RT-PCR ಪರೀಕ್ಷೆಯನ್ನೂ ಯಾಮಾರಿಸುತ್ತೆ ರೂಪಾಂತರಿ ವೈರಾಣು!

ಕರೋನಾ ಸಾವು-ನೋವುಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕರೋನಾ ಎರಡನೇ ಅಲೆಯ ಭೀಕರ ಹೊಡೆತಕ್ಕೆ ಸಿಕ್ಕಿ ದೇಶದ ಜನಸಮೂಹ ತತ್ತರಿಸುತ್ತಿರುವಾಗ, ರೂಪಾಂತರಿ ಕರೋನಾ ವೈರಾಣು ದಾಳಿಯ ಅಪಾಯಗಳೂ ಒಂದೊಂದಾಗಿ ಬಯಲಾಗತೊಡಗಿವೆ.

ಈ ನಡುವೆ, ಕರೋನಾ ಸೋಂಕು ತಡೆಗೆ ಸರ್ಕಾರದ ಲಾಕ್ ಡೌನ್ ಕ್ರಮದ ಮಿತಿಗಳು, ಸೋಂಕಿತರ ಜೀವರಕ್ಷಣೆಯ ವಿಷಯದಲ್ಲಿ ಸವಾಲಾಗಿರುವ ಆಸ್ಪತ್ರೆಗಳ ಹಾಸಿಗೆ, ಔಷಧಿ ಮತ್ತು ಆಮ್ಲಜನಕದ ಕೊರತೆ, ಮೃತರ ಶವಸಂಸ್ಕಾರದ ಅವ್ಯವಸ್ಥೆ, ಲಸಿಕೆ ಕೊರತೆ ಮತ್ತಿತರ ಜನರ ಜೀವಕ್ಕೆ ಸಂಬಂಧಿಸಿದ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸಬೇಕಾದ ಸರ್ಕಾರಗಳು, ಎಲ್ಲಾ ಲೋಪಗಳನ್ನು, ಅಕ್ರಮಗಳನ್ನು, ಅವ್ಯವಸ್ಥೆಯನ್ನು ಮುಚ್ಚಿಹಾಕಲು, ಅವುಗಳನ್ನು ಪ್ರಶ್ನಿಸುವ ಜನರ ದನಿ ಉಡುಗಿಸಲು ಲಾಕ್ ಡೌನ್ ಮತ್ತು ಕರ್ಫ್ಯೂ ಅಸ್ತ್ರಗಳನ್ನು ಪರಿಣಾಮಕಾರಿಯಾಗಿ ಬಳಸತೊಡಗಿವೆ. ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಎಂಬ ಖಾವಿಧಾರಿಯ ನೇತೃತ್ವದ ಬಿಜೆಪಿ ಸರ್ಕಾರವಂತೂ, ಆಸ್ಪತ್ರೆಯ ಬೆಡ್ ಸಿಕ್ಕಿಲ್ಲ, ರೆಮಿಡಿಸಿವರ್ ಔಷಧಿ ಸಿಕ್ಕಿಲ್ಲ, ಲಸಿಕೆ ಸಿಕ್ಕಿಲ್ಲ ಎಂದು ಹೇಳಿದವರನ್ನೇ ಕಟಕಟೆಗೆ ಕಳಿಸಿ, ದೇಶದ್ರೋಹದ ಪ್ರಕರಣ ದಾಖಲಿಸುವ ಪಾಶಾವಿ ಆಡಳಿತ ಕ್ರೌರ್ಯ ಮರೆಯತೊಡಗಿದೆ.

ಹಾಗಾಗಿ ಕರೋನಾ ರೂಪಾಂತರಿ ವೈರಾಣು ಅಪಾಯಗಳೂ ಸೇರಿದಂತೆ ಈ ಸೋಂಕು ಮತ್ತು ಅದರ ತಡೆಯುವಿಕೆಯಲ್ಲಿನ ಸವಾಲು ಮತ್ತು ಸಮಸ್ಯೆಗಳ ಕುರಿತ ವಾಸ್ತವಾಂಶಗಳ ಬಗ್ಗೆ ಕೂಡ ಜನಸಾಮಾನ್ಯರಿರಲಿ, ತಜ್ಞರೂ ಬಾಯಿಬಿಡಲು ಭಯಪಡುತ್ತಿದ್ದಾರೆ. ಅಷ್ಟರಮಟ್ಟಿಗೆ ದೇಶದ ಆಡಳಿತ ಭೀತಿ ಸೃಷ್ಟಿಸುತ್ತಿದೆ. ಇಂತಹ ಭೀತಿಯ ನಡುವೆಯೂ ಕೆಲವು ತಜ್ಞರು ಸತ್ಯವನ್ನು ಜನತೆಗೆ ತಲುಪಿಸುವ ಯತ್ನ ಮಾಡುತ್ತಿದ್ದಾರೆ. ಹೊಸ ರೂಪಾಂತರಿ ಕರೋನಾ ವೈರಾಣು ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಪತ್ತೆಯಾಗದೇ ಇರುವ ಸಾಧ್ಯೆತೆಗಳು ಹೆಚ್ಚು, ರೆಮಿಡಿಸಿವರ್ ಔಷಧಿ ಸೋಂಕಿತರಲ್ಲಿ ತೀರಾ ಗಂಭೀರ ಪರಿಸ್ಥಿತಿಗೆ ಮುನ್ನ ಬಳಸಬಹುದೇ ವಿನಃ ಗಂಭೀರ ಸ್ಥಿತಿಯಲ್ಲಿರುವವರನ್ನು ಬದುಕಿಸಲು ಅದು ಪ್ರಯೋಜನಕಾರಿಯಾಗಲಾರದು ಎಂಬ ಸಂಗತಿಗಳು ಕೂಡ ಹೀಗೆ ಹೊರಬರುತ್ತಿರುವ ಹೊಸ ಸಂಗತಿಗಳು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದಿದ್ದರೂ, ಉಸಿರಾಟದ ಸಮಸ್ಯೆ ತೀವ್ರವಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು, ಚಿಕಿತ್ಸೆ ಫಲಿಸದೆ ಸಾವು ಕಂಡ ಹಿನ್ನೆಲೆಯಲ್ಲಿ, ಅಲ್ಲಿನ ಕೋವಿಡ್ ವೈದ್ಯಾಧಿಕಾರಿ ಡಾ ಶಿವಕುಮಾರ್ ಅವರು ಆರ್ ಟಿ ಪಿಸಿಆರ್ ಪರೀಕ್ಷೆ ಮತ್ತು ರೆಮಿಡಿಸಿವರ್ ಔಷಧಿಗಳ ಮಿತಿಗಳ ಕುರಿತು ಆಡಿರುವ ಮಾತುಗಳು ವೈರಲ್ ಆಗಿವೆ. ಆರ್ ಟಿಪಿಸಿಆರ್ ಪರೀಕ್ಷೆಯ ಫಲಿತಾಂಶ ನೆಗೇಟಿವ್ ಬಂದಿದ್ದು, ವ್ಯಕ್ತಿ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರೆ, ಅವರು ಸಾವಿಗೆ ಹತ್ತಿರವಿದ್ದಾರೆ ಎಂದೇ ಅರ್ಥ. ಏಕೆಂದರೆ, ದೇಶದಲ್ಲಿ ಈಗ ಅನಾಹುತಕಾರಿಯಾಗಿರುವ ರೂಪಾಂತರಿ ವೈರಾಣು ಸೋಂಕಿಗೆ ಒಳಗಾಗಿ ತೀವ್ರ ಆರೋಗ್ಯ ಸಮಸ್ಯೆ್ಗೆ ಸಿಲುಕಿದ್ದರೆ, ಆಗ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಆ ವೈರಾಣು ಪತ್ತೆ ಆಗದು. ಹಾಗಾಗಿ ಅಂಥವರಿಗೆ ಕೂಡಲೇ ಹೆಚ್ಚಿನ ತುರ್ತು ಚಿಕಿತ್ಸೆ ಬೇಕಾಗುತ್ತದೆ. ಆದರೆ, ಹಾಗಂತ ಆ ಹಂತದಲ್ಲಿ ರೆಮಿಡಿಸಿವರ್ ಔಷಧಿಯನ್ನು ಕೂಡ ಬಳಸಲಾಗದು. ಯಾವುದೇ ಕೋವಿಡ್ ರೋಗಿಯ ಸ್ಥಿತಿ ಗಂಭೀರವಾಗಿದ್ದು,  ಅವರಲ್ಲಿ ವೈರಾಣು ಲೋಡ್ ಅಧಿಕವಾಗಿದ್ದಾಗ ರೆಮಿಡಿಸಿವರ್ ಪ್ರಯೋಜನಕ್ಕೆ ಬರದು ಎಂದು ಡಾ ಶಿವಕುಮಾರ್ ಕಟುವಾಸ್ತವವನ್ನು ಬಿಚ್ಚಿಟ್ಟಿದ್ಧಾರೆ.

 ಇದೇ ಅಭಿಪ್ರಾಯವನ್ನು ದೇಶದ ವಿವಿಧ ವೈದ್ಯರು ಮತ್ತು ಸಾಂಕ್ರಾಮಿಕ ರೋಗ ತಜ್ಞರು ಕೂಡ ವ್ಯಕ್ತಪಡಿಸಿದ್ದು, ದೆಹಲಿಯ ಹಲ್ವೇಷಿಯಾ ಮೆಡಿಕಲ್ ಸೆಂಟರಿನ ಕನ್ಸಲ್ಟೆಂಟ್ ಫಿಜಿಷಿಯನ್ ಡಾ ಸೌರದಿಪ್ತಾ ಚಂದ್ರ ಕೂಡ, ಹೊಸ ರೂಪಾಂತರಿ ವೈರಾಣುವಿನ ರಚನೆ, ಸದ್ಯ ಚಾಲ್ತಿಯಲ್ಲಿರುವ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ಪತ್ತೆಯಾಗುವುದಿಲ್ಲ. ಜೊತೆಗೆ ಹೊಸ ಎರಡು ಮತ್ತು ಮೂರನೇ ರೂಪಾಂತರಿ ವೈರಾಣುಗಳ ಸೋಂಕಿನ ಗುಣಲಕ್ಷಣಗಳು ಕೂಡ ಹಿಂದಿನ ಮೊದಲ ಅಲೆಯ ಸೋಂಕಿನ ಗುಣಲಕ್ಷಣಗಳಿಗಿಂತ ಭಿನ್ನವಾಗಿವೆ. ಹಾಗಾಗಿ ಬಹುತೇಕ ಪ್ರಕರಣಗಳಲ್ಲಿ ಆರಂಭಿಕ ಗುಣಲಕ್ಷಣಗಳನ್ನು ಜನ ಬೇರೆ ಆರೋಗ್ಯ ಸಮಸ್ಯೆ ಎಂದು ಉದಾಸೀನ ಮಾಡುವುದು ಮತ್ತು ಆರ್ ಟಿ ಪಿಸಿಆರ್ ನೆಗೇಟಿವ್ ವರದಿಯ ಹಿನ್ನೆಲೆಯಲ್ಲಿ ಕರೋನಾ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಮನೆಯಲ್ಲಿಯೇ ಇರುವುದು ಸಾಮಾನ್ಯವಾಗಿದೆ. ಆದರೆ, ಪರಿಸ್ಥಿತಿ ಕೈಮೀರಿದ ಬಳಿಕ ದಿಢೀರನೇ ಆಸ್ಪತ್ರೆಗೆ ಧಾವಿಸುವ ಹೊತ್ತಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುತ್ತದೆ ಎಂದಿದ್ದಾರೆ.

ಅಲ್ಲದೆ, ಈ ಮೊದಲ ಅಲೆಯಲ್ಲಿ ಕಂಡುಬಂದಂತಹ ಜ್ವರ, ಮೈಕೈನೋವು, ವಾಂತಿ, ಗಂಟಲುನೋವು, ಕೆಮ್ಮು, ರುಚಿ ಮತ್ತು ವಾಸನೆ ಗೊತ್ತಾಗದಿರುವುದು ಮತ್ತಿತರ ಲಕ್ಷಣಗಳಲ್ಲದೆ, ಈ ಹೊಸ ವೈರಾಣು ಸೋಂಕಿನಲ್ಲಿ ಬೇಧಿ, ಹೊಟ್ಟೆನೋವು, ಚರ್ಮದ ಗುಳ್ಳೆ, ಗೊಂದಲ, ಯೋಚನಾಶಕ್ತಿ ಕಳೆದುಕೊಳ್ಳುವುದು, ಕೈ ಮತ್ತು ಕಾಲು ಬೆರಳು ನೀಲಿಗಟ್ಟುವುದು, ಮೂಗು ಮತ್ತು ಗಂಟಲಿನಲ್ಲಿ ರಕ್ತ ಬರುವುದು ಮುಂತಾದ ಹೊಸ ಲಕ್ಷಣಗಳು ಗೋಚರಿಸುತ್ತಿವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.

ಹಾಗಾಗಿ, ಈ ಮೇಲಿನ ರೋಗಲಕ್ಷಣಗಳಿದ್ದು, ವ್ಯಕ್ತಿಯ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಫಲಿತಾಂಶ ಬಂದಿದ್ದರೆ, ಆ ರೋಗಿಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಕ್ಷಣವೇ ಅವರಿಗೆ ಸಿಟಿ ಸ್ಕ್ಯಾನ್ ಮಾಡಿ, ವೈರಾಣು ಲೋಡ್ ಮಾಹಿತಿ ಖಚಿತಪಡಿಸಿಕೊಂಡು ವೆಂಟಿಲೇಟರ್, ಆಮ್ಲಜನಕ ಮುಂತಾದ ಜೀವರಕ್ಷಕ ವ್ಯವಸ್ಥೆಯೊಂದಿಗೆ ಚಿಕಿತ್ಸೆ ನೀಡಬೇಕಾಗುತ್ತದೆ. ಆದರೆ, ಬಹುತೇಕ ವೇಳೆ ಆರ್ ಟಿ ಪಿಸಿಆರ್ ಪರೀಕ್ಷೆಯಲ್ಲಿ ನೆಗೇಟಿವ್ ಬಂದ ಕೂಡಲೇ ಅವರಿಗೆ ಕರೋನಾ ಇಲ್ಲ ಎಂಬ ನಿಲುವಿಗೆ ರೋಗಿಯ ಕಡೆಯವರು ಬಂದು, ಚಿಕಿತ್ಸೆ ಕೊಡಿಸದೇ ಇರುವುದು ಅಥವಾ ಚಿಕಿತ್ಸೆ ಮುಂದುವರಿಸಿದ ವೈದ್ಯಕೀಯ ಸಿಬ್ಬಂದಿಯ ವಿರುದ್ಧವೇ ಅಪಪ್ರಚಾರ ನಡೆಸುವುದು ಕಂಡುಬರುತ್ತಿದೆ. ಆದರೆ, ವಾಸ್ತವ ಬೇರೆಯೇ ಇದೆ. ಆ ಹಿನ್ನೆಲೆಯಲ್ಲಿ ನಾವು(ತಜ್ಞ ವೈದ್ಯರು) ಹೊಸ ರೂಪಾಂತರಿ ವೈರಾಣು ಪತ್ತೆಗೆ ನೆರವಾಗುವಂತೆ ಆರ್ ಟಿ ಪಿಸಿಆರ್ ಪರೀಕ್ಷೆಯ ಮಾದರಿಯನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ ಎಂದೂ ವೈದ್ಯರು ಹೇಳಿದ್ದಾರೆ.

ಹಾಗೇ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳು ಕೂಡ, ಕೇವಲ ಆರ್ ಟಿಪಿಸಿಆರ್ ಪರೀಕ್ಷೆಯ ಫಲಿತಾಂಶದ ಮೇಲೆಯೇ ಸಂಪೂರ್ಣ ನಿರ್ಧಾರ ಕೈಗೊಳ್ಳದೆ, ಆಂಟಿಜೆನ್ ಪರೀಕ್ಷೆ, ಸಿಟಿ ಸ್ಕ್ಯಾನ್ ಪರೀಕ್ಷೆಗಳನ್ನು ಮಾಡುವುದು ಮತ್ತು ಮೂಲಭೂತವಾಗಿ ರೋಗ ಲಕ್ಷಣಗಳನ್ನು ಗಮನಿಸಿ ಚಿಕಿತ್ಸೆಯನ್ನು ನಿರ್ಧರಿಸಬೇಕು ಎಂದೂ ದೆಹಲಿಯ ತಜ್ಞರು ಸಲಹೆ ನೀಡಿದ್ದಾರೆ.

ಹಾಗಾಗಿ, ಸೋಂಕಿತರು ಮತ್ತು ಸೋಂಕಿತರ ಸಂಬಂಧಿಗಳು ಯಾವುದೇ ಹಂತದಲ್ಲಿ ಮುಖ್ಯವಾಗಿ ಸೋಂಕಿನ ಗುಣಲಕ್ಷಣಗಳ ಮೇಲೆ ಹೆಚ್ಚು ಗಮನವಿಡಬೇಕು ಮತ್ತು ರೆಮಿಡಿಸಿವರ್ ನಂಥ ಔಷಧಗಳು ಸೋಂಕಿನ ಆರಂಭಿಕ ಹಂತದಲ್ಲಿ ಮಾತ್ರ ಪರಿಣಾಮಕಾರಿಯೇ ವಿನಃ ಗಂಭೀರ ಸ್ಥಿತಿಯಲ್ಲಿ ಅವು ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ ಎಂಬುದನ್ನು ಅರಿತು, ವಿಳಂಬ ಮಾಡದೇ ಸೋಂಕಿನ ಗುಣಲಕ್ಷಣಗಳು ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂಬುದನ್ನು ಮರೆಯಬಾರದು.

Related posts

Latest posts

ಕೋವಿಡ್ ಬಯಲು ಮಾಡುತ್ತಿರುವ ಗುಜರಾತ್ ಮಾದರಿಯ ಅಸಲಿ ಮುಖ!

ಕೋವಿಡ್‌ ಸೋಂಕು ಭಾರತಕ್ಕೆ ಕಾಲಿಟ್ಟಂದಿನಿಂದ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ಮತ್ತು ಯಡವಟ್ಟುಗಳು ಬಹಿರಂಗಗೊಳ್ಳುತ್ತಿವೆ. ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕೆಂದು ಸ್ಥಾಪನೆಯಾದ ಪಿಎಂಕೇರ್ಸ್‌ ನಿಧಿಯಿಂದ ಹಿಡಿದು ಕೋವಿಡ್‌ ಸಂಬಂಧಿತ ಸಾವುಗಳವರೆಗೆ...

ಆಧುನಿಕ ನಾಗರಿಕ ಜಗತ್ತು ಪ್ರಾಚೀನ ಮನಸ್ಥಿತಿಯ ಸಂಘರ್ಷ

ನಾಗರಿಕತೆ ಮತ್ತು ನಾಗರಿಕ ಈ ಎರಡು ಪದಗಳನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಲೇ ಇರುತ್ತೇವೆ. ಹಾಗೆಯೇ ಅನಾಗರಿಕ ಎಂಬ ಹೀಗಳೆಯುವ ಪದವನ್ನೂ ಬಳಸುತ್ತಿರುತ್ತೇವೆ. ಆಧುನಿಕ ಸಮಾಜ ಬಯಸುವ ಒಂದು ಸಂಯಮ, ಶಿಸ್ತು...

ಜಗನ್ಮೋಹನ್ ವಿರುದ್ಧ ಸಿಡಿದೆದ್ದ ಸಂಸದನ ಬಂಧನ: ದೇಶದ್ರೋಹ ಪ್ರಕರಣ ದಾಖಲು

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಸಿಎಂ ಜಗ್ಗನ್ ಮೋಹನ್ ರೆಡ್ಡಿ ಅವರಿಗೆ ನೀಡಿದ ಜಾಮೀನು ರದ್ದುಗೊಳಿಸುವಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕನುಮುರಿ ರಘುರಾಮ ಕೃಷ್ಣಂರಾಜು ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ...