ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ‘ವಿಶ್ವಾಸಾರ್ಹ’ ಸರಬರಾಜು ಸರಪಳಿಗಳ ಬಗ್ಗೆ ಮಾತನಾಡಿದ್ದಾರೆ. ಕಳೆದ ವರ್ಷ ಜಿ -20 ನಲ್ಲಿ ಸಹ, ಜಾಗತಿಕ ಪೂರೈಕೆ ಸರಪಳಿಗಳು ‘ನಂಬಿಕೆ, ಪಾರದರ್ಶಕತೆ, ಮತ್ತು ನಿಗದಿತ ಸಮಯ’ ವನ್ನು ಅವಲಂಬಿಸಿವೆ ಎಂದು ಅವರು ಹೇಳಿದ್ದರು. ಜಪಾನ್, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾವನ್ನು ಸಹ ಅವರು ಇದೇ ರೀತಿ ಭಾರತವನ್ನು ನಂಬಿಕಸ್ಥ ವ್ಯಾಪಾರ ಪಾಲುದಾರರನ್ನಾಗಿಸಲು ಕೇಳಿಕೊಂಡಿದ್ದಾರೆ. ಭಾರತದಂತಹ ದೇಶಗಳು ವಿಶ್ವಾಸಾರ್ಹತೆಯನ್ನು ಕೇಂದ್ರೀಕರಿಸುವ ಮೂಲಕ ಮಾತ್ರ ಚೀನಾದಂತಹ ಬೃಹತ್ ಉದ್ಯಮಿ ದೇಶಗಳಿಗೆ ಪೈಪೋಡಿ ನೀಡಲು ಸಾಧ್ಯ ಎನ್ನುವುದೂ ಸತ್ಯವೇ ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಪ್ರಮುಖ ಪಾತ್ರ ವಹಿಸುವ ಭಾರತ ಇತ್ತೀಚೆಗೆ ಅನಿರೀಕ್ಷಿತವಾಗಿ ಸಕ್ಕರೆ ಮತ್ತು ಗೋಧಿಗಳ ರಫ್ತನ್ನು ನಿರ್ಬಂಧಿಸಿತು. ಮುಂದೆ ಅಕ್ಕಿಯ ಮೇಲೂ ನಿರ್ಬಂಧ ಹೇರುವ ಯೋಚನೆಯೂ ಸರ್ಕಾರಕ್ಕೆ ಇದೆ ಎನ್ನಲಾಗುತ್ತಿದೆ. ಭಾರತವು ಸಕ್ಕರೆ ರಫ್ತು ಮಾಡುವ ಎರಡನೇ ಅತಿ ದೊಡ್ಡ ದೇಶವಾಗಿದ್ದರೆ, ಗೋಧಿ ಉತ್ಪಾದಿಸುವ ಎರಡನೇ ಅತಿ ದೊಡ್ಡ ದೇಶವಾಗಿದೆ. ಭಾರತ ರಫ್ತಿನ ಮೇಲೆ ನಿರ್ಬಂಧ ಹೇರುತ್ತಿದ್ದಂತೆ ವಿಶ್ವ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆ ಆರು ಶೇಕಡಾ ಹೆಚ್ಚಾಯಿತು.
ಭಾರತದಂತಹ ದೇಶದಲ್ಲಿ ಆಹಾರ ಬೆಲೆಗಳು ನಿರ್ಣಾಯಕವಾಗಿದೆ. ಆಹಾರದ ಉತ್ಪನ್ನಗಳು ಅರ್ಧದಷ್ಟು ಗ್ರಾಹಕ ಬೆಲೆ ಸೂಚ್ಯಂಕವನ್ನು ಒಳಗೊಂಡಿರುವ ಪ್ರಪಂಚದ ಕೆಲವು ದೇಶಗಳಲ್ಲಿ ಒಂದಾಗಿದೆ ಭಾರತ. ಆಹಾರ ಬೆಲೆಗಳನ್ನು ನಿಯಂತ್ರಿಸದಿದ್ದರೆ ಇಲ್ಲಿ ಹಣದುಬ್ಬರ ನಿಯಂತ್ರಣ ಮೀರುವ ಮತ್ತು ಮ್ಯಾಕ್ರೋ ಇಕಾನಾಮಿಕ್ಸ್ ಅಸ್ಥಿರವಾಗುವ ಅಪಾಯವಿದೆ.
ಆದರೆ ರಫ್ತು ನಿಷೇಧವೊಂದೇ ಆಹಾರ ಹಣದುಬ್ಬರವನ್ನು ನಿರ್ವಹಿಸುವ ಮಾರ್ಗವಲ್ಲ. ಅಲ್ಲದೆ, ಭಾರತದ ವ್ಯಾಪಾರಿ ವಿರೋಧಿ ಇತರ ನೀತಿಗಳ ಬಗ್ಗೆ ಸರ್ಕಾರದ ಬಳಿ ಯಾವ ಸಮರ್ಥನೆ ಇದೆ? ಕಳೆದ ತಿಂಗಳು ಉಕ್ಕಿನ ಉತ್ಪನ್ನಗಳಿಗೆ ರಫ್ತು ತೆರಿಗೆಗಳಲ್ಲಾದ ಅನಿರೀಕ್ಷಿತ ಮತ್ತು ಅನಿಯಂತ್ರಿತ ಹೆಚ್ಚಳದಿಂದ ಭಾರತದ ಉಕ್ಕಿನ ಉದ್ಯಮವು ಇನ್ನೂ ಚೇತರಿಸಿಕೊಂಡಿಲ್ಲ. ಟಾಟಾ ಸ್ಟೀಲ್ ಲಿಮಿಟೆಡ್ನ ಶೇರ್ ಬೆಲೆಗಳು ಶೇಕಡಾ 15 ರಷ್ಟು ಕೆಳಗಿಳಿದರೆ Steel Authority of India Ltdನ ಶೇರುಗಳು ಅದಕ್ಕಿಂತಲೂ ಹೆಚ್ಚು ಇಳಿದವು. ಕಾಗದ ಉದ್ಯಮಕ್ಕೂ ಸರ್ಕಾರ ಇದೇ ರೀತಿಯ ನೀತಿಯನ್ನು ಅನ್ವಯಿಸಿತು. ಎರಡು ವರ್ಷಗಳ ಜಾಗತಿಕ ಬೆಲೆ ಹೆಚ್ಚಳದಿಂದಾಗಿ ನಷ್ಟದಲ್ಲಿದ್ದ ಕಾಗದೋದ್ಯಮಕ್ಕೆ ಚೇತೋಹಾರಿ ಕ್ರಮಕೈಗೊಳ್ಳಬೇಕಾಗಿದ್ದ ಸರ್ಕಾರ ವ್ಯತಿರಿಕ್ತವಾಗಿ ಪ್ರತಿ ಕಾಗದ ಆಮದಿಗೂ ಪೂರ್ವ ನೋಂದಣಿ ಅಗತ್ಯವಿದೆ ಎಂದು ಹೊಸ ನಿಯಮ ರೂಪಿಸಿತು.
ತನ್ನ ಪ್ರತಿ ವ್ಯಾಪಾರಿ ವಿರೋಧಿ ನೀತಿಯನ್ನು ಈ ಸರ್ಕಾರವು ‘ಮೇಲ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ್’ ಹೆಸರಲ್ಲಿ ಸಮರ್ಥಿಸಿಕೊಳ್ಳುತ್ತಿದೆವಾದ, ಚರ್ಚೆ, ಹೇಳಿಕೆ, ಘೋಷಣೆಗಳಿಗಿಂತ ಸ್ಥಿರವಾದ ವ್ಯಾಪಾರ ನೀತಿಯು ಉತ್ಪಾದಕತೆ ಮತ್ತು ಹೂಡಿಕೆಗೆ ಸಹಾಯ ಮಾಡುತ್ತದೆ ಎಂಬುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಭಾರತದ ವ್ಯಾಪಾರ ನೀತಿಯು ಅಸಮರ್ಪಕವಾಗಿರುವುದು ಮಾತ್ರವಲ್ಲ ತನ್ನದೇ ನೀತಿಗೆ ವಿರೋಧಾತ್ಮಕವಾಗಿಯೂ ಇದೆ. ಉದಾಹರಣೆಗೆ, ಸರ್ಕಾರವು ಮೊದಲು ಉಕ್ಕಿನ ಸುಂಕಗಳನ್ನು ಹೆಚ್ಚಿಸಿತು, ನಂತರ ಅದು ರಫ್ತುಗಳಿಗೆ ಸಬ್ಸಿಡಿ ನೀಡಿ ಉಕ್ಕಿನ ಉದ್ಯಮಕ್ಕೆ ಕಠಿಣ ಗುರಿಗಳನ್ನು ನಿಗದಿಪಡಿಸಿತು, ಮತ್ತು ನಂತರ ಅದು ದೇಶೀಯ ಬೆಲೆಗಳನ್ನು ನಿಯಂತ್ರಿಸಲು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ತೆರಿಗೆಯನ್ನು ವಿಧಿಸಿತು.
ಇವುಗಳು ಖಂಡಿತವಾಗಿಯೂ ನಂಬಿಕೆಯನ್ನು ಗಳಿಸಿಕೊಳ್ಳುವ ರೀತಿಯ ನಿರ್ಧಾರಗಳಲ್ಲ. ಹೀಗೆ ನಿಯಮಗಳನ್ನು ಆಗಾಗ ಬದಲಾಯಿಸುತ್ತಿದ್ದರೆ ಭಾರತೀಯ ಉಕ್ಕಿನ ದೀರ್ಘಾವಧಿಯ ಒಪ್ಪಂದಕ್ಕೆ ಯಾರು ಸಹಿ ಹಾಕುತ್ತಾರೆ? ತನ್ನ ವ್ಯಾಪಾರ ನೀತಿ ಅಸಮರ್ಪಕವಾಗಿರುವ ವರೆಗೂ ಚೀನಾದಿಂದ ಹೂಡಿಕೆಯನ್ನು ಕಿತ್ತುಕೊಳ್ಳಲು ಭಾರತಕ್ಕೆ ಸಾಧ್ಯವಿಲ್ಲ.
ಭಾರತದ ಇಂತಹ ರಕ್ಷಣಾತ್ಮಕ ನೀತಿಯು ಕೇವಲ ಭಾರತೀಯರಿಗೆ ನಷ್ಟ ಉಂಟುಮಾಡುವುದಿಲ್ಲ. ಇದರ ಪ್ರಭಾವ ಇಡೀ ಪ್ರಪಂಚದ ಮೇಲಾಗುತ್ತದೆ. ಹಸಿವಿನ ವಿರುದ್ಧದ ಜಾಗತಿಕ ಸುರಕ್ಷತಾ ಕ್ರಮಗಳು ಭಾರತದಂತಹ ದೊಡ್ಡ ಆಹಾರ ಉತ್ಪಾದಕ ದೇಶಗಳನ್ನು ಅವಲಂಬಿಸಿದೆ. ರಪ್ತು ನಿಷೇಧದಂತಹ ನಿರ್ಧಾರಗಳು ಇಡೀ ಜಗತ್ತಿನ ಆಹಾರದ ಮೇಲೆ ಪ್ರಭಾವ ಬೀರುತ್ತವೆ. ಈ ವರ್ಷದ ಕೊನೆಯಲ್ಲಿ G-20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿರುವ ಭಾರತವು ತನ್ನನ್ನು ಜಾಗತಿಕ ನಾಯಕನಾಗಿ ಪರಿಗಣಿಸಬೇಕೆಂದು ಬಯಸುತ್ತಿದ್ದರೆ, ನಮ್ಮ ನೀತಿಗಳ ಜಾಗತಿಕ ಪರಿಣಾಮವನ್ನು ನಾವು ಗಣನೆಗೆ ತೆಗೆದುಕೊಳ್ಳಲೇಬೇಕಾಗುತ್ತದೆ.
ಮೋದಿ ಅವರೇ ಭಾರತದ ಬಗೆಗಿನ, ಸ್ವತಃ ತಮ್ಮ ಬಗೆಗಿನ ಅಂತಾರಾಷ್ಟ್ರೀಯ ಇಮೇಜ್ನ ಬಗ್ಗೆ ವಿಪರೀತ ಒಲವು ಹೊಂದಿರುವವರು . ಆದರೂ ಸರ್ಕಾರಿ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ವೈಪರೀತ್ಯದ ನಿರ್ಧಾರಗಳನ್ನೇ ಕೈಗೊಳ್ಳುತ್ತಾರೆ. ಕಳೆದ ವರ್ಷ ಜಗತ್ತಿಗೆ ಲಸಿಕೆ ಹಾಕುತ್ತದೆ ಎಂದು ಭರವಸೆ ನೀಡಿ, ಡೆಲ್ಟಾ ರೂಪಾಂತರವು ಭಾರತಾದ್ಯಂತ ಹರಡುತ್ತಿದ್ದಂತೆ ಲಸಿಕೆ ರಫ್ತಿನ ಮೇಲೆ ನಿರ್ಬಂಧ ಹೇರಿದರು. ಏಪ್ರಿಲ್ನಲ್ಲಿ, ಅವರು “ಜಗತ್ತಿಗೆ ಆಹಾರವನ್ನು ನೀಡುವುದಾಗಿ” ಮತ್ತು “ನಾಳೆಯಿಂದ ಪರಿಹಾರವನ್ನು ಕಳುಹಿಸುವುದಾಗಿ” ಭರವಸೆ ನೀಡಿ ವಾರಗಳೊಳಗೆ ಗೋಧಿ ವ್ಯಾಪಾರಕ್ಕೂ ನಿರ್ಬಂಧ ಹೇರಿದರು. ಇಂತಹ ಪ್ರವೃತ್ತಿಗಳನ್ನು ಕನಿಷ್ಠ ದೇಶದ ಹೊರಗಾದರೂ ನಿಲ್ಲಿಸದಿದ್ದರೆ ಈಗಾಗಲೇ ಕುಸಿದಿರುವ ದೇಶದ ವಿಶ್ವಾಸಾರ್ಹತೆ ಮತ್ತಷ್ಟು ಕುಸಿಯಬಹುದು.