ವಿಕೆಟ್ ಕೀಪರ್ ರಿಷಭ್ ಪಂತ್ ಶತಕ ಹಾಗೂ ರವೀಂದ್ರ ಜಡೇಜಾ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಉತ್ತಮ ಮೊತ್ತದತ್ತ ಸಾಗಿದೆ.
ಬರ್ಮಿಂಗ್ ಹ್ಯಾಮ್ ನಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ.
ಮಳೆಯ ಅಡ್ಡಿ ನಡುವೆ ಮುಂದುವರಿದ ಪಂದ್ಯದಲ್ಲಿ ಭಾರತ ಒಂದು ಹಂತದಲ್ಲಿ 98 ರನ್ ಗೆ 5 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಹಂತದಲ್ಲಿ ಜೊತೆಯಾದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ 6ನೇ ವಿಕೆಟ್ ಗೆ 230 ರನ್ ಜೊತೆಯಾಟದ ಮೂಲಕ ತಂಡವನ್ನು ಆಧರಿಸಿದರು.
ರಿಷಭ್ ಪಂತ್ 89 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಶತಕ ಪೂರೈಸಿದರು. ಇದು ಪಂತ್ ಅವರ 5ನೇ ಟೆಸ್ಟ್ ಶತಕವಾಗಿದೆ. ಪಂತ್ 111 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಒಳಗೊಂಡ 146 ರನ್ ಗಳಿಸಿದ್ದಾಗ ರೂಟ್ ಎಸೆತದಲ್ಲಿ ಔಟಾದರು. ಮತ್ತೊಂದೆಡೆ ಪಂತ್ ಗೆ ಉತ್ತಮ ಬೆಂಬಲ ನೀಡಿದ ಜಡೇಜಾ 163 ಎಸೆತಗಳಲ್ಲಿ 10 ಬೌಂಡರಿ ಒಳಗೊಂಡ 83 ರನ್ ಬಾರಿಸಿ ಔಟಾಗದೇ ಉಳಿಯುವ ಮೂಲಕ ಹೋರಾಟವನ್ನು ಮುಂದುವರಿಸಿದ್ದಾರೆ.
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 3 ವಿಕೆಟ್ ಕಿತ್ತರೆ, ಮ್ಯಾಥ್ಯೂ ಪಾಟ್ಸ್ 2 ಮತ್ತು ಜೋ ರೂಟ್ 1 ವಿಕೆಟ್ ಗಳಿಸಿದರು.