ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಕುರಿತು ಭಾರತವು ಕಾದು ನೋಡುವ ನೀತಿಯನ್ನು ಅನುಸರಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರೊಂದಿಗೆ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಅಲ್ಲಿಂದ ರಕ್ಷಿಸಲು ನಡೆಸುವ ಕಾರ್ಯಾಚರಣೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು, ಎಂದು ವಿದೇಶಾಂಗ ಇಲಾಖೆ ಸಚಿವ ಡಾ. ಎಸ್ ಜೈಶಂಕರ್ ಅವರು ಹೇಳಿದ್ದಾರೆ.
31 ಪಕ್ಷಗಳ 37 ಸದಸ್ಯರು ಭಾಗಿಯಾಗಿದ್ದ ಸಭೆಯು ಸತತ ಮೂರೂವರೆ ಗಂಟೆಗಳ ಕಾಲ ನಡೆದಿದೆ. ಸಚಿವ ಜೈಶಂಕರ್ ಅವರ ಅಧ್ಯಕ್ಷೆತಯಲ್ಲಿ ನಡೆದ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿ ಹರ್ಷ್ ಶ್ರಿಂಗ್ಲಾ ಅವರು ಅಲ್ಲಿನ ಪರಿಸ್ಥಿತಿಯ ಕುರಿತು ವಾಸ್ತಾವಿಕ ಚಿತ್ರಣವನ್ನು ಸಭೆಯ ಸದಸ್ಯರಿಗೆ ವಿವರಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಆನಂದ್ ಶರ್ಮಾ ಸಭೆಯಲ್ಲಿ ಭಾಗವಹಿಸಿದ್ದರು. ಎನ್ ಸಿ ಪಿಯ ಶರದ್ ಪವಾರ್, ಟಿಎಂಸಿಯ ಸೌಗತಾ ರಾಯ್ ಹಾಗೂ ಸುಖೇಂದು ಶೇಖರ್ ರಾಯ್, ಜೆಡಿಎಸ್’ನ ದೇವೇಗೌಡ, ಡಿಎಂಕೆ ಸಂಸದರಾದ ತಿರುಚ್ಚಿ ಸಿವ ಹಾಗೂ ಟಿ ಆರ್ ಬಾಲು, ಟಿಆರ್ಎಸ್’ನ ನಾಮ ನಾಗೇಶ್ವರ ರಾವ್, ಟಿಡಿಪಿಯ ಜಯದೇವ ಗಲ್ಲಾ, ಸಿಪಿಐ ಸಂಸದ ಬಿನೋಯ್ ವಿಸ್ವಂ ಸೇರಿದಂತೆ ಇತರೆ ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ಪರವಾಗಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಹಾಗೂ ಪ್ರಹ್ಲಾದ್ ಜೋಷಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.
“ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಕುರಿತು ಎಲ್ಲರಲ್ಲಿಯೂ ಸಮಾನ ಚಿಂತನೆಯಿದೆ ಎಂಬ ಸಂದೇಶವನ್ನು ನಾವು ಕೊಡಲು ಬಯಸುತ್ತೇವೆ. ಅಫ್ಘಾನಿಸ್ತಾನದೊಂದಿಗಿನ ನಮ್ಮ ಸ್ನೇಹ ಬಹಳ ಮುಖ್ಯವಾದದ್ದು. ರಾಷ್ಟ್ರೀಯ ಏಕತೆಯ ದೃಷ್ಟಿಯಿಂದ ನಾವು ಈ ಪರಿಸ್ಥಿತಿಯ ಕುರಿತು ನಿರ್ಧಾರವನ್ನು ತಾಳಲಿದ್ದೇವೆ,” ಎಂದು ಜೈಶಂಕರ್ ಅವರು ಸಭೆಯ ಬಳಿಕ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ವಿಶ್ವದ ಇತರೆ ದೇಶಗಳಂತೆ ಭಾರತವು ಕಾದು ನೋಡುವ ನಿಲುವನ್ನು ತಾಳಬೇಕು. ಏಕೆಂದರೆ ಪ್ರಸ್ತುತ ಪರಿಸ್ಥಿತಿ ನಿಜಕ್ಕೂ ಆತಂಕಕಾರಿಯಾಗಿದೆ, ಎಂಬ ವಿಚಾರದ ಕುರಿತು ಚರ್ಚೆಯಾಗಿದೆ.
“ಇದೊಂದು ಬೆಳವಣಿಗೆ ಕಾಣುವಂತಹ ಪರಿಸ್ಥಿತಿಯಾಗಿದೆ. ಹೀಗಾಗಿ, ಎಲ್ಲರಲ್ಲಿಯೂ ನಾವು ವಿನಂತಿಸಿಕೊಳ್ಳುವುದು ಏನೆಂದರೆ, ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ತಲುಪುವವರೆಗೂ ಎಲ್ಲರೂ ಸಮಾಧಾನದಿಂದ ಇರಬೇಕು. ಸಾಮಾನ್ಯ ಸ್ಥಿತಿಗೆ ಅಫ್ಘಾನ್ ಮರಳಿದ ಬಳಿಕ ಭಾರತ ತನ್ನ ನಿಲುವನ್ನು ಪ್ರಕಟಿಸಲಿದೆ,” ಎಂದು ಜೈಶಂಕರ್ ಹೇಳಿದ್ದಾರೆ.
ಸಭೆಯಲ್ಲಿ ರಾಜ್ಯಸಭೆ ಪ್ರತಿಪಕ್ಷ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು, ಅಫ್ಘಾನ್ ಮಹಿಳಾ ಸಂಸದೆಯನ್ನು ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಗಡಿಪಾರು ಮಾಡಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
“ಅಫ್ಘಾನ್ ಮಹಿಳಾ ಸಂಸದೆಯನ್ನು ವಿಮಾನ ನಿಲ್ದಾಣದಿಂದಲೇ ಗಡಿಪಾರು ಮಾಡಿರುವ ವಿಚಾರವನ್ನು ನಾವು ಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಇದಕ್ಕೆ ಸಚಿವ ಜೈಶಂಕರ್ ಅವರು ಸೂಕ್ತ ಉತ್ತರವನ್ನೂ ನೀಡಿದ್ದಾರೆ. ಇದೊಂದು ಪ್ರಮಾದವಾಗಿದ್ದು, ಭವಿಷ್ಯದಲ್ಲಿ ಇಂತಹ ಪ್ರಮಾದ ಜರುಗದಂತೆ ಎಚ್ಚರಿಕೆ ವಹಿಸಿಕೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ,” ಎಂದು ಖರ್ಗೆ ತಿಳಿಸಿದ್ದಾರೆ.
ಇದರೊಂದಿಗೆ, ಅಫ್ಘಾನಿಸ್ತಾನದ ನಾಗರಿಕರ ಸುರಕ್ಷತೆ ಹಾಗೂ ಭಾರತದಲ್ಲಿ ವ್ಯಾಸಂಗ ಮಾಡುತ್ತಿರುವ ಅಫ್ಘಾನ್ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸುವಂತೆ ವಿಪಕ್ಷಗಳು ಸರ್ಕಾರವನ್ನು ಆಗ್ರಹಿಸಿವೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ. ಅವರ ಭರವಸೆ ಎಷ್ಟ ಮಟ್ಟಿಗೆ ಕಾರ್ಯರೂಪಕ್ಕೆ ಬರುತ್ತದೆ ಎಂದು ನಂತರ ತಿಳಿಯುತ್ತದೆ. ಅಫ್ಘಾನ್’ನಲ್ಲಿ ನಡೆಯುತ್ತಿರುವ ಬೆಳೆವಣಿಗೆಗಳು ಸಂಪೂರ್ಣ ದೇಶದ ಹಿತಕ್ಕೆ ಸಂಬಂಧಿಸಿದ್ದಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಹಾಗೂ ಸಮಾನ ಮನಸ್ಥಿತಿಯಿಂದ ಈ ಪರಿಸ್ಥಿತಯನ್ನು ನಿಭಾಯಿಸಲು ಸಿದ್ದರಿದ್ದೇವೆ, ಎಂದು ಖರ್ಗೆ ಹೇಳಿದ್ದಾರೆ.

ಸಭೆಯಿಂದ ವಿಪಕ್ಷಗಳಿಗೆ ಸಮಾಧಾನವಾಗಿದೆಯೇ ಎಂಬ ಪ್ರಶ್ನೆಗೆ ಉತ್ತಿರಿಸಿರುವ ಖರ್ಗೆ, ನಾವು ಕಾದು ನೋಡುತ್ತೇವೆ. ಸರ್ಕಾರ ನಮ್ಮ ಪ್ರಶ್ನೆಗಳಿಗೆ ಉತ್ತರವನ್ನೇನೋ ನೀಡಿದೆ. ಅವುಗಳು ಕಾರ್ಯರೂಪಕ್ಕೆ ಬರಬೇಕಿವೆ. ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸರ್ಕಾರ ಹೇಗೆ ರಕ್ಷಿಸುತ್ತದೆ ಎಂಬುದು ನೋಡಬೇಕಿದೆ. ಆ ಬಳಿಕ, ಇತರೆ ದೇಶಗಳ ನಿಲುವಿನೊಂದಿಗೆ ಭಾರತದ ನಿಲು ಕೂಡಾ ತಿಳಿಯಲಿದೆ, ಎಂದು ಉತ್ತರಿಸಿದ್ದಾರೆ.
ಸಂಪೂರ್ಣ ದೇಶಕ್ಕೆ ಸಂಬಂಧಿಸಿದ ಮಹತ್ವದ ಸಭೆಯಲ್ಲಿ ಪ್ರಧಾನಿ ಮೋದಿ ಗೈರು ಹಾಜರಿಯನ್ನು ವಿಪಕ್ಷಗಳು ಖಂಡಿಸಿವೆ. ವಾಜಪೇಯಿ ಅವರ ಉದಾಹರಣೆಯನ್ನು ನೀಡಿ ಪ್ರಧಾನಿ ಮೋದಿ ನಡೆಯನ್ನು ಮಲ್ಲಿಕಾರ್ಜುನ ಖರ್ಗೆ ಸಭೆಯಲ್ಲಿಯೇ ಖಂಡಿಸಿದ್ದಾರೆ.