ಖಾತೆಗಳ ಬಗ್ಗೆ ಮಾಹಿತಿ ಕೋರಿ ಭಾರತವು ಟ್ವಿಟರ್ಗೆ ಹೆಚ್ಚಿನ ವಿನಂತಿಗಳನ್ನು ನೀಡಿದೆ ಎಂದು ಜುಲೈ 2020 ರಿಂದ ಡಿಸೆಂಬರ್ 2020 ರವರೆಗಿನ ಟ್ವಿಟ್ಟರಿನ ಪಾರದರ್ಶಕತೆ ವರದಿ ಬುಧವಾರ ತಿಳಿಸಿದೆ.
2012 ರಲ್ಲಿ ವರದಿಯನ್ನು ಪ್ರಕಟಿಸಲು ಪ್ರಾರಂಭಿಸಿದ ನಂತರ ಇದೇ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ ಎಂದು ಟ್ವಿಟರ್ ಹೇಳಿದೆ. ಟ್ವಿಟರ್ನಿಂದ ಖಾತೆಗಳ ಬಗ್ಗೆ ಮಾಹಿತಿ ಪಡೆಯವಲ್ಲಿ ಜಪಾನ್ (17%) ಮತ್ತು ಫ್ರಾನ್ಸ್ (14%) ಭಾರತ ಮತ್ತು ಯುಎಸ್ನ ನಂತರದ ಸ್ಥಾನದಲ್ಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಈ ವರದಿಯ ಅವಧಿಯಲ್ಲಿ ಭಾರತವು ಹೆಚ್ಚಿನ ಸರ್ಕಾರಿ ಮಾಹಿತಿಗಾಗಿ ವಿನಂತಿಗಳನ್ನು ಸಲ್ಲಿಸಿದೆ, ಇದು ಜಾಗತಿಕ ಪರಿಮಾಣದ 25% ಮತ್ತು ನಿರ್ದಿಷ್ಟಪಡಿಸಿದ ಜಾಗತಿಕ ಖಾತೆಗಳ ಬಗ್ಗೆ ಕೇಳಿದ ಪರಿಮಾಣದ 15% ” ಎಂದು ವರದಿ ತಿಳಿಸಿದೆ. “ಎರಡನೇ ಅತಿಹೆಚ್ಚು ವಿನಂತಿಗಳು ಯುನೈಟೆಡ್ ಸ್ಟೇಟ್ಸ್ನಿಂದ ಬಂದಿದ್ದು, ಇದರಲ್ಲಿ 22% ಜಾಗತಿಕ ಮಾಹಿತಿ ವಿನಂತಿಗಳು ಮತ್ತು 60% ನಿರ್ದಿಷ್ಟಪಡಿಸಿದ ಜಾಗತಿಕ ಖಾತೆಗಳ ಮಾಹಿತಿ ಸೇರಿವೆ” ಎಂದು ವರದಿ ತಿಳಿಸಿದೆ
ಜನವರಿ 2020 ರಿಂದ ಜುಲೈ 2020 ರ ಅವಧಿಗೆ ಹೋಲಿಸಿದರೆ ಟ್ವಿಟರ್ ಭಾರತದಿಂದ 1,096 ಅಥವಾ 46% ಹೆಚ್ಚು routine requestಗಳನ್ನು ಸ್ವೀಕರಿಸಿದೆ ಎಂದು ಅದು ಹೇಳಿದೆ. Routine request ಎಂದರೆ ಸರ್ಕಾರವು ಟ್ವಿಟ್ಟರ್ ಗೆ ನೀಡುವ ಕಾನೂನಾತ್ಮಕ ನೋಟೀಸ್ ಆಗಿದ್ದು ನಿರ್ದಿಷ್ಟ ಖಾತೆಯೊಂದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ.
ಜುಲೈ-ಡಿಸೆಂಬರ್ 2020 ರ ಅವಧಿಯಲ್ಲಿ ಭಾರತವು 3,463 routine requestಗಳನ್ನು ಮತ್ತು 152 ತುರ್ತು ವಿನಂತಿಗಳನ್ನು ಟ್ವಿಟರ್ಗೆ ಕಳುಹಿಸಿದೆ. ಒಬ್ಬ ವ್ಯಕ್ತಿಗೆ ಸಾವು ಅಥವಾ ಗಂಭೀರ ಗಾಯವನ್ನು ಒಳಗೊಂಡ ಬೆದರಿಕೆ ಇದೆ ಮತ್ತು ತನ್ನಲಿರುವ ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದರೆ ಅಪಾಯವನ್ನು ತಪ್ಪಿಸಬಹುದು ಎಂದು ಟ್ವಿಟ್ಟರ್ ಗೆ ಅನ್ನಿಸಿದರೆ ಅದು ತನ್ನಲ್ಲಿರುವ ಮಾಹಿತಿಯನ್ನು ಬಹಿರಂಗಪಡಿಸಬಹುದು. ಹಿಂದಿನ ಅವಧಿಯಲ್ಲಿ ಬಂದ 246 ಕ್ಕೆ ತುರ್ತು ವಿನಂತಿಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ವಿನಂತಿಗಳ ಸಂಖ್ಯೆ 152 ಕ್ಕೆ ಇಳಿದಿದೆ.
ಜಾಗತಿಕವಾಗಿ ಸರ್ಕಾರಗಳು ಕೇಳಿರುವ ಮಾಹಿತಿ ವಿನಂತಿಗಳಿಗೆ ಪ್ರತಿಕ್ರಿಯೆಯಾಗಿ ತಾನು 70% ವಿನಂತಿಗಳಿಗೆ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಎಂದು ಟ್ವಿಟರ್ ಹೇಳಿದೆ.
ವಿಶ್ವದಾದ್ಯಂತ ನಾಗರಿಕರಿಗೆ ಡಿಜಿಟಲ್ ನಾಗರಿಕ ಹಕ್ಕುಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ‘ಆಕ್ಸೆಸ್ ನೌ’ ನ ಏಷ್ಯಾ-ಪೆಸಿಫಿಕ್ ನೀತಿ ನಿರ್ದೇಶಕ ರಾಮನ್ ಚಿಮಾ ಅವರು ಮಾಹಿತಿ ವಿನಂತಿಗಾಗಿ ಬೇಡಿಕೆ ಸಲ್ಲಿಸುವಲ್ಲಿ ಭಾರತವು ಮೊದಲ ಸಾಲಿನಲ್ಲಿರುವುದು ಆತಂಕಕಾರಿ ಪ್ರವೃತ್ತಿಯಾಗಿದೆ ಎಂದು ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಸಾಮಾಜಿಕ ಮಾಧ್ಯಮ ಕಂಪನಿಗಳು, ಸ್ಟ್ರೀಮಿಂಗ್ ಮತ್ತು ಡಿಜಿಟಲ್ ಸುದ್ದಿ ವಿಷಯವನ್ನು ನಿಯಂತ್ರಿಸಲು ರೂಪಿಸಲಾದ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಜಾರಿಗೆ ತರಲು ಹೊರಟಿರುವ ಭಾರತ ಸರ್ಕಾರ ಮತ್ತು ಟ್ವಿಟರ್ ನಡುವಿನ ವಿವಾದ ಈಗಾಗಲೇ ಭಾರತ ದೇಶದಲ್ಲಿ ವಿವಾದ ಸೃಷ್ಟಿಸಿದೆ.
ಹೊಸ ನಿಯಮಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ನಿಯಮಗಳನ್ನು ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳನ್ನು, ಕಾನೂನು ಜಾರಿ ಸಂಸ್ಥೆಗಳು ಮತ್ತು ಕುಂದುಕೊರತೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕಾಗುತ್ತದೆ. ಈ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಭಾರತ ಮತ್ತು ಟ್ವಿಟರ್ ಸಂಸ್ಥೆಯ ನಡುವೆ ವಿವಾದ ಭುಗಿಲೇಳುತ್ತಿದೆ.
ಈ ಮಧ್ಯೆ ಟ್ವಿಟ್ಟರ್ ಬಿಡುಗಡೆ ಮಾಡಿರುವ ವರದಿಯಲ್ಲಿ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಲಾದ ವಿಷಯವನ್ನು ತೆಗೆದುಹಾಕಲು ಬಂದಿರುವ ವಿನಂತಿಗಳಲ್ಲಿ ಶೇಕಡಾ 94ರಷ್ಟು ವಿನಂತಿಗಳು ಜಪಾನ್, ಭಾರತ, ರಷ್ಯಾ, ಟರ್ಕಿ ಮತ್ತು ದಕ್ಷಿಣ ಕೊರಿಯಾ ಎಂಬ ಐದು ದೇಶಗಳಿಂದ ಬಂದಿವೆ ಎಂದು ಟ್ವಿಟರ್ ಹೇಳಿದೆ. ಭಾರತವು ಅಂತಹ 6,971 ವಿನಂತಿಗಳನ್ನು ಮಾಡಿತ್ತು ಆದರೆ ಟ್ವಿಟರ್ 9.1% ಅಥವಾ ಕೇವಲ 634 ರಷ್ಟನ್ನು ಮಾತ್ರ ತೆಗೆದುಹಾಕಿದೆ. ಜಾಗತಿಕವಾಗಿ ಕೇವಲ 29% ಅಥವಾ ಸುಮಾರು 2,021 ಕಂಟೆಂಟ್ಗಳನ್ನು ಮಾತ್ರ ಅದು ತೆಗೆದುಹಾಕಿದೆ ಎಂದು ವರದಿ ತಿಳಿಸುತ್ತದೆ.
ವೆರಿಫೈ ಮಾಡಲಾದ ಪತ್ರಕರ್ತರು ಮತ್ತು ಮಾಧ್ಯಮಗಳ 199 ಖಾತೆಗಳಿಂದ ಕಟೆಂಟ್ ತೆಗೆದುಹಾಕಲು ಕೋರಿ ಬಂದಿರುವ ವಿನಂತಿಗಳಲ್ಲಿ 26% ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. “ಇವುಗಳಲ್ಲಿ ಭಾರತ (128), ಟರ್ಕಿ (108), ಪಾಕಿಸ್ತಾನ (52), ಮತ್ತು ರಷ್ಯಾ (28) ನಿಂದ ಬಂದ ತೆಗೆದುಹಾಕುವ ವಿನಂತಿಗಳು ಸೇರಿವೆ” ಎಂದು ಅದು ಹೇಳಿದೆ.