ಸಂಘಟಿತ ಪ್ರದರ್ಶನ ನೀಡಿದ ಭಾರತ ವನಿತೆಯರ ತಂಡ 7ನೇ ಬಾರಿ ಟಿ-20 ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸೈಲ್ಹಟ್ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಶ್ರೀಲಂಕಾ ವನಿತೆಯರ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 65 ರನ್ ಗಳಿಸಿತು. ಸುಲಭ ಗುರಿ ಬೆಂಬತ್ತಿದ ಭಾರತ ವನಿತೆಯರ ತಂಡ 8.3 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 8 ವಿಕೆಟ್ ಜಯಭೇರಿ ಬಾರಿಸಿತು.
ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಗೆಲುವಿನ ಔಪಚಾರಿಕತೆ ಪೂರೈಸಿದರು. ಸ್ಮೃತಿ ಮಂದಾನ 25 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 51 ರನ್ ಬಾರಿಸಿ ಅಜೇಯರಾಗಿ ಉಳಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ 14 ಎಸೆತಗಳಲ್ಲಿ 1 ಬೌಂಡರಿ ಸಹಾಯದಿಂದ 11 ರನ್ ಗಳಿಸಿದರು. ಶೆಫಾಲಿ ಶರ್ಮಾ (5) ಮತ್ತು ಜೆಮಿಹಾ ರೋಡ್ರಿಗಜ್ (2) ಬೇಗನೇ ನಿರ್ಗಮಿಸಿದರು.
ಭಾರತದ ರೇಣುಕಾ ಸಿಂಗ್ ದಾಳಿಗೆ ತತ್ತರಿಸಿದ ಶ್ರೀಲಂಕಾ ವನಿತೆಯರ ತಂಡ ಒಂದು ಹಂತದಲ್ಲಿ 32 ರನ್ ಗೆ 8 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಇನೊಕಾ ರಣವೀರ (18) ಮತ್ತು ಒಸಾಡಿ ರಣಸಿಂಘೆ (13) ಹೋರಾಟ ನಡೆಸಿ ತಂಡದ ಮೊತ್ತವನ್ನು ೫೦ರ ಗಡಿ ದಾಟಿಸಿದರು.
ಭಾರತದ ಪರ ರೇಣುಕಾ ಸಿಂಗ್ 3, ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹಾ ರಾಣಾ ತಲಾ 2 ವಿಕೆಟ್ ಗಳಿಸಿ ಲಂಕೆಗೆ ಕಡಿವಾಣ ಹಾಕಿದರು.