಜೆ ಎಸ್ ಪಾಟೀಲ.