ಓವರ್ ಒಂದರಲ್ಲಿ 36 ರನ್!
ಬೀದಿಯಲ್ಲಿ ಹುಡುಗರೊಂದಿಗೆ ಬ್ಯಾಟ್ ಬೀಸುತ್ತಾ ಕ್ರಿಕೆಟ್ ಆಡುವ ಯಾವುದಾದರೂ ಬಾಲಕನನ್ನು ಕರೆದು, ನೀನೇದಾರೂ ಒಂದು ಓವರ್ ನಲ್ಲಿ 36 ರನ್ ಬಾರಿಸಬಹುದಾ? ಅಂತ ಕೇಳಿ ನೋಡಿ. ಅವನು ನಿಮ್ಮನ್ನು ತಲೆಕೆಟ್ಟಿದೆಯಾ ಅನ್ನೋ ರೀತಿ ವ್ಯಂಗ್ಯವಾಗಿ ನೋಡದಿದ್ದರೆ ಆಮೇಲೆ ಹೇಳಿ.
ಈಗ ಸುಮ್ಮನೆ ಯೋಚಿಸಿ, ಈ ಬಾರಿಯ ಐಪಿಎಲ್‍ನಲ್ಲಿ ಮೊನ್ನೆ ಭಾನುವಾರ ನಡೆದ ಕೊಹ್ಲಿಯ ಆರ್.ಸಿ.ಬಿ. ಮತ್ತು ಧೋನಿಯ ಸಿ.ಎಸ್.ಕೆ. ನಡುವಿನ ಕ್ರಿಕೆಟ್ ಕದನದಲ್ಲಿ ಈ ಆಟಗಾರ ಕೊನೆಯ ಓವರ್ ನಲ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿ ಹೊಡೆದಿದ್ದು 36…. ಅಲ್ಲ … ಭರ್ತಿ 37 ರನ್!
ಈ ವರ್ಷದ ಐಪಿಎಲ್‍ನಲ್ಲಿ ಈವರೆಗೆ ಅತಿ ಹೆಚ್ಚು ವಿಕೆಟ್ ಗಳನ್ನು ಪಡೆದು, ಸದ್ಯ ಪರ್ಪಲ್ ಕ್ಯಾಪ್ ಅನ್ನು ತನ್ನ ಮುಡಿಯಲ್ಲೇ ಇಟ್ಟುಕೊಂಡಿರುವ, ಮಿತವ್ಯಯದ ಬೌಲಿಂಗ್ ಗೆ ಹೆಸರಾದ ಹರ್ಷಲ್ ಪಟೇಲ್ ಅವರ ಓವರ್ ಒಂದರಲ್ಲಿ ಹೀಗೆ ಯದ್ವಾತದ್ವ ಹೊಡೆದು 37 ರನ್ ಗಳಿಸುವುದು ಕೇಕ್ ವಾಕ್ ಅಲ್ಲ. ಐಪಿಎಲ್‍ನ ಹೊಡೆಬಡಿಯ ದಾಂಡಿಗರಾದ ಕ್ರಿಸ್ ಗೇಲ್ ಅಥವಾ ಕೀರನ್ ಪೊಲಾರ್ಡ್, ಎ.ಬಿ.ಡೆವಿಲಿಯರ್ಸ್ ಅಥವಾ ಮ್ಯಾಕ್ಸ್ ವೆಲ್‍ಗೂ ಸಾಧ್ಯವಾಗದ ಈ ಸಾಧನೆಯನ್ನು ಸಾಧಿಸಿದ್ದು, ಭಾರತದ ಆಲ್‍ರೌಂಡರ್ ರವೀಂದ್ರ ಜಡೇಜಾ!
ತ್ರಿವಳಿ ತ್ರಿಶತಕ ಸಿಡಿಸಿದಾಗ ಆತನಿಗೆ 23 ವರ್ಷ
ಹಾಗೆ ನೋಡಿದರೆ, ರವೀಂದ್ರ ಜಡೇಜಾನೊಳಗಿನ ಬ್ಯಾಟ್ಸ್ ಮನ್ ಗಿಂತ ಆತನೊಳಗಿನ ಬೌಲರ್ ನಮಗೆ ಚಿರಪರಿಚಿತ. ವಾಸ್ತವದಲ್ಲಿ ಆತ ಬ್ಯಾಟ್ಸ್ ಮನ್ ಆಗಿ ಜಾಗತಿಕ ಕ್ರಿಕೆಟ್ ನಲ್ಲಿ ಸಚಿನ್‍ತೆಂಡೂಲ್ಕರ್, ವಿರಾಟ್ ಕೊಹ್ಲಿಗೂ ಎಟುಕದಂಥ ದಾಖಲೆಗಳನ್ನು ಬರೆದಿದ್ದಾರೆ ಎಂದರೆ ನೀವು ನಂಬ್ತೀರಾ? ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಮೂರು ತ್ರಿಶತಕ ಬಾರಿಸಿದ ಜಗತ್ತಿನ 8ನೇ ಹಾಗೂ ಭಾರತದ ಮೊದಲನೇ ಬ್ಯಾಟ್ಸಮನ್‍ರವೀಂದ್ರ ಜಡೇಜಾ! 3 ಬಾರಿ 300+ ರನ್‍ಗಳನ್ನು ಸಿಡಿಸುವ ಮೂಲಕ ಕ್ರಿಕೆಟ್ ನ ದಂತಕತೆ ಡಾನ್ ಬ್ರಾಡ್ ಮನ್, ಬ್ರಯಾನ್ ಲಾರಾ ಹಾಗೂ ಡಬ್ಲ್ಯು.ಜಿ. ಗ್ರೇಸ್ ಸಾಲಿಗೆ ಸೇರ್ಪಡೆಗೊಂಡ ಹೆಗ್ಗಳಿಕೆ ಅವರದ್ದು.
2011ರಲ್ಲಿ ಒರಿಸ್ಸಾ ವಿರುದ್ಧ 314 ರನ್ ಬಾರಿಸಿ ಮೊದಲನೇ ತ್ರಿಶತಕ, ಅದೇ ವರ್ಷ ಗುಜರಾತ್ ವಿರುದ್ಧ ಅಜೇಯ 303 ರನ್ ಸಿಡಿಸಿ ಎರಡನೇ ತ್ರಿಶತಕ, 2012ರಲ್ಲಿ ರೈಲ್ವೇಸ್ ವಿರುದ್ಧ 331 ರನ್ ಹೊಡೆದು ಮೂರನೇ ತ್ರಿಶತಕ ಸಾಧಿಸಿದಾಗ ಈ ಯುವ ಬ್ಯಾಟ್ಸ್ ಮನ್ ನ ವಯಸ್ಸು ಕೇವಲ 23 ವರ್ಷ!
ಎರಡು ಬಾರಿ ಯುವ ವಿಶ್ವಕಪ್ ಫೈನಲ್
ಅದೃಷ್ಟವಶಾತ್ 19 ವರ್ಷ ಕೆಳಗಿನ ಕಿರಿಯರ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕರೆ, ಅಪ್ಪಿತಪ್ಪಿ ಅದರಲ್ಲೇನಾದರೂ ಮಿಂಚುವ ಭಾಗ್ಯ ದೊರಕಿದರೆ, ಭಾರತದ ಹಿರಿಯರ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗಲು ಹೆಬ್ಬಾಗಿಲು ತೆರೆದಂತೆ ಎಂಬ ಮಾತಿದೆ. ರವೀಂದ್ರ ಜಡೇಜಾ ಪಾಲಿಗೆ ಅಂಥ ಅವಕಾಶ ಎರಡು ಸಲ ಸಿಕ್ಕಿದೆ! ಮೊದಲ ಸಲ 19 ವರ್ಷ ಕೆಳಗಿನ ಕಿರಿಯರ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದಾಗ ಆತನ ವಯಸ್ಸು ಕೇವಲ 16. ಅದು 2006 ರ ಸಮಯ. ಶ್ರೀಲಂಕಾದಲ್ಲಿ ನಡೆದ 19 ವರ್ಷ ಕೆಳಗಿನ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಫೈನಲ್ ಕೂಡ ತಲುಪಿತ್ತು. ಎದುರಾಳಿಯಾಗಿದ್ದಿದ್ದು ಬದ್ಧ ಎದುರಾಳಿ ಪಾಕಿಸ್ತಾನ ತಂಡ. ಜಡೇಜಾ ಅದ್ಭುತ ಬೌಲಿಂಗ್ ನಡೆಸಿ 3 ವಿಕೆಟ್ ಕಬಳಿಸಿದರೂ ತಂಡ ಗೆಲ್ಲಲಿಲ್ಲ.
ಪುಣ್ಯಕ್ಕೆ, ಜಡೇಜಾಗೆ ಮೊದಲ ವಿಶ್ವಕಪ್‍ಫೈನಲ್‍ಸೋಲಿನ ಕಹಿ ನೀಗಿಸುವಂತೆ ಮಾಡುವ ಅವಕಾಶ ಮತ್ತೆ ಸಿಕ್ಕಿತು. 2008ರಲ್ಲಿ 19 ವರ್ಷ ಕೆಳಗಿನ ಕಿರಿಯರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಮತ್ತೆ ಫೈನಲ್ ಪ್ರವೇಶಿಸಿತ್ತು. ಈ ಬಾರಿ ತಂಡದ ಕಪ್ತಾನನಾಗಿದ್ದಿದ್ದು ವಿರಾಟ್ ಕೊಹ್ಲಿ ಎಂಬ ಸಿಡಿಲ ಮರಿ. ವಿಶೇಷವೆಂದರೆ, ರವೀಂದ್ರ ಜಡೇಜಾ ಉಪ ಕಪ್ತಾನ. ಬಿಸಿ ರಕ್ತದ ಈ ತಂಡದಲ್ಲಿ ಸುಲಭಕ್ಕೆ ಸೋಲೊಪ್ಪುವ ಜಾಯಮಾನದವನದರು ಇರಲಿಲ್ಲ. ಸಹಜವಾಗಿಯೇ ಉತ್ತಮ ಕ್ರಿಕೆಟ್ ಆಡಿ ದಕ್ಷಿಣ ಆಫ್ರಿಕಾದ ಯುವ ಪಡೆಯನ್ನು ಮಣಿಸಿದ ಭಾರತ, ಎರಡನೇ ಬಾರಿಗೆ 19 ವರ್ಷ ಕೆಳಗಿನ ಕಿರಿಯರ ವಿಶ್ವಕಪ್ ಕ್ರಿಕೆಟ್ ಟ್ರೊಫಿಯನ್ನು ಮುಡಿಗೇರಿಸಿತ್ತು. ಈ ಸರಣಿಯಲ್ಲಿ 6 ಪಂದ್ಯಗಳಲ್ಲಿ 13ರ ಸರಾಸರಿಯಲ್ಲಿ 10 ವಿಕೆಟ್ ಗಳನ್ನು ಕಬಳಿಸಿದ್ದ ಬೌಲರ್ ಜಡೇಜಾ. ಆದರೆ ಅವರಿಗೆ ಬ್ಯಾಟಿಂಗ್ ನಲ್ಲಿ ಕರಾಮತ್ತು ಪ್ರದರ್ಶಿಸುವ ಸಣ್ಣ ಅವಕಾಶಗಳು ಸಿಕ್ಕಿದ್ದರೂ ದೊಡ್ಡ ಅದೃಷ್ಟ ಒಲಿದಿರಲಿಲ್ಲ.
ಬೆಂಕಿಯಲ್ಲಿ ಅರಳಿದ ಸವ್ಯಸಾಚಿ
ಗುಜರಾತ್ ನ ಜಾಮ್ ನಗರ ಜಿಲ್ಲೆಯ ನವಗಾಮ್ಗೆಡ್ ನಗರದಲ್ಲೊಂದು ಕೆಳ ಮಧ್ಯಮ ವರ್ಗದ ಕುಟುಂಬ. ಆ ಗುಜರಾತಿ ರಾಜಪುತ್ ಕುಟುಂಬದಲ್ಲಿ ಅಪ್ಪ ಅನಿರುದ್ಧಸಿನ್ಹಾ ಜಡೇಜಾ ಅವರು ಖಾಸಗಿ ಸೆಕ್ಯೂರಿಟಿ ಏಜೆನ್ಸಿಯಲ್ಲಿ ವಾಚ್ ಮನ್. ತಾಯಿ ಸರಕಾರಿ ಆಸ್ಪತ್ರೆಯಲ್ಲಿ ನರ್ಸ್. ನೈನಾ ಮತ್ತು ಪದ್ಮಿನಿ ಎಂಬ ಇಬ್ಬರು ಹೆಣ್ಣು ಮಕ್ಕಳ ನಂತರ 1988ರ ಡಿಸೆಂಬರ್ 6 ರಂದು ಹುಟ್ಟಿದ ಕಂದನೇ ರವೀಂದ್ರಸಿನ್ಹಾ ಅನಿರುದ್ಧಸಿನ್ಹಾ ಜಡೇಜಾ. ಮಗನಿಗೆ ಬಾಲ್ಯದಿಂದಲೇ ಕ್ರಿಕೆಟ್ ಅಂದರೆ ಪ್ರಾಣ. ಜಗತ್ ತುಂಟ. ಆದರೆ ತಂದೆ ಮುಂದೆ ತಲೆಯೆತ್ತಿ ನಿಂತು ಮಾತನಾಡಿಸಲು ಭಯ. ಅಪ್ಪನಿಗೋ ತನ್ನ ಮಗ ಸೇನಾ ಶಾಲೆಯಲ್ಲಿ ಓದಿ ಸೇನೆಯಲ್ಲಿ ದೊಡ್ಡ ಅಧಿಕಾರಿಯಾಗಬೇಕೆಂಬ ಹೆಬ್ಬಯಕೆ. ಇತ್ತ ಬದುಕಿನ ಬಂಡಿ ಮುನ್ನಡೆಸಲು ಪತಿಯ ಜತೆಗೆ ಹೆಗಲು ಕೊಟ್ಟಿದ್ದರೂ, ಬೆಂಬಲ ಮಾತ್ರ ಮಗನಿಗೆ ನೀಡುತ್ತಿದ್ದವರು ಅಮ್ಮ. ಮಗನ ದುಬಾರಿ ಕನಸು ನನಸಾಗಿಸಲು ಎಲ್ಲ ತ್ಯಾಗಗಳಿಗೂ ಸಿದ್ಧಳಾಗಿದ್ದಳು ಲತಾ ಎಂಬ ಕೆಳ ಮಧ್ಯಮ ವರ್ಗದ ಹೆಣ್ಣುಮಗಳು. ಅದೇ ಕಾರಣಕ್ಕೆ ಅಮ್ಮ ಅಂದರೆ ರವೀಂದ್ರನಿಗೆ ಪ್ರಾಣ.
ಹೊಟ್ಟೆ ಬಟ್ಟೆ ಕಟ್ಟಿ ಮಗನ ಕ್ರಿಕೆಟ್ ಆಟಕ್ಕೆ ಬೆನ್ನೆಲುಬಾಗಿದ್ದ ತಾಯಿಗೆ ಇದ್ದಿದ್ದು ಒಂದೇ ಆಸೆ. ಮಗ ಭಾರತ ತಂಡದಲ್ಲಿ ಆಡಿ ಖ್ಯಾತಿ ಗಳಿಸಬೇಕು!
ಅಮ್ಮನ ಕನಸು ತನ್ನದೂ ಆಗಿದ್ದರಿಂದ ರವೀಂದ್ರ ಹಗಲಿರುಳು ಮೈದಾನದಲ್ಲಿ ಬೆವರು ಹರಿಸುತ್ತಿದ್ದ. ಅದೃಷ್ಟವೂ ಈ ಪ್ರತಿಭಾವಂತನ ಹೆಗಲಿಗೇರಿತ್ತು. ಇನ್ನೇನು ಇದೇ ರೀತಿ ಆಟ ಆಡಿದರೆ ಮಗ ಒಂದಲ್ಲ ಒಂದು ದಿನ ಭಾರತದ ಪರ ಆಡುತ್ತಾನೆ ಎಂಬ ಕನಸು ಚಿಗುರೊಡೆಯುತ್ತಿದ್ದಾಗಲೇ ವಿಧಿ ಅವರ ಬಾಳಲ್ಲಿ ಬೇರೆಯೇ ಆಟ ಆಡಿತ್ತು. 2005 ರಲ್ಲಿ ನಡೆದ ಅಪಘಾತವೊಂದು ಲತಾ ಅವರ ಪ್ರಾಣವನ್ನೇ ಕಸಿದುಕೊಂಡಿತ್ತು. ಪ್ರತಿಭಾವಂತ ಮಗ ಕ್ರಿಕೆಟ್ ಲೋಕದಲ್ಲಿ ಮಾಡಬಹುದಾಗಿದ್ದ ಎಲ್ಲ ಸಾಧನೆಗಳನ್ನು ಕಣ್ತುಂಬಿಸಿಕೊಳ‍್ಳುವ ಮೊದಲೇ ಆಕೆ ಶಾಶ್ವತವಾಗಿ ಕಣ್ಣು ಮುಚ್ಚಿದ್ದರು.
ಅಮ್ಮನಂತೆ ಪೋಷಿಸಿದ ಅಕ್ಕ
ಸದಾ ಬೆನ್ನಿಗಿದ್ದು ಸಾಥ್ ನೀಡುತ್ತಿದ್ದ ಅಮ್ಮನೇ ಇಲ್ಲವಾದ ಮೇಲೆ ಇನ್ನು ಕ್ರಿಕೆಟ್ ಆಡಿದರೆಷ್ಟು ಬಿಟ್ಟರೆಷ್ಟು ಎಂದು ಅಮ್ಮನನ್ನು ಕಳೆದುಕೊಂಡು ಕಂಗಾಲಾಗಿದ್ದ ಬಾಲಕ ರವೀಂದ್ರ ಮೈದಾನಕ್ಕೆ ಶಾಶ್ವತವಾಗಿ ಬೆನ್ನು ಹಾಕಲು ನಿರ್ಧರಿಸಿದ. ಆದರೆ ಕುಗ್ಗಿ ಹೋಗಿದ್ದ ರವೀಂದ್ರನಿಗೆ, ನೀನು ದೇಶಕ್ಕಾಗಿ ಆಡಬೇಕು. ಅಮ್ಮನ ಕನಸು ನನಸು ಮಾಡಲೇಬೇಕು ಎಂದು ಹುರಿದುಂಬಿಸಿ ‘ಅಮ್ಮ’ನಂತೆ ಬೆನ್ನಿಗೆ ನಿಂತಿದ್ದು ಹಿರಿಯಕ್ಕ ನೈನಾ. ಅಮ್ಮನ ನರ್ಸ್ ಕೆಲಸವನ್ನು ಮುಂದುವರಿಸಿ, ಮನೆಯ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುತ್ತಾ, ಸ್ವತಃ ಅಮ್ಮನಂತೆ ತನ್ನ ತಮ್ಮನಿಗೆ ಆಕೆ ಮಾನಸಿಕ ಬೆಂಬಲ ನೀಡಿದ್ದರಿಂದ ರವೀಂದ್ರ ಕ್ರಿಕೆಟ್ ಮೈದಾನದಲ್ಲಿ ಇನ್ನಷ್ಟು ಬೆವರು ಹರಿಸಿ ಪ್ರಾಕ್ಟೀಸ್ ಮಾಡತೊಡಗಿದೆ. ಇದರ ಫಲವಾಗಿ 2006ರಲ್ಲಿ ಭಾರತದ ಕಿರಿಯರ ತಂಡದ ಸದಸ್ಯನಾಗುವ ಅವಕಾಶ ಒಲಿಯಿತಲ್ಲದೆ, ಭವ್ಯ ಭವಿಷ್ಯದ ಬಾಗಿಲೂ ತೆರೆಯಿತು. ಅಮ್ಮನನ್ನು ಕಳೆದುಕೊಂಡರೂ ಆಕೆಯ ಸ್ಥಾನದಲ್ಲಿ ನಿಂತು ಊಟ, ತಿಂಡಿಯಿಂದ ಹಿಡಿದು, ಬ್ಯಾಟ್, ಪ್ಯಾಡ್ ಗಳಿಗೆ ಹಣ ಕೊಟ್ಟು ಬೆನ್ನು ತಟ್ಟಲು ನೈನಾ ಅವರಂಥ ಅಕ್ಕ ಸಿಕ್ಕಿದ್ದು ರವೀಂದ್ರನ ಅದೃಷ್ಟ.
ನಿಜಕ್ಕೂ ಅದೃಷ್ಟವಂತ ಜಡೇಜಾ
ಭಾರತದ ಕಿರಿಯರ ತಂಡಕ್ಕೆ ಪ್ರವೇಶ ಸಿಕ್ಕ ಬೆನ್ನಲ್ಲೇ 2006-07ರ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶ ಜಡೇಜಾಗೆ ಒಲಿಯಿತು. ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ಗೂ ಆತ ಪದಾರ್ಪಣೆ ಮಾಡುವಂತಾಯಿತು. ಇಂದಿಗೂ ಅವರು ದುಲೀಪ್‍ಟ್ರೋಫಿಯಲ್ಲಿ ಪಶ್ಚಿಮ ವಲಯ ಹಾಗೂ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರವನ್ನು ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
2008ರ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಅವಕಾಶ ಸಿಕ್ಕಿ ಮಿಂಚಿದ ಜಡೇಜಾ ಬಿಸಿಸಿಐ ಆಯ್ಕೆ ಮಂಡಳಿಯ ಗಮನವನ್ನು ಸೆಳೆದರು. 2008-09ರ ರಣಜಿ ಟೂರ್ನಿಯಲ್ಲಿ 42 ವಿಕೆಟ್ ಗಳು ಹಾಗೂ 739 ರನ್ ಗಳನ್ನು ಸಿಡಿಸುವ ಮೂಲಕ ಮಿಂಚಿದ ಜಡೇಜಾಗೆ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಗೆ ಕರೆಬಂದಿತ್ತು. ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ 60 ರನ್ ಹೊಡೆದರೂ ಪಂದ್ಯ ಸೋತಿದ್ದು, ನಿರಾಶೆಗೆ ಕಾರಣವಾಗಿತ್ತು.
ಮುಂದೆ ಕೆಲವು ವಿವಾದಗಳಿಗೆ ತುತ್ತಾಗಿ ಕ್ರಿಕೆಟ್ ಬದುಕಿನಲ್ಲಿ ಕಂಟಕಗಳು ಎದುರಾದರೂ ಅದೃಷ್ಟವಶಾತ್ ರವೀಂದ್ರ ಜಡೇಜಾಗೆ ಅವಕಾಶಗಳು ಅರಸಿ ಬಂದವು. ಜನ್ಮತಃ ಪ್ರತಿಭಾವಂತನೂ ಪರಿಶ್ರಮಿಯೂ ಆಗಿರುವ ಆತ ಅವುಗಳನ್ನು ಎರಡೂ ಕೈಗಳಿಂದ ಬಾಚಿ ಬಳಸಿಕೊಂಡು ಯಶಸ್ವಿ ಆದರು.
ಐಸಿಸಿ ಕ್ರಮಾಂಕದಲ್ಲಿ ಅಗ್ರಸ‍್ಥಾನದ ಸಾಧನೆ
ರವೀಂದ್ರ ಜಡೇಜಾ ಪಾಲಿಗೆ ಭಾರತ ಕ್ರಿಕೆಟ್ ತಂಡಕ್ಕೆ ಒಳ ಬರುವುದು ಮತ್ತು ಹೊರ ಹೋಗುವುದು ಸಾಮಾನ್ಯ ಎಂಬಂತಾಗಿದೆ. ಅಷ್ಟಾದರೂ ಅವರು ಐಸಿಸಿ ಆಟಗಾರರ ವಾರ್ಷಿಕ ಕ್ರಮಾಂಕ ಪಟ್ಟಿಯಲ್ಲಿ ನಂಬರ್ 1 ಆಗಿದ್ದು ಇತಿಹಾಸ. 2013ರ ಆಗಸ್ಟ್ ನಲ್ಲಿ ಏಕದಿನ ಕ್ರಿಕೆಟ್ ನಲ್ಲಿ ಬೌಲರ್ಗಳ ಪಟ್ಟಿಯಲ್ಲಿ ನಂ.1 ಆಗಿದ್ದರು. 1996 ರಲ್ಲಿ ಅನಿಲ್ ಕುಂಬ್ಳೆ ತಲುಪಿದ್ದ ಅಗ್ರಕ್ರಮಾಂಕಕ್ಕೆ ಈ ನಡುವೆ ಭಾರತದ ಯಾವ ಬೌಲರ್ ಕೂಡ ನಂ.1 ಆಗಿರಲಿಲ್ಲ ಎನ್ನುವುದು ಗಮನಾರ್ಹ. ಕಪಿಲ್ ದೇವ್, ಮನೀಂದರ್ ಸಿಂಗ್ ಹಾಗೂ ಅನಿಲ್ ಕುಂಬ್ಳೆ ನಂತರ ನಂ.1 ನೇ ಸ್ಥಾನ ಪಡೆದ ಭಾರತದ ನಾಲ್ಕನೇ ಬೌಲರ್ ರವೀಂದ್ರ ಜಡೇಜಾ.
2016-17ರಲ್ಲಿ ತಮ್ಮ ವೃತ್ತಿ ಬದುಕಿನ ಉತ್ತುಂಗದ ಪ್ರದರ್ಶನ ತೋರಿದ್ದ ಜಡೇಜಾ 38 ಇನ್ನಿಂಗ್ಸ್ ಗಳಿಂದ 97 ವಿಕೆಟ್ ಗಳನ್ನು ಸಂಪಾದಿಸಿ ಆ ಕ್ರಿಕೆಟ್ ಋತುವಿನ ಟಾಪ್ ಆಲ್ ರೌಂಡರ್ ಗಳು ಹಾಗೂ ಬೌಲರ್ ಗಳ ನಿರ್ವಹಣೆಯಲ್ಲಿ ಎಲ್ಲರಿಗಿಂತ ಮೇಲಿನ ಸ್ಥಾನವನ್ನು ಗಳಿಸಿದ್ದರು. ಅಲ್ಲದೆ 2018 ರಲ್ಲಿ ಐಸಿಸಿ ಆಲ್ ರೌಂಡರ್ ಗಳ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನವನ್ನು ರವೀಂದ್ರ ಜಡೇಜಾ ಅಲಂಕರಿಸಿದ್ದರು.
“ಸರ್” ರವೀಂದ್ರ ಜಡೇಜಾ
ಮೈದಾನದಲ್ಲಾಗಲಿ, ಡ್ರೆಸಿಂಗ್ ರೂಮೇ ಇರಲಿ, ಸದಾ ತಮಾಷೆ ಮಾಡುತ್ತ ಲವಲವಿಕೆಯಿಂದ ಇರುವುದು ರವೀಂದ್ರ ಜಡೇಜಾ ಶೈಲಿ. ಆತ ರಾಜಸ್ಥಾನ್ ರಾಯಲ್ ತಂಡದ ಪರ ಮೊದಲ ಬಾರಿಗೆ ಐಪಿಎಲ್ ಆಡಿದಾಗ ಆಗ ತಂಡದ ಕಪ್ತಾನನಾಗಿದ್ದ ಶೇನ್ ವಾರ್ನ್, ಜಡೇಜಾ ಪ್ರತಿಭೆ, ಪ್ರದರ್ಶನ ಹಾಗೂ ಲವಲವಿಕೆ ಕಂಡ “ರಾಕ್ ಸ್ಟಾರ್” ಎಂದು ಬಿರುದು ನೀಡಿದ್ದರು. ಜತೆಗೆ ಈತ ಭವಿಷ್ಯದ ಸೂಪರ್ ಸ್ಟಾರ್ ಎಂದು ಘೋಷಿಸಿದ್ದರು. ಭಾರತ ತಂಡದಲ್ಲಿ ಮೊದಲ ಬಾರಿಗೆ ಆಡಿದಾಗ ಈತನ ಉತ್ಸಾಹ, ಚೈತನ್ಯ ಕಂಡು ತಂಡದ ಸಹಆಟಗಾರರು “ಜಡ್ಡು” ಎಂಬ ಅಡ್ಡನಾಮ ಇರಿಸಿದರು. ಈಗಲೂ ರವೀಂದ್ರ ಜಡೇಜಾ ಎಲ್ಲ ಕ್ರಿಕೆಟಿಗರು ಹಾಗೂ ಅಭಿಮಾನಿಗಳ ಪಾಲಿಗೆ ಜಡ್ಡು ಆಗಿ ಜನಜನಿತರು.
2009ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಪ್ರಮಾದ ಭರಿತ ಪ್ರದರ್ಶನ ಅವರಿಗೆ “ಸರ್” ಇನ್ನೊಂದು ನಿಕ್ ನೇಮ್ ಒದಗಿಸಿತು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಜಡೇಜಾ ಅವರನ್ನು ಕಿಚಾಯಿಸಲು ಕೊಟ್ಟ ‘ಸರ್’ ಎಂಬ ನಿಕ್ ನೇಮ್ ಕ್ರಮೇಣ ಅವರು ಉತ್ತಮ ಪ್ರದರ್ಶನ ತೋರಿದಾಗ ಪಾಸಿಟಿವ್‍ಆಗಿಯೂ ಬಳಕೆಗೆ ಬಂದಿದ್ದು ವಿಶೇಷ.
ಐಪಿಎಲ್ ನಲ್ಲಿ ಯಶಸ್ಸಿನ ಹಿಂದೆ ವಿವಾದದ ಸುಳಿ
ಐಪಿಎಲ್ ನ ಆರಂಭದ ಮೂರು ಋತುಗಳಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿ ಮಿಂಚಿದ ಜಡೇಜಾ ಅವರಿಗೆ 2010 ರ ಐಪಿಎಲ್ ನಲ್ಲಿ ವಿವಾದಗಳು ಅವರ ಯಶಸ್ಸಿಗೆ ಮೋಡ ಕವಿಯುವಂತೆ ಮಾಡಿದವು. ಪ್ರಾಂಚೈಸಿಗಳ ಒಪ್ಪಂದದ ಉಲ್ಲಂಘನೆ ಮಾಡಿದ್ದಕ್ಕೆ ಅವರಿಗೆ ಐಪಿಎಲ್ ಆಡುವುದಕ್ಕೆ ನಿಷೇಧ ಹೇರಲಾಗಿತ್ತು. ಆದರೆ ಮುಂದಿನ ಋತುವಿನಿಂದ ಕೇರಳದ ಕೊಚ್ಚಿ ಟಸ್ಕರ್ ಪರ ಆಡುವ ಅವಕಾಶ ಪಡೆದು, ಆ ತಂಡವನ್ನು ಐಪಿಎಲ್ ನಿಂದ ಕಿತ್ತು ಹಾಕುವವರೆಗೆ ಆಟವಾಡಿದರು. ಬಳಿಕ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಸೇರ್ಪಡೆಗೊಂಡು ಆ ತಂಡದ ಪ್ರಮುಖ ಆಟಗಾರನಾಗಿ ಈಗಲೂ ಮಿಂಚುತ್ತಿದ್ದಾರೆ.
ಮೈದಾನದಾಚೆಯೂ ಮಿಂಚುವ ವ್ಯಕ್ತಿತ್ವ
ಆರ್ಥಿಕವಾಗಿ ಸ್ಥಿತಿವಂತವಲ್ಲದ ಕುಟುಂಬದಿಂದ ಬಂದ ರವೀಂದ್ರ ಜಡೇಜಾ ಬಳಿ ಈಗ ಕೋಟಿ ಕೋಟಿ ಹಣವಿದೆ. ಆದರೆ ಪ್ರತಿ ಪೈಸೆಯನ್ನೂ ಲೆಕ್ಕ ಹಾಕುವ ಪಕ್ಕಾ ಗುಜರಾತಿ ಈತ. ಬೆವರಿನ ಸಂಪಾದನೆಯನ್ನು ವ್ಯರ್ಥಗೊಳಿಸುವ ಜಾಯಮಾನ ಇವರದ್ದಲ್ಲ. ಹಾಗಂತ ಸಂಪಾದಿಸಿದ ಹಣವನ್ನು ಆನಂದಿಸದವನೂ ಅಲ್ಲ. ರಾಜಪೂತನಾಗಿರುವುದರಿಂದ ಕುದುರೆ ಮೇಲೆ ಭಾರಿ ಪ್ರೀತಿ. ಈತನ ಬಳಿ 5 ವಿಭಿನ್ನ, ದುಬಾರಿ ಕುದುರೆಗಳಿವೆ. ಗೆಳೆಯ ಧೋನಿಯಂತೆ ಐಶಾರಾಮಿ ಬೈಕ್, ಕಾರುಗಳನ್ನು ಹೊಂದಿರುವ ಈತನ ಬಳಿ ‘ಜಡ್ಡು’ ಹೆಸರಿನ ರೆಸ್ಟೋರೆಂಟ್ ಕೂಡ ಇದೆ. ಅದು ರಾಜ್ ಕೋಟ್ ನಲ್ಲಿ ಬಹಳ ಜನಪ್ರಿಯ ಹೋಟೆಲ್ ಆಗಿದೆ. ಜತೆಗೆ ಹುಟ್ಟೂರು ಜಾಮ್ ನಗರದ ಪಸಾಯ ಎಂಬಲ್ಲಿ ಫಾರ್ಮ್ ಹೌಸ್ ಕೂಡ ಇದೆ. ಅಲ್ಲಿನ ತೋಟವನ್ನು ಈಗ ಅಪ್ಪ ನೋಡಿಕೊಳ್ಳುತ್ತಿದ್ದಾರೆ.
ಬದಲಾಗದ ಜಡೇಜಾ
ಇಷ್ಟೆಲ್ಲಾ ಖ್ಯಾತಿ, ಕಾಸು ಕೈತುಂಬಿದರೂ ನನ್ನ ತಮ್ಮ ಬದಲಾಗಿಲ್ಲ ಎನ್ನುತ್ತಾರೆ ಜಡೇಜಾ ಅಕ್ಕ ನೈನಾ. ಆತ ಈಗಲೂ ಮೊದಲಿನಂತೆಯೇ ಇದ್ದಾನೆ. ಖ್ಯಾತಿ ಅವನ ತಲೆಗೆ ಅಡರಿಲ್ಲ. ಅವನ ಕಾಲಿನ್ನೂ ಹಿಂದಿನಂತೆ ಈಗಲೂ ಭೂಮಿಯ ಮೇಲೇ ಇದೆ. ಅವನು ಧಾರ್ಮಿಕ ವ್ಯಕ್ತಿ. ಅಗತ್ಯವಿರುವವರಿಗೆ ಯಾರಿಗೂ ಹೇಳದೆ ಸಹಾಯ ಮಾಡುತ್ತಾನೆ ಮತ್ತು ಅದನ್ನು ಮಾಧ್ಯಮಗಳಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಾನೆ ಎನ್ನುತ್ತಾರೆ ನೈನಾ.
ವಿಶೇಷವೆಂದರೆ, ಈಗಲೂ ನೈನಾ ಅವರು ತಾವು ಕಲಿತ ನರ್ಸಿಂಗ್ ವಿದ್ಯೆಯಿಂದ ಸಂಪಾದಿಸಿದ ನರ್ಸ್‍ಕೆಲಸವನ್ನು ಬಿಟ್ಟಿಲ್ಲ. ಮನೆಯಲ್ಲಿ ಕೋಟಿಗಟ್ಟಲೆಯ ಐಶಾರಾಮಿ ಕಾರುಗಳಿದ್ದರೂ ಆಕೆ ಈಗಲೂ ಬಸ್‍ಹಿಡಿದು ಕೆಲಸಕ್ಕೆ ಹೋಗಿ ಬರುತ್ತಾರೆ. ಬಹುಶಃ ಸರಳತೆ ಇವರೆಲ್ಲರ ಸಂಸ್ಕಾರದಲ್ಲೇ ಬಂದಿರಬಹುದು. ಅದೇ ಕಾರಣದಿಂದ ಸೋತಾಗಲೂ ಗೆದ್ದಾಗಲೂ ಹಿಗ್ಗದೆ, ಕುಗ್ಗದೆ ರವೀಂದ್ರ ಜಡೇಜಾ ಮುನ್ನಡೆಯುತ್ತಲೇ ಇದ್ದಾರೆ… ಯಶಸ್ಸಿನ ಬೆನ್ನೇರಿ!