• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಪುರುಷಾಧಿಪತ್ಯದ ಮತ್ತೊಂದು ಚುನಾವಣೆಯ ನಡುವೆ – 02

ನಾ ದಿವಾಕರ by ನಾ ದಿವಾಕರ
April 27, 2023
in ಅಂಕಣ
0
ಪುರುಷಾಧಿಪತ್ಯದ ಮತ್ತೊಂದು ಚುನಾವಣೆಯ ನಡುವೆ – 01
Share on WhatsAppShare on FacebookShare on Telegram

ದೇವೇಗೌಡರ ಈ ಮಹಿಳಾಪರ ಕಾಳಜಿಯನ್ನು ಮೆಚ್ಚಬೇಕಾದ್ದೇ. ಆದರೆ ಮಹಿಳೆಯರಿಗೆ ಶಾಸನಬದ್ಧ ಮೀಸಲಾತಿ ನೀಡಲು ಮಸೂದೆ ಅವಶ್ಯವೇ ಹೊರತು, ಪ್ರಸಕ್ತ ಚುನಾವಣೆಗಳಲ್ಲಿ ಮಹಿಳೆಯರಿಗೆ ಟಿಕೆಟ್‌ನೀಡಲು ಯಾವುದೇ ಮಸೂದೆಯ ಅಗತ್ಯವಿಲ್ಲ ಅಲ್ಲವೇ ? ಕನಿಷ್ಠ ಒಬ್ಬ ರಾಜಕೀಯ ನಾಯಕರಾದರೂ ಈ ಬಗ್ಗೆ ಪ್ರಸ್ತಾಪಿಸಿರುವುದು ಸಮಾಧಾನಕರ ಅಂಶ ಎಂದು ಭಾವಿಸಿದರೂ, ಪ್ರಸ್ತುತ ಚುನಾವಣೆಯ ಟಿಕೆಟ್‌ಹಂಚಿಕೆಯ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳ ಕಣ್ಣಿಗೆ ಕಾಣದ ಮಹಿಳಾ ಅಭ್ಯರ್ಥಿಗಳು ಮಸೂದೆ ಜಾರಿಯಾದ ಕೂಡಲೇ ಹೇಗೆ ಕಾಣಲು ಸಾಧ್ಯ ? ಹಾಗೊಮ್ಮೆ ತಮ್ಮ ಪಕ್ಷಗಳಲ್ಲಿ ಮೂರನೆ ಒಂದು ಪ್ರಮಾಣದಷ್ಟು ಮಹಿಳಾ ಅಭ್ಯರ್ಥಿಗಳು ಅರ್ಹರಾಗಿದ್ದಾರೆ ಎಂದು ಸ್ಪಷ್ಟವಾಗಿದ್ದರೆ ಈ ಚುನಾವಣೆಗಳಲ್ಲೇ ಏಕೆ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡಬಾರದಿತ್ತು ? ದೇವೇಗೌಡರ ಪಕ್ಷವೂ ಈ ಬಗ್ಗೆ ಯೋಚಿಸಿಲ್ಲ.ಈ ಪ್ರಶ್ನೆಗಳು ಬಹುಶಃ ಗಾಳಿಯಲ್ಲಿ ತೇಲಿ ಹೋಗುತ್ತವೆ.

ADVERTISEMENT

ಮೇ 10ರ ಚುನಾವಣೆಗಳಲ್ಲಿ ಬಿಜೆಪಿ 224 ಸ್ಥಾನಗಳ ಪೈಕಿ 11ರಲ್ಲಿ ಮಹಿಳೆಯರಿಗೆ ಟಿಕೆಟ್‌ನೀಡಿದೆ. ಕಾಂಗ್ರೆಸ್‌223ರ ಪೈಕಿ 12ರಲ್ಲೂ, ಜಾತ್ಯತೀತ ಜನತಾ ದಳ 208ರಲ್ಲಿ 13ರಲ್ಲೂ ಮಹಿಳೆಯರಿಗೆ ಅವಕಾಶ ನೀಡಿವೆ. ಆಮ್‌ಆದ್ಮಿ ಪಕ್ಷವು ಕೊಂಚ ಭಿನ್ನವಾಗಿ 209 ಸ್ಥಾನಗಳ ಪೈಕಿ 20 ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಿದೆ. ಮೈಸೂರು ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮೂರೂ ಪ್ರಧಾನ ಪಕ್ಷಗಳು ಸ್ಪರ್ಧಿಸುತ್ತಿದ್ದು , ಮಹಿಳಾ ಪ್ರಾತಿನಿಧ್ಯದ ಸುಳಿವೇ ಇಲ್ಲದಂತಾಗಿದೆ. ಇದು ಏನನ್ನು ಸೂಚಿಸುತ್ತದೆ ? ರಾಜಕೀಯ ಕ್ಷಮತೆ, ದಕ್ಷತೆ ಮತ್ತು ಅಧಿಕಾರ ರಾಜಕಾರಣಕ್ಕೆ ಅಗತ್ಯವಾದ ಅರ್ಹತೆ ಇರುವ ಮಹಿಳೆಯರು ಇಲ್ಲವೆಂದೇ ಅಥವಾ ತಮ್ಮ ಪಕ್ಷಗಳ ಒಳಗೇ ಇರುವ ಅಂತಹ ಅಸಂಖ್ಯಾತ ಮಹಿಳೆಯರನ್ನು ಪಕ್ಷದ ಪುರುಷ ನಾಯಕತ್ವವು ಕಡೆಗಣಿಸಿವೆ, ಗುರುತಿಸಲು ವಿಫಲವಾಗಿವೆ ಎಂದೇ ? ಚುನಾವಣಾ ಕಣದಲ್ಲಿ ಒಟ್ಟು 184 ಮಹಿಳೆಯರು ಸ್ಪರ್ಧಿಸುತ್ತಿರುವುದನ್ನು ಗಮನಿಸಿದಾಗ, ಮುಖ್ಯವಾಹಿನಿ ಪಕ್ಷಗಳನ್ನು ಹೊರತುಪಡಿಸಿ 128 ಮಹಿಳೆಯರು ಕಣದಲ್ಲಿದ್ದಾರೆ. ಅಂದರೆ ಇಲ್ಲಿ ಮಹಿಳಾ ಅಭ್ಯರ್ಥಿಗಳ ಕೊರತೆಗಿಂತಲೂ ಢಾಳಾಗಿ ಕಾಣುವುದು ಪುರುಷಪ್ರಧಾನ ಪಕ್ಷಗಳಲ್ಲಿರುವ ಸ್ತ್ರೀ ಸಂವೇದನೆಯ ಕೊರತೆ ಅಲ್ಲವೇ ?

ಕುಟುಂಬ-ರಾಜಕಾರಣ-ಪಿತೃಪ್ರಧಾನತೆ

ಏಕೆ ಹೀಗೆ ? ಪ್ರಸ್ತುತ ಚುನಾವಣೆಗಳಲ್ಲಿ ಮತ್ತು ಇನ್ನಿತರ ರಾಜಕೀಯ ಸಂಕಥನಗಳಲ್ಲೂ ಇಂದು ಪ್ರಧಾನವಸ್ತುವಾಗಿ ಚರ್ಚೆಯಾಗುತ್ತಿರುವುದು ಕುಟುಂಬ ರಾಜಕಾರಣ ಅಥವಾ ವಂಶಾಡಳಿತದ ಪ್ರಶ್ನೆ. ಚುನಾವಣೆ ಹಾಗೂ ಅಧಿಕಾರ ರಾಜಕಾರಣದಲ್ಲಿ ಮಹಿಳಾ ಪ್ರಾತಿನಿಧ್ಯ ಕ್ಷೀಣಿಸುತ್ತಿರುವುದಕ್ಕೂ, ನಮ್ಮ ಸಮಾಜದ ಪಿತೃಪ್ರಧಾನತೆಯು ಪೋಷಿಸುತ್ತಿರುವ ಕುಟುಂಬ ರಾಜಕಾರಣಕ್ಕೂ ನೇರ ಸಂಬಂಧ ಇರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಮೂಲತಃ ಭಾರತೀಯ ಸಮಾಜದಲ್ಲಿ ಕುಟುಂಬ ಎಂದರೆ ಯಜಮಾನಿಕೆಯ ಒಂದು ಸ್ಥಾವರ. ಪುರುಷಾಧಿಪತ್ಯದ ಮೂಲ ನೆಲೆ. ಹಾಗಾಗಿಯೇ ಪಂಚಾಯತ್‌ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ ಜಾರಿಯಾಗಿ, ಸಾವಿರಾರು ಮಹಿಳೆಯರು ಗ್ರಾಮ/ಮಂಡಲ/ತಾಲ್ಲೂಕು/ಜಿಲ್ಲಾ ಪಂಚಾಯತ್‌ಗಳಲ್ಲಿ, ಸ್ಥಳೀಯ ಪುರಸಭೆ ನಗರಸಭೆಗಳಲ್ಲಿ ರಾಜಕೀಯ ಪ್ರಾತಿನಿಧ್ಯ ಗಳಿಸಿದ್ದರೂ ಇವರಲ್ಲಿ ಬಹುತೇಕರು ತಮ್ಮ ಕುಟುಂಬದ ಪುರುಷರ ನೆರಳಿನಲ್ಲೇ ಕಾರ್ಯನಿರ್ವಹಿಸುತ್ತಿರುವುದನ್ನು ಕಾಣಬಹುದು. ಅನೇಕ ಪ್ರಸಂಗಗಳಲ್ಲಿ ಚುನಾಯಿತ ಮಹಿಳಾ ಪ್ರತಿನಿಧಿಯ ಸ್ಥಾನದಲ್ಲಿ ಆಕೆಯ ಪತಿಯೇ ನಿರ್ಧಾರಗಳನ್ನು ಕೈಗೊಳ್ಳುವುದನ್ನೂ ಗುರುತಿಸಲಾಗಿದೆ.

ಭಾರತದ ಪ್ರಧಾನ ಮತ್ತು ಪ್ರಾದೇಶಿಕ ರಾಜಕೀಯ ಪಕ್ಷಗಳೂ ಈ ಪಿತೃಪ್ರಧಾನ ಧೋರಣೆಯಿಂದ ಮುಕ್ತವಾಗಿಲ್ಲ ಎನ್ನುವುದು ಟಿಕೆಟ್‌ಹಂಚಿಕೆಯಲ್ಲೇ ಸ್ಪಷ್ಟವಾಗುತ್ತದೆ. ಈ ಪಕ್ಷಗಳಲ್ಲಿ ಅವಕಾಶ ಪಡೆಯುವ ಮಹಿಳೆಯರೂ ಕುಟುಂಬದ ಸದಸ್ಯರೇ ಆಗಿರುತ್ತಾರೆ ಅಥವಾ ನಿಕಟ ಸಂಬಂಧಿಗಳಾಗಿರುತ್ತಾರೆ. ಅಥವಾ ಕುಟುಂಬದ ಮಹಿಳಾ ಸದಸ್ಯರು ಪುರುಷರಿಗಾಗಿ ತ್ಯಾಗ ಮಾಡುವವರಾಗಿರುತ್ತಾರೆ. ಭಾರತದ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಆಸ್ತಿ ಒಡೆತನ, ಹಂಚಿಕೆ ಮತ್ತು ಯಜಮಾನಿಕೆಗಳೇ ಕುಟುಂಬದ ಸಂರಚನೆಯನ್ನು ನಿರ್ಧರಿಸುವುದರಿಂದ, ಯಜಮಾನಿಕೆಯ ಪ್ರಶ್ನೆ ಎದುರಾದಾಗಲೆಲ್ಲಾ ಪುರುಷಾಧಿಪತ್ಯ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತದೆ. ಆಸ್ತಿಯ ಒಡೆತನಕ್ಕೂ ಸಮಾಜವನ್ನು ಅಥವಾ ಸಮಾಜದ ಸದಸ್ಯರನ್ನು ನಿಯಂತ್ರಣಕ್ಕೆ ಒಳಪಡಿಸುವುದಕ್ಕೂ ಇರುವ ಸಂಬಂಧವೇ ಭಾರತದ ಅಧಿಕಾರ ರಾಜಕಾರಣಕ್ಕೂ ವ್ಯಾಪಿಸಿದ್ದು ಇದು ಗ್ರಾಮ ಪಂಚಾಯತ್‌ನಿಂದ ಲೋಕಸಭೆಯವರೆಗೂ ವಿಸ್ತರಿಸಿರುವುದನ್ನು ಗಮನಿಸಬಹುದು. ಊಳಿಗಮಾನ್ಯ ಧೋರಣೆಯ ಯಜಮಾನ ಸಂಸ್ಕೃತಿ ಮತ್ತು ಬಂಡವಾಳಶಾಹಿ ಸಮಾಜದ ಒಡೆತನದ ಸಂಸ್ಕೃತಿಯ ಸಮ್ಮಿಲನವನ್ನು ಈ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಕಾಣಲು ಸಾಧ್ಯ. ಇದೇ ಊಳಿಗಮಾನ್ಯ ಪರಂಪರೆ ಮತ್ತು ಪಿತೃಪ್ರಧಾನ ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿರಿಸಲು ಬಯಸುವ ಪುರುಷಾಧಿಪತ್ಯದ ನೆಲೆಗಳೇ ಭಾರತದ ಬಹುತೇಕ ಒಬಿಸಿ ಪಕ್ಷಗಳನ್ನು, ಪ್ರಾದೇಶಿಕ ಪಕ್ಷಗಳನ್ನು ನಿಯಂತ್ರಿಸುತ್ತಿವೆ. ಮಹಿಳಾ ಮೀಸಲಾತಿ ಮಸೂದೆಗೆ ಅತಿ ಹೆಚ್ಚು ವಿರೋಧ ವ್ಯಕ್ತವಾಗಿದ್ದು ಈ ಪಕ್ಷಗಳಿಂದಲೇ ಮತ್ತು ಕಾಂಗ್ರೆಸ್‌—ಬಿಜೆಪಿಯಲ್ಲಿರುವ ಇದೇ ಮನಸ್ಥಿತಿಯ ಸಂಸದರಿಂದ.

ಮಹಿಳಾ ರಾಜಕಾರಣದ ನೆಲೆಗಳು

ಮುಖ್ಯವಾಹಿನಿಯ ಎಲ್ಲ ಪಕ್ಷಗಳಲ್ಲೂ ಮಹಿಳಾ ವಿಭಾಗಗಳು, ಮೋರ್ಚಾಗಳು ಪ್ರಧಾನವಾಗಿ ಕಾಣುತ್ತವೆ. ತಳಮಟ್ಟದಿಂದಲೇ ಮಹಿಳಾ ಕಾರ್ಯಕರ್ತರನ್ನು ಬೆಳೆಸುವ ಒಂದು ಪ್ರಕ್ರಿಯೆಯನ್ನೂ ಎಲ್ಲ ಪಕ್ಷಗಳಲ್ಲಿ ಗುರುತಿಸಬಹುದು. ಹಿರಿಯ ರಾಷ್ಟ್ರೀಯ ನಾಯಕರು, ಕೇಂದ್ರ ಸಚಿವರು ಸಾರ್ವಜನಿಕ ಸಭೆಗಳಿಗೆ ಬರುವಾಗ ಇದೇ ಮಹಿಳೆಯರೇ ಪೂರ್ಣಕುಂಭ ಸ್ವಾಗತ ಕೋರಲು ಸಜ್ಜಾಗಿ ಸಾಲುಗಟ್ಟಿ ನಿಲ್ಲುವುದೂ ಉಂಟು. ಸಂಸ್ಕೃತಿ-ಪರಂಪರೆಯ ದ್ಯೋತಕವಾಗಿ ಮಹಿಳಾ ಸಮೂಹವನ್ನು ಸ್ವಾಗತಕಾರಿಣಿಯರನ್ನಾಗಿ ಬಳಸಿಕೊಳ್ಳುವ ಒಂದು ಪರಿಪಾಠ ನಮ್ಮ ಸಾಂಸ್ಕೃತಿಕ ಸಂಸ್ಥೆಗಳಲ್ಲೂ ಆಳವಾಗಿ ಬೇರೂರಿದೆ. ರಾಜಕಾರಣವೂ ಇದಕ್ಕೆ ಹೊರತಾದುದಲ್ಲ. ಆದರೆ ಸಾಂಸ್ಥಿಕ ಚೌಕಟ್ಟಿನ ಅಧಿಕಾರ ಕೇಂದ್ರಗಳಲ್ಲಿ ಮಹಿಳೆಯರಿಗೆ ಒಂದು ಉನ್ನತ ಸ್ಥಾನ ಕಲ್ಪಿಸುವಾಗ ಪುರುಷಾಧಿಪತ್ಯ ಅಡ್ಡಿಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ನಮ್ಮ ಮುಂದಿರುವ ಪ್ರತ್ಯಕ್ಷ ಸಾಕ್ಷಿ.

ರಾಜಕೀಯ ಅಧಿಕಾರ ಹಂಚಿಕೆಯ ಪ್ರಶ್ನೆ ಮುಖ್ಯವಾಗುವುದು ಇಲ್ಲಿಯೇ ? “ಹೆಣ್ಣು ಮಕ್ಕಳನ್ನು ರಕ್ಷಿಸಿ ಹೆಣ್ಣು ಮಕ್ಕಳನ್ನು ಓದಿಸಿ” (ಬೇಟಿ ಬಚಾವೋ ಬೇಟಿ ಪಢಾವೋ)ಎಂಬ ಉದಾತ್ತತೆಯ ಘೋಷಣೆಯೊಂದಿಗೆ ಭಾರತ ಅಮೃತ ಕಾಲದತ್ತ ಧಾವಿಸುತ್ತಿದೆ. ಈ ಘೋಷಣೆಗೆ “ ರಾಜನೀತಿಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ ” ಎಂಬ ಮತ್ತೊಂದು ಸಾಲನ್ನು ಏಕೆ ಸೇರಿಸಲಾಗುವುದಿಲ್ಲ ? ಇದು ಸಾಧ್ಯವಾಗುತ್ತಿಲ್ಲ. ಪುನಃ ಪುರುಷಾಧಿಪತ್ಯದ ನೆಲೆಗಳು ಅಡ್ಡಿಯಾಗುತ್ತವೆ. ಕಳೆದ ಎರಡು ದಶಕಗಳಲ್ಲಿ ಮಹಿಳಾ ಹೋರಾಟ, ಚಳುವಳಿಗಳು, ಸಂಘಟನೆಗಳು ಮಹಿಳಾ ಮೀಸಲಾತಿಯ ಬಗ್ಗೆ ದನಿ ಎತ್ತುತ್ತಲೇ ಬಂದಿವೆ. ಆದರೆ ಚುನಾವಣೆಗಳ ಸಂದರ್ಭದಲ್ಲಿ ಈ ಒಕ್ಕೊರಲ ಆಗ್ರಹ, ರಾಜಕೀಯೇತರ ಸಂಘಟನೆಗಳಿಂದಲೂ ಕೇಳಿಬರುವುದಿಲ್ಲ. ಪಕ್ಷಗಳಲ್ಲಿ ಆಂತರಿಕವಾಗಿಯೂ ಮಹಿಳಾ ಸದಸ್ಯರು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸುತ್ತಿಲ್ಲ ಎನ್ನುವುದು ವಿಷಾದಕರ ಸತ್ಯ.

ಅಧಿಕಾರ ರಾಜಕಾರಣದ ಆವರಣ ಇಂದು ಸಾಕಷ್ಟು ಬದಲಾಗಿದೆ. ಹಿಂಸೆ, ದ್ವೇಷ, ಮೇಲರಿಮೆ, ದಬ್ಬಾಳಿಕೆ, ದರ್ಪ ಮತ್ತು ನಿರಂಕುಶಾಧಿಕಾರದ ಲಕ್ಷಣಗಳು ಎಲ್ಲ ಪಕ್ಷಗಳಲ್ಲೂ (ಕೊಂಚಮಟ್ಟಿಗೆ ಎಡಪಕ್ಷಗಳನ್ನು ಹೊರತುಪಡಿಸಿ) ಯಾವುದೋ ಒಂದು ನೆಲೆಯಲ್ಲಿ ಬೇರೂರಿವೆ. ರಾಜಕೀಯ ಪ್ರವೇಶ ಎಂದರೆ ಬಲಾಢ್ಯರಿಗೆ ಮಾತ್ರವೇ ಸಾಧ್ಯ ಎನ್ನುವ ಭಾವನೆ ದಟ್ಟವಾಗಿದೆ. ಈ ಬಲಾಢ್ಯತೆ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ನೆಲೆಯಲ್ಲಿ ಸಮಾನವಾಗಿ ವ್ಯಕ್ತವಾಗುತ್ತದೆ. ಮಾರುಕಟ್ಟೆ ಆರ್ಥಿಕತೆಯ ಶಕ್ತಿಗಳು ಇದನ್ನೇ ಪೋಷಿಸುತ್ತಾ ಬಂದಿವೆ. ಈ ಸಂದರ್ಭದಲ್ಲಿ ಮಹಿಳೆಯನ್ನು ಈ ಅಖಾಡಕ್ಕೆ ಇಳಿಸಿ ಮುನ್ನಡೆಯುವಂತೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಹಿಳಾ ಸಂಘಟನೆಗಳೂ ಮಾಡಬೇಕಿದೆ. ಖ್ಯಾತ ಚಿಂತಕಿ, ಸಾಹಿತಿ ಹೋರಾಟಗಾರ್ತಿ ವಿಜಯಾ ಅವರು ಇತ್ತೀಚಿನ ಖಾಸಗಿ ಸಂಭಾಷಣೆಯಲ್ಲಿ “ಮಹಿಳೆಯರನ್ನು ನಾವಿನ್ನೂ ಸಿದ್ಧಮಾಡಿಲ್ಲ, ಅಖಾಡಕ್ಕಿಳಿಸಲು, ನಿಭಾಯಿಸಲು ಕೆಲಮಟ್ಟಿನ ಸ್ಥೈರ್ಯ ತುಂಬಬೇಕಿದೆ ಅಂಥ ಪ್ರಯತ್ನಗಳನ್ನು ಕನಿಷ್ಠ ಮಹಿಳಾ ಸಂಘಟನೆಗಳಾದರೂ ಕೈಗೆತ್ತಿಕೊಳ್ಳಬೇಕಿತ್ತು, ಅವರ ಹೋರಾಟಗಳೆಲ್ಲಾ ಕ್ಲೀಷೆ ಆಗುತ್ತಿವೆ ” ಎಂದು ಹೇಳಿದಾಗ ಇದು ವಾಸ್ತವಕ್ಕೆ ಎಷ್ಟು ಹತ್ತಿರವಾದ ಮಾತುಗಳು ಎನಿಸಿತು. ಆಧುನಿಕೋತ್ತರ ಚಿಂತನಾ ಕ್ರಮವೂ ಇದಕ್ಕೆ ಒಂದು ಕಾರಣವಾಗಿದೆ. ಮಹಿಳೆಯರು ಹಕ್ಕಿನ ಮೇಲೆ ಪಡೆಯಬೇಕಾದ ರಾಜಕೀಯ ಅವಕಾಶಗಳು, ಟಿಕೆಟ್‌ಹಂಚಿಕೆಯಲ್ಲಿ ಅನಿವಾರ್ಯ ಒತ್ತಡಗಳನ್ನು ಹೇರಬೇಕು ಎನ್ನುವ ವಿಜಯ ಅವರ ಅಭಿಪ್ರಾಯ ಇಂದು ಹೆಚ್ಚು ಪ್ರಸ್ತುತ. ಈ ಮಾತುಗಳ ಹಿಂದೆ ಕಾಣುವ ಹತಾಶೆ ಮತ್ತು ವಿಷಾದ ಮಹಿಳಾ ಸಂಘಟನೆಗಳನ್ನೂ ಪ್ರಚೋದಿಸಬೇಕಿದೆ.

ಮುಂದಿನ ಹಾದಿ !!!

ಗ್ರಾಮಮಟ್ಟದಿಂದಲೂ ಮಹಿಳೆಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವುದರೊಂದಿಗೆ ಸಂವಿಧಾನದ ಅಡಿ ಮಹಿಳೆಯರಿಗೆ ಇರುವ ಸಮಾನ ಹಕ್ಕುಗಳ ಬಗ್ಗೆಯೂ ಅರಿವು ಮೂಡಿಸಬೇಕಿದೆ. ಪುರುಷಾಧಿಪತ್ಯದ ರಾಜಕೀಯ ಅಧಿಕಾರ ಕೇಂದ್ರಗಳನ್ನು ಹಿಂಬಾಲಿಸುವ ಬೆಂಗಾವಲು ಪಡೆಯಾಗದೆ ಅಥವಾ ಸ್ವಾಗತಕಾರಿಣಿಯರಾಗದೆ, ಮಹಿಳಾ ಸಂಕುಲ ಅಧಿಕಾರಯುತ ಸ್ಥಾನಗಳಲ್ಲಿ ಸಮಾನ ಸ್ಥಾನಮಾನಗಳಿಗಾಗಿ ಹೋರಾಡಬೇಕಿದೆ. ಪಕ್ಷ ರಾಜಕಾರಣವನ್ನು ಆವರಿಸಿರುವ ಮತ್ತು ನಿಯಂತ್ರಿಸುವ ಪಿತೃಪ್ರಧಾನತೆ ಹಾಗೂ ಪುರುಷಾಧಿಪತ್ಯದ ನೆಲೆಗಳನ್ನು ಧಿಕ್ಕರಿಸುವ ಮೂಲಕ ಮಹಿಳಾ ಸಮೂಹವು ತಮ್ಮ ಸಾಂವಿಧಾನಿಕ ಹಕ್ಕೊತ್ತಾಯಗಳನ್ನು ಮುನ್ನೆಲೆಗೆ ತರುವ ಸಂದರ್ಭ ಇಂದು ಎದುರಾಗಿದೆ. ಮೇ 10ರ ರಾಜ್ಯ ಚುನಾವಣೆಗಳು ಮತ್ತು 2024ರ ಲೋಕಸಭಾ ಚುನಾವಣೆಗಳು ಈ ದಿಕ್ಕಿನಲ್ಲಿ ಗಂಭೀರವಾಗಿ ಆಲೋಚನೆ ಮಾಡುವ ಅವಕಾಶವನ್ನೂ ಕಲ್ಪಿಸಿದೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಸೃಷ್ಟಿಸುತ್ತಿರುವ ಅಸಮಾನತೆ ಮತ್ತು ಅಭದ್ರತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ತುತ್ತಾಗುತ್ತಿರುವುದನ್ನು ಗಮನಿಸಿದಾಗ, ಮಹಿಳಾ ರಾಜಕಾರಣದ ನೆಲೆಗಳು ಇನ್ನೂ ಆಳಕ್ಕಿಳಿಯಬೇಕಾದ ಅನಿವಾರ್ಯತೆಯನ್ನೂಮನಗಾಣಬಹುದು.

ಪುರುಷಾಧಿಪತ್ಯದ ಭದ್ರಕೋಟೆಯನ್ನು ಭೇದಿಸುವುದು ಸುಲಭದ ಮಾತೇನಲ್ಲ. ಏಕೆಂದರೆ ಪಿತೃಪ್ರಧಾನತೆಯ ಶ್ರೀರಕ್ಷೆಯಲ್ಲಿ ಈ ಕೋಟೆಯನ್ನು ಸಂರಕ್ಷಿಸಲು ದೇಶದ ಇಡೀ ರಾಜಕೀಯ ವ್ಯವಸ್ಥೆಯೇ ಸಜ್ಜಾಗಿ ನಿಂತಿದೆ. ಇದರೊಂದಿಗೆ ಕಾರ್ಪೋರೇಟ್‌ಮಾರುಕಟ್ಟೆ ಹಾಗೂ ಬೃಹದಾರ್ಥಿಕ ನೆಲೆಗಳೂ ಕಾವಲು ಕಾಯುತ್ತವೆ. ಯಜಮಾನಿಕೆಯ ಸಂಸ್ಕೃತಿಯನ್ನು ಧಿಕ್ಕರಿಸುವ ಮೂಲಕವೇ ಪ್ರತಿಯೊಂದು ಪಕ್ಷದಲ್ಲೂ ಮಹಿಳಾ ಸದಸ್ಯರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಡಬೇಕಿದೆ. ಬಾಹ್ಯ ಸಮಾಜದ ಮಹಿಳಾ ಸಂಘಟನೆಗಳೂ ಈ ನಿಟ್ಟಿನಲ್ಲಿ ಸಕ್ರಿಯವಾಗಬೇಕಿದೆ. ಈ ಪ್ರಕ್ರಿಯೆಗೆ ಸಾಮಾಜಿಕ-ಸಾಂಸ್ಕೃತಿಕ ಸ್ವರೂಪ ನೀಡಿದರೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಮರುಜೀವ ಪಡೆಯಲು ಸಾಧ್ಯ.

ನಾ ದಿವಾಕರ

Tags: BJPFamily PoliticsJDSpatriarchal familystate politics
Previous Post

ಕುಮಾರಸ್ವಾಮಿ ಆಪ್ತರನ್ನು ಸೆಳೆಯುವಲ್ಲಿ ಯಶಸ್ವಿಯಾದ ಡಿ.ಕೆ.ಶಿವಕುಮಾರ್..!‌

Next Post

ಹೊಸ ಶತ್ರುಗಳನ್ನು ಸೋಲಿಸಲು ಒಂದಾದ ಹಳೇ ಶತ್ರುಗಳು..!

Related Posts

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ
ಅಂಕಣ

ಈ ಸ್ವರ ಸಾಮ್ರಾಜ್ಞಿಗೂ ಸಾಟಿ ಯಾರೂ ಇಲ್ಲ

by ಪ್ರತಿಧ್ವನಿ
April 15, 2026
0

ನಾ ದಿವಾಕರ ಹಂ ದೋನೋ ಚಿತ್ರದ “ ಅಭೀ ನಾ ಜಾವೋ ಚೋಡ್‌ ಕರ್‌ ”, ಯಾದೋಂಕಿ ಬಾರಾತ್‌ ಚಿತ್ರದ “ ಚುರಾಲಿಯಾ ಹೈ ತುಮ್‌ ನೆ...

Read moreDetails
ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

April 15, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

ಆಚರಣೆ ಸಂಭ್ರಮದ ನಡುವೆ ಅಂಬೇಡ್ಕರ್‌ ಎಲ್ಲಿದ್ದಾರೆ ?

April 14, 2026
ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

ಒಳದನಿಗೆ ಜೀವತುಂಬಿದ ʼ ಪ್ರತಿಧ್ವನಿ ʼ ಯೊಡನೆ- ನಾ ದಿವಾಕರ  ಲೇಖನ

April 13, 2026
Next Post
ಹೊಸ ಶತ್ರುಗಳನ್ನು ಸೋಲಿಸಲು ಒಂದಾದ ಹಳೇ ಶತ್ರುಗಳು..!

ಹೊಸ ಶತ್ರುಗಳನ್ನು ಸೋಲಿಸಲು ಒಂದಾದ ಹಳೇ ಶತ್ರುಗಳು..!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada