ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಭಾರತೀಯಾ ಸೇನಾಪಡೆಯ ಯೋಧನೊಬ್ಬನನ್ನು ರಾಜಸ್ತಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫೇಸ್ ಬುಕ್ ನಲ್ಲಿ ಪರಿಚಿತರಾದ ಪಾಕಿಸ್ತಾನದ ಗೂಢಚಾರಿಣಿಯೊಂದಿಗೆ ಸಲುಗೆಯಿಂದ ಇದ್ದ ಯೋಧ, ಆಕೆಯ ಮೋಹಪಾಶಕ್ಕೆ ಒಳಗಾಗಿ ದೇಶದ ಸೂಕ್ಷ್ಮ ಭದ್ರತಾ ಮಾಹಿತಿಯನ್ನು ಆಕೆಗೆ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆಯ ಯೋಧ ಆಕಾಶ್ ಮಹರಿಯಾ ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜಸ್ತಾನದ ಶಿಕಾರ್ ಜಿಲ್ಲೆಯ ನಿವಾಸಿ ಎನ್ನಲಾಗಿರುವ, 22 ವರ್ಷದ ಆಕಾಶ್, ಸಿಕ್ಕಿಂನಲ್ಲಿ ನಿಯೋಜನೆಯಗೊಂಡಿದ್ದ. ರಜೆಯ ಮೇಲೆ ಸ್ವಗ್ರಾಮಕ್ಕೆ ಮರಳಿದ್ದಆತನನ್ನು ರಾಜಸ್ತಾನ ಗುಪ್ತಚರ ಪೊಲೀಸರು, ಖಚಿತ ಮಾಹಿತಿ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಪಾಕಿಸ್ತಾನದ ಗೂಢಚಾರಿ ಸಂಸ್ಥೆಗಳ ಅಧಿಕಾರಿಯಾಗಿರುವ ಮಹಿಳೆಯೊಂದಿಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಪಾಕಿಸ್ತಾನಿ ಗೂಢಚಾರ ಸಂಸ್ಥೆಯ ಮಹಿಳಾ ಅಧಿಕಾರಿಗಳೊಂದಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಕಾಶ್ ಅಶ್ಲೀಲ ಚಾಟ್ ನಡೆಸಿರುವುದು ಕೂಡ ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ವರದಿಯಾಗಿದೆ. 2018ರಲ್ಲಿ ಭಾರತೀಯ ಸೇನಾಪಡೆಗೆ ಸೇರಿದ್ದ ಆಕಾಶ್, ಬಳಿಕ ಒಂದು ವರ್ಷದಲ್ಲಿ ತನ್ನ ತರಬೇತಿ ಮುಗಿಸಿ ಸಿಕ್ಕಿಂ ಗಡಿಯಲ್ಲಿ ಸೇವೆಗೆ ನಿಯೋಜನೆಗೊಂಡಿದ್ದ.
ಪಾಕಿಸ್ತಾನಿಯರಿಗೆ ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ರವಾನೆ ಮಾಡಿ ಆಕಾಶ್ ಮಹರಿಯಾ ಬಂಧನಕ್ಕೊಳಗಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ಅದರಲ್ಲೂ ‘ಹಿಂದೂಗಳು ಎಂದೆಂದೂ ದೇಶದ್ರೋಹಿಗಳಾಗುವುದಿಲ್ಲ. ಭಾರತದ ವಿರುದ್ಧ ಕೆಲಸ ಮಾಡುವುದಿಲ್ಲ. ದೇಶಪ್ರೇಮ ಅವರ ರಕ್ತದಲ್ಲೇ ಇದೆ’ ಎಂಬ ಆರ್ ಎಸ್ ಎಸ್ ಮುಖಂಡ ಮೋಹನ್ ಭಾಗ್ವತ್ ಅವರ ಇತ್ತೀಚಿನ ಹೇಳಿಕೆಯ ಹಿನ್ನೆಲೆಯಲ್ಲಿ ನೆಟ್ಟಿಗರು, ಈ ಯೋಧನ ಬಗ್ಗೆ ಆರ್ ಎಸ್ ಎಸ್ ಈಗೇನು ಹೇಳುತ್ತದೆ? ಈ ಬಗ್ಗೆ ಯಾಕೆ ಬಿಜೆಪಿ ಮಹಾ ಮೌನಕ್ಕೆ ಶರಣಾಗಿದೆ? ಎಂದು ಕಟು ವ್ಯಂಗ್ಯವಾಡಿದ್ದಾರೆ.
ಭಾರತೀಯ ಸೇನಾ ಪಡೆಯ ಯೋಧರೇ, ಪಾಕಿಸ್ತಾನದ ಗೂಢಚಾರರ ಕೈವಶವಾಗಿ ದೇಶದ ಮಹತ್ವದ ಮಾಹಿತಿಯನ್ನು ಸೋರಿಕೆ ಮಾಡುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಕಳೆದ ಜನವರಿಯಲ್ಲಿ ಕೂಡ ಇಂತಹದ್ದೇ ಒಂದು ಪ್ರಕರಣದಲ್ಲಿ ಉತ್ತರಪ್ರದೇಶ ಮೂಲಕ ಸೇನಾ ಯೋಧನೊಬ್ಬನನ್ನು ಬಂಧಿಸಲಾಗಿತ್ತು. ಅಸ್ಸಾಂನ ತೇಜ್ ಪುರ್ ನ ಸೇನೆಯ ಸಿಗ್ನಲ್ಸ್ ಯೂನಿಟ್ ನಲ್ಲಿ ಕೆಸಲ ಮಾಡಿ ನಿವೃತ್ತನಾಗಿದ್ದ ಉತ್ತರಪ್ರದೇಶದ ಹಾಪುರ ಮೂಲದ ಸೌರಭ ಶರ್ಮಾ ಎಂಬಾತ ಪಾಕಿಸ್ತಾನದ ಗೂಢಚಾರ ಸಂಸ್ಥೆಗೆ ದೇಶದ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದ. ಅದಕ್ಕೆ ಪ್ರತಿಯಾಗಿ ಆತ ಬೇರೆ ಬೇರೆ ಮೂಲಗಳಿಂದ ಭಾರೀ ಮೊತ್ತದ ಹಣವನ್ನು ಪಡೆದಿದ್ದಾನೆ ಎಂದು ಆತನನ್ನು ವಿಚಾರಣೆ ನಡೆಸಿದ್ದ ಉತ್ತರಪ್ರದೇಶ ಎಟಿಎಸ್ ಹೇಳಿತ್ತು.
ಅದಾದ ಬಳಿಕ ಕಳೆದ ಫೆಬ್ರವರಿಯಲ್ಲಿ ಕೂಡ ಸೇನೆಯ ನಾರ್ಥನ್ ಕಮ್ಯಾಂಡ್ ಯೋಧನೊಬ್ಬ ಮಹತ್ವದ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಿದ ಪ್ರಕರಣ ಬೆಳಕಿಗೆ ಬಂದಿತ್ತು. ಉಧಾಂಪುರ ನೆಲೆಯ ನಾರ್ಥನ್ ಕಮ್ಯಾಂಡ್ನಲ್ಲಿ ಸೇವೆಯಲ್ಲಿದ್ದ ಪಂಜಾಬಿನ ಅಮೃತಸರ ಜಿಲ್ಲೆ ಮೂಲದ ಆ ಯೋಧನೊಬ್ಬನ ವಿರುದ್ಧ ಸೇನೆ ತನಿಖೆಗೆ ಚಾಲನೆ ನೀಡಿತ್ತು ಕೂಡ.