ಭಾರತದಲ್ಲಿ ಕೋವಿಡ್ -19 ನ ಎರಡನೇ ಅಲೆಯ ನಂತರ ಎಷ್ಟು ಬೇಗನೆ, ಯಾವ ಮಟ್ಟದಲ್ಲಿ ಮತ್ತು ಯಾವ ರೀತಿಯಲ್ಲಿ ಶಾಲೆಗಳನ್ನು ಪುನಃ ತೆರೆಯಬೇಕು ಎಂಬ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ. ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಸಮಸ್ಯೆಯು ಬಹಳ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಕೆಲವು ಕಡೆ ಶಾಲೆಯನ್ನು ಸಂಪೂರ್ಣ ಮುಚ್ಚಲಾಗಿದೆ, ಕೆಲವು ದೇಶಗಳಲ್ಲಿ ಅಡೆತಡೆಯಿಲ್ಲದ ಶಾಲಾ ಶಿಕ್ಷಣವನ್ನು ನೀಡಲಾಗಿದೆ ಮತ್ತು ಕೆಲವೆಡೆ ಭಾಗಶಃ ಮತ್ತು ಹಂತ ಹಂತವಾಗಿ ಶಾಲೆಯನ್ನು ಪುನಃ ತೆರೆಯಲಾಗುತ್ತಿದೆ.
ಆದರೆ ನಮ್ಮ ದೇಶದ ಸಮಸ್ಯೆಯೇ ಬೇರೆಯಾಗಿದ್ದು ಇಲ್ಲಿನ ಕೆಲವು ರಾಜ್ಯಗಳು ಒಂದು ದೇಶದಷ್ಟೇ ದೊಡ್ಡದಿವೆ ಮತ್ತು ಕೆಲವು ಪಾಶ್ಚಾತ್ಯ ದೇಶಗಳು ಹೊಂದಿರುವಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ವಿಶಾಲವಾದ ಜನಸಮುದಾಯಕ್ಕೆ ಏಕೀಕೃತ ಸಮಾಜೋ ಆರ್ಥಿಕ ಸೂತ್ರವು ಸೂಕ್ತವಲ್ಲ. ಹಾಗಾಗಿಯೇ ಇಲ್ಲಿ ವಿವಿಧ ರಾಜ್ಯಗಳು ಶಾಲೆಗಳನ್ನು ಮತ್ತೆ ತೆರೆಯಲು ವಿಭಿನ್ನ ಯೋಜನೆಗಳು ಮತ್ತು ಹಂತಗಳನ್ನು ಪ್ರಯೋಗಿಸುತ್ತಿವೆ. ‘ಶಾಲೆಯಂತಹ’ ನಾಗರಿಕ ಸಮಾಜದ ಉಪಕ್ರಮಗಳು, ಶಿಕ್ಷಕರ ನೆಟ್‌ವರ್ಕ್‌ಗಳು, ಸ್ವಯಂಸೇವಕರು ಮತ್ತು ವಿದ್ಯಾರ್ಥಿಗಳು ಲಾಕ್‌ಡೌನ್ ಮತ್ತು ಲಾಕ್‌ಡೌನ್ ನಂತರದ ಅವಧಿಗಳಲ್ಲಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಮಕ್ಕಳಿಗೆ ಶಿಕ್ಷಣ ಒದಗಿಸಲು ನೆರವಾಗಿದ್ದಾರೆ.
ಶಾಲೆಯಿಂದ ವಿಮುಖವಾಗಿರುವ ಮಕ್ಕಳ ಡ್ರಾಪ್ ಔಟ್‌ನಲ್ಲಿ ಆಗಿರುವ ವಿಪರೀತ ಏರಿಕೆಯು ಮಕ್ಕಳ ಮೇಲೆ ಸಾಂಕ್ರಾಮಿಕ ರೋಗವು ಬೀರಿರುವ ಅತಿ ದೊಡ್ಡ ವ್ಯತಿರಿಕ್ತ ಪರಿಣಾಮವಾಗಿದೆ. ಶಿಕ್ಷಣದಲ್ಲಿ ಈ ಹಿಂದೆ ಇದ್ದ ಅಸಮಾನತೆಗಳನ್ನು ಕೋವಿಡ್ ಹೇಗೆ ಮತ್ತಷ್ಟು ಉಲ್ಬಣಗೊಳಿಸಿದೆ, ಬಾಲ ಕಾರ್ಮಿಕರ ಅಥವಾ ಬಾಲ್ಯ ವಿವಾಹದ ಬಂಧನಕ್ಕೆ ಸಿಲುಕಿದ ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಹೊರೆಯನ್ನು ಶಿಕ್ಷಕರು ಆತಂಕದಿಂದ ಗಮನಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಸಾಂಕ್ರಾಮಿಕ ರೋಗವು ಶಾಲಾ ಶಿಕ್ಷಕರ ನಡುವೆ ಸೌಹಾರ್ದತೆ ಮತ್ತು ಸಹಯೋಗದ ಕಲ್ಪನೆಯನ್ನು ಬಲಪಡಿಸಿದೆ ಎನ್ನಬಹುದು.
ಶಾಲಾ ಶಿಕ್ಷಣದ ವಿಚಾರದಲ್ಲಿ ಸಾಂಕ್ರಾಮಿಕವು ಕಲಿಸಿದ ಪಾಠಗಳು ಹಲವು. ಅವುಗಳಲ್ಲಿ ಪ್ರಮುಖವಾದುದು ಸಾಂಕ್ರಾಮಿಕ ನಂತರದ ಶಾಲಾ ವ್ಯವಸ್ಥೆಯಲ್ಲಿ ಅಗತ್ಯವಿರುವ ಕೆಲವು ಪ್ರಮುಖ ಸುಧಾರಣೆಗಳ ಸಾಮೂಹಿಕ ತಿಳುವಳಿಕೆ ಮತ್ತು ಸಾಧ್ಯತೆಗಳನ್ನು ತಾತ್ವಿಕವಾಗಿ ಪರಿಶೀಲಿಸುವುದು. ಶಿಕ್ಷಣದ ಅಮೂಲಾಗ್ರ ಬದಲಾವಣೆಗಿಂತ ಸಣ್ಣ ಮತ್ತು ಪರಿಸ್ಥಿತಿಗೆ ಸರಿಯಾಗಿ ಹೊಂದಿಕೊಳ್ಳುವಂತಹ ಬದಲಾವಣೆಗಳು ಸಾಮಾನ್ಯವಾಗಿ ಶಿಕ್ಷಣದ ಸ್ಥೂಲ ರಚನೆಗೆ ವಿಶ್ವಾಸಾರ್ಹ ಅಡಿಪಾಯವನ್ನು ಒದಗಿಸುತ್ತವೆ.
ಸಾಕ್ರಾಮಿಕವು ಶಾಲಾ ಮೌಲ್ಯಮಾಪನದ ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಇದುವರೆಗೆ ನಡೆದುಕೊಂಡು ಬರುತ್ತಿದ್ದ ಬೋರ್ಡ್ ಪರೀಕ್ಷೆಗಳ ಪ್ರಾಮುಖ್ಯತೆಗೆ ಮತ್ತಷ್ಟು ತೊಡಕುಗಳನ್ನು ಸೇರಿಸಿದೆ. ಉನ್ನತ ಮಟ್ಟದ ಬೋರ್ಡ್ ಪರೀಕ್ಷೆಗಳು ಹೆಚ್ಚು ಕೇಂದ್ರೀಕೃತ ವ್ಯವಸ್ಥೆಯನ್ನು ಹೊಂದಿದ್ದು ವಸಾಹತುಶಾಹಿ ಯುಗದ ಪರಂಪರೆಯಾಗಿದೆ. ಸಹಜವಾಗಿಯೇ ವಿಕೇಂದ್ರೀಕೃತ ಮೌಲ್ಯಮಾಪನದ ತಟಸ್ಥತೆ ಮತ್ತು ಸಮಗ್ರತೆಯನ್ನು ಒಪ್ಪುವುದಿಲ್ಲ. ಆದರೆ ಅದೇ ವ್ಯವಸ್ಥೆಯು ದೈನಂದಿನ ಬೋಧನೆ ಮತ್ತು ಮೌಲ್ಯಮಾಪನದ ವಿಷಯಕ್ಕೆ ಬಂದಾಗ ಶಾಲಾ ಶಿಕ್ಷಕರ ವಸ್ತುನಿಷ್ಠತೆಯನ್ನು ಬಯಸುತ್ತದೆ.
‘ಸ್ಥಳೀಯರು’ ಮೌಲ್ಯಮಾಪನಕ್ಕೆ ‘ಸೂಕ್ತ’ ಹೌದೋ ಅಲ್ಲವೋ ಎಂಬ ಬಗ್ಗೆ ಆತಂಕ ಇದ್ದರೆ, ಅವರಿಗೆ ಜವಾಬಗದಾರಿಯನ್ನು ವಹಿಸಿಕೊಟ್ಟು ಮೌಲ್ಯ ಮಾಪನ ಮಾಡಬೇಕಾಗುತ್ತದೆ. ಇತರ ವೃತ್ತಿನಿರತರಂತೆ ಶಾಲಾ ಶಿಕ್ಷಕರಿಗೂ ಜವಾಬ್ದಾರಿ ಮತ್ತು ಸ್ವಾತಂತ್ರ್ಯವನ್ನು ನೀಡಿದಾಗ ಜವಾಬ್ದಾರಿಯುತರಾಗುತ್ತಾರೆ.
ಮಕ್ಕಳ ಶಿಕ್ಷಣವು ಅವರ ಆರೋಗ್ಯ ಮತ್ತು ಪೋಷಣೆಯೊಂದಿಗೆ ಸಮಗ್ರವಾಗಿ ಸಂಬಂಧವನ್ನು ಹೊಂದಿದೆ, ಮಕ್ಕಳ ಹಸಿವು ಅವರ ಗಮನವನ್ನು ಬೇರೆಡೆಗೆ ಸೆಳೆಯುವಷ್ಟು ಶಕ್ತ. ಇತ್ತೀಚೆಗೆ ಪ್ರಕಟವಾದ ಹಲವು ಅಧ್ಯಯನಗಳು ಶಾಲೆಯ ಮಧ್ಯಾಹ್ನದ ಊಟದ ಪ್ರಾಮುಖ್ಯತೆಗಳನ್ನು ಎತ್ತಿ ತೋರಿಸಿವೆ. ಆದ್ದರಿಂದ, ಸಾಂಕ್ರಾಮಿಕ ಸಮಯದಲ್ಲಿ ಶಾಲಾ ಶಿಕ್ಷಣ ಮತ್ತು ಮಧ್ಯಾಹ್ನದ ಊಟದ ಯೋಜನೆಯಲ್ಲಿ ಉಂಟಾದ ಅಡಚಣೆಗಳು ಮುಂದಿನ ಪೀಳಿಗೆಯ ಆರೋಗ್ಯವನ್ನು ಖಂಡಿತವಾಗಿಯೂ ಹಾನಿಗೊಳಿಸಲಿದೆ.
ಸಾಂಕ್ರಾಮಿಕ ಸಮಯದಲ್ಲಿ ಖಾಸಗಿ ಶಾಲೆಯ ಪೋಷಕರಿಗೆ, ನಿರ್ದಿಷ್ಟವಾಗಿ ‘ಕಡಿಮೆ’ ಶುಲ್ಕದ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಹೊಂದಿರುವವರಿಗೆ ಶಾಲಾ ಶುಲ್ಕವನ್ನು ಪಾವತಿಸುವುದು ಹೆಚ್ಚು ಕಷ್ಟಕರವಾಗಿದೆ. ಅಂತೆಯೇ, ಅಂತಹ ಬಜೆಟ್ ಶಾಲೆಗಳಿಗೂ ತಮ್ಮ ಶಿಕ್ಷಕರಿಗೆ ಅಲ್ಪ ಸಂಬಳವನ್ನು ನೀಡುವುದು ಕಷ್ಟಕರವಾಗಿದೆ. ಈಗ ಕೆಲವು ಪೋಷಕರು ತಮ್ಮ ಮಕ್ಕಳ ಶಾಲೆಗಾಗಿ ಸರ್ಕಾರಿ ಶಾಲೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಆಹಾರ ಧಾನ್ಯಗಳು ಈ ಬದಲಾವಣೆಗೆ ಒಂದು ಪ್ರಮುಖ ಕಾರಣವಾಗಿ ಗುರುತಿಸಿಕೊಂಡಿದೆ.
ಶಾಲಾ ಶಿಕ್ಷಣವನ್ನು ಪಡೆಯುವ ಆರ್ಥಿಕ ಸಾಮರ್ಥ್ಯ ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಶಿಕ್ಷಣವು ಹೆಚ್ಚು ಹೆಚ್ಚು ಜನಪರವಾಗಬೇಕು ಮತ್ತು ಸಾಮಾನ್ಯ ಜನರ ಹಿತಾಸಕ್ತಿಯನ್ನು ಕಾಪಾಡುವಂತಿರಬೇಕು. ಏಕೆಂದರೆ ಶಿಕ್ಷಣವು ಸಾಮಾಜಿಕ ಬದ್ಧತೆ ಮತ್ತು ಸಾರ್ವಜನಿಕ ಕ್ರಿಯೆಯೊಂದಿಗೆ ಬೇರ್ಪಡಿಸಲಾಗದಂತೆ ಬಂಧಿಸಲ್ಪಟ್ಟಿದೆ.
ಆನ್‌ಲೈನ್ ಕಲಿಕೆಯ ಮೂಲಕ ಉತ್ಪತ್ತಿಯಾಗುವ ಡಿಜಿಟಲ್ ವಿಭಜನೆಯು ಸಾಂಕ್ರಾಮಿಕ ಸಮಯದಲ್ಲಿ ಶೈಕ್ಷಣಿಕ ಅಸಮಾನತೆಗಳನ್ನು ಮತ್ತಷ್ಡು ಗಾಢವಾಗಿಸಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾ ಪ್ರಜಾಪ್ರಭುತ್ವವಾದಿ ಮತ್ತು ಸಮಾಜದ ಎಲ್ಲ ವರ್ಗವನ್ನು ಒಳಗೊಳ್ಳುವ ಶೈಕ್ಷಣಿಕ ಕ್ರಮವೊಂದನ್ನು ರೂಪಿಸಬೇಕಿದೆ ಈಗ.