ಅರಬ್ಬಿ ಸಮುದ್ರದ ನಡುವೆ ಭಾರತ ಉಪಖಂಡಕ್ಕೆ ದೃಷ್ಟಿಬೊಟ್ಟಿನಂತಿರುವ ಭಾರತದ ಅತಿ ಸಣ್ಣ ಕೇಂದ್ರಾಡಳಿತ ಪ್ರದೇಶ ʼಲಕ್ಷದ್ವೀಪʼ ಇದೀಗ ತನ್ನ ಸಾಂಪ್ರದಾಯಿಕ ಅಸ್ಮಿತೆಯನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ. ಹೊಸದಾಗಿ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಪ್ರಫುಲ್ ಪಟೇಲ್ ಅವರ ನೂತನ ನಿಯಮಾವಳಿಗಳು ದ್ವೀಪವಾಸಿಗಳ ಪ್ರಾಚೀನ ಅಸ್ಮಿತೆ ಮಾತ್ರವಲ್ಲದೆ, ಬದುಕಿನ ಜೀವನಾಧಾರಗಳನ್ನೂ ಕಿತ್ತುಕೊಳ್ಳುವಷ್ಟು ಕ್ರೂರವಾಗಿದೆ.
ಹೇಳಿ ಕೇಳಿ ಲಕ್ಷದ್ವೀಪ 99% ಮುಸ್ಲಿಮರಿರುವ ಪ್ರದೇಶ. ಇಲ್ಲಿನ ಬಹುತೇಕ ಸಂಪ್ರದಾಯಗಳು ದ್ವೀಪವಾಸಿಗಳ ಧಾರ್ಮಿಕ ಆಚಾರ ವಿಚಾರಗಳೊಂದಿಗೆ ನೇರ ಸಂಬಂಧವಿದೆ. ಅಭಿವೃದ್ಧಿ ಅಥವಾ ಟೂರಿಸಂ ಹೆಸರಿನಲ್ಲಿ ದ್ವೀಪದಲ್ಲಿ ತಂದಿರುವ ನಿಯಮಗಳು ಇಲ್ಲಿನ ನಿವಾಸಿಗಳ ಧಾರ್ಮಿಕ ಮಾತ್ರವಲ್ಲದೆ ರಾಜಕೀಯ ಅಸ್ಮಿತೆಯನ್ನೂ ಕೆಣಕಿವೆ, ಹಾಗಾಗಿಯೇ, ಇದು ದ್ವೀಪನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದು ಈವರೆಗೂ ಶಾಂತವಾಗಿದ್ದ, ಒಂದೇ ಒಂದೂ ಅಪರಾಧ ಚಟುವಟಿಕೆಗಳೂ ವರದಿಯಾಗದ ಲಕ್ಷದ್ವೀಪದಲ್ಲಿ ಸಂಘರ್ಷದ ಅಲೆಗಳು ಏಳುವ ಮುನ್ಸೂಚನೆ ದಟ್ಟವಾಗಿದೆ.
ಈ ಮೊದಲು ಲಕ್ಷದ್ವೀಪದ ಆಡಳಿತಾಧಿಕಾರಿಯಾದ ದಿನೇಶ್ವರ್ ಶರ್ಮಾ ನಿಧನರಾದ ಬಳಿಕ, ಗುಜರಾತಿ ಮೂಲದ ಪ್ರಫುಲ್ ಪಟೇಲ್ ಎಂಬವರನ್ನು ಆಡಳಿತಾಧಿಕಾರಿಯಾಗಿ ನೇಮಿಸಲಾಯಿತು. ಆಡಳಿತಾಧಿಕಾರಿಯಾಗಿ ಐಎಎಸ್ ತೇರ್ಗಡೆಯಾದವರನ್ನು ನೇಮಿಸುವುದು ಬಿಟ್ಟು ಮಾಜಿ ಬಿಜೆಪಿ ನಾಯಕನನ್ನು ನೇಮಿಸಿದ್ದು ಆರಂಭದಲ್ಲೇ ಅನುಮಾನಗಳಿಗೆ ಕಾರಣವಾಗಿತ್ತು. ಗುಜರಾತಿನ ಮಾಜಿ ಮಂತ್ರಿಯೂ ಆಗಿದ್ದ ಪ್ರಫುಲ್ ನರೇಂದ್ರ ಮೋದಿ ಆತ್ಮೀಯರೂ ಹೌದು. ಇಂತಹ ಪ್ರಫುಲ್, ಆಡಳಿತಾಧಿಕಾರಿಯಾಗಿ ದ್ವೀಪಕ್ಕೆ ಕಾಲಿಟ್ಟ ಕೂಡಲೇ ಪ್ರಪ್ರಥಮವಾಗಿ ಮಾಡಿದ ಕೆಲಸವೆಂದರೆ ʼಸಿಎಎ-ಎನ್‌ಆರ್‌ಸಿʼ ವಿರೋಧಿ ಪೋಸ್ಟರ್‌ಗಳನ್ನು, ಬೋರ್ಡ್-ಬ್ಯಾನರ್‌ಗಳನ್ನು ತೆರವುಗೊಳಿಸಿದ್ದು. ನಂತರ ಒಂದೊಂದಾಗಿ, ಲಕ್ಷದ್ವೀಪದ ಮೂಲ ಸತ್ವವನ್ನೇ ಬುಡಮೇಲು ಗೊಳಿಸುವಂತಹ ವಿಚ್ಛಿದ್ರಕಾರಿ ನೀತಿಗಳನ್ನು ರೂಪಿಸಿದರು. Lakshadweep Development Authority Regulation, 2021 (LDAR 2021) ಕರಡು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಲಕ್ಷದ್ವೀಪ ಮಾತ್ರವಲ್ಲದೆ ಕೇರಳದಲ್ಲೂ ಇದು ಸಾಕಷ್ಟು ಚರ್ಚೆಗೆ ಆಸ್ಪದವಾಗಿದೆ.
ನಷ್ಟವಿಲ್ಲದೆ ನಡೆಯುತ್ತಿದ್ದ ಸಹಕಾರ ಸಂಘಗಳನ್ನು ಯಾವುದೇ ಸಭೆಯೋ, ಸಮಿತಿಯೋ ಇಲ್ಲದೇ ಏಕಮುಖ ತೀರ್ಮಾನ ಮಾಡಿ ಅವನ್ನು ಮುಚ್ಚಲಾಗಿದೆ. ಅದರಲ್ಲೂ ಮುಖ್ಯವಾಗಿ, ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿರುವ ಪದ್ಧತಿಯನ್ನು ಪ್ರಫುಲ್ ಪಟೇಲ್ ಪರಿಚಯಿಸಿದ್ದು, ಆಡಳಿತ ನಿರ್ಧರಿಸುವ ಯಾವುದೇ ಖಾಸಗಿ ಜಮೀನನ್ನು ಅವರ ಅನುಮತಿಯಿಲ್ಲದೆ, ಅಭಿವೃದ್ಧಿ ಹೆಸರಿನಲ್ಲಿ ಆಡಳಿತಾಧಿಕಾರಿ ವಶ ಪಡಿಸಿಕೊಳ್ಳಬಹುದಾಗಿದೆ. ಲಕ್ಷದ್ವೀಪದಲ್ಲಿ ಯಾವುದೇ ಅಭಿವೃದ್ಧಿಯನ್ನು ಸ್ಥಳೀಯ ಜನರ ಇಚ್ಛೆಗೆ ವಿರುದ್ಧವಾಗಿ ಮಾಡಬಾರದೆಂಬ ಸುಪ್ರಿಂ ಕೋರ್ಟ್ ನಿರ್ದೇಶನದ ಸ್ಪಷ್ಟ ಉಲ್ಲಂಘಣೆಯಾಗಿದೆ ಇದು.
ದ್ವೀಪನಿವಾಸಿಗಳ ಆರ್ಥಿಕತೆಗೆ ಪೆಟ್ಟು
ಲಕ್ಷದ್ವೀಪ ನಿವಾಸಿಗಳ ಮುಖ್ಯ ಕಸುಬು ಮೀನುಗಾರಿಕೆ. ಇದೀಗ, ಸ್ಥಳೀಯ ಪಾರಂಪರಿಕ ಮೀನುಗಾರರು ತಮ್ಮ ಕಸುಬು ಮುಂದುವರೆಸಬಹುದೋ ಇಲ್ಲವೋ ಎಂಬ ಗೊಂದಲಕ್ಕೆ ಆಡಳಿತ ತಳ್ಳಿದೆ. ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಮೀನುಗಾರರ ಶೆಡ್‌ಗಳನ್ನು ತೆರವುಗೊಳಿಸಿದ ಆಡಳಿತ, ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ಕರಾವಳಿ ರಕ್ಷಣಾ ಕಾಯ್ದೆಯನ್ನು ಗುರಾಣಿಯನ್ನಾಗಿಸಿಕೊಂಡಿದೆ. ಆದರೆ, ಬಂಡವಾಳಶಾಹಿ ಕಂಪೆನಿಗಳಿಗೆ ಮೀನುಗಾರಿಕೆಯಲ್ಲಿ ವ್ಯಾಪಕ ಅವಕಾಶ ನೀಡಲೆಂದೇ ಸ್ಥಳೀಯ ಮೀನುಗಾರರನ್ನು ಮೀನುಗಾರಿಕೆಯಿಂದ ಹಿಂದೆ ಸರಿಯುವಂತೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದು ವೇಳೆ ಮೀನುಗಾರಿಕೆಯಿಂದ ಸ್ದಳೀಯರ ಸ್ವಾಮ್ಯವನ್ನು ಕಿತ್ತುಕೊಂಡರೆ ದ್ವೀಪ ನಿವಾಸಿಗಳ ಆರ್ಥಿಕ ಸ್ವಾವಲಂಬತೆಗೆ ಅದು ಕೆಟ್ಟ ಪರಿಣಾಮ ಬೀರಬಹುದು ಎಂಬ ಆತಂಕವೂ ಸ್ಥಳೀಯರಲ್ಲಿ ಮನೆ ಮಾಡಿದೆ. ಆದರೆ, ಆಡಳಿತ ಈ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಮುಂದುವರೆಯದೆ, ಸಂದೇಹಗಳನ್ನು ಇನ್ನಷ್ಟು ಗಟ್ಟಿಯಾಗುವಂತೆ ಮಾಡಿದೆ.
ದ್ವೀಪದ ಪ್ರವಾಸೋದ್ಯಮ ಇಲಾಖೆಯಿಂದ 190 ಮಂದಿಯನ್ನು ಯಾವುದೇ ಕಾರಣವಿಲ್ಲದೆ ಏಕಾಏಕಿ ವಜಾಗೊಳಿಸಲಾಗಿದೆ. ಅದೇ ವೇಳೆ ತಾತ್ಕಾಲಿಕ ಸರ್ಕಾರಿ ನೌಕರರನ್ನೂ ಕೆಲಸದಿಂದ ವಜಾಗೊಳಿಸಿದ್ದು, ದ್ವೀಪದ ಶೇಕಡಾ 38ರಷ್ಟು ಅಂಗನವಾಡಿಗಳನ್ನು ಮುಚ್ಚಲಾಗಿದ್ದು ಆ ಮೂಲಕ ಬಿಸಿಯೂಟ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರೂ ಉದ್ಯೋಗ ವಂಚಿತರಾಗಿದ್ದಾರೆ. ಸೀಮಿತ ಆರೋಗ್ಯ ಸೌಲಭ್ಯವಿರುವ ಈ ದ್ವೀಪದಲ್ಲಿ ಕನಿಷ್ಟ ವೇತನಕ್ಕಾಗಿ ಪ್ರತಿಭಟನಾ ನಿರತ ನರ್ಸ್‌ಗಳನ್ನು ಪ್ರತಿಭಟನೆಯಿಂದ ಹಿಂದೆ ಸರಿಯದಿದ್ದರೆ ಕೆಲಸದಿಂದ ವಜಾಗೊಳಿಸುವುದಾಗಿಯೂ ಬೆದರಿಸಲಾಗಿದೆ. ಆಡಳಿತದ ಕ್ರೌರ್ಯ ಇಲ್ಲಿಗೇ ಮುಗಿಯುವುದಿಲ್ಲ.
ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾದ ಆಡಳಿತ
ಸುಮಾರು 70 ಸಾವಿರ ಜನಸಂಖ್ಯೆ ಇರುವ ಈ ದ್ವೀಪ ನಿವಾಸಿಗಳು ಪರಿಶಿಷ್ಟ ಪಂಗಡಕ್ಕೆ ಒಳಪಡುತ್ತಾರೆ. ಇವರ ಜನಸಂಖ್ಯೆ ನಿಯಂತ್ರಿಸಲೆಂದೇ ಹೊರಟಿರುವ ಸರ್ಕಾರ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಎರಡಕ್ಕಿಂತ ಹೆಚ್ಚು ಮಕ್ಕಳು ಹೊಂದಿದವರಿಗೆ ಅವಕಾಶವಿಲ್ಲ ಎಂದು ಹೇಳಿದೆ.
ಗೂಂಡಾ ಕಾಯ್ದೆಗೆ ಸಮನಾಗಿರುವ ಕಾಯ್ದೆ ಜಾರಿ
ಅಪರಾಧಗಳೇ ಇಲ್ಲ ಅನ್ನುವಂತಿರುವ ಲಕ್ಷದ್ವೀಪದಲ್ಲಿ ಕಾರಾಗೃಹ ಮುಚ್ಚಲ್ಪಟ್ಟಿದೆ. ಹೆಸರಿಗೊಂದು ಪೊಲೀಸ್ ಠಾಣೆಯಿದೆ, ಆದರೆ ಅಪರಾಧ ಕೃತ್ಯಗಳೇ ಇಲ್ಲ. ಇಂತಿಪ್ಪ ದ್ವೀಪದಲ್ಲಿ ಗೂಂಡಾ ಕಾಯ್ದೆ ಸಮನಾಗಿರುವ ಕಾಯ್ದೆ ಜಾರಿಗೊಳಿಸಿದ್ದು ಆಡಳಿತ ಸಂಸ್ಥೆಯ ಒಂದು ಷಡ್ಯಂತ್ರದ ಭಾಗ ಎನ್ನಲಾಗಿದೆ. ಪಾರಂಪರಿಕ ಅಸ್ಮಿತೆಯನ್ನು ಭಗ್ನಗೊಳಿಸುವಂತಹ ನೀತಿಗಳ ವಿರುದ್ಧ ಪ್ರತಿಭಟಿಸುವ ಸ್ಥಳೀಯರನ್ನು ಈ ಕಾಯ್ದೆ ಮೂಲಕ ಅಂಕೆಯಲ್ಲಿಡಬಹುದೆಂಬ ಆಲೋಚನೆಯಿಂದಲೇ ಯಾವುದೇ ಅಪರಾಧ ಕೃತ್ಯಗಳಿರದ ಈ ದ್ವೀಪದಲ್ಲಿ ಗೂಂಡಾ ಕಾಯ್ದೆಗೆ ಸಮನಾಗಿರುವ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎನ್ನಲಾಗಿದೆ.
ಬೀಫ್ ಬ್ಯಾನ್ – ಮಾಂಸಾಹಾರ ರದ್ದು
ನೂತನ ನೀತಿಗಳಲ್ಲಿ ಮುಖ್ಯವಾದ ಅಂಶವೇ ಇದು. ಮಾಂಸಹಾರಿ ಪ್ರಿಯರಾದ ದ್ವೀಪನಿವಾಸಿಗಳಿಗೆ ತಮ್ಮ ಆಹಾರದ ಹಕ್ಕನ್ನೂ ನೂತನ ಆಡಳಿತಾಧಿಕಾರಿ ಮೊಟಕುಗೊಳಿಸಿದ್ದಾರೆ. ಬೀಫ್ ವಿರುದ್ಧ ಇಲ್ಲಿ ಯಾವುದೇ ಅಪಸ್ವರಗಳಿಲ್ಲದಿದ್ದರೂ ಬೀಫ್ ಬ್ಯಾನ್ ಮಾಡುವ ಮೂಲಕ ಆಡಳಿತಾಧಿಕಾರಿ ತಮ್ಮ ಅಧಿಕಾರ ಅತಿರೇಕವನ್ನು ಪ್ರದರ್ಶಿಸಿದ್ದಾರೆ. ಇನ್ನು ಶಾಲಾ ಮಕ್ಕಳಿಗೆ ಇದುವರೆಗೂ ನೀಡುತ್ತಿದ್ದ ಮಧ್ಯಾಹ್ನದ ಊಟದಿಂದ ಮಾಂಸಾಹಾರವನ್ನು ಮೊಟಕುಗೊಳಿಸಿರುವುದು ಆಹಾರ ಸಂಸ್ಕೃತಿಯ ಹೇರಿಕೆ ಎಂದೇ ವ್ಯಾಖ್ಯಾನಿಸಲಾಗಿದೆ.
ಕೋವಿಡ್-19 ಪ್ರವೇಶನಕ್ಕೆ ಕಾರಣವಾದ ನಿಯಮಗಳು
ಕೋವಿಡ್ ಮೊದಲನೆ ಅಲೆಯ ವೇಳೆ ಒಂದೇ ಒಂದೂ ಪ್ರಕರಣವೂ ಪತ್ತೆಯಾಗದೆ, ಲಕ್ಷದ್ವೀಪ ದೇಶವನ್ನೇ ತನ್ನೆಡೆಗೆ ಸೆಳೆದಿತ್ತು. ಇದಕ್ಕೆ ಹಿಂದಿನ ಆಡಳಿತಾಧಿಕಾರಿಯ ಕೊಡುಗೆ ಸಾಕಷ್ಟಿತ್ತು. ಆದರೆ, ಎರಡನೇ ಅಲೆಯ ವೇಳೆ ಲಕ್ಷದ್ವೀಪದಲ್ಲಿ ತಳೆಯಲಾದ ಕೋವಿಡ್ ನೀತಿಗಳ ಕುರಿತ ಅನಾಸಕ್ತಿ ಇದುವರೆಗೂ 6000 ಕ್ಕೂ ಹೆಚ್ಚು ಕರೋನಾ ಪ್ರಕರಣಗಳ ಪತ್ತೆಗೆ ಕಾರಣವಾಗಿದೆ. 50 ಕ್ಕೂ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳ ಸಂಭವಿಸಿವೆ. ಗಂಭೀರ ವೈದ್ಯಕೀಯ ಪ್ರಕರಣಗಳನ್ನು ಹೆಲಿಕಾಪ್ಟರ್ ಮೂಲಕ ಕೇರಳಕ್ಕೇ ತರಬೇಕಾದ ಅವಶ್ಯಕತೆಯಿರುವ ಲಕ್ಷದ್ವೀಪದ ಕುರಿತು ಕೋವಿಡ್ ವಿಷಯದಲ್ಲಿ ತೋರಿದ ಈ ಅನಾಸಕ್ತಿಯೂ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬೇಫೂರಿನಿಂದ ಮಂಗಳೂರಿಗೆ
ದ್ವೀಪದ ಜನರು ಶತಮಾನಗಳಿಂದ ತಮ್ಮ ಅಗತ್ಯಗಳಿಗಾಗಿ ಕೋಝಿಕ್ಕೋಡ್ ಜಿಲ್ಲೆಯ ಬೇಪೂರ್ ಬಂದರನ್ನು ಆಶ್ರಯಿಸುತ್ತಿದ್ದರು. ಇನ್ನು ಮುಂದೆ ಬೇಫೂರ್ ಬಂದರನ್ನು ಇವರು ಆಶ್ರಯಿಸುವಂತಿಲ್ಲ. ಬದಲಾಗಿ ದೂರದ ಮಂಗಳೂರು ಬಂದರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆ ಮೂಲಕ ಕೇರಳದೊಂದಿಗಿನ ಬಂಧವನ್ನು ಕಡಿದು ಬಿಜೆಪಿ ಭದ್ರ ಸ್ಥಾನವಾಗಿರುವ ಕರ್ನಾಟಕ (ಮಂಗಳೂರು)ವನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಸೃಷ್ಟಿಸುವುದೇ ಇದರ ಹಿಂದಿನ ಹುನ್ನಾರ ಎಂದು ಕೇರಳದ ಸಿಪಿಐ (ಎಂ) ಸಂಸದ ಕರೀಮ್ ಅವರು ಆರೋಪಿಸಿದ್ದಾರೆ.
ಲಕ್ಷದ್ವೀಪದ ಕುರಿತಂತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿರುವ ಕರೀಂ, ಲಕ್ಷದ್ವೀಪದ ಆಡಳಿತಾಧಿಕಾರಿಯ ಕ್ರಮವು ಸಂಪೂರ್ಣ ಏಕಮುಖವಾಗಿದ್ದು, ಲಕ್ಷದ್ವೀಪದ ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ವಿವಿಧತೆಗೆ ಮಾರಕವಾಗಿದೆ ಎಂದಿದ್ದಾರೆ.
ನೂತನ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮಳೆಯಾಲಂ ಸೂಪರ್ ಸ್ಟಾರ್ ಪೃಥ್ವಿರಾಜ್
ಮಳೆಯಾಲಂ ಸೂಪರ್ ಸ್ಟಾರ್ ಪೃಥ್ವಿರಾಜ್ ಲಕ್ಷದ್ವೀಪದೊಂದಿಗೆ ಭಾವನಾತ್ಮಕ ಸಂಬಂಧವನ್ನಿಟ್ಟುಕೊಂಡಿದ್ದಾರೆ. ಅನಾರ್ಕಲಿ ಸಿನೆಮಾ ಚಿತ್ರೀಕರಣ ವೇಳೆ 2 ತಿಂಗಳು ಲಕ್ಷದ್ವೀಪದಲ್ಲಿದ್ದ ಪೃಥ್ವಿರಾಜ್ ಈ ದ್ವೀಪ ಸಮೂಹದೊಂದಿಗೆ ತನಗೆ ಆಪ್ತತೆಯಿದೆ. ಇಲ್ಲಿನ ಜನರಿಗಾಗಿ ನಾವು ಧ್ವನಿಯೆತ್ತಬೇಕೆಂದು ಕರೆ ನೀಡಿದ್ದಾರೆ. ನಟನ ಈ ಬೆಂಬಲದೊಂದಿಗೆ ಕೋವಿಡ್ ಎರಡನೇ ಅಲೆಯ ಪ್ರಭಾವಕ್ಕೆ ಬದಿಗೆ ಸರಿದಿದ್ದ ಲಕ್ಷದ್ವೀಪದ ಸಮಸ್ಯೆ ಮುಖ್ಯವಾಹಿನಿಯ ಮುಖ್ಯ ಚರ್ಚೆಯಾಗಿ ಮಾರ್ಪಟ್ಟಿದೆ.
ಲಕ್ಷದ್ವೀಪದ ಜನರು ತಮ್ಮ ಹಿಂದಿನ ಸಂಪ್ರದಾಯದೊಂದಿಗೆ ಶಾಂತವಾಗಿ ಜೀವಿಸುತ್ತಿರುವುದನ್ನು ಕೆಡಿಸುವುದು ಅಭಿವೃದ್ಧಿ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ಲಕ್ಷದ್ವೀಪದ ಅಭಿವೃದ್ಧಿಗಾಗಿ ಈ ಮಾರ್ಪಾಡು ತರಲಾಗುತ್ತಿದೆಯೆಂದು ಪ್ರಫುಲ್ ಪಟೇಲ್ ಅವರ ತಮ್ಮ ನಡೆಯನ್ನು ಈ ಹಿಂದೆ ಸಮರ್ಥಿಸಿದ್ದರು.
ಪ್ರಫುಲ್ ಪಟೇಲ್ ಹಿನ್ನೆಲೆ
ಗುಜರಾತ್ ಮೂಲದ ಪ್ರಫುಲ್ ಖೋಡಾ ಪಟೇಲ್, ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಮಾಜಿ ಗೃಹ ಸಚಿವರಾಗಿದ್ದರು. ಮೋದಿಯವರ ಆಪ್ತ ಸಹಾಯಕ ಪಟೇಲ್ ಅವರನ್ನು ಲಕ್ಷದ್ವೀಪದ ಮಾಜಿ ಆಡಳಿತಾಧಿಕಾರಿ ಮತ್ತು ಐಪಿಎಸ್ ಅಧಿಕಾರಿ ದಿನೇಶ್ವರ್ ಶರ್ಮಾ ಅವರ ನಿಧನದ ನಂತರ 2020 ರ ಡಿಸೆಂಬರ್‌ನಲ್ಲಿ ಲಕ್ಷದ್ವೀಪದ ಆಡಳಿತಾಧಿಕಾರಿಯನ್ನಾಗಿ ಮಾಡಲಾಯಿತು.
ಇದಕ್ಕೂ ಮೊದಲು, ಪಟೇಲ್ ಅವರನ್ನು 2016 ರಲ್ಲಿ ದಮನ್ & ದಿಯು ಮತ್ತು ದಾದ್ರಾ ಮತ್ತು ನಗರ ಹವೇಲಿಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಐಎಎಸ್ ಅಧಿಕಾರಿಗಳ ಬದಲಾಗಿ ರಾಜಕಾರಣಿಗಳನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸುವ ಮೋದಿ ನೇತೃತ್ವದ ಸರ್ಕಾರದ ವಿಧಾನದ ಮೂಲಕ ಇವರು ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ದಾದ್ರಾ ಮತ್ತು ನಗರ ಹವೇಲಿ ಕ್ಷೇತ್ರದ ಸಂಸದ ಮೋಹನ್ ಡೆಲ್ಕರ್ ಆತ್ಮಹತ್ಯೆ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿದ್ದು, ಮೋಹನ್ ಅವರು ಆತ್ಮಹತ್ಯೆ ಪತ್ರದಲ್ಲಿ ಪ್ರಫುಲ್ ಹೆಸರು ಉಲ್ಲೇಖಿಸಿದ್ದಾರೆಂದು ಮುಂಬೈ ಪೊಲೀಸರು ದೂರನ್ನೂ ದಾಖಲಿಸಿದ್ದರು.