• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ರಾವಿ ನದಿಯ ದಂಡೆಯಲ್ಲಿ

ನಾ ದಿವಾಕರ by ನಾ ದಿವಾಕರ
December 20, 2022
in ಅಭಿಮತ
0
ರಾವಿ ನದಿಯ ದಂಡೆಯಲ್ಲಿ
Share on WhatsAppShare on FacebookShare on Telegram

ಭಾರತ ಶತಮಾನಗಳಿಂದಲೂ ಸಮನ್ವಯದ ಕರ್ಮಭೂಮಿಯಾಗಿಯೇ ಬೆಳೆದುಬಂದಿದೆ. ಇಲ್ಲಿ ಸಾವಿರಾರು ವರ್ಷಗಳಿಂದ ಬೇರೂರಿರುವಂತಹ ಸಾಂಸ್ಕೃತಿಕ ನೆಲೆಗಳು ವೈವಿಧ್ಯಮಯವಾಗಿರುವಷ್ಟೇ ಸಂಘರ್ಷಪೂರ್ಣವೂ ಆಗಿವೆ. ತತ್ವಶಾಸ್ತ್ರೀಯ ನೆಲೆಯಲ್ಲಿ, ತಾತ್ವಿಕ-ಸೈದ್ಧಾಂತಿಕ ನೆಲೆಗಳಲ್ಲಿ ಪರ ವಿರೋಧಗಳ ವಾದ-ವಾಗ್ವಾದಗಳ ನಡುವೆಯೇ ಭಾರತದ ನೆಲದಲ್ಲಿ ಒಂದು ಸಮನ್ವಯತೆಯ ಭಾವ ನೆಲೆ ಕಂಡುಕೊಂಡಿದೆ. ವೈರುಧ್ಯಗಳ ನಡುವೆ ಸಹಬಾಳ್ವೆಯ ಮಾರ್ಗಗಳನ್ನು ಶೋಧಿಸುವ ಅಸಂಖ್ಯಾತ ಚಿಂತಕರು, ಬೋಧಕರು, ತತ್ವಶಾಸ್ತ್ರಜ್ಞರು, ಸಮಾಜ ಸುಧಾರಕರು ಇಲ್ಲಿನ ನೆಲಮೂಲದ ಸಾಂಸ್ಕೃತಿಕ ಕವಲುಗಳನ್ನು ಪರಸ್ಪರ ಮುಖಾಮುಖಿಯಾಗಿಸಿ, ಅನುಸಂಧಾನ ನಡೆಸಿ, ಜನಮಾನಸದ ನಡುವೆ ಸೌಹಾರ್ದತೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬಿತ್ತುತ್ತಾ ಬಂದಿದ್ದಾರೆ. ಹಾಗಾಗಿಯೇ ವಿಶ್ವದ ಎಲ್ಲ ಸೈದ್ದಾಂತಿಕ-ತಾತ್ವಿಕ-ಧಾರ್ಮಿಕ ಚಿಂತನೆಗಳಿಗೂ ಇಲ್ಲಿ ಅವಕಾಶ ದೊರೆತಿದೆ. ಹಾಗೆಯೇ ಸ್ಥಳೀಯವಾಗಿ ಬುದ್ಧ ಚಾರ್ವಾಕರಿಂದ ಹಿಡಿದು ಗಾಂಧಿ ಅಂಬೇಡ್ಕರ್‌ವರೆಗೂ ಹರಡಿರುವ ಸೈದ್ಧಾಂತಿಕ ಹರವಿನಲ್ಲಿ ಈ ದೇಶದ  ಸಾಮಾನ್ಯ ಜನತೆ ತಮ್ಮ ಸಾಮಾಜಿಕ ಬದುಕನ್ನು, ಸಾಂಸ್ಕೃತಿಕ ಆಲೋಚನೆಗಳನ್ನು ರೂಢಿಸಿಕೊಂಡಿದ್ದಾರೆ.

ADVERTISEMENT

ವೈವಿಧ್ಯತೆಯಲ್ಲಿ ಏಕತೆ ಎಂಬ ಘೋಷವಾಕ್ಯದೊಂದಿಗೆ ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಭಾರತ ಇಂದಿಗೂ ಸಹ ಇದೇ ವೈವಿಧ್ಯತೆಯ ನಡುವೆಯೇ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತಿದೆ. ಜಾತಿ, ಧರ್ಮ ಮತ್ತು ಭಾಷೆಗಳ ವೈವಿಧ್ಯತೆಯ ನಡುವೆ ಈ ದೇಶದ ಉದ್ದಗಲಕ್ಕೂ ಕಂಡುಬರುವ ಸಾಂಸ್ಕೃತಿಕ ವೈವಿಧ್ಯತೆಗಳು ಭಾರತದ ಬೌದ್ಧಿಕ ಸಂಪತ್ತನ್ನು ಮತ್ತಷ್ಟು ಸಮೃದ್ಧಗೊಳಿಸುತ್ತಲೇ ಬಂದಿದೆ. ಆದರೆ ಇತ್ತೀಚಿನ ಕೆಲವು ರಾಜಕೀಯ-ಸಾಂಸ್ಕೃತಿಕ ಚಟುವಟಿಕೆಗಳು ಈ ಸಮೃದ್ಧ ಫಸಲಿನ ಕಳೆಗುಂದಿಸುವ ಪ್ರಯತ್ನದಲ್ಲಿವೆ. ತಳಮಟ್ಟದ ಜನಸಮುದಾಯಗಳ ನಡುವೆ ಇಂದಿಗೂ ಜೀವಂತಿಕೆಯಿಂದಿರುವ ಭ್ರಾತೃತ್ವ, ಸೌಹಾರ್ದತೆ, ಸಮನ್ವಯತೆ ಮತ್ತು ಕೂಡುಬಾಳ್ವೆಯ ನೆಲೆಗಳನ್ನು ಶಿಥಿಲಗೊಳಿಸುವ ಪ್ರಯತ್ನಗಳ ನಡುವೆಯೇ ಈ ಉದಾತ್ತ ಭಾವನೆಗಳನ್ನು ಉದ್ಧೀಪನಗೊಳಿಸುವಂತಹ ಸೃಜನಾತ್ಮಕ ಪ್ರಯತ್ನಗಳೂ ನಿರಂತರವಾಗಿ ನಡೆಯುತ್ತಿವೆ. ಸಾಹಿತ್ಯ ಮತ್ತು ಕಲೆಯ ಮೂಲಕ ಅಭಿವ್ಯಕ್ತಗೊಳ್ಳುತ್ತಿರುವ ಈ ಪ್ರಯತ್ನಗಳ ಸಾಲಿನಲ್ಲಿ ರಂಗಭೂಮಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕನ್ನಡದ ರಂಗಭೂಮಿಯೂ ಹೊರತಾದುದಲ್ಲ.

ವಿಭಜನೆಯ ಗಾಯಗಳನ್ನು ಕೆರೆದಷ್ಟೂ ದುರಂತಗಳು ಗೋಚರಿಸುತ್ತಲೇ ಇರುತ್ತವೆ. ಆದರೆ ಇತಿಹಾಸವನ್ನು ಅವಲೋಕಿಸುವಾಗ ಚಾರಿತ್ರಿಕ ಗಾಯಗಳನ್ನು ಕೆರೆದು ನೋಡುವುದಕ್ಕಿಂತಲೂ, ಮುಲಾಮು ಹಚ್ಚುವ ಮೂಲಕ, ಘಾಸಿಗೊಳಿಸಿದ ಸಾಮಾಜಿಕ-ಸಾಂಸ್ಕೃತಿಕ ಸನ್ನಿವೇಶಗಳನ್ನು ಸೂಕ್ಷ್ಮ ಸಂವೇದನೆಯೊಂದಿಗೆ ಅರ್ಥಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹತ್ಯಾಕಾಂಡಗಳ ನಡುವೆಯೇ, ಬಲಿಯಾದ ಸಾವಿರಾರು ಅಮಾಯಕ ಜೀವಗಳ ನಡುವೆಯೇ ಅಲ್ಲಲ್ಲಿ ಮೊಳೆತ ಮಾನವೀಯತೆಯ ಹಸಿರು ಸಸ್ಯಗಳನ್ನು ಗುರುತಿಸುವುದು ಸಮಕಾಲೀನ ಸಂದರ್ಭದ ಅನಿವಾರ್ಯತೆಯೂ ಆಗಿದೆ. ಹಿಂದೂ-ಮುಸ್ಲಿಂ ಎಂಬ ದ್ವಿಮಾನ ದೃಷ್ಟಿಕೋನವನ್ನು ಬದಿಗಿಟ್ಟು, ಮಾನವೀಯ ನೆಲೆಯಲ್ಲಿ ವಿಭಜನೆಯ ಘೋರವನ್ನು ಗಮನಿಸುವಾಗ, ನಮಗೆ ನೆತ್ತರ ಕೋಡಿಯ ನಡುವೆಯೇ, ದ್ವೇಷದ ಹೊಗೆಯ ಮಬ್ಬಿನಲ್ಲೇ, ಮಾನವತೆಯನ್ನು ಮೇಳೈಸುವ ಹಲವಾರು ಪ್ರಸಂಗಗಳು ಎದುರಾಗುತ್ತವೆ. ಇಂತಹ ಪ್ರಸಂಗಗಳನ್ನೇ ಭಾರತದ ಸಾಹಿತ್ಯ ಲೋಕ ಅನಾವರಣಗೊಳಿಸಿರುವುದನ್ನೂ ಗಮನಿಸಿದ್ದೇವೆ. ಭಾರತದ ರಂಗಭೂಮಿ ಇಂತಹ ಸಾಹಿತ್ಯಕ ಪ್ರಯತ್ನಗಳಿಗೆ ರಂಗ ಸ್ಪರ್ಶವನ್ನು ನೀಡುವ ಮೂಲಕ, ಸಮನ್ವಯತೆಯ ಸಂದೇಶವನ್ನು ಕಟ್ಟಕಡೆಯ ವ್ಯಕ್ತಿಯವರೆಗೂ ಕೊಂಡೊಯ್ದಿದೆ.

ಇಂತಹುದೇ ಒಂದು ಪ್ರಯತ್ನವನ್ನು ದೇಶದ ಹಿಂದಿ ಸಾಹಿತ್ಯವಲಯದ ದಿಗ್ಗಜರಲ್ಲೊಬ್ಬರಾದ ಸೈಯದ್‌ ಅಸ್ಗರ್‌ ವಜಾಹತ್‌ ತಮ್ಮ ನಾಟಕವೊಂದರಲ್ಲಿ ಮಾಡಿದ್ದಾರೆ. “ ಜಿಸ್ನೆ ಲಾಹೋರ್‌ ನಹಿ ದೇಖಾ ವೊಹ್ ಜನ್ಮಾ ನಹೀಂ” ಎಂಬ ಈ ನಾಟಕವು ಭಾರತದ ಬಹುತೇಕ ಭಾಷೆಗಳಲ್ಲಿ ರಂಗ ಪ್ರಯೋಗಕ್ಕೊಳಪಟ್ಟಿದೆ. ಕನ್ನಡದಲ್ಲೂ ಇದನ್ನು “ರಾವಿ ನದಿಯ ದಂಡೆಯಲ್ಲಿ” ಎಂಬ ಶೀರ್ಷಿಕೆಯೊಡನೆ ರಂಗಭೂಮಿಗೆ ಅಳವಡಿಸಲಾಗಿದೆ. ಎರಡು ದಶಕಗಳ ಹಿಂದೆಯೇ ಮೈಸೂರು ಸಮುದಾಯ ತಂಡದ ಮೂಲಕ ಪ್ರಸ್ತುತಪಡಿಸಲಾದ ಈ ನಾಟಕದ ವಸ್ತು ಮತ್ತು ಸಂದರ್ಭ ಅಖಂಡ ಭಾರತದ ವಿಭಜನೆಯ ಘಳಿಗೆಗೆ ನಮ್ಮನ್ನು ಕರೆದೊಯ್ಯುತ್ತದೆ. ವಿಭಜಿತ ಉಪಖಂಡದಲ್ಲಿ ಲಾಹೋರ್‌ ಪಾಕಿಸ್ತಾನಕ್ಕೆ ಸೇರುತ್ತದೆ. ಲಾಹೋರ್‌ ನಗರದ ಹವೇಲಿಯೊಂದರಲ್ಲಿ ನೆಲೆಸಿರುವ ಹಿಂದೂ ವೃದ್ಧೆಯೊಬ್ಬಳು ಲಕ್ನೋದಿಂದ ಬರುವ ಸಿಖಂದರ್‌ ಮಿರ್ಝಾ ಕುಟುಂಬಕ್ಕೆ ಆಶ್ರಯ ನೀಡುತ್ತಾಳೆ. ಈ ನಾಲ್ಕು ಗೋಡೆಗಳ ನಡುವೆ ಕ್ರಮೇಣ ಬೆಸೆದುಕೊಳ್ಳುವ ಬಾಂಧವ್ಯ ದೇಶ-ಭಾಷೆ-ಧರ್ಮ-ಗಡಿಗಳ ಸೀಮೆಯನ್ನು ಮೀರಿ ಮಾನವತೆಯ ಉದಾತ್ತ ಶಿಖರವನ್ನು ತಲುಪುವುದೇ ನಾಟಕದ ಮೂಲ ಕಥಾವಸ್ತು. ನಾಲ್ಕು ಗೋಡೆಗಳ ನಡುವೆ ಏರ್ಪಡುವ ಮಾನವೀಯ ಸಂಬಂಧಗಳ ನಡುವೆಯೇ ಬಾಹ್ಯ ಸಮಾಜದಲ್ಲಿನ ಮತೀಯವಾದದ ಅತಿರೇಕ, ಮತಾಂಧತೆಯ ದ್ವೇಷ ಮತ್ತು ಮೂಲ ಇಸ್ಲಾಂ ಧರ್ಮದ ಸಹಾನುಭೂತಿಯ ತತ್ವಗಳು ನಾಟಕದ ಅಂಕಗಳಲ್ಲಿ ಹೃದಯ ತಟ್ಟುವಂತೆ ತೆರೆದುಕೊಳ್ಳುತ್ತವೆ.  

ಆರಂಭದಲ್ಲಿ ತಾನು ಲಾಹೋರಿನ ಹವೇಲಿಯಲ್ಲಿ ನೆಲೆಸಲು ಒಡತಿ ಹಿಂದೂ ಮುದುಕಿಯನ್ನು ಹೇಗಾದರೂ ಹೊರಹಾಕಲು ಯೋಚಿಸುವ ಸಿಖಂದರ್‌ ಮಿರ್ಝಾ ಆಕೆಯ ಪ್ರೀತಿ ವಾತ್ಸಲ್ಯಗಳಿಗೆ ಶರಣಾಗಿ, ಇಡೀ ಕುಟುಂಬವೇ ಆಕೆಯೊಡನೆ ಬಾಳುತ್ತದೆ. ಈ ಕಥಾ ಹಂದರದ ನಡುವೆಯೇ ಅಂಬಾಲದಿಂದ ಲಾಹೋರಿಗೆ ಬಂದಿರುವ ಕವಿ ನಝೀಂ ಕಜ್ಮಿ ಅವರ ಸಂವೇದನಾಶೀಲ ಶಾಯರಿಗಳು ಸುಪ್ತ ಮಾನವೀಯ ಭಾವಗಳನ್ನು ಉದ್ಧೀಪನಗೊಳಿಸುವ ರೀತಿಯಲ್ಲಿ ನಾಟಕದ ದೃಶ್ಯಗಳನ್ನು ಅಲಂಕರಿಸುತ್ತವೆ. ಒಂದೆಡೆ ಹಿಂದೂ ಮುದುಕಿಯನ್ನು ಭಾರತಕ್ಕೆ ರವಾನಿಸುವ ಅಥವಾ ಮುಗಿಸಿಬಿಡುವ ಮತಾಂಧರ ಅಟ್ಟಹಾಸಗಳು ಪ್ರಕಟವಾಗುತ್ತಿರುವಂತೆಯೇ ಮತ್ತೊಂದೆಡೆ ಮೌಲ್ವಿಯನ್ನೂ ಸೇರಿದಂತೆ ಮಾನವೀಯ ಸಂಬಂಧಗಳ ಸಂವೇದನಾತ್ಮಕ ತಂತುಗಳನ್ನು ಮತ್ತೆ ಮತ್ತೆ ಸೃಜಿಸುವ ಪಾತ್ರಗಳು ಮನುಜ ಸಂಬಂಧಗಳ ಸೂಕ್ಷ್ಮ ಎಳೆಗಳನ್ನು ಬಂಧಿಸುತ್ತಲೇ ಹೋಗುತ್ತದೆ. ವಿಭಜನೆಯ ಸುತ್ತ ನಡೆದ ಘಟನೆಗಳು ಹುಟ್ಟುಹಾಕುವ ತಲ್ಲಣಗಳು, ಸಾಮಾನ್ಯ ಜನತೆ ಅನುಭವಿಸುವ ಯಾತನೆ, ವೇದನೆ, ವಿರಹ ಮತ್ತು ಇದರಿಂದಲೇ ಮನದಾಳದಲ್ಲಿ ಹುಟ್ಟಿಕೊಳ್ಳುವ ದ್ವೇಷಾಸೂಯೆಗಳು, ಇವೆಲ್ಲವನ್ನೂ ೧೨೦ ನಿಮಿಷಗಳ ನಾಟಕದಲ್ಲಿ ಹಿಡಿದಿಡುವ ಮೂಲಕ “ ರಾವಿ ನದಿಯ ದಂಡೆಯಲ್ಲಿ “ ಈ ತಲ್ಲಣಗಳ ನಡುವೆಯೇ ಪ್ರೀತಿ ವಾತ್ಸಲ್ಯ ಮತ್ತು ಬಾಂಧವ್ಯಗಳಿಂದ ಸೃಜಿಸುವಂತಹ ಮಾನವೀಯ ಮೌಲ್ಯಗಳನ್ನೂ ಎತ್ತಿಹಿಡಿಯುತ್ತದೆ.

ಮತಶ್ರದ್ಧೆ ಮತ್ತು ಧಾರ್ಮಿಕ ನಂಬಿಕೆಗಳು ಮನುಷ್ಯ ಮನುಷ್ಯನ ನಡುವೆ ಬಾಂಧವ್ಯದ ಸೇತುವೆಗಳಾಗಬೇಕೇ ಹೊರತು, ತಡೆಗೋಡೆಗಳಾಗಕೂಡದು ಎಂಬ ಸಂದೇಶವನ್ನು ನಾಟಕ ಸ್ಪಷ್ಟವಾಗಿ ಸಾರಿ ಹೇಳುತ್ತದೆ. ಅದೇ ವೇಳೆ ಮತಶ್ರದ್ಧೆಯ ಅತಿರೇಕಗಳು ಸೃಷ್ಟಿಸುವಂತಹ ಅಮಾನುಷತೆಯ ಚಿತ್ರಣವನ್ನೂ ಪ್ರೇಕ್ಷಕರ ಮುಂದಿಡುತ್ತದೆ. ಇಹಲೋಕಕ್ಕೆ ವಿದಾಯ ಹೇಳುವ ಹಿಂದೂ ವೃದ್ಧೆಗೆ ಅಂತ್ಯಸಂಸ್ಕಾರ ಮಾಡುವಾಗ ವಾರಸುದಾರರೇ ಇಲ್ಲದ ಆಕೆಯ ದೇಹಕ್ಕೆ ಅಂತಿಮ ಅಗ್ನಿಸ್ಪರ್ಶ ಮಾಡಲು ಸಿಖಂದರ್‌ ಮಿರ್ಝಾ ತಯಾರಾಗುತ್ತಾರೆ. ಅಂತ್ಯಸಂಸ್ಕಾರಕ್ಕೆ ರಾವಿ ನದಿಯ ದಂಡೆಯೇ ಪ್ರಶಸ್ತ ಎಂದು ಹೇಳುವ ಮೂಲಕ ಮೌಲ್ವಿ ನದಿಯ ನೀರು ಎರಡು ದೇಶಗಳ ನಡುವೆ ವಿಭಜನೆಯ ರೇಖೆಯಾದರೂ, ಆ ನೀರಿನಲ್ಲಿ ಮಿಂದ ಮೃತ ದೇಹ ಅಥವಾ ಅಸ್ಥಿ ತನ್ನ ಹಿಂದೂ-ಮುಸ್ಲಿಂ ಧಾರ್ಮಿಕ ಅಸ್ಮಿತೆಗಳನ್ನು ಕಳಚಿಕೊಳ್ಳುತ್ತದೆ ಎಂಬ ಸಂದೇಶವನ್ನು “ ಬೆತ್ತಲೆ ದೇಹಕ್ಕೆ ಹಿಂದೂ ಧರ್ಮವೂ ಇಲ್ಲ ಇಸ್ಲಾಂ ಧರ್ಮವೂ ಇಲ್ಲ ” ಎಂಬ ಹೃದಯಸ್ಪರ್ಶಿ ಸಂಭಾಷಣೆಯ ಮೂಲಕ ನಿರೂಪಕರು ಮುಟ್ಟಿಸುತ್ತಾರೆ. ಕೊನೆಗೆ ಮೃತ ಹಿಂದೂ ವೃದ್ಧೆಗೆ ರಾವಿ ನದಿಯ ದಂಡೆಯೇ ಆಶ್ರಯ ನೀಡುತ್ತದೆ, ಸಿಖಂದರ್‌ ಮಿರ್ಝಾ ” ರಾಮ್‌ ನಾಮ್‌ ಸತ್ಯ ಹೈ “ ಹೇಳುವ ಮೂಲಕ ಭಾವೈಕ್ಯತೆಯ ಸಾಕ್ಷಿಯಾಗುತ್ತಾರೆ. ಇದೇ ವೇಳೆ ಮತಾಂಧರಿಂದ ಹತ್ಯೆಗೊಳಗಾಗುವ ಮೌಲ್ವಿ, ಮತದ್ವೇಷ ಸೃಷ್ಟಿಸುವ ಮತ್ತೊಂದು ಕರಾಳ ಜಗತ್ತಿನ ಪರಿಚಯವನ್ನೂ ಮಾಡಿಸುತ್ತದೆ.

ಮಾಧವ ಖರೆ ಅವರ ಪರಿವರ್ತನ ರಂಗ ಸಮಾಜ,  ಎಸ್‌ ಆರ್‌ ರಮೇಶ್‌ ಅವರ ನಿರೂಪಣೆ ಮತ್ತು ನಿರ್ದೇಶನದಲ್ಲಿ “ ರಾವಿ ನದಿಯ ದಂಡೆಯಲ್ಲಿ ” ನಾಟಕವನ್ನು ಮೈಸೂರಿನ ರಂಗಪ್ರೇಮಿಗಳ ಮುಂದಿಟ್ಟಿದೆ. ಅತ್ಯುತ್ತಮ ನಿರೂಪಣೆ, ಮನಮುಟ್ಟುವ ಸಂಭಾಷಣೆ ಮತ್ತು ಹೃದಯಸ್ಪರ್ಶಿ ಅಭಿನಯದೊಂದಿಗೆ 120 ನಿಮಿಷಗಳ ಕಾಲ, ಮೂಲ ನಾಟಕದ ಕಥಾವಸ್ತುವಿಗೆ ಚ್ಯುತಿ ಬರದಂತೆ, ಉತ್ತರ ಕರ್ನಾಟಕದ ಭಾಷಾ ಸೊಗಡನ್ನು ಬಳಸಿಕೊಂಡು ಪ್ರೇಕ್ಷಕ ವೃಂದಕ್ಕೆ ಈ ಭಾವೈಕ್ಯತೆಯ ಸಂದೇಶ ಸಾರುವ ನಾಟಕವನ್ನು ಎಸ್‌ ಆರ್‌ ರಮೇಶ್‌ ನಮ್ಮ ಮುಂದಿಟ್ಟಿದ್ದಾರೆ. ನುರಿತ, ಅನುಭವಿ ಕಲಾವಿದರೊಂದಿಗೆ, ಎಳೆಯ ಕಲಾವಿದರೂ ಸಹ ತನ್ಮಯತೆ, ತಲ್ಲೀನತೆಯಿಂದ ನಟಿಸಿರುವುದು ನಾಟಕದ ಹಿರಿಮೆ. ಆರಂಭದಿಂದ ಅಂತ್ಯದವರೆಗೂ ಕಥಾವಸ್ತುವಿನಲ್ಲಿ ಅಂತರ್ಗತವಾಗಿರುವ ಸಮನ್ವಯತೆ ಮತ್ತು ಭಾವೈಕ್ಯತೆಯ ಭಾವವನ್ನು ಎಲ್ಲ ನಟರೂ ತಮ್ಮ ಸಹಜಾಭಿನಯದ ಮೂಲಕ ಹೊರಸೂಸುವುದು ನಾಟಕದ ಹೆಗ್ಗಳಿಕೆ. ಸಮಕಾಲೀನ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ವಾತಾವರಣವನ್ನು ಗಮನದಲ್ಲಿಟ್ಟುಕೊಂಡೇ ಸಮಚಿತ್ತತೆಯೊಂದಿಗೆ ಮೂಲ ಕಥಾ ವಸ್ತುವಿನ ನಿರೂಪಣೆ ಮಾಡಲಾಗಿದ್ದು, ನಝೀಂ ಕಝ್ಮಿ ಅವರ ಶಾಯರಿಗಳೊಂದಿಗೆ, ಪ್ರತಿಯೊಂದು ಸಂಭಾಷಣೆಯೂ ಸಹ ಮೂಲ ವಸ್ತುವಿಗೆ ಪೂರಕವಾಗಿಯೇ ಮೂಡಿಬಂದಿದೆ.

ನೆಲದಾಳದಲ್ಲಿ ಇಂದಿಗೂ ಗಟ್ಟಿಯಾಗಿರುವ ಭಾವೈಕ್ಯತೆ ಮತ್ತು ಸಹಬಾಳ್ವೆಯ ನೆಲೆಗಳನ್ನು ಶಿಥಿಲಗೊಳಿಸುವ ಪ್ರಯತ್ನಗಳ ನಡುವೆಯೇ, ಮಾನವ ಸಂಬಂಧಗಳನ್ನು ಮಾನವೀಯ ನೆಲೆಯಲ್ಲೇ ನೋಡುವ ಸಂವೇದನಾಶೀಲ ಪ್ರಯೋಗಗಳಿಗೆ ರಂಗಭೂಮಿ ಸದಾ ಸಿದ್ಧವಾಗಿರುವುದು ಚಾರಿತ್ರಿಕ ಸತ್ಯ. ಎಸ್‌ ಆರ್‌ ರಮೇಶ್‌ ಮತ್ತು ಅವರ ಇಡೀ ತಂಡ ಈ ನಂಬಿಕೆಯನ್ನು ಸಾಕಾರಗೊಳಿಸುವ ರೀತಿಯಲ್ಲಿ ಅಜ್ಗರ್‌ ವಜಾಹತ್‌ ಅವರ ನಾಟಕವನ್ನು “ ರಾವಿ ನದಿಯ ದಂಡೆಯಲ್ಲಿ ” ಪ್ರೇಕ್ಷಕರ ಮುಂದಿರಿಸಿದೆ. ಉತ್ತಮ ರಂಗಸಜ್ಜಿಕೆ, ರಂಗ ವಿನ್ಯಾಸ, ಹಿನ್ನೆಲೆ ಸಂಗೀತ ಮತ್ತು ಎಲ್ಲ ಕಲಾವಿದರ ಸಹಜಾಭಿನಯದೊಂದಿಗೆ ಎಸ್‌ ಆರ್‌ ರಮೇಶ್‌ ಅವರ ಈ ರಂಗಪ್ರಯೋಗ  ಪ್ರೇಕ್ಷಕರ ಸುಪ್ತ ಸಹೃದಯತೆಗೆ ಮತ್ತಷ್ಟು ಉತ್ತೇಜನ ನೀಡುತ್ತದೆ.

ಎಲ್ಲರೂ ನೋಡಲೇಬೇಕಾದ ಒಂದು ಸೃಜನಾತ್ಮಕ ರಂಗಪ್ರಯೋಗ ಎಸ್‌ ಆರ್‌ ರಮೇಶ್‌ ನಿರ್ದೇಶನದ “ರಾವಿ ನದಿಯ ದಂಡೆಯಲ್ಲಿ” ಇದೇ 23ರಂದು ಮೈಸೂರಿನ ಕಿರುರಂಗ ಮಂದಿರದಲ್ಲಿ ಪ್ರದರ್ಶನವಾಗುತ್ತಿದೆ.

Tags: BJPCongress Partyನರೇಂದ್ರ ಮೋದಿಬಿಜೆಪಿ
Previous Post

ಗಡಿ ವಿವಾದ: ಸರ್ಕಾರ ದಿಟ್ಟ ನಿಲುವು ಪ್ರಕಟಿಸಬೇಕು

Next Post

ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿ ದಾವೂದ್ ಗೆ ನ್ಯಾಯಾಂಗ ಬಂಧನ

Related Posts

Top Story

ಸಿಬಿಎಸ್‌ಇ 2025: 10ನೇ ಮತ್ತು 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

by ಪ್ರತಿಧ್ವನಿ
January 12, 2025
0

ಕೇಂದ್ರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) 2025ನೇ ಸಾಲಿನ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಪ್ರಕಾರ, ಪರೀಕ್ಷೆಗಳು ಫೆಬ್ರವರಿ 15,...

Read moreDetails

ಹಿರಿಯ ಸಾಹಿತಿ ನಾಡೋಜಾ ನಾ. ಡಿಸೋಜಾ ನಿಧನ..

January 6, 2025

ಅಭಿಮಾನಿಗಳ ಹಾಗೂ ಚಿತ್ರತಂಡದವರ ಗೆಲುವಿನ ನಗುವನ್ನು ನೋಡಿ ನಾನು ಸಂಭ್ರಮಿಸುತ್ತಿದ್ದೇನೆ .

December 31, 2024

Central Govt: ಕೇಂದ್ರ ಸರ್ಕಾರದಿಂದ ರೈತರಿಗೆ ಸಂತಸದ ಸುದ್ದಿ.. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ..!!

December 6, 2024

ಉಪೇಂದ್ರ ನಿರ್ದೇಶಿಸಿ, ನಟಿಸಿರುವ “UI” ಚಿತ್ರ ಡಿಸೆಂಬರ್ 20 ರಂದು ಬಿಡುಗಡೆ..

December 3, 2024
Next Post
ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿ ದಾವೂದ್ ಗೆ ನ್ಯಾಯಾಂಗ ಬಂಧನ

ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿ ದಾವೂದ್ ಗೆ ನ್ಯಾಯಾಂಗ ಬಂಧನ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada