ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ 3 ಬುಧವಾರ (ಆಗಸ್ಟ್ 22) ಯಶಸ್ವಿಯಾಗಿ ಚಂದ್ರನ ಅಂಗಳಕ್ಕೆ ಇಳಿದಿದೆ. ನಿಗದಿಪಡಿಸಿದ ಸಂಜೆ 6.04ಕ್ಕೆ ಸರಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ.
ಚಂದಿರನ ಅಂಗಳ ಚುಂಬಿಸುವ ಮೂಲಕ ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ಐತಿಹಾಸಿಕ ದಾಖಲೆ ಬರೆದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಜಗತ್ತಿನ ಮೊದಲ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.
ಅಲ್ಲದೆ ಚಂದ್ರಯಾನ 3 ಚಂದ್ರನ ಮೇಲೆ ಇಳಿಯುವ ಮೂಲಕ ಚಂದ್ರನ ಮೇಲೆ ಪಾದ ಊರಿದ ವಿಶ್ವದ ನಾಲ್ಕನೇ ದೇಶ ಎಂಬ ಶ್ರೇಯಕ್ಕೂ ಭಾರತ ಪಾತ್ರವಾಗಿದೆ.
ಇದಕ್ಕೂ ಮುನ್ನ ರಷ್ಯಾ, ಅಮೆರಿಕ, ಚೀನಾ ಚಂದ್ರನ ಮೇಲೆ ನಾಕೆ ಇಳಿಸಿವೆ. ಆದರೆ ದಕ್ಷಿಣ ಧ್ರುವದಲ್ಲಿ ಇನ್ನೂ ಯಾವ ದೇಶವೂ ನೌಕೆ ಇಳಿಸಿರಲಿಲ್ಲ.
ಚಂದ್ರಯಾನ 2ರಲ್ಲಿ ಸಾಫ್ಟ್ ಲ್ಯಾಂಡಿಂಗ್‌ಗೆ ಸಂಬಂಧಿಸಿ ಉಂಟಾದ ವೈಫಲ್ಯಗಳನ್ನು ಈ ಬಾರಿ ಹಾರಿಸಿದ ಚಂದ್ರಯಾನ 3ರ ನೌಕೆಯ ಉಡಾವಣೆ ವೇಳೆ ಮುಂಜಾಗ್ರತೆ ವಹಿಸಲಾಗಿದೆ.
ಚಂದ್ರಯಾನ 2 ರಲ್ಲಿ ಕೊನೆ ಗಳಿಗೆಯಲ್ಲಿ ಲ್ಯಾಂಡರ್ ನೆಲಕ್ಕೆ ಅಪ್ಪಳಿಸಿತ್ತು. ಆಗ ಕೆಲವು ಸನ್ನಿವೇಶಗಳನ್ನು ನಿಭಾಯಿಸಲು ಆಗಲಿಲ್ಲ. ಈ ಬಾರಿ ಎದುರಾಗಬಹುದಾದ ಎಲ್ಲ ರೀತಿಯ ಸವಾಲುಗಳನ್ನು ಮುಂಚಿತವಾಗಿ ಗ್ರಹಿಸಿಯೇ ಅದಕ್ಕೆ ಪರಿಹಾರೋಪಾಯಗಳನ್ನು ಉಪಕರಣಗಳ ಮೂಲಕ ಅಡಕಗೊಳಿಸಲಾಗಿದೆ. ಅವು ಎದುರಾಗಬಹುದಾದ ಸವಾಲುಗಳನ್ನು ಗ್ರಹಿಸಿ ಅವುಗಳನ್ನು ನಿವಾರಿಸಿಕೊಳ್ಳುತ್ತವೆ.
ಕಳೆದ ಬಾರಿ ಲ್ಯಾಂಡಿಂಗ್ ಪ್ರದೇಶ ಚಿಕ್ಕದಾಗಿತ್ತು. ವಿಕ್ರಮ್‌ಗೆ ಅದು ಸಮಸ್ಯೆಯಾಗಿತ್ತು. ಈ ಬಾರಿ ಲ್ಯಾಂಡಿಂಗ್ ಪ್ರದೇಶದ ವಿಸ್ತೀರ್ಣ 2.5×4 ಕಿ.ಮೀ ಹೆಚ್ಚಿಸಲಾಗಿದೆ. ಅಧಿಕ ಸಾಮರ್ಥ್ಯದ ಆಧುನಿಕ ಉಪಕರಣಗಳನ್ನೂ ಅಳವಡಿಸಲಾಗಿದೆ.
ಲ್ಯಾಂಡರ್ನ ವೇಗ ನಿಯಂತ್ರಣವೇ ಇಳಿಸುವ ಪ್ರಕ್ರಿಯೆಯ ಅತಿ ಮುಖ್ಯ ಅಂಶ. ವೇಗ ನಿಯಂತ್ರಿಸುವಾಗ ಲ್ಯಾಂಡ ಬೀಳುವ ಸಂದರ್ಭದಲ್ಲಿ ಎಷ್ಟು ಎತ್ತರದಲ್ಲಿದೆ ವೇಗ ಎಷ್ಟಿದೆ ತಿರುಗುತ್ತಾ ಬೀಳುತ್ತಿದೆಯೇ ಅಥವಾ ಗಿರಗಿಟ್ಟೆಯಂತೆ ತಿರುಗುತ್ತಿದೆಯೆ ಎಂಬುದನ್ನು ಕ್ಷಣ ಮಾತ್ರದಲ್ಲಿ ಗ್ರಹಿಸಿ ಅದನ್ನು ಸರಿಪಡಿಸಿಕೊಳ್ಳುತ್ತದೆ.
ಇದರಲ್ಲಿ ತಂತ್ರಾಂಶವನ್ನು ಬದಲಿಸಲಾಗಿದೆ. ವೈಫಲ್ಯಗಳನ್ನೇ ಗಮನದಲ್ಲಿಟ್ಟುಕೊಂಡು ಅವುಗಳಿಗೆ ಪರಿಹಾರ ನಿಟ್ಟಿನಲ್ಲಿ ಈ ತಂತ್ರಾಂಶ ರೂಪಿಸಲಾಗಿದೆ.
ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವುದು ತುಂಬಾ ಕಠಿಣ ಪ್ರಕ್ರಿಯೆ ಎನ್ನಲಾಗಿತ್ತು. ವಿಶೇಷವಾಗಿ ಚಂದ್ರನ ಮೇಲೆ ಇಳಿಯುವ ಕೊನೆಯ 15 ನಿಮಿಷ ಅತ್ಯಂತ ಸಂಕೀರ್ಣತೆಯಿಂದ ಕೂಡಿರುತ್ತದೆ. ಇದೇ ಕಾರಣಕ್ಕೆ ಇಸ್ರೋದ ಮಾಜಿ ಅಧ್ಯಕ್ಷ ಕೆ. ಶಿವನ್ ಹಿಂದೊಮ್ಮೆ ಈ ಹದಿನೈದು ನಿಮಿಷದ ಹಂತವನ್ನು 15 minutes of terror ಎಂದು ಕರೆದಿದ್ದರು. ಈ ಹದಿನೈದು ನಿಮಿಷದಲ್ಲಿ ಏನು ಬೇಕಾದರೂ ಆಗಬಹುದು. ಈ ಹಿಂದೆ ಚಂದ್ರಯಾನ 2ನಲ್ಲಿ ಈ ಹಂತದಲ್ಲಿ ಯೋಜನೆ ವಿಫಲವಾಗಿತ್ತು. ಈ ಬಾರಿ ಚಂದ್ರಯಾನ 3 ಯಶಸ್ವಿಯಾಗುವ ಸಾಧ್ಯತೆ ಹೆಚ್ಚಿದ್ದು, ಎಲ್ಲರೂ ಇದರ ಯಶಸ್ವಿಗಾಗಿ ಕಾಯುತ್ತಿದ್ದರು.
ಚಂದ್ರಯಾನ 3 ಮಿಷನ್ನಲ್ಲಿ ವಿಕ್ರಮ್ ಲ್ಯಾಂಡರ್ ಅಂತಿಮವಾಗಿ ಹದಿನೈದು ನಿಮಿಷದಲ್ಲಿ ಯಾವ ರೀತಿ ಇರುತ್ತದೆ ಎನ್ನುವುದರ ಮೇಲೆ ಯೋಜನೆಯ ಯಶಸ್ಸು ಇರುತ್ತದೆ. ಈಗಾಗಲೇ 2019ರ ಚಂದ್ರಯಾನ 2ರ ವೈಫಲ್ಯದ ಕಹಿ ನೆನಪು ಇದೆ. ಚಂದ್ರನ ಮೇಲ್ಮೈ ತಲುಪಲು ಸುಮಾರು 7.42 ಕಿಮೀ ದೂರ ಇರುವಾಗ ಈ ಸೂಕ್ಷ್ಮ ಬ್ರೇಕಿಂಗ್ ಹಂತ ಆರಂಭವಾಗುತ್ತದೆ. ಈ ಸಮಯದಲ್ಲಿ ನಿರ್ದಿಷ್ಟ ವೇಗದಲ್ಲಿ ಲ್ಯಾಂಡರ್ ಕೆಳಕ್ಕೆ ಇಳಿಯಬೇಕು. ಲ್ಯಾಂಡರ್ನ ವೇಗವನ್ನು ನಿಯಂತ್ರಿಸಿ ಸರಿಯಾದ ರೀತಿ ಲ್ಯಾಂಡ್ ಆಗುವಂತೆ ಮಾಡುವುದೇ ಈ ಯೋಜನೆಯ ಪ್ರಮುಖ ಸವಾಲಾಗಿತ್ತು.
ಚಂದ್ರನ ದಕ್ಷಿಣ ಧ್ರುವದಲ್ಲಿಯೇ ಲ್ಯಾಂಡರ್ ಇಳಿಸಲು ಪ್ರಯತ್ನಿಸುವುದೇಕೆ?
ಚಂದ್ರಯಾನ 3 ಗಗನನೌಕೆಯು ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಸವಾಲಿನಿಂದ ಕೂಡಿದ ಪ್ರದೇಶದಲ್ಲಿ ಇಳಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಕಾರಣವೇನೆಂದು ಹಿಂದೂಸ್ತಾನ್ ಟೈಮ್ಸ್ಗೆ ಇಸ್ರೋದ ಮಾಜಿ ಗ್ರೂಪ್ ಡೈರೆಕ್ಟರ್ ಸುರೇಶ್ ನಾಯ್ಕ್ ಹೇಳಿದ್ದಾರೆ.