ದಯವಿಟ್ಟು ಕುರ್ಚಿ ಬಿಡಿ, ನಮಗೆ ಸರ್ಕಾರ ಬೇಕಿದೆ: ಅರುಂಧತಿ ರಾಯ್

ನಮಗೆ ಒಂದು ಸರ್ಕಾರ ಬೇಕಾಗಿದೆ. ತೀರಾ ಹತಾಷರಾಗಿ ಕೇಳುತ್ತಿದ್ದೇವೆ, ನಮಗೆ ಒಂದು ಸರ್ಕಾರ ಬೇಕಾಗಿದೆ. ಸದ್ಯಕ್ಕೆ ಅಂತಹ ಸರ್ಕಾರವೇ ಇಲ್ಲ. ನಾವು ಉಸಿರುಗಟ್ಟಿ ಸಾಯುತ್ತಿದ್ದೇವೆ. ಜೀವ ಉಳಿಸುವ ನೆರವು ಅಂಗೈಯಲ್ಲಿದ್ದರೂ, ಅದನ್ನು ಹೇಗೆ ಬಳಸಬೇಕು ಎಂಬ ಒಂದು ವ್ಯವಸ್ಥೆಯೇ ನಮ್ಮಲ್ಲಿ ಕುಸಿದು ಬಿದ್ದಿದೆ.

ಹಾಗಾಗಿ ಸದ್ಯಕ್ಕೆ, ಈ ಕ್ಷಣಕ್ಕೆ ಏನು ಮಾಡಬಹುದು?

ನಾವು 2024ರವರೆಗೆ ಕಾಯಲು ಆಗದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನನ್ನಂಥವರು ಹೀಗೆ ಯಾವುದಕ್ಕಾದರೂ ಗೋಗರೆಯಬೇಕಾದ ದುರ್ದಿನ ಬರಬಹುದು ಎಂದು ನಾವೆಂದೂ ನಿರೀಕ್ಷಿಸಿರಲಿಲ್ಲ.  ವೈಯಕ್ತಿಕವಾಗಿ, ನಾನು ಹೀಗೆ ಗೋಗರೆಯುವುದಕ್ಕಿಂತ ಜೈಲಿಗೆ ಹೋಗುವುದೇ ವಾಸಿ ಎಂದುಕೊಳ್ಳಬಲ್ಲೆ. ಆದರೆ, ಇವತ್ತು ನಾವು ನಮ್ಮ ಮನೆಗಳಲ್ಲಿ, ಬೀದಿಬೀದಿಗಳಲ್ಲಿ, ಆಸ್ಪತ್ರೆ, ಕಾರು, ಪಾರ್ಕು, ಮಹಾನಗರ, ಚಿಕ್ಕಪುಟ್ಟ ಪಟ್ಟಣ, ಹಳ್ಳಿ ಮೂಲೆ, ಹೊಲ, ಕಾಡುಮೇಡುಗಳಲ್ಲಿ ಹುಳುಗಳಂತೆ ಸಾಯುತ್ತಿದ್ದೇವೆ. ಇದನ್ನೆಲ್ಲಾ ಕಂಡು, ನಾನು, ಒಬ್ಬ ಸಾಮಾನ್ಯ ಮನುಷ್ಯಳಾಗಿ ನನ್ನ ಅಂತಹ ಅಹಂ ನುಂಗಿಕೊಂಡು ನನ್ನ ಕೋಟ್ಯಂತರ ಸಹ ಮಾನವರೊಂದಿಗೆ ದನಿ ಗೂಡಿಸುತ್ತಿದ್ದೇನೆ; ಪ್ಲೀಸ್ ಸರ್, ಪ್ಲೀಸ್.. ಕೆಳಗಿಳಿಯಿರಿ. ಕನಿಷ್ಟ ಈಗಲಾದರೂ ನೀವು ಕುರ್ಚಿ ಬಿಟ್ಟು ಇಳಿಯುವ ಮನಸ್ಸು ಮಾಡಿ. ಅಧಿಕಾರ ಬಿಡಿ ಎಂದು ನಾನು ನಿಮಗೆ ಗೋಗರೆಯುತ್ತಿದ್ದೇನೆ.

ಈ ಮಹಾ ಸಂಕಷ್ಟದ ಕಾರಣಕರ್ತರು ನೀವೇ. ನೀವೇ ಸೃಷ್ಟಿಸಿದ ಈ ಸಂಕಷ್ಟವನ್ನು ಈಗ ನಿಮ್ಮಿಂದ ಬಗೆಹರಿಸಲಾಗದು. ನೀವು ಈ ಪರಿಸ್ಥಿತಿಯನ್ನು ಇನ್ನಷ್ಟು ಭೀಕರಗೊಳಿಸಬಲ್ಲಿರಿ ಅಷ್ಟೇ. ಭಯ, ದ್ವೇಷ ಮತ್ತು ಮೌಢ್ಯದ ನಡುವೆ ಈ ಪೈಶಾಚಿಕ ವೈರಸ್ ಇನ್ನಷ್ಟು ಹುಲುಸಾಗಿ ಹಬ್ಬಲಿದೆ. ಇಂತಹ ವಾಸ್ತವದ ಬಗ್ಗೆ ಮಾತನಾಡುವವರ ದನಿ ಅಡಗಿಸಲು ನೀವು ಯತ್ನಿಸಿದಷ್ಟೂ ಈ ವೈರಸ್ ವ್ಯಾಪಕವಾಗಿ ಹರಡಲಿದೆ. ದೇಶದ ಕಟು ವಾಸ್ತವ ಸಂಗತಿಗಳು ಕೇವಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬೆಳಕು ಕಾಣಬಹುದಾದಷ್ಟು ಸ್ಥಳೀಯ ಮಾಧ್ಯಮಗಳನ್ನು ಯಶಸ್ವಿಯಾಗಿ ನೀವು ಪಳಗಿಸಿರುವುದರಿಂದ ಆ ವೈರಾಣು ಇನ್ನಷ್ಟು ಸೊಕ್ಕಲಿದೆ. ಒಬ್ಬ ಪ್ರಧಾನಮಂತ್ರಿ ತನ್ನ ಅವಧಿಯುದ್ದಕ್ಕೂ ಎಂದೂ ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸದೇ ಇರುವಾಗ, ಒಂದು ಪ್ರಶ್ನೆಯನ್ನೂ ಎದುರಿಸುವಷ್ಟು ಸಮರ್ಥನಿರದೇ ಇರುವಾಗ, ಕನಿಷ್ಟು ಇಂತಹ ಬಿಕ್ಕಟ್ಟಿನ ಹೊತ್ತಿನಲ್ಲೂ ಪತ್ರಿಕಾಗೋಷ್ಠಿ ನಡೆಸದೇ ಇರುವಾಗ, ಈ ವೈರಸ್ ಇನ್ನಷ್ಟು ವ್ಯಾಪಿಸಲಿದೆ. ಹಾಗಾಗಿ ನಿಮ್ಮಿಂದ ಈ ಅನಾಹುತದಿಂದ ದೇಶವನ್ನು ಪಾರು ಮಾಡಲಾಗದು.

ನೀವು ಪ್ರಧಾನಿ ಹುದ್ದೆ ಬಿಟ್ಟು ಹೋಗದೇ ಇದ್ದರೆ, ದೇಶದ ಸಾವಿರಾರು ಮಂದಿ ಅನಗತ್ಯವಾಗಿ ಹಾದಿಬೀದಿ ಹೆಣಗಳಾಗಲಿದ್ದಾರೆ. ಹಾಗಾಗಿ ದಯವಿಟ್ಟು ಹೊರ ನಡೆಯಿರಿ. ಜೋಳಿಗೆ ಎತ್ತಿಕೊಂಡು ಹೊರಡಿ. ನಿಮ್ಮ ಮರ್ಯಾದೆ , ಘನತೆಯನ್ನು ಉಳಿಸಿಕೊಂಡು ಈಗಲೇ ಹೊರಡಿ. ನಿಮಗೇ ಹೊರಗೆ ಬಹಳ ಉತ್ತಮ ಬದುಕು ಕಾದಿದೆ. ಧ್ಯಾನ, ಏಕಾಂತದ ಅದ್ಭುತ ಬದುಕು ಅದು. ಅಂತಹ ಬದುಕನ್ನೇ ಬಯಸುವುದಾಗಿ ಹಲವು ಬಾರಿ ನೀವೇ ಹೇಳಿದ್ದೀರಿ. ಹೀಗೆ ಸಾಮೂಹಿಕ ಸಾವುಗಳನ್ನು ನೋಡಿಕೊಂಡು ಕೈಚೆಲ್ಲಿ ಕೂತರೆ ಅಂತಹ ಒಂದು ನಿಮ್ಮ ಬಯಕೆಯ ಬದುಕೂ ಸಾಧ್ಯವಾಗುವುದಿಲ್ಲ.

ತಕ್ಷಣಕ್ಕೆ ನಿಮ್ಮ ಜಾಗ ತುಂಬಲು ನಿಮ್ಮದೇ ಪಕ್ಷದಲ್ಲಿ ಹಲವರು ಇದ್ದಾರೆ. ಇಂತಹ ಬಿಕ್ಕಟ್ಟಿನ ಹೊತ್ತಲ್ಲಿ ರಾಜಕೀಯ ವಿರೋಧಿಗಳಿದ್ದರೂ ಅವರನ್ನೂ ವಿಶ್ವಾಸಕ್ಕೆ ಪಡೆದು, ಅವರನ್ನು ಸೇರಿಸಿಕೊಂಡೇ ಮುನ್ನಡೆಯಬೇಕು. ಅದು ಯಾರೇ ಇರಲಿ,- ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನುಮೋದನೆಯೊಂದಿಗೆ ನಿಮ್ಮ ಪಕ್ಷದವರೇ ಆದರೂ- ಅವರು ಸರ್ಕಾರದ ನೇತೃತ್ವ ವಹಿಸಬಹುದು ಮತ್ತು ಬಿಕ್ಕಟ್ಟು ನಿರ್ವಹಣೆಗಾಗಿ ಒಂದು ಪ್ರಬಲ ಸಮಿತಿಯನ್ನು ತಮ್ಮೊಂದಿಗೆ ಇಟ್ಟುಕೊಂಡು ಬಿಕ್ಕಟ್ಟು ಪರಿಹಾರಕ್ಕೆ ಯತ್ನಿಸಬಹುದು.

ಹಾಗೇ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಕೆಲವು ಆಯ್ದ ಜನಪ್ರತಿನಿಧಿಗಳನ್ನು ಆಯ್ಕೆಮಾಡಿ- ಎಲ್ಲಾ ಪಕ್ಷಗಳಿಗೂ ಪ್ರಾತಿನಿಧ್ಯ ಸಿಗುವಂತೆ- ಕಳಿಸಬಹುದು. ಒಂದು ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಕೂಡ ಆ ಸಮಿತಿಯಲ್ಲಿ ಪ್ರಾತಿನಿಧ್ಯ ಹೊಂದಬಹುದು. ಜೊತೆಗೆ ವಿಜ್ಞಾನಿಗಳು, ಸಾರ್ವಜನಿಕ ಆರೋಗ್ಯ ವಲಯದ ತಜ್ಞರು, ವೈದ್ಯರು, ಅನುಭವೀ ಅಧಿಕಾರಿಗಳೂ ಆ ಸಮಿತಿಯ ಭಾಗವಾಗಬಹುದು. ಇಂತಹ ವ್ಯವಸ್ಥೆ ನಿಮಗೆ ಅರ್ಥವಾಗದೇ ಇರಬಹುದು. ಆದರೆ, ನಿಜವಾದ ಪ್ರಜಾಪ್ರಭುತ್ವ ಎಂದರೆ ಇದೇ. ಪ್ರತಿಪಕ್ಷ ಮುಕ್ತ ಪ್ರಜಾಪ್ರಭುತ್ವ ಎಂಬುದು ಇಲ್ಲ. ಅಂತಹ ವ್ಯವಸ್ಥೆಯನ್ನು ದುರಾಡಳಿತ ಎನುತ್ತಾರೆ. ಈ ವೈರಸ್ ಕೂಡ ದುರಾಡಳಿತವನ್ನು ಬಹಳ ಇಷ್ಟಪಡುತ್ತದೆ.

ನೀವು ಈಗಲೇ ಕುರ್ಚಿ ಬಿಟ್ಟು ಹೊರನಡೆಯದೇ ಇದ್ದರೆ; ಈಗಾಗಲೇ ಈ ಸಾಂಕ್ರಾಮಿಕವನ್ನು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಪರಿಗಣಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಅದು ಇಡೀ ಜಗತ್ತಿಗೇ ಅಪಾಯಕಾರಿ ಎಂದು ಭಾವಿಸುತ್ತಿರುವ(ಅದು ನಿಜ ಕೂಡ) ಹಿನ್ನೆಲೆಯಲ್ಲಿ, ನಿಮ್ಮ ಅಸಮರ್ಥತೆ ಮತ್ತು ಹೊಣೆಗೇಡಿತನ, ಬೇರೆ ದೇಶಗಳು ನಮ್ಮ ಆಂತರಿಕ ವಿಷಯದಲ್ಲಿ ಮೂಗು ತೂರಿಸಲು ಮತ್ತು ಅಂತಹ ಪ್ರಯತ್ನ ಮಾಡಲು ಒಂದು ಸಕಾರಣವಾಗುತ್ತದೆ. ಅದು ಅಂತಿಮವಾಗಿ ಸಾರ್ವಭೌಮತೆಗಾಗಿ ನಾವು ನಡೆಸಿದ ಕಠಿಣ ಹೋರಾಟವನ್ನು ಮಣ್ಣುಗೂಡಿಸುತ್ತದೆ. ನಾವು ಮತ್ತೊಮ್ಮೆ ಮತ್ತೊಬ್ಬರ ವಸಾಹುತವಾಗುತ್ತೇವೆ. ಇದು ನಿಜಕ್ಕೂ ಭಯಾನಕ ಸಾಧ್ಯತೆ. ಇದನ್ನು ತಳ್ಳಿಹಾಕಲೇಬೇಡಿ.

ಹಾಗಾಗಿ, ದಯವಿಟ್ಟು ಅಧಿಕಾರ ಬಿಟ್ಟು ಇಳಿಯಿರಿ. ಈ ಹೊತ್ತಿನಲ್ಲಿ ನೀವು ಮಾಡಬಹುದಾದ ಬಹಳ ಜವಾಬ್ದಾರಿಯುತ ಕಾರ್ಯ ಅದೊಂದೇ. ನಮ್ಮ ಪ್ರಧಾನ ಮಂತ್ರಿಯಾಗಿ ಮುಂದುವರಿಯುವ ನೈತಿಕ ಹಕ್ಕನ್ನು ನೀವು ಈಗಾಗಲೇ ಅಡವಿಟ್ಟಿದ್ದೀರಿ. ಹಾಗಾಗಿ, ಕುರ್ಚಿ ಬಿಟ್ಟು ಹೊರಡದೇ ಇನ್ನೇನು ಉಳಿದಿಲ್ಲ.

(‘ಸ್ಕ್ರಾಲ್ ಇನ್’ ವೆಬ್ ಪೋರ್ಟಲ್ ನಲ್ಲಿ ಪ್ರಕಟವಾಗಿರುವ ಬರಹದ ಯಥಾ ರೂಪ)

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...