ಕರ್ನಾಟಕ ವಿಧಾನಸಭಾ ಚುನಾವಣೆಗೆ 10 ತಿಂಗಳು ಬಾಕಿ ಇರುವಾಗ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೌದು, ಮುಂದಿನ ವಿಧಾನಸಭಾ ಚುನಾವಣೆ ಹಿನ್ನೆಲೆ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಸರಣಿ ಸಭೆಗಳು ನಡೆಸಿರುವುದೇ ಈ ಚರ್ಚೆಗೆ ಕಾರಣವಾಗಿದೆ.
ಸಭೆಯಲ್ಲಿ ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಮತ್ತು ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕೂಡ ಭಾಗವಹಿಸಿದ್ದು, ಮುಂಬರುವ ಚುನಾವಣೆಯ ಕಾರ್ಯತಂತ್ರವನ್ನು ರೂಪಿಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ರಾಹುಲ್ ಗಾಂಧಿಯೊಂದಿಗೆ ಪರಸ್ಪರ ಸಭೆ ನಡೆಸಿದ್ದಾರೆ.
ರಾಜ್ಯ ಘಟಕದಲ್ಲಿನ ಭಿನ್ನಾಭಿಪ್ರಾಯ ಶಮನಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರನ್ನು ಕರೆಸಿಕೊಳ್ಳಲಾಗಿದೆ ಎಂಬುದು ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿನ ಗುಸುಗುಸು. ಆದರೆ, ನನ್ನ ಮತ್ತು ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಮುಂದುವರೆದು, ನಮ್ಮ ಸಭೆಗಳು (ರಾಹುಲ್ ಗಾಂಧಿಯವರೊಂದಿಗೆ) ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಮಾತ್ರ. ಒಗ್ಗಟ್ಟಿನಿಂದ ಕಾಂಗ್ರೆಸ್ ಚುನಾವಣೆ ಎದುರಿಸಲಿದ್ದೇವೆ ಎಂದು ಹೇಳಿದ್ದಾರೆ.
ಸಿಎಂ ಅಭ್ಯರ್ಥಿ ಹಾಗೂ ಸಂಘಟನಾ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಆದರೆ ಪಕ್ಷದ ಮೂಲಗಳ ಪ್ರಕಾರ, “ಸಿಎಂ ಯಾರು ಎಂಬುದನ್ನು ಘೋಷಿಸದೇ , ನಾವು ಒಗ್ಗಟ್ಟಿನಿಂದ ಚುನಾಔಣೆ ಎದುರಿಸುತ್ತೇವೆ ಎಂದು ನಿರ್ಧರಿಸಲಾಗಿದೆ” ಎಂದು ರಾಜ್ಯ ಕಾಂಗ್ರೆಸ್ ನ ಇಬ್ಬರೂ ಪ್ರಮೂಕ ನಾಯಕರು ಒಪ್ಪಿಕೊಂಡಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಸಭೆಗಳಲ್ಲಿ, ಆಂತರಿಕ ಸಮೀಕ್ಷೆಯ ಕುರಿತು ಕರ್ನಾಟಕದ ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ರಾಹುಲ್ ಗಾಂಧಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಸಭೆಗಳಲ್ಲಿ ಉಪಸ್ಥಿತರಿದ್ದ ನಾಯಕರೊಬ್ಬರು ಇಂಡಿಯಾ ಟುಡೇ ಟಿವಿಗೆ, “ಇಂದು ಚುನಾವಣೆ ನಡೆದರೆ ಕಾಂಗ್ರೆಸ್ ಸುಮಾರು 120 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತದೆ” ಎಂದು ಹೇಳಿದ್ದಾರೆ
ಕರ್ನಾಟಕ ಕಾಂಗ್ರೆಸ್ 2023 ರ ಚುನಾವಣಾ ಪರಿಶೀಲನಾ ಸಭೆಯಲ್ಲಿ, ಪಕ್ಷವು ಮನೆ-ಮನೆಗೆ ಪ್ರಚಾರ ಮಾಡಲು ಹೆಚ್ಚು ಗಮನ ಹರಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಭಾರತ್ ಜೋಡೋ ಯಾತ್ರೆಯ ಅಡಿಯಲ್ಲಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ನಾಯಕರು ಕರ್ನಾಟಕದ ಒಳನಾಡಿನಲ್ಲಿ ಪ್ರವಾಸ ಮಾಡಿ ಸುಮಾರು ಒಂದು ತಿಂಗಳ ಕಾಲ ಪ್ರಚಾರ ಮಾಡಲು ಕಾಂಗ್ರೆಸ್ ಯೋಜಿಸಿದೆ. ಭಾರತ್ ಜೋಡೋ ಯಾತ್ರೆ ಅಕ್ಟೋಬರ್ 2 ರಿಂದ ಪ್ರಾರಂಭವಾಗುತ್ತದೆ. ಕಾಂಗ್ರೆಸ್‌ನ ಇತರ ಉನ್ನತ ನಾಯಕರೊಂದಿಗೆ ಗಾಂಧಿ ಪರಿವಾರ ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ ನಡೆಯಲಿದ್ದಾರೆ.
ಏತನ್ಮಧ್ಯೆ, ಕೇಂದ್ರ ನಾಯಕತ್ವವು ರಣದೀಪ್ ಸುರ್ಜೇವಾಲಾ ಅವರಿಗೆ ಚುನಾವಣೆಯ ದಿನದವರೆಗೆ ರಾಜ್ಯದಲ್ಲಿ ಉಳಿಯುವಂತೆ ಸೂಚಿಸಿದೆ. “ಇದು ಹೊಸ ಕಾರ್ಯತಂತ್ರದ ಭಾಗವಾಗಿದೆ, ಇದರಲ್ಲಿ ಪ್ರಧಾನ ಕಾರ್ಯದರ್ಶಿಗಳು ಅವರಿಗೆ ನಿಯೋಜಿಸಲಾದ ರಾಜ್ಯದಲ್ಲಿ ಉಳಿಯುತ್ತಾರೆ” ಎಂದು ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿರುವ ಕಾಂಗ್ರೆಸ್ ವಕ್ತಾರ ನಾಸಿರ್ ಹುಸೇನ್ ಹೇಳಿದ್ದಾರೆ.
![](https://pratidhvani.com/wp-content/uploads/2022/07/FWWtOO6UcAAHzED-1024x506.jpg)
ಏಕಾಂಗಿ ಹೋರಾಟದಲ್ಲಿ ಕಾಂಗ್ರೆಸ್!
2017 ರ ಚುನಾವಣೆಯ ನಂತರ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲು ಜನತಾ ದಳ-ಜಾತ್ಯತೀತ (ಜೆಡಿ-ಎಸ್) ಜೊತೆ ಮೈತ್ರಿ ಮಾಡಿಕೊಂಡಿತು. ಮೈತ್ರಿಕೂಡದಲ್ಲಿ 2019 ರ ಲೋಕಸಭಾ ಕದನದಲ್ಲಿ ಹೋರಾಡಿದ್ದಾರೂ ಎರಡೂ ಪಕ್ಷಗಳು ಭಿನ್ನಾಭಿಪ್ರಾಯ ಹೊಂದಿದ್ದವು. ಆಪರೇಷನ್ ಕಮಲದ ಮೂಲಕ ಮೈತ್ರಿ ಸರ್ಕಾರ ಪತನವಾಯಿತು.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ರಾಜ್ಯ ನಾಯಕರಲ್ಲಿ ಒಮ್ಮತ ಮೂಡಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಏತನ್ಮಧ್ಯೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉದಯವನ್ನು ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಹಿಂದುತ್ವ V/s ಕನ್ನಡದ ಹೆಮ್ಮೆ!
ಕರ್ನಾಟಕದಲ್ಲಿ ಬಿಜೆಪಿಯನ್ನು ಎದುರಿಸಲು, ಕಾಂಗ್ರೆಸ್ ಸ್ಥಳೀಯವಾಗಿ ತಂತ್ರವನ್ನು ರೂಪಿಸಿದೆ. ಪಕ್ಷವು ತನ್ನ ಪ್ರಚಾರ ಕಾರ್ಯತಂತ್ರವನ್ನು “ಕನ್ನಡಿಗರ ಹೆಮ್ಮೆ”ಯ ಸುತ್ತ ಕೇಂದ್ರೀಕರಿಸುತ್ತದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೆಹಲಿಯಲ್ಲಿ ನಡೆಯುತ್ತಿದ್ದು, ಕನ್ನಡಿಗರ ಮೇಲೆ ಹಿಂದಿ ಮತ್ತು ಹಿಂದುತ್ವವನ್ನು ಹೇರುತ್ತಿದೆ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ 3 ಮತ್ತು 4 ನೇ ದರ್ಜೆಯ ಸರ್ಕಾರಿ ಉದ್ಯೋಗಗಳಲ್ಲಿ ವಸತಿ ಆಧಾರಿತ ಮೀಸಲಾತಿ ಖಚಿತಪಡಿಸುತ್ತದೆ ಎಂದು ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಮಾಧ್ಯಮ ಸಂವಾದದಲ್ಲಿ ಹೇಳಿದ್ದಾರೆ. ಅಲ್ಲದೆ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಅಧಿಕಾರ ಬದಲಾದರೆ ಜಾತಿವಾರು ಜನಗಣತಿ ಕೂಡ ನಡೆಯಲಿದೆ. ಬಿಜೆಪಿಯನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಪ್ರಯತ್ನಿಸುವ ಎರಡು ಪ್ರಮುಖ ವಿಷಯಗಳೆಂದರೆ ಭ್ರಷ್ಟಾಚಾರ ಮತ್ತು ನಿರುದ್ಯೋಗ ಎಂದು ಅವರು ಹೇಳಿದ್ದಾರೆ.