ಹುಲಿ ಸಂರಕ್ಷಣಾ ಪ್ರಾಧಿಕಾರ ಇಂದು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ 2021ರಲ್ಲಿ 126 ಹುಲಿಗಳು ಸಾವನಪ್ಪಿವೆ ಎಂದು ತಿಳಿಸಿದೆ. ಈ ಹಿಂದೆ 2016ರಲ್ಲಿ 121 ಹುಲಿಗಳು ಸಾವನ್ನಪ್ಪಿದ್ದು ಗರಿಷ್ಠ ದಾಖಲೆಯಾಗಿತ್ತು. ಇದೀಗ ಈ ವರ್ಷ ಹುಲಿಗಳ ಅತ್ಯಧಿಕ ಸಾವುಗಳು ದಾಖಲಾಗಿರುವ ಕಾರಣ ದಶಕದಲ್ಲೇ ಅತ್ಯಧಿಕ ಮತ್ತು 2016ರ ದಾಖಲೆಯನ್ನು ಸರಿಗಟ್ಟಿದೆ.
2012ರಲ್ಲಿ ಪ್ರಾಧಿಕಾರವು ಹುಲಿ ಗಣತಿ ಶುರು ಮಾಡಿದ ಮೇಲೆ ದಾಖಲಾಗಿರುವ ಅತ್ಯಧಿಕ ಸಾವುಗಳು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಅಧಿಕಾರಿಗಳು ಹುಲಿಗಳು ಕೆಲವು ವಯೋಸಹಜವಾಗಿ ಪ್ರಾಣ ಬಿಟ್ಟಿವೆ, ಕೆಲವು ಬೇಟೆಗಾರರ ಗುಂಡಿಗೆ ಬಲಿಯಾಗಿವೆ. ಕೆಲವು ಸಂಘರ್ಷದಲ್ಲಿ ಬಲಿಯಾಗಿದ್ದಾವೆ ಎಂದು ಹೇಳಿದ್ದಾರೆ.
ಡಿಸೆಂಬರ್ 29ರವರೆಗೂ ಮಧ್ಯಪ್ರದೇಶ (41) ಅತಿ ಹೆಚ್ಚು ಹುಲಿಗಳ ಸಾವುಗಳನ್ನು ದಾಖಲಿಸಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ (25), ಕರ್ನಾಟಕ (15) ಮತ್ತು ಉತ್ತರ ಪ್ರದೇಶ (9) ಹುಲಿಗಳು ಸಾವನಪ್ಪಿವೆ ಎಂದು ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಉತ್ತರ ಪ್ರದೇಶದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ʻನಿಜವಾದ ಅಂಕಿ-ಅಂಶ ಬೇರೆಯದೆ ಇರುತ್ತದೆ. ಅರಣ್ಯ ಪ್ರದೇಶದಲ್ಲಿ ಹುಲಿಗಳು ನೈಸರ್ಗಿಕವಾಗಿ ಪ್ರಾಣ ಬಿಡುತ್ತವೆ ಮತ್ತು ಅವುಗಳ ಸಾವಿನ ವರದಿ ಆಗುವುದಿಲ್ಲ. ಈ ಬಗ್ಗೆಯೂ ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಉತ್ತರಪ್ರದೇಶ ದುಧ್ವಾ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಸಂಜಯ್ ಪಾಠಕ್, ʻಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಆದ್ದರಿಂದ ಸಾವಿನ ಸಂಖ್ಯೆಯೂ ಹೆಚ್ಚಾಗಿರಬಹುದು. ಹುಲಿಗಳ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ಯಾರೂ ಭಯಪಡುವ ಮಾಗತ್ಯವಿಲ್ಲ. ಈ ವರ್ಷ ಸಾವಿನ ಸಂಖ್ಯೆ ಶೇ.5%ಕ್ಕಿಂತ ಕಡಿಮೆ ಇದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ದೇಶಾದ್ಯಂತ ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ ಎಂದಿದ್ದಾರೆ.
2006ರಲ್ಲಿ 1,411 ರಷ್ಟಿದ್ದ ಹುಲಿಗಳ ಸಂಖ್ಯೆ, 2018ರ ವೇಳೆಗೆ 2,967ಕ್ಕೆ ಏರಿಕೆಯಾಗಿದೆ ಎಂದು 2019ರಲ್ಲಿ ಕೇಂದ್ರ ಸರ್ಕಾರವು ತಿಳಿಸಿತ್ತು. 2019ರಲ್ಲಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ʻʻಭಾರತವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಸುರಕ್ಷಿತ ಸಂರಕ್ಷಿತ ತಾಣಗಳಲ್ಲಿ ಒಂದು ಮತ್ತು ಈ ನಿಟ್ಟಿನಲ್ಲಿ ಅಧಿಕಾರಿಗಳ ಶ್ರಮ ನಿಜಕ್ಕೂ ಶ್ಲಾಘನೀಯʼ ಎಂದು ಹೇಳಿದ್ದರು. ಒಟ್ಟಾರೆ ಭಾರತವು ವಿಶ್ವದ ಶೇ.70% ಹುಲಿಗಳ ಜನಸಂಖ್ಯೆ ಹೊಂದಿದೆ.