COVID-19 ಸಾಂಕ್ರಾಮಿಕ ರೋಗದ ಮದ್ಯೆ ಭಾರತದಲ್ಲಿ ಲಸಿಕೆಯನ್ನೇ ಹಾಕಿಸಿಕೊಳ್ಳದ ಅಥವಾ ಒಂದೂ ಚುಚ್ಚುಮದ್ದನ್ನು ಪಡೆದುಕೊಳ್ಳದ 3.5 ದಶಲಕ್ಷದಷ್ಟು ಮಕ್ಕಳಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಯುನಿಸೆಫ್ ಹೊರಗೆಡವಿದೆ. ಮಾತ್ರವಲ್ಲದೆ ಇದು 2019 ರಿಂದ 1.4 ದಶಲಕ್ಷದಷ್ಟು ಹೆಚ್ಚಾಗಿದೆ ಎಂದೂ ತಿಳಿಸಿದೆ. 2020 ರಲ್ಲಿ 3 ಮಿಲಿಯನ್ ಶೂನ್ಯ-ಡೋಸ್ ಅಥವಾ ಒಂದೂ ಲಸಿಕೆಯನ್ನು ಪಡೆಯದ ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿದೆ.

ಕಳೆದ ಹತ್ತು ವರ್ಷಗಳಲ್ಲೇ ದಕ್ಷಿಣ ಏಷ್ಯಾದಲ್ಲಿ 2020 ರಲ್ಲಿ ಸುಮಾರು 4.4 ಮಿಲಿಯನ್‌ನಷ್ಟು ಮಕ್ಕಳು ಯಾವುದೇ ವಾಡಿಕೆಯ ವ್ಯಾಕ್ಸಿನೇಷನ್ ಪಡೆಯಲು ವಿಫಲರಾಗಿದ್ದಾರೆ ಎಂದು ಯುನಿಸೆಫ್ ದಾಖಲಿಸಿದೆ.
“2020 ರಲ್ಲಿ ಈ ‘ಶೂನ್ಯ-ಡೋಸ್ ಮಕ್ಕಳಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಮಕ್ಕಳು ಭಾರತದ ಮಕ್ಕಳು” ಎಂದು ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಪ್ರಕಟಣೆಯಲ್ಲಿ ತಿಳಿಸಿದೆ.
“ಲಸಿಕೆ ಪಡೆದುಕೊಳ್ಳುವಲ್ಲಿ ಇದ್ದ ಅಡೆತಡೆಗಳಿಂದಾಗಿ ಈ ಮಕ್ಕಳಲ್ಲಿ ಹೆಚ್ಚಿನವರು ಈ ವರ್ಷದಲ್ಲಿ ಒಂದು ಲಸಿಕೆಯನ್ನೂ ಪಡೆದುಕೊಳ್ಳಲಾಗಲಿಲ್ಲ”ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2020ರಲ್ಲಿ ದಕ್ಷಿಣ ಏಷ್ಯಾದ ಬಹುಪಾಲು ದೇಶಗಳು ಮಕ್ಕಳ ವ್ಯಾಕ್ಸಿನೇಷನ್ ಪ್ರಮಾಣದಲ್ಲಿ ಕುಸಿತವನ್ನು ಅನುಭವಿಸಿವೆ ಎಂಬುವುದನ್ನು ಸೂಚಿಸಿದ ಯುನಿಸೆಫ್, ನೇಪಾಳದಲ್ಲಿ ಡಿಫ್ತಿರಿಯಾ-ಟೆಟನಸ್-ಪೆರ್ಟುಸಿಸ್ (ಡಿಟಿಪಿ 3) ಲಸಿಕೆಯ ಪ್ರಮಾಣವು ಶೇಕಡಾ 9 ರಷ್ಟು ಕಡಿಮೆಯಾಗಿದೆ ಎಂದು ಹೇಳಿದೆ. ಪಾಕಿಸ್ತಾನದಲ್ಲಿ ಶೇ 7ರಷ್ಟು, ಭಾರತದಲ್ಲಿ ಶೇ 6ರಷ್ಟು, ಶ್ರೀಲಂಕಾದಲ್ಲಿ ಶೇ 3 ರಷ್ಟು ಮತ್ತು ಭೂತಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಶೇ 2 ರಷ್ಟು ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ.

“ಆದರೆ, ವರ್ಷಾಂತ್ಯದಲ್ಲಿ ಅನೇಕ ದೇಶಗಳಲ್ಲಿ ಕೈಗೊಂಡ ಚೇತರಿಕೆ ಪ್ರಯತ್ನಗಳು ಒಟ್ಟಾರೆ ಕುಸಿತದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಿದೆ” ಎಂದು ಹೇಳಿದೆ.
ಯುನಿಸೆಫ್ ಇಂಡಿಯಾದ ಅಧಿಕಾರಿ ಯಸುಮಾಸಾ ಕಿಮುರಾ, COVID-19 ಆರೋಗ್ಯ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದರೂ ಇತರ ಸಾಂಕ್ರಾಮಿಕ ರೋಗಗಳ ವಿರುದ್ಧದ ನಮ್ಮ ಹೋರಾಟದಲ್ಲಿ ನಾವು ಜಾಗರೂಕರಾಗಿರಬೇಕು. ಆದ್ದರಿಂದ ಕೋವಿಡ್ ವಿರುದ್ಧದ ನಮ್ಮ ಹೋರಾಟ ಇತರ ಸಾಂಕ್ರಾಮಿಕ ರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ ಹಸ್ತಕ್ಷೇಪ ಮಾಡದಂತೆ ನಾವು ನೋಡಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಲಸಿಕೆ ತಪ್ಪಿಸಿಕೊಂಡ ಮಕ್ಕಳನ್ನು ಗುರುತಿಸಲು ಮತ್ತು ಲಸಿಕೆ ಹಾಕಲು ವಿವಿಧ ಕಾರ್ಯತಂತ್ರಗಳ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಮೂಲಕ ಅಗತ್ಯ ಆರೋಗ್ಯ ಮತ್ತು ರೋಗನಿರೋಧಕ ಸೇವೆಗಳ ನಿರಂತರತೆಯನ್ನು ಬೆಂಬಲಿಸಲು ಯುನಿಸೆಫ್ ಭಾರತ ಸರ್ಕಾರಕ್ಕೆ ಪೂರ್ಣ ಬೆಂಬಲ ನೀಡಲಿದೆ. ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಸಮುದಾಯಗಳಲ್ಲಿ ಜಾಗೃತಿ ಮತ್ತು ಆತ್ಮವಿಶ್ವಾಸವನ್ನು ಮೂಡಿಸಲು ಮತ್ತು ಇತರ ಸಾಂಕ್ರಾಮಿಕ ರೋಗದ ವಿರುದ್ಧದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಎಲ್ಲಾ ಕ್ರಮಗಳನ್ನು ಯುನಿಸೆಫ್ ಬೆಂಬಲಿಸಲಿದೆ ಎಂದೂ ಅವರು ಹೇಳಿದ್ದಾರೆ.