2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಪಕ್ಷದ ನಾಯಕರು ಅಖಾಡಕ್ಕಿಳಿದು ಭರ್ಜರಿ ಮತ ಪ್ರಚಾರ ನಡೆಸುತ್ತಿದ್ದಾರೆ. ಇದರ ಮಧ್ಯೆ ರಾಜ್ಯದಲ್ಲಿ ಪಕ್ಷಾಂತರಗಳು ಸಹ ಜೋರಾಗಿವೆ. ಅದರಂತೆ ಕನಕಪುರದಲ್ಲಿ ಈ ಹಿಂದೆ ತಮ್ಮ ವಿರುದ್ಧ ಸೆಣಸಿದ್ದವರನ್ನೇ ಕಾಂಗ್ರೆಸ್ಗೆ ಸೆಳೆಯುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಯಶಸ್ವಿಯಾಗಿದ್ದಾರೆ.

ಕಳೆದ ವಾರ ಡಿಕೆ ಶಿವಕುಮಾರ್ ಆಪ್ತರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಗಾಳ ಹಾಕಿದ್ದರು. ಪ್ರಭಾಕರ್ ರೆಡ್ಡಿ ಬದಲು ಡಿಕೆ ಶಿವಕುಮಾರ್ ಆಪ್ತೆ ಸುಷ್ಮಾ ರಾಜಗೋಪಾಲ್ ರೆಡ್ಡಿ ಅವರಿಗೆ ಕುಮಾರಸ್ವಾಮಿ ಟಿಕೆಟ್ ನೀಡಿದ್ದರು. ಇದೀಗ ಡಿಕೆ ಬ್ರದರ್ಸ್ , ಕುಮಾರಸ್ವಾಮಿ ಆಪ್ತರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾರಾಯಣಗೌಡ ಹಾಗೂ ಪ್ರಭಾಕರ್ ರೆಡ್ಡಿ ಅವರು ಜೆಡಿಎಸ್ ತೊರೆದು ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾರಾಯಣಗೌಡ ಅವರು ಕಳೆದ ಬಾರಿ ಅಂದರೆ 2018ರಲ್ಲಿ ಕನಕಪುರ ಜೆಡಿಎಸ್ ಅಭ್ಯರ್ಥಿಯಾಗಿ ಡಿಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದರು. ಇದೀಗ ಅವರನ್ನು ಡಿಕೆ ಶಿವಕುಮಾರ್ ಕಾಂಗ್ರೆಸ್ಗೆ ಸೇರಿಕೊಂಡಿದ್ದಾರೆ. ಇನ್ನು ಬೆಂಗಳೂರು ದಕ್ಷಿಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾಕರ್ ರೆಡ್ಡಿ ಅವರು ಸಹ ಇಂದು ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.







