• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸಾವು ನೋವಿಗೆ ಮಿಡಿಯದ ಹಂತಕ ವ್ಯವಸ್ಥೆ

ನಾ ದಿವಾಕರ by ನಾ ದಿವಾಕರ
May 5, 2021
in ದೇಶ
0
ಸಾವು ನೋವಿಗೆ ಮಿಡಿಯದ ಹಂತಕ ವ್ಯವಸ್ಥೆ
Share on WhatsAppShare on FacebookShare on Telegram

ADVERTISEMENT

ಭಾರತದ ರಾಜಕಾರಣ ತನ್ನ ಮಾನವೀಯ ಸ್ಪರ್ಶವನ್ನು ಕಳೆದುಕೊಂಡಿದೆ. ಅಧಿಕಾರ ರಾಜಕಾರಣದ ಮೆಟ್ಟಿಲುಗಳು ದುಬಾರಿಯಾಗುತ್ತಿರುವಂತೆಲ್ಲ ಮನುಜ ಜೀವದ ಮೌಲ್ಯ ಅಗ್ಗವಾಗುತ್ತಿದೆ. ಜನಸಾಮಾನ್ಯರ ಸಾವು ನೋವುಗಳು, ಸಂಕಷ್ಟಗಳು, ಹತಾಶೆ ಆತಂಕಗಳು ಆಳುವವರ ಪಾಲಿಗೆ ಕೇವಲ ಒಂದು ಸುದ್ದಿಯಾಗಿ ಕಾಣುತ್ತಿದೆ, ಅಥವಾ ಚುನಾವಣಾ ರಾಜಕಾರಣದ ಮಾರುಕಟ್ಟೆ ಸರಕುಗಳಂತೆ ಕಾಣುತ್ತಿವೆ. ಕಳೆದ ಒಂದು ವರ್ಷದಲ್ಲಿ ಕೋವಿಡ್ ಸೋಂಕಿನಿಂದಲೇ ಭಾರತ ಎರಡು ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ಕಳೆದುಕೊಂಡಿದೆ. ಭಾರತದಂತಹ ಸಂಕೀರ್ಣ ಸಮಾಜದಲ್ಲಿ 2 ಲಕ್ಷ ಜನರ ಸಾವು ಹತ್ತು ಲಕ್ಷ ಜನರ ಬದುಕಿಗೆ ನಿರ್ಣಾಯಕವಾಗುತ್ತದೆ. ಈ ಕನಿಷ್ಟ ಪ್ರಜ್ಞೆ ನಮ್ಮ ಈಗಿನ ರಾಜಕೀಯ ನಾಯಕರುಗಳಿಗೆ ಇಲ್ಲ ಎಂದು ಹೇಳಬೇಕಿಲ್ಲ.

ಆದರೂ ಕರೋನಾ ಮತ್ತೊಮ್ಮೆ ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹತಾಶೆಯನ್ನುಂಟುಮಾಡಿದೆ. ಮಧ್ಯಮ, ಮೇಲ್ ಮಧ್ಯಮ ವರ್ಗಗಳಲ್ಲಿಯೇ ಈ ಸನ್ನಿವೇಶ ಹತಾಶ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ. ಏಕೆ ಹೀಗೆ ಸಾಯುತ್ತಿದ್ದಾರೆ ? ಎಂಬ ಪ್ರಶ್ನೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ನಿಜ, ಸಾವಿಗೆ ಕಾರಣಗಳಿವೆ. ಕೋವಿಡ್ ಸಂದರ್ಭದಲ್ಲಿ ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವವರು ಸುಲಭ ತುತ್ತಾಗುತ್ತಾರೆ. ನಿತ್ಯ ಬದುಕಿನ ಅನಿವಾರ್ಯತೆಗಳು ಅಸಂಖ್ಯಾತ ಜನರನ್ನು ಸಾವಿನ ದವಡೆಗೆ ದೂಡುತ್ತಿರುವುದನ್ನು ನೋಡುತ್ತಲೇ, ಸಂತಾಪ, ಶ್ರದ್ಧಾಂಜಲಿ ಮತ್ತು ಕಂಬನಿಗಳ ನಡುವೆ ಮತ್ತೊಂದು ಸಾವಿನ ಸುದ್ದಿಯ ನಿರೀಕ್ಷೆಯಲ್ಲಿ ದಿನ ಕಳೆಯುವಂತಾಗಿದೆ.

137 ಕೋಟಿ ಜನರ ಪೈಕಿ ಕೇವಲ ಎರಡು ಲಕ್ಷ ಜನರು ಸತ್ತಿದ್ದಾರೆ. ನಗಣ್ಯ ಅಲ್ಲವೇ ? ಕರ್ನಾಟಕದ ಆರೋಗ್ಯ ಸಚಿವರು ಹೌದೆನ್ನುತ್ತಾರೆ. ಚಾಮರಾಜನಗರದಲ್ಲಿ 24 ಅಮಾಯಕ ಜೀವಗಳು ಆಮ್ಲಜನಕ ಇಲ್ಲದೆ ಅಸುನೀಗಿದಾಗ, ಕೇವಲ ಮೂರೇ ಜನ ಎಂದು ಎಣಿಸಿ ಹೇಳುವವರನ್ನು ನಾವು ಆರೋಗ್ಯ ಮಂತ್ರಿ ಎಂದು ಗೌರವಿಸುತ್ತಿದ್ದೇವೆ. ಹೆಣಗಳ ಎಣಿಕೆ ನಮ್ಮ ರಾಜಕೀಯ ಜೀವನದಲ್ಲಿ ಒಂದು ಸಂಸ್ಕೃತಿಯಾಗಿಯೇ ನೆಲೆಸಿಬಿಟ್ಟಿದೆ. ಹಣ ಎಣಿಸಿ ಮತ ಗಳಿಸುವುದು, ಮತ ಎಣಿಸಿ ಅಧಿಕಾರ ಗಳಿಸುವುದು, ಹೆಣ ಎಣಿಸಿ ಅಧಿಕಾರ ಉಳಿಸಿಕೊಳ್ಳುವುದು ಇದು ನವ ಭಾರತದ ಆಡಳಿತ ಸಂಹಿತೆಯಾಗಿರುವುದನ್ನು ವಿಷಾದದಿಂದಲೇ ಒಪ್ಪಿಕೊಳ್ಳಬೇಕಿದೆ.

ವಿಜಯೋತ್ಸವದ ಗುಂಗಿನಲ್ಲಿ ಜೀವ ಹರಣ ಮಾಡುವ ಒಂದು ವಿಕೃತ ಸಂಸ್ಕೃತಿಯನ್ನೂ ನಾವೇ ಬೆಳೆಸಿಕೊಂಡುಬಂದಿದ್ದೇವೆ. ಪಶ್ಚಿಮಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಈಗಾಗಲೇ ಒಂದು ಪ್ರಾತ್ಯಕ್ಷಿಕೆಯನ್ನು ನಮ್ಮ ಮುಂದಿಟ್ಟಿದೆ. ಸೋಲಿನ ಹತಾಶೆಯೂ ಜೀವ ನಾಶಕ್ಕೆ ಕಾರಣವಾಗುವುದನ್ನೂ ನೋಡಿದ್ದೇವೆ. ಈ ಘಟನೆಗಳು ನಮ್ಮ ಪ್ರಜ್ಞೆಯನ್ನು ಕಲಕುವುದಿಲ್ಲ, ತಾತ್ವಿಕ ನೆಲೆಯಲ್ಲಿ ಅಪರಾಧಿಗಳ ಶೋಧಕ್ಕೆ ಪ್ರೇರೇಪಿಸುತ್ತವೆ. ಏಕೆ ಹೀಗಾಗುತ್ತಿದೆ ಎಂಬ ಜಿಜ್ಞಾಸೆ ನಮ್ಮನ್ನು ಮತ್ತಷ್ಟು ಚಿಂತನೆಗೆ ದೂಡುವುದಿಲ್ಲ. ಬದಲಾಗಿ ರಾಜಕೀಯ/ಸೈದ್ಧಾಂತಿಕ ಗೋಡೆಗಳ ಹಿಂದೆ ನಿಂತು ಹೆಣಗಳಲ್ಲಿ ಅಧಿಕಾರದ ಮೆಟ್ಟಿಲುಗಳನ್ನು ಕಾಣತೊಡಗುತ್ತೇವೆ. ಹಾಗಾಗಿಯೇ ಸಾವಿರಾರು ಸಾವುಗಳನ್ನು ಸಂಭ್ರಮಿಸುವ ಮನಸುಗಳೂ ಏಳೆಂಟು ಜೀವಗಳಿಗೆ ಲೆಕ್ಕ ಕೇಳಲು ಮುಂದಾಗುತ್ತವೆ.

ಇಲ್ಲಿ ನಮಗೆ ಜಾರ್ಜ್ ಫ್ಲಾಯ್ಡ್ ಮತ್ತೆ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ಆ ಹತಾಶೆಯ ಧ್ವನಿ ಭಾರತದ ಉದ್ದಗಲಕ್ಕೂ ಧ್ವನಿಸುತ್ತಲೇ ಇದೆ. ಇಲ್ಲಿ ಜನಸಾಮಾನ್ಯರ ಕತ್ತು  ಹಿಸುಕುತ್ತಿರುವುದು ಪೊಲೀಸರಲ್ಲ, ಒಂದು ವೈರಾಣು. ಉಸಿರಾಡುವ ಗಾಳಿ ಒದಗಿಸುವ ಹೊಣೆ ಆಡಳಿತ ನಿರ್ವಹಣೆ ಮಾಡುವ ಸರ್ಕಾರದ್ದು. ಎಷ್ಟು ಸುಂದರ ಶ್ರೇಣೀಕೃತ ಅಧಿಕಾರದ ಮೆಟ್ಟಿಲುಗಳನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಮಂಡಲ ಪಂಚಾಯತಿಯಿಂದ ಸಂಸತ್ತಿನವರೆಗೆ. ಈ ಮೆಟ್ಟಲುಗಳ ಮೇಲೆ ನಡೆದಾಡುವ ಸಾಲಂಕೃತ ಪ್ರತಿನಿಧಿಗಳಿಗೆ ಮನುಜ ಪ್ರಜ್ಞೆ ಇದ್ದಿದ್ದರೆ ಬಹುಶಃ ಭಾರತ ಸಾವಿನ ಕೂಪ ಆಗುತ್ತಿರಲಿಲ್ಲ. ನಮ್ಮ ದೂಷಣೆಗೆ, ನಿಂದನೆಗೆ ಈಗ ಚೀನಾ, ಜಮಾತ್, ತಬ್ಲೀಗಿಗಳು ನಿಲುಕುವುದಿಲ್ಲ. ಅದು ಮುಗಿದ ಅಧ್ಯಾಯ.

ಮತಕ್ಕಿರುವಷ್ಟೇ ಬೆಲೆ ಮತದಾನ ಮಾಡಿದವರ ಪ್ರಾಣಕ್ಕೂ ಇದ್ದಿದ್ದರೆ…

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೋನಾ ನಿಭಾಯಿಸಲು ಸಿದ್ಧತೆ ನಡೆಸುತ್ತಿರುವುದನ್ನು ನೋಡಿದರೆ ನಮ್ಮ ದೇಶಕ್ಕೆ ಕೋವಿದ್ 19 ಈ ವರ್ಷವೇ ಪ್ರವೇಶಿಸಿದೆ ಎಂದು ಭಾಸವಾಗುತ್ತದೆ. ಆರು ತಿಂಗಳ ಕಾಲ ಮೈಮರೆತು ನಿದ್ರಿಸಿದ ಆಡಳಿತ ವ್ಯವಸ್ಥೆ ಈ ಒಮ್ಮೆಲೆ ಪುಟಿದೆದ್ದು ನಿಲ್ಲಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಗೆ ಸುಭದ್ರ ಬುನಾದಿ ಇಲ್ಲ. ಸಾಂದರ್ಭಿಕ, ಸಮಯೋಚಿತ ಕ್ರಮಗಳನ್ನು ಕೈಗೊಳ್ಳುವುದನ್ನು ನಿರ್ವಹಣೆ ಎನ್ನುವುದಿಲ್ಲ, ಮೇಲ್ವಿಚಾರಣೆ ಎನ್ನುತ್ತಾರೆ. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರಗಳು ಮಾಡುತ್ತಿರುವುದು ಮೇಲ್ವಿಚಾರಣೆ ಮಾತ್ರ.

ಹಾಗಾಗಿಯೇ ಈಗ ದೇಶಾದ್ಯಂತ ಹಾಹಾಕಾರ ಎದ್ದಿದೆ. ಆಸ್ಪತ್ರೆಯ ಸೌಲಭ್ಯಗಳಿಲ್ಲ, ಹಾಸಿಗೆಗಳು ದೊರೆಯುತ್ತಿಲ್ಲ, ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ, ವೆಂಟಿಲೇಟರ್ ಕೊರತೆ ಇದೆ, ರೆಮಿಡಿಸಿವಿರ್‍ನಂತಹ ಔಷಧಿಗಳಿಗೂ ಕೊರತೆ ಇದೆ. ಆದರೆ ಎಲ್ಲವೂ ಕಾಳಸಂತೆಯಲ್ಲಿ ದೊರೆಯುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲೂ ಕರಾಳದಂಧೆಯೇ ಎಂದು ಹುಬ್ಬೇರಿಸುವುದು ಸಹಜ. ಅಚ್ಚರಿ ಬೇಕಿಲ್ಲ ಏಕೆಂದರೆ, ಇದು ಮಾರುಕಟ್ಟೆ ಪ್ರಪಂಚ. ಹೆಣವೂ ಬಿಕರಿಯಾಗುವ ಕರಾಳ ಮಾರುಕಟ್ಟೆಯಲ್ಲಿ ನಾವು ಮೌಲ್ಯಯುತ ಆಡಳಿತದ ನಿರೀಕ್ಷೆಯಲ್ಲಿದ್ದೇವೆ.  ಕಾಳಸಂತೆ ವ್ಯಾಪಾರದ ಮೂಲ ಇರುವುದೇ ಸರಬರಾಜಿನ ಕೊರತೆಯಲ್ಲಿ, ಉತ್ಪಾದನೆಯ ಕೊರತೆಯಲ್ಲಿ ಅಲ್ಲ. ಈ ಸರಬರಾಜು ಅನಿರ್ಬಂಧಿತವಾಗಿ, ಶಿಸ್ತುಬದ್ಧತೆಯಿಂದ, ಕಾನೂನುರೀತ್ಯಾ ಚಾಲ್ತಿಯಲ್ಲಿರಬೇಕೆಂದರೆ ಇದನ್ನು ನಿರ್ವಹಿಸಲು ಒಂದು ಜವಾಬ್ದಾರಿಯುತ ಸರ್ಕಾರ ಅಗತ್ಯ.

ನಮ್ಮ ಕೊರತೆ ಇರುವುದೇ ಇಲ್ಲಿ. ಕಳೆದ ಎರಡು ದಶಕಗಳಲ್ಲಿ ನಾವು ಶಾಸನಸಭೆಗಳಿಗೆ ಆಯ್ಕೆ ಮಾಡುತ್ತಿರುವುದು ವ್ಯಾಪಾರಿಗಳನ್ನೇ ಹೊರತು, ನುರಿತ ಪ್ರಜ್ಞಾವಂತ ರಾಜಕಾರಣಿಗಳನ್ನು ಅಲ್ಲ. ಸಾಮಾಜಿಕ ಜನಾಂದೋಲನಗಳು, ಜನಪರ ಚಳುವಳಿಗಳು, ಕಾರ್ಮಿಕ ಹೋರಾಟಗಳ ಮಧ್ಯದಿಂದ ಮುನ್ನೆಲೆಗೆ ಬಂದಿರುವವರು ಮತ್ತು ಬೌದ್ಧಿಕವಾಗಿ ಪ್ರಬುದ್ಧತೆ ಹೊಂದಿರುವ ವ್ಯಕ್ತಿಗಳು ಅಧಿಕಾರ ರಾಜಕಾರಣದ ಚೌಕಟ್ಟಿನಿಂದಲೇ ಹೊರಗಿದ್ದಾರೆ. ಒಂದು ವೇಳೆ ಒಳಗಿದ್ದರೂ ಬಹಿಷ್ಕೃತರಾಗಿ, ನಿರ್ಲಕ್ಷಿತರಾಗಿ ಅಧಿಕಾರ ಕೇಂದ್ರಗಳಿಂದ ದೂರವೇ ಇರುತ್ತಾರೆ. ಸೂಕ್ಷ್ಮ ಸಂವೇದನೆಯ ಅರ್ಥವನ್ನಾದರೂ ಅರಿತಿರುವ ಇಂಥವರ ಸ್ಥಾನವನ್ನು ಗುತ್ತಿಗೆದಾರರು, ಗಣಿ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ದಂಗೆಕೋರರು, ಮಾಫಿಯಾಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರು ಆಕ್ರಮಿಸಿಕೊಳ್ಳುತ್ತಿದ್ದಾರೆ.

ಕರೋನಾ ಸಂಕಷ್ಟದ ಹೊತ್ತಲ್ಲಿ ಜನಪರ ದನಿ ಎತ್ತಿದ ನ್ಯಾಯಾಂಗ!

ಅಧಿಕಾರ ಸ್ಥಾನಗಳನ್ನು ಆಕ್ರಮಿಸಿಕೊಳ್ಳುವವರು ಇಂತಹ ಜನಪ್ರತಿನಿಧಿಗಳಿಗೆ ಬದ್ಧರಾಗಿರುತ್ತಾರೆ ಅಥವಾ ಕೆಲವೊಮ್ಮೆ ಇದೇ ಹಿನ್ನೆಲೆ ಇರುವವರೂ ಆಗಿರುತ್ತಾರೆ. ಸುಸ್ಥಿರ ಸರ್ಕಾರ ಎನ್ನುವ ಕಲ್ಪನೆ ಈ ಸ್ವಾರ್ಥ ರಾಜಕಾರಣವನ್ನು ಸಂರಕ್ಷಿಸುವ ಒಂದು ಪ್ರಜಾಸತ್ತಾತ್ಮಕ ವಿಧಾನ ಎಂದಷ್ಟೇ ಹೇಳಬಹುದು. ಆದ್ದರಿಂದಲೇ ಎಂತಹ ಪ್ರಮಾದವೇ ನಡೆದರೂ, ನೂರಾರು ಜನರ ಸಾವು ಸಂಭವಿಸಿದರೂ ಸಚಿವರೊಬ್ಬರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವ ದೃಶ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಈ ರಾಜಕೀಯ ನಾಯಕರುಗಳಿಗೆ ತಮ್ಮ ಸ್ವಹಿತಾಸಕ್ತಿ ಮತ್ತು ತಾವು ನಂಬಿರುವ ಪಕ್ಷದ ಅಧಿಕಾರಾಸಕ್ತಿ ಎರಡೇ ಮುಖ್ಯವಾಗುತ್ತದೆ. ಜನರ ಸಾವು ನೋವುಗಳು ನಗಣ್ಯ ಎನಿಸಿಬಿಡುತ್ತವೆ.

ಇದನ್ನು ಚಾಮರಾಜನಗರದಲ್ಲಿ ಸಂಭವಿಸಿದ  24 ಸಾವುಗಳ ಹಿನ್ನೆಲೆಯಲ್ಲೇ ಗಮನಿಸಬಹುದು. ಸಂಸದ ತೇಜಸ್ವಿ ಸೂರ್ಯ ತಮ್ಮ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿರುವ ಬೆಡ್ ಬ್ಲಾಕಿಂಗ್ ಹಗರಣದಲ್ಲೂ ಗಮನಿಸಬಹುದು. ಈ ಅವಘಡಗಳಿಗೆ ಯಾರು ಕಾರಣ ? ಎರಡೂ ಪ್ರಕರಣಗಳಲ್ಲಿ ಯಾವುದೋ ಅಗೋಚರ ಮಾಫಿಯಾ ಕೈವಾಡವಿರುತ್ತದೆ. ಉನ್ನತ ಮಟ್ಟದ ಅಧಿಕಾರಿಗಳಿಂದ ವಿಧಾನಸೌಧದವರೆಗೆ ಈ ಮಾಫಿಯಾದ ಬಾಹುಗಳು ಚಾಚಿರುತ್ತವೆ. ಬಿಬಿಎಂಪಿ ಹಗರಣದ ಹಿಂದೆ ಅಲ್ಲಿ ಗುತ್ತಿಗೆ ಕೆಲಸ ಮಾಡುವ ಕೆಳಮಟ್ಟದ ಅಧಿಕಾರಿಗಳೋ ಅಥವಾ ಗುತ್ತಿಗೆ ನೌಕರರೋ ಕಾರಣವಾಗಿರುವುದಿಲ್ಲ. ಇವರು ನಿಮಿತ್ತ ಮಾತ್ರ. ಬಿಬಿಎಂಪಿ ಉಸ್ತುವಾರಿ ಸಚಿವರ ಗಮನಕ್ಕೆ ಬಾರದೆ ಇಷ್ಟೆಲ್ಲಾ ನಡೆದಿರುತ್ತದೆ ಎಂದು ನಂಬಲು ಆಧಾರಗಳೂ ಇಲ್ಲ.

ಇಲ್ಲಿ ನಾವು ಗಮನಿಸಬೇಕಿರುವ ಒಂದು ಸಂಗತಿ ಇದೆ. ಮಂಡಲ್ ಪಂಚಾಯತ್ ಹಂತದಿಂದ ದೆಹಲಿಯವರೆಗೆ ಪ್ರತಿಯೊಂದು ಹಂತದಲ್ಲೂ ಒಬ್ಬ ಜವಾಬ್ದಾರಿಯುತ ಜನಪ್ರತಿನಿಧಿ ಇರುತ್ತಾನೆ. ಈ ಪ್ರತಿನಿಧಿಗೆ ತನ್ನ ಸುತ್ತಲಿನ ಆಡಳಿತದ ಮೇಲ್ವಿಚಾರಣೆ ನಡೆಸುವ ಅಧಿಕಾರ ಮತ್ತು ನೈತಿಕ ಹೊಣೆ ಇರುತ್ತದೆ. ಕನಿಷ್ಟ ತನ್ನ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂದು ಅರಿತಿರಬೇಕಾದ್ದು ಈ ಪ್ರತಿನಿಧಿಯ ಸಾಂವಿಧಾನಿಕ ಕರ್ತವ್ಯವಲ್ಲವೇ ? ಆಡಳಿತ ನಿರ್ವಹಣೆಯಲ್ಲಿ ಉಂಟಾಗುವ ಪ್ರತಿಯೊಂದು ಲೋಪವನ್ನೂ ಗಮನಿಸಿ ಸರಿಪಡಿಸಲು ಒಬ್ಬ ಸಚಿವ ಇರುತ್ತಾನೆ. ನಡುವೆ ಸು(ಉ)ಸ್ತುವಾರಿ ಸಚಿವರೂ ಇರುತ್ತಾರೆ. ಸಚಿವರನ್ನು ಗಮನಿಸಲು ಮುಖ್ಯಮಂತ್ರಿಯ ಕುರ್ಚಿ ಇರುತ್ತದೆ. ಈ ಸರಪಳಿಯ ಒಂದು ಕೊಂಡಿ ಸಡಿಲವಾದರೂ ಅವಘಡಗಳು ಸಂಭವಿಸುತ್ತವೆ. ಆದರೆ ಹೊಣೆ ಯಾರದು ?

ಕವಲು ಹಾದಿಗಳ ನಡುವೆ ಶ್ರಮಜೀವಿಗಳ ಪಯಣ

ಇಲ್ಲಿ ಅಧಿಕಾರ ರಾಜಕಾರಣದ ತೋಳ್ಬಲ ಮುನ್ನೆಲೆಗೆ ಬರುತ್ತದೆ. ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸತ್ತಿದ್ದು ಮೂರೇ ಜನ ಎಂದು ರಾಜ್ಯ ಆರೋಗ್ಯ ಸಚಿವರು ಹೇಳುತ್ತಾರೆ. ಅಂದರೆ ಉಳಿದವರೇನು ಆತ್ಮಹತ್ಯೆ ಮಾಡಿಕೊಂಡರೇ ? ಮೂರೇ ಜನ ಸತ್ತರು ಎಂದರೆ ಆ ಮೂರು ಜೀವಗಳಿಗೆ ಮೌಲ್ಯ ಇಲ್ಲವೇ ? ಇಂತಹ ದಾರುಣ ಸಾವು ಸಂಭವಿಸಿದರೂ, ಇಷ್ಟೆಲ್ಲಾ ಅನಾಹುತವಾದರೂ ಕೊಂಚವೂ ಪಾಪಪ್ರಜ್ಞೆ ಇಲ್ಲದೆ ತಮ್ಮ ಸ್ಥಾನಭದ್ರತೆಗಾಗಿ ಅನ್ಯ ಮಾರ್ಗಗಳನ್ನು ಹುಡುಕುತ್ತಾ ಹೋಗುವಂತಹ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಇವರೇಕೆ ಹೀಗೆ ? ಏಕೆಂದರೆ ಇವರು ಮೂಲತಃ ವ್ಯಾಪಾರಿಗಳು. ಗುತ್ತಿಗೆದಾರರು. ಸಾವು, ನೋವು, ನಷ್ಟ, ಸಂಕಷ್ಟ ಎಲ್ಲವೂ ವ್ಯಾಪಾರದ ಒಂದು ಭಾಗ. ಅಷ್ಟೇ ಅಲ್ಲವೇ ?

ಭೂಪಾಲ್ ಅನಿಲ ದುರಂತದಿಂದ ವಿಶಾಖಪಟ್ಟಣಂ ದುರಂತದವರೆಗೆ, ಇತ್ತೀಚೆಗೆ ಕರ್ನಾಟಕದಲ್ಲೇ ನಡೆದ ಗಣಿ ಸ್ಪೋಟದವರೆಗೆ ಪ್ರಾಣ ಕಳೆದುಕೊಂಡ ಅಮಾಯಕ ಕಾರ್ಮಿಕರಿಗೆ ಪರಿಹಾರದ ಚೆಕ್ ಹೊರತುಪಡಿಸಿ ಮತ್ತಾವ ಪರಿಹಾರ ದೊರೆತಿದೆ ? ಈಗ ಕೊರೋನಾ ಪೀಡಿತರೂ ಇವರ ಸಾಲಿಗೇ ಸೇರುತ್ತಾರೆ. ಕೊರೋನಾ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿದಿದ್ದರೂ ಚುನಾವಣಾ ಸಭೆಗಳನ್ನು ನಡೆಸಿ, ಲಕ್ಷಾಂತರ ಜನರು ಸೇರುವಂತೆ ಮಾಡಿದ ರಾಜಕೀಯ ಪಕ್ಷಗಳು ಹೊಣೆ ಹೊರುವುದಿಲ್ಲ. ಭಾರತ ಕೋವಿದ್ ವಿರುದ್ಧ ಗೆದ್ದಿದೆ ಎಂದು ಆತ್ಮರತಿಯಿಂದ ಬೀಗಿದ ಪ್ರಧಾನಮಂತ್ರಿ ಇಂದಿನ ಪರಿಸ್ಥಿತಿಗೆ ನೈತಿಕ ಹೊಣೆ ಹೊರುವುದಿಲ್ಲ. ಕುಂಭಮೇಳ ನಡೆಸಿದ ಉತ್ತರಖಾಂಡ ಸರ್ಕಾರ ಹೊಣೆ ಹೊರುವುದಿಲ್ಲ. ಏಕೆಂದರೆ ಬಲಿಯಾಗುತ್ತಿರುವ ಮತದಾರರು, ಮತ್ತೊಂದು ಮತದಾನದ ವೇಳೆಗೆ ಇವೆಲ್ಲವನ್ನೂ ಮರೆತಿರುತ್ತಾರೆ.

ಹಸಿವು ಮುಕ್ತ ರಾಜ್ಯವೋ- ಸಾವಿನ ರಾಜ್ಯವೋ?

ಇಂದು ಭಾರತ ಕೋವಿದ್ 19 ಹಿನ್ನೆಲೆಯಲ್ಲಿ ಎದುರಿಸುತ್ತಿರುವ ಮೂಲ ಸಮಸ್ಯೆಗಳೆಂದರೆ, ಆಮ್ಲಜನಕ ಪೂರೈಕೆ, ಆಕ್ಸಿಜನ್ ಇರುವ ಹಾಸಿಗೆಯ ಕೊರತೆ, ಸೋಂಕಿತರಿಗೆ ಆಸ್ಪತ್ರೆಗಳ ಕೊರತೆ, ಕೆಲವೆಡೆ ರೆಮಿಡಿಸಿವರ್ ನಂತಹ ಶಮನಕಾರಿ ಔಷಧಿಯ ಕೊರತೆ , ವೆಂಟಿಲೇಟರ್ ಕೊರತೆ. ಈ ಕೊರತೆಗಳು ಸೃಷ್ಟಿಯಾಗಲು ಕಾರಣವೇನು ? ಕೇಂದ್ರ ಸರ್ಕಾರ ಭಾರತ ಕೋವಿದ್ ಮುಕ್ತವಾಗಿದೆ ಎಂಬ ಆತ್ಮರತಿಯಲ್ಲಿ ಮುಳುಗಿಹೋಗಿದ್ದುದು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿಯೂ ಇದೇ ಸ್ವಪ್ರಶಂಸೆಯ ಮಾತುಗಳನ್ನು ದಾಖಲಿಸಲಾಗಿದೆ. ಈ ಎಲ್ಲ ಕೊರತೆಗಳು ಕಳೆದ ಬಾರಿಯ ಕೋವಿದ್ ಸಂದರ್ಭದಲ್ಲೂ ತಲೆದೋರಿದ್ದವು ಎಂದ ಮೇಲೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬಹುದಿತ್ತಲ್ಲವೇ ? ಈ ಲೋಪಕ್ಕೆ ಯಾರು ಹೊಣೆ. ನಮ್ಮ ಜನಪ್ರತಿನಿಧಿಗಳಿಗೆ ನೈತಿಕತೆ ಇದ್ದರೆ ಪ್ರಧಾನಿಯಿಂದ ಮಂಡಲ ಪಂಚಾಯತಿ ಸದಸ್ಯನವರೆಗೂ ಈ ಹೊಣೆ ಹೊರಬೇಕಾಗುತ್ತದೆ.

ಪ್ರಜಾತಂತ್ರ ವ್ಯವಸ್ಥೆ ಇದನ್ನೇ ಬಯಸುತ್ತದೆ. ಆದರೆ ನಾವು ಪ್ರಜಾತಂತ್ರವನ್ನು ಮತಪೆಟ್ಟಿಗೆಯಿಂದ ಹೊರತೆಗೆದೇ ಇಲ್ಲ. ಪ್ರಜಾತಂತ್ರದ ಸಾಂವಿಧಾನಿಕ ಮೌಲ್ಯಗಳ ಪರಿವೆಯೇ ಇಲ್ಲದ ಉದ್ಯಮಿಗಳನ್ನು ನಾವೇ ಆಯ್ಕೆ ಮಾಡಿದ್ದೇವೆ. ಊಳಿಗಮಾನ್ಯ ಧೋರಣೆಯಿಂದ ಇಂದಿಗೂ ಹೊರಬರದ ಈ ಔದ್ಯಮಿಕ ಹಿತಾಸಕ್ತಿಗಳಿಗೆ ಪ್ರಜೆಗಳ ಅಮೂಲ್ಯ ಜೀವಗಳೂ ಮಾರುಕಟ್ಟೆ ಸರಕುಗಳಂತೆಯೇ ಕಾಣುತ್ತವೆ. ಅನಿಲ ಸೋರಿಕೆಯೋ, ಬಾಂಬ್ ಸ್ಫೋಟವೋ, ರೈಲು ಅಪಘಾತವೋ, ಕೋಮು ದಂಗೆಯೋ, ಹತ್ಯಾಕಾಂಡವೋ, ಭಯೋತ್ಪಾದನೆಯೋ ಜೀವ ಕಳೆದುಕೊಳ್ಳುವ ದೇಹಗಳು ಹೆಣಗಳ ಎಣಿಕೆಯ ನಂತರ ನಗಣ್ಯವಾಗಿಬಿಡುತ್ತದೆ. ಚಾಮರಾಜನಗರದ 24 ಶವಗಳಿಗೂ, ದೇಶಾದ್ಯಂತ ನಿತ್ಯ ಆಮ್ಲಜನಕ ಇಲ್ಲದೆ ಸಾಯುತ್ತಿರುವವರಿಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಭೌಗೋಳಿಕ ಅಂತರವಷ್ಟೇ.

ಕೊರೋನಾ ನಮ್ಮನ್ನು ಕೊಲ್ಲುತ್ತಿಲ್ಲ. ಸುದ್ದಿಮನೆಗಳಲ್ಲಿ ಹೇಳುವಂತೆ ಅದು ಮಹಾಮಾರಿಯೂ ಅಲ್ಲ, ಹೆಮ್ಮಾರಿಯೂ ಅಲ್ಲ, ರಣಚಂಡಿಯೂ ಅಲ್ಲ. ಈ ವೈರಾಣುವನ್ನು ಎದುರಿಸಲು ಅಗತ್ಯವಾಗಿದ್ದ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಿಸುವಲ್ಲಿ ನಮ್ಮ “ರಣಕಲಿಗಳು ” ವಿಫಲವಾಗಿರುವುದು ಈ ಸಾವುಗಳಿಗೆ ಕಾರಣ. ಮತ್ತೆ ಫ್ಲಾಯ್ಡ್ ನೆನಪಾಗುತ್ತಾನೆ. #ನನಗೆಉಸಿರಾಡಲಾಗುತ್ತಿಲ್ಲ ಎನ್ನುವ ನೋವಿನ ಧ್ವನಿಗಳು ನಮ್ಮ ನಡುವೆ ಕೇಳಿಬರುತ್ತಲೇ ಇದೆ. ಸರ್ಕಾರಗಳು ಕೋವಿದ್ ವಿರುದ್ಧ ಹೋರಾಡಲಿ. ನಾವು ಹೋರಾಡಬೇಕಿರುವುದು ಈ ಹಂತಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿರುವ ಹೊಣೆಗೇಡಿ ರಾಜಕೀಯ ಶಕ್ತಿಗಳ ವಿರುದ್ಧ. ಇಲ್ಲವಾದಲ್ಲಿ ಫ್ಲಾಯ್ಡ್‍ಗಳ ಸಂಖ್ಯೆ ಹೆಚ್ಚಾಗುತ್ತಲೇ ಹೋಗುತ್ತದೆ. #ನನಗೆಉಸಿರಾಡಲಾಗುತ್ತಿಲ್ಲ ಈ ನೋವಿನ ಧ್ವನಿ ಸಾರ್ವತ್ರಿಕವಾಗಿಬಿಡುತ್ತದೆ.

Previous Post

‘ಎಳೆ ಸಂಸದ’ ಈ ಸಮಾಜಕ್ಕೆ ಅಂಟಿದ ಕರೋನಾಗಿಂತಲೂ ಭೀಕರ ವೈರಸ್ –ಕಾಂಗ್ರೆಸ್

Next Post

ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

Related Posts

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
0

ಸರ್ಕಾರಿ ಶಾಲಾ ಕಾಲೇಜು ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ...

Read moreDetails

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

October 12, 2025

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

October 12, 2025

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

October 12, 2025
Next Post
ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

Please login to join discussion

Recent News

Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
Top Story

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

by ಪ್ರತಿಧ್ವನಿ
October 12, 2025
Top Story

ನಮ್ಮ ಅನ್ನ ತಿಂದು ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಕರು ಬೆಳಗಾವಿಯಲ್ಲಿದ್ದಾರೆ.

by ಪ್ರತಿಧ್ವನಿ
October 12, 2025
Top Story

Basavaraj Bommai: ಸಂಭ್ರಮದಿಂದ ಬಂಕಾಪುರ ಹಿಂದೂ ಮಹಾಸಭಾ ಗಣೇಶ ವಿಸರ್ಜನೆ

by ಪ್ರತಿಧ್ವನಿ
October 12, 2025
Top Story

DK Shivakumar: ಇಂತ ಶಾಸಕರನ್ನು ಆಯ್ಕೆ ಮಾಡಿಕೊಂಡ ನಿಮ್ಮ ಪರಿಸ್ಥಿತಿ ಏನೆಂದು ನನಗೆ ಅರ್ಥವಾಗುತ್ತದೆ..!!

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

October 12, 2025

V Somanna: ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯ ವಿಚಾರಿಸಿದ ವಿ.ಸೋಮಣ್ಣ

October 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada