~ಡಾ. ಜೆ ಎಸ್ ಪಾಟೀಲ.
ಸಮೃದ್ಧ ಭಾರತ (India) ಇಂದು ಫ್ಯಾಸಿಷ್ಟರ ದುರಾಡಳಿತದಿಂದ ದೈನೆಸಿ ಸ್ಥಿತಿ ತಲುಪಿದೆ. ಹುಸಿ ರಾಷ್ಟ್ರೀಯತೆˌ ಯಹೂದಿ ಹಾಗು ಕಮುನಿಷ್ಟರ ಮೇಲಿನ ದ್ವೇಷ ೧೯೩೦ ರ ದಶಕದಲ್ಲಿ ಜರ್ಮನಿಯನ್ನು ನಾಶಗೊಳಿಸಿದಂತೆ ಅದರಿಂದ ಪ್ರೇರಣೆ ಪಡೆದ ಭಾರತೀಯ ಪುರೋಹಿತಶಾಹಿಗಳು ಮುಸ್ಲಿಮ್ ದ್ವೇಷ ಹಾಗು ಶ್ರೇಷ್ಟತೆಯ ವ್ಯಸನದಿಂದ ಭಾರತವನ್ನು ಹಿಟ್ಲರ್ ಕಾಲದ ಜರ್ಮನಿಯಂತೆ ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ. ಫ್ಯಾಸಿಷ್ಟರ ಉದ್ದೇಶಪೂರಿತ ಸಂಚು ಮತ್ತು ಬಂಡವಾಳಶಾಹಿಗಳು ಹಾಗು ಪುರೋಹಿತಶಾಹಿಗಳ ಅನೈತಿಕ ಮೈತ್ರಿ ಭಾರತವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದೆ. ಸರಕಾರದ ಸ್ವಯಂ ರತಿಯ ಮೂಸೆಯಿಂದ ಕೈಗೊಳ್ಳಲಾದ ನೋಟು ನಿಷೇಧ ಹಾಗು ಅತಿಯಾದ ತೆರಿಗೆ ಹೇರಿಕೆಯಿಂದ ಜನಮಾನ್ಯರು ಬೆಲೆ ಏರಿಕೆಯ ಭಾರದಿಂದ ತತ್ತರಿಸಿ ಹೋಗಿದ್ದಾರೆ. ಆದರೂ ಜನರನ್ನು ದೇಶಭಕ್ತಿಯ ನಶೆಯಲ್ಲಿ ಅವರಿಗಾದ ಗಾಯ ಮರೆಯುವಂತೆ ಮಂಕುಬೂದಿ ಎರಚಲಾಗುತ್ತಿದೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಹೆಚ್ಚಿದ ನೈಸರ್ಗಿಕ ವಿಪತ್ತುಗಳು ಮತ್ತು ಕೊರೋನ ಸಾಂಕ್ರಮಿಕದಂತ ಸನ್ನಿವೇಷಗಳು ಫ್ಯಾಸಿಷ್ಟರ ದುರಾಡಳಿತದಿಂದಾಗುವ ವಿಪರೀಪ ದುಸ್ಪರಿಣಾಮಗಳ ವೇಗವನ್ನು ಇನ್ನಷ್ಟು ಹೆಚ್ಚಿಸಿವೆ. ದೀರ್ಘಾವಧಿ ಯುದ್ಧ ಪೀಡಿತ ಯಾವುದೇ ದೇಶದಲ್ಲಿ ಅನಾಥ ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚುವುದನ್ನು ನಾವು ಬಲ್ಲೆವು. ಅದರಂತೆ ಕೊರೋನ ರೋಗದ ಅಟ್ಟಹಾಸದ ನಂತರ ಭಾರತದಲ್ಲಿ ಇದೇ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ನಿರ್ಗತಿಕರು, ವಾರಸು ಇಲ್ಲದ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ಮಯಸ್ಸಾದವರು, ನಿರುದ್ಯೋಗಿ ಯುವಕರು, ಮುಚ್ಚಲ್ಪಡುವ ಕಾರ್ಖಾನೆಗಳು, ಬಿದ್ದುಹೋದ ಮಾರುಕಟ್ಟೆ, ಮುಚ್ಚಲಾದ ಶಾಲೆಗಳು, ಹಸಿವಿನಿಂದ ಕಂಗಾಲಾದ ಪ್ರಜೆಗಳು, ತೋಟ, ಹೊಲ, ಗದ್ದೆ ಬಿಟ್ಟು ಓಟ ಕಿತ್ತ ರೈತರು, ಈ ಪರಿಸ್ಥಿತಿ ಇನ್ನೇನು ಉಲ್ಪಣಗೊಳ್ಳುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ದುಡಿಯುವ ವರ್ಗದ ಬದುಕು ಎಲ್ಲಾ ದೃಷ್ಟಿಕೋನದಿಂದ ಬೇಗುದಿಯಲ್ಲಿ ಬೇಯುತ್ತಿದೆ.

ಕಳೆದ ದಶಕದುದ್ದಕ್ಕೂ ಗಗಕ್ಕೇರುತ್ತಿರುವ ಬೆಲೆ ಏರಿಕೆಯ ಪ್ರಮಾಣ ೨೦೦% ಮುಟ್ಟಿದೆ. ಅಡುಗೆ ಎಣ್ಣೆ, ಸಿದ್ಧ ಆಹಾರ, ತರಕಾರಿ-ಹಣ್ಣುಗಳು, ಒಣ ಮೇವು, ಇವುಗಳ ಬೆಲೆ ಏರಿಕೆ ಪ್ರಮಾಣ ೧೫೦% ಮುಟ್ಟಿದೆ. ಜೀವರಕ್ಷಕ ಔಷಧಿಗಳ ಬೆಲೆ ಕೂಡ ಅದೇ ಅನುಪಾತದಲ್ಲಿ ಏರಿಕೆಯಾಗಿದೆ. ಅಡುಗೆ ಅನಿಲˌ ದಿನ ಬಳಕೆಯ ಇಂಧನಗಳ ಬೆಲೆಯಂತೂ ವಿಪರೀತ ಏರಿದ್ದು ಅದರ ನೇರ ಪರಿಣಾಮ ಹೋಟೆಲ್ ತಿಂಡಿಗಳ ಮತ್ತು ಸರಕು ಸಾಗಾಣಿಕೆಯ ದಂಧೆಯ ಮೇಲೆ ಬಿದ್ದಿದ್ದು ಹೋಟೆಲ್ ತಿಂಡಿಗಳು ಮತ್ತು ಸಾಗಾಣಿಕೆಯ ದರಗಳು ಕೂಡ ಏರಿಕೆ ಕಂಡಿವೆ. ಸಾಗಾಣಿಕೆ ವೆಚ್ಚ ಏರಿಕೆಯಿಂದ ಅದು ಇನ್ನಿತರ ಅನೇಕ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮೇಲೂ ತನ್ನ ದುಸ್ಪರಿಣಾಮವನ್ನು ಬೀರಿದೆ. ಶಾಲಾ ಶಿಕ್ಷಣವು ಅತ್ಯಂತ ದುಬಾರಿಯಾಗಿದ್ದು ಅದು ಬಡವರ ಮಕ್ಕಳಿಗೆ ಶಿಕ್ಷಣ ಕೈಗೆಟುಕದ ಪರಿಸ್ಥಿತಿಯನ್ನು ನಿರ್ಮಿಸಿದೆ. ಕೋವಿಡ್ ಸಾಂಕ್ರಮಿಕ ರೋಗದ ನೆಪದಲ್ಲಿ ಶಾಲಾ ಶಿಕ್ಷಣದಲ್ಲಿ ಭಾರೀ ಪ್ರಮಾಣದ ಅಸ್ತವ್ಯಸ್ಥ ಸ್ಥಿತಿ ತಲೆದೋರಿದೆ.

ಮೌಲ್ಯವೃದ್ಧಿಯ ನೇರ ಪರಿಣಾಮವು ರೂಪಾಯಿ ಮೌಲ್ಯ ಕುಸಿತದ ಮೇಲಾಗಿದೆ. ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತ ಇನ್ನೂ ತೀವ್ರಗತಿಯಲ್ಲಿ ಆಗುವ ಸಾಧ್ಯತೆಗಳಿವೆ. ಜಿಡಿಪಿಯಂತೂ ನೆಗೆಟಿವ್ ನಲ್ಲಿದ್ದು ಅದು ಇನ್ನೂ ಅನಿಶ್ಚಿತವಾಗಿ ಮುಂದುವರಿಯಲಿದೆ. ಉತ್ಪಾದನಾ ಕ್ಷೇತ್ರವು ಮಂದಗತಿಯಲ್ಲಿದೆ. ಹಾಗಾಗಿ ಇದೊಂದು ಬಗೆಯ structural recession ಎಂದೇ ಪರಿಗಣಿಸಬಹುದಾಗಿದೆ. ಕುಸಿದ ರೂಪಾಯಿ ಮಲ್ಯ ರಫ್ತು ವ್ಯವಹಾರವನ್ನು ಉತ್ತೇಜಿಸುವಲ್ಲಿ ವಿಫಲವಾಗುತ್ತಿದೆ. ಏಕೆಂದರೆ ದೇಶದಲ್ಲಿ ಉತ್ಪಾದನೆ ಅತಿಯಾಗಿ ಕುಸಿತಗೊಂಡಿದೆ. ಬ್ಯಾಂಕುಗಳು ಸಂಪೂರ್ಣವಾಗಿ ಮುಳುಗುವ ಸ್ಥಿತಿ ತಲುಪಿವೆ. ಎಲ್ಲ ಬಗೆಯ ಠೇವಣಿಗಳ ಮೇಲೆ ೨% ಬಡ್ಡಿ ಕೂಡ ಆಕರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜನರು ತಮ್ಮ ಬಳಿ ಇರುವ ಹಣವನ್ನು ನಗದು ರೂಪದಲ್ಲಿ ಇಡಲು ಬಯಸುತ್ತಿದ್ದಾರೆ. ಅದಷ್ಟೆ ಅಲ್ಲದೆ ಬ್ಯಾಂಕುಗಳ ವಿಶ್ವಾರ್ಹತೆಯು ಗಣನೀಯವಾಗಿ ಕುಸಿದಿದೆ.
ಸರಕಾರದ ಬೊಕ್ಕಸ ಸೇರಬೇಕಾದ ಕಂದಾಯ ಮೂಲ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಜನರ ಮೇಲೆ ತೆರಿಗೆ ಭಾರ ಹೆಚ್ಚದ್ದು ಕಪ್ಪುಹಣ ಸಂಗ್ರಹಕ್ಕೆ ಸಮಾನಾಂತರ ಅರ್ಥ ವ್ಯವಸ್ಥೆ ಮುಂದುವರೆಯಲಿದೆ. ಎಲ್ಲ ಕ್ಷೇತ್ರಗಳು ಹೆಚ್ಚು ಕಡಿಮೆ ಮಾಫಿಯಾಗಳ ವಶಕ್ಕೆ ಹೋಗಿವೆ. ಕೂಲಿ ಕಾರ್ಮಿಕರು, ರೈತರು ಭಿಕಾರಿಯಾಗುವ ಲಕ್ಷಣಗಳಿವೆ. ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಬೆಳೆದಿದ್ದು ದೇಶದ ಯುವಕರಲ್ಲಿ ಆತ್ಮಹತ್ಯೆಯ ಮನಸ್ಥಿತಿ ಹೆಚ್ಚಲಿದೆ. ಶಾಲೆಗಳಿಂದ ದೀರ್ಘಾವಧಿ ದೂರವಿರುವ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಸ್ಥಿತಿಗಳ ಮೇಲೆ ನಕಾರಾತ್ಮಕ ಪರಿಣಾಮಗಳು ಕಾಣಿಸುತ್ತವೆ. ಅಂತಹ ಮಕ್ಕಳು ಮುಂದೆ ಸಮಾಜ ಕಂಟಕರಾಗಿ ಬದಲಾಗುವ ಸಾಧ್ಯತೆಗಳಿವೆ. ಸರಕಾರವೆ ಮುಂದೆ ನಿಂತು ವಿಕೃತವಾದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಮಾನವ ಸಂಪನ್ಮೂಲವನ್ನು ದಿಕ್ಕು ದೆಸೆ ಇಲ್ಲದ ಹಾಗು ನಿರ್ಧಿಷ್ಟ ವಿಷಯ ನಿಪುಣತೆಯಿಂದ ವಿಮುಖಗೊಳಿಸಿದೆ.

ಈ ಎಲ್ಲ ಅನಾಹುತಗಳಿಗೆ ನಮ್ಮ ತಲೆಮಾರಿನ ನಾವೆಲ್ಲರು ಜವಾಬ್ದಾರರಾಗಿದ್ದೇವೆ. ನಾವು ಅಸಮರ್ಥರು, ಧರ್ಮಾಂಧರುˌ ಜೀವವಿರೋಧಿಗಳನ್ನು ನಮ್ಮನ್ನಾಳಲು ಆಯ್ಕೆ ಮಾಡಿದ್ದೇವೆ. ನಾವು ನೋಟು ನಿಷೇಧದಿಂದ ಮೊದಲ್ಗೊಂಡು ಅವೈಜ್ಞಾನಿಕ ಲಾಕ್ಡೌನ್ ವರೆಗಿನ ಸರಕಾರದ ಪ್ರತಿಯೊಂದು ಐಲು ನಿರ್ಧಾರಗಳನ್ನು ಒಂದಿಲ್ಲ ಒಂದು ರೀತಿಯಲ್ಲಿ ಬೆಂಬಲಿಸಿದ್ದೇವೆ. ನಾವು ಮುಸ್ಲಿಮರ ಮೇಲಿನ ದ್ವೇಷದಿಂದ ನಮ್ಮ ಮಕ್ಕಳ ಭವಿಷ್ಯವನ್ನು ಬಲಿಕೊಡುತ್ತಿದ್ದೇವೆ. ಇದರ ನಡುವೆ ಕೊರೋನ ಸಾಂಕ್ರಮಿಕ ಪರಿಸ್ಥಿತಿಯು ಒಂದು ನೆಪ ಮಾತ್ರ, ಈ ಸಂಕಷ್ಟ ಬರದೆ ಹೋಗಿದ್ದರೂ ಈ ಪರಿಸ್ಥಿತಿಯ ಕಡೆಗೆ ನಮ್ಮ ಪಯಣ ೨೦೧೪ ರ ಮೇ ತಿಂಗಳಲ್ಲೇ ಆರಂಭಗೊಂಡಿದೆ. ಪ್ರಜೆಗಳ ವಿರುದ್ಧ ಆಳುವವರ ಈ ಅಘೋಷಿತ ಯುದ್ಧದಲ್ಲಿ ನಾವೆಲ್ಲರು ಮಾನˌ ಮರ್ಯಾದೆ ಹಾಗು ನಾಚಿಕೆಗಳನ್ನು ಬಿಟ್ಟು ಪಾಲುದಾರರಾಗಿದ್ದೇವೆ. ಅದರ ದುಸ್ಪರಿಣಾಮಗಳನ್ನು ನಮ್ಮ ಮಕ್ಕಳು ಮುಂದಿನ ದಿನಮಾನಗಳಲ್ಲಿ ಅನುಭವಿಸಲಿದ್ದಾರೆ.
~ ಡಾ. ಜೆ ಎಸ್ ಪಾಟೀಲ.