ಸಭೆಗಳು, ಸಂಧಾನ ಇಷ್ಟೆಲ್ಲಾ ಆದರೂ ಮಹಾರಾಷ್ಟ್ರದವರು ಗಡಿಯಲ್ಲಿ ಪುಂಡಾಟಿಕೆಯನ್ನು ನಿಲ್ಲಿಸಿಲ್ಲ, ಅವರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಕನಿಷ್ಠ ಜ್ಞಾನವೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬನ ಕರ್ತವ್ಯವಾಗಿದ್ದು,. ಮಹಾರಾಷ್ಟ್ರದವರು ಅರ್ಥಮಾಡಿಕೊಳ್ಳಬೇಕು ಎಂದರು
ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವಿನ ಗಡಿವಿವಾದದ ವಿಚಾರದಲ್ಲಿ ರಾಜ್ಯ ಸರ್ಕಾರ ದಿಟ್ಟ ನಿಲುವನ್ನು ತಾಳಬೇಕಿದ್ದು, ಮಹಾರಾಷ್ಟ್ರಕ್ಕೆ ಒಂದಿಂಚೂ ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬ ನಿಲುವನ್ನು ಹೊಂದಬೇಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, 1956ರ ರಾಜ್ಯಗಳ ಮರುವಿಂಘಡನೆ ಕಾಯ್ದೆ ನಂತರ ಅನೇಕ ರಾಜ್ಯಗಳಲ್ಲಿ ಗಡಿ ವಿವಾದ ಸೃಷ್ಟಿಯಾದವು. 1947ಕ್ಕಿಂತ ಮುಂಚಿತವಾಗಿ ಬಿಜಾಪುರ, ಬೆಳಗಾವಿ, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳು ಬಾಂಬೆ ಪ್ರೆಸಿಡೆನ್ಸಿಯಲ್ಲಿದ್ದವು, ಸ್ವಾತಂತ್ರ್ಯ ನಂತರ ಭಾಷಾವಾರು ಪ್ರಾಂತ್ಯಗಳ ರಚನೆ ಮಾಡುವ ಉದ್ದೇಶದಿಂದ ಫಜಲ್ ಆಲಿ ಆಯೋಗವನ್ನು ರಚನೆ ಮಾಡಲಾಯಿತು. ಅನೇಕ ರಾಜ್ಯಗಳಲ್ಲಿ ಭಿನ್ನ ಭಾಷಿಗ ಜನರಿದ್ದರು. ಫಜಲ್ ಆಲಿ ಆಯೋಗದ ಶಿಫಾರಸಿನ ಮೇರೆಗೆ ಮೈಸೂರು ರಾಜ್ಯ ಸ್ಥಾಪನೆ ಆಯಿತು, ಆದರೆ ಬಾಂಬೆ ರಾಜ್ಯದವರು 1956ರ ಕಾಯ್ದೆಯನ್ನು ಒಪ್ಪಿಕೊಳ್ಳಲಿಲ್ಲ, ಅವರ ಒತ್ತಾಯದ ಮೇರೆಗೆ 1966ರಲ್ಲಿ ಮೆಹರ್ ಚಂದ್ ಮಹಾಜನ್ ಆಯೋಗವು ರಚನೆ ಆದದ್ದು, ಆ ಸಂದರ್ಭದಲ್ಲಿ ಎಸ್, ನಿಜಲಿಂಗಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1967ರಲ್ಲಿ ಮಹಾಜನ್ ಆಯೋಗವು ವರದಿ ನೀಡಿತು, ಅದನ್ನು ಸಹ ಮಹಾರಾಷ್ಟ್ರ ಸರ್ಕಾರ ತಿರಸ್ಕಾರ ಮಾಡಿತು, ನಾವು ಅದರಿಂದ ಪೂರ್ಣ ಪ್ರಮಾಣದಲ್ಲಿ ಸಂತೃಪ್ತರಾಗದೇ ಇದ್ದರು ವರದಿಯನ್ನು ಸ್ವಾಗತ ಮಾಡಿದ್ದೆವು.
ಇದಾದ ನಂತರ ಮಹಾರಾಷ್ಟ್ರ ಏಕೀಕರಣ ಸಮಿತಿ ಆರಂಭವಾಯಿತು. ಮಹಾರಾಷ್ಟ್ರದವರು ರಾಜಕೀಯ ಕಾರಣಕ್ಕಾಗಿ ಗಡಿ ವಿಚಾರವನ್ನು ವಿವಾದವೆಂಬಂತೆ ಜೀವಂತವಾಗಿಟ್ಟುಕೊಂಡಿದ್ದಾರೆ. ಮಹಾಜನ್ ವರದಿ ಬಂದ ನಂತರ ಇಲ್ಲಿ ವಿವಾದವೇ ಉಳಿದಿಲ್ಲ. ಎಲ್ಲವೂ ಬಗೆಹರಿದಿದೆ. 2004ರಲ್ಲಿ ಮಹಾರಾಷ್ಟ್ರ ಸರ್ಕಾರ 1956ರ ಮರುವಿಂಘಡನಾ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತು. ಮಹಾರಾಷ್ಟ್ರ ಸರ್ಕಾರ ಸಲ್ಲಿಸಿರುವ ಮನವಿ ವಿಚಾರಣೆಗೆ ಅರ್ಹವಲ್ಲ ಹಾಗೂ ಈ ವಿವಾದವು ಸುಪ್ರೀಂ ಕೋರ್ಟ್ ವಿಚಾರಣಾ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ನಮ್ಮ ಸರ್ಕಾರ ಕೋರ್ಟ್ ನಲ್ಲಿ ಮನವಿ ನೀಡಿತು. ಇದಾದ ನಂತರ ಮಹಾರಾಷ್ಟ್ರ ಸರ್ಕಾರ ಜಗಳ ತೆಗೆಯುತ್ತಲೇ ಬಂದಿದೆ, ಪ್ರಸ್ತುತ ವರ್ಷದ ನವೆಂಬರ್ 23ರಂದು ಈ ಪ್ರಕರಣವು ಕೋರ್ಟ್ ನಲ್ಲಿ ವಿಚಾರಣೆಗೆ ಬಂದಿತ್ತು.
ಈ ವಿಚಾರ ತಿಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಯಾವುದೇ ಒಂದು ಹಳ್ಳಿಯನ್ನು ಕರ್ನಾಟಕಕ್ಕೆ ಬಿಟ್ಟುಕೊಡಲು ನಾವು ಸಿದ್ಧರಿಲ್ಲ ಎಂಬ ಹೇಳಿಕೆಗಳನ್ನು ನೀಡಲು ಆರಂಭ ಮಾಡಿದರು. ಮಹಾಜನ್ ವರದಿಯಿಂದ ನಮಗೆ ಕೆಲವೊಂದುಮ ನಷ್ಟಗಳು ಆದರೂ ಕೂಡ ಅದನ್ನು ನಾವು ಒಪ್ಪಿಕೊಂಡಿದ್ದೇವೆ. ಕಾರಣ ನಮ್ಮದು ಒಕ್ಕೂಟ ವ್ಯವಸ್ಥೆ, ಇಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿತ್ತದೆ. ಯುರೋಪ್ ನಲ್ಲಿ ಕೂಡ ಭಾಷೆಯ ಆಧಾರದಲ್ಲಿ ದೇಶಗಳ ರಚನೆ ಆಗಿದೆ. ಅಮೇರಿಕಾ ಮಾತ್ರ ಇದಕ್ಕೆ ಹೊರತಾಗಿದೆ. ಮಹಾರಾಷ್ಟ್ರದವರು ಚುನಾವಣೆ ಬಂದಾಗ ಅನಗತ್ಯ ಹೇಳಿಕೆಗಳನ್ನು ನೀಡುತ್ತಾರೆ. ಗಡಿಯನ್ನು ಉದ್ವಿಗ್ನತೆ ಸೃಷ್ಟಿಸಿ ಅದರಿಂದ ರಾಜಕೀಯ ಲಾಭ ಪಡೆಯುವ ಕುತಂತ್ರ ಮಾಡುತ್ತಾರೆ.
ಬೆಳಗಾವಿಯಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸುವರ್ಣಸೌಧ ಸ್ಥಾಪನೆಯಾಗಿ ಸದನ ಆರಂಭವಾಗಿದ್ದು 2006ರಲ್ಲಿ, ಸದನ ಆರಂಭವಾದ ದಿನದಿಂದ ಬೆಳಗಾವಿಯಲ್ಲಿ ಮಹಾಮೇಳ ಆಯೋಜನೆ ಮಾಡುವುದು, ನವೆಂಬರ್ 1 ಅನ್ನು ಕಪ್ಪು ದಿನವಾಗಿ ಆಚರಣೆ ಮಾಡುವುದು ಮಾಡುತ್ತಾ ಬಂದಿದ್ದಾರೆ. ಇವೆಲ್ಲ ಅನಗತ್ಯವಾದುದ್ದು.
1986ರಲ್ಲಿ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರಿ ಸೇವೆಗೆ ಸೇರುವವರು ಕಡ್ಡಾಯವಾಗಿ ಕನ್ನಡ ಕಲಿತಿರಬೇಕು ಎಂಬ ನಿಯಮ ರೂಪಿಸಿದರು, ಅದಕ್ಕೂ ಮೊದಲು ಭಾಷಾ ಅಲ್ಪಸಂಖ್ಯಾತರಿಗೆ ವಿನಾಯಿತಿ ಇತು. ಇದಾದ ನಂತರ ಕನ್ನಡ ಬಾವುಟ ಸುಡುವುದು, ಬಸ್ ಗಳಿಗೆ ಬೆಂಕಿ ಹಾಕುವುದು, ಮಸಿ ಬಳಿಯುವುದು ಮಾಡಲು ಆರಂಭ ಮಾಡಿದರು, ಇದರಿಂದ ಕನ್ನಡ ಸಂಘಟನೆಗಳು ಕೂಡ ಪ್ರತಿಕ್ರಿಯೆ ನೀಡಲು ಆರಂಭ ಮಾಡಿದವು. 1986ರಲ್ಲಿ ಗೋಲಿಬಾರ್ ಆಗಿ ಕೆಲವರು ಸಾವನ್ನಪ್ಪಿದರು, ಇದನ್ನು ನೆಪವಾಗಿಟ್ಟುಕೊಂಡು ಅಂದು ಹುತಾತ್ಮರಾದವರ ಮನೆಗಳಿಗೆ ಮಹಾರಾಷ್ಟ್ರದವರು ಭೇಟಿ ನೀಡಲು ಆರಂಭ ಮಾಡಿದರು.
ಸಾಂಗ್ಲಿ ಜಿಲ್ಲೆಯ ಕನ್ನಡಿಗರಿಗೆ ತೊಂದರೆ ಕೊಡುವುದು, ಅವರ ಊರುಗಳಿಗೆ ನೀರು ಕೊಡದಿರುವುದು, ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಜನರನ್ನು ಸಂಕಷ್ಟದಲ್ಲಿ ಬದುಕುವಂತೆ ಮಾಡಿದ್ದಾರೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ 40 ಹಳ್ಳಿಗಳು ರೆಗ್ಯುಲೇಷನ್ ಪಾಸ್ ಮಾಡಿ ನಾವು ಕರ್ನಾಟಕಕ್ಕೆ ಸೇರುತ್ತೇವೆ ಎಂದಿದ್ದಾವೆ. ಇವರಿಗೆ ದೇಶದ್ರೋಹದ ಕೇಸ್ ದಾಖಲಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ.
ವಿವಾದವೇ ಇಲ್ಲದಿರುವುದನ್ನು ವಿವಾದವಿದೆ ಎಂದು ಬಿಂಬಿಸಲು ಹೊರಟಿರುವ ಇಂಥಾ ಸಂದರ್ಭದಲ್ಲಿ ರಾಜ್ಯ ಸರ್ಕಾರ ಒಳ್ಳೆ ಲಾಯರ್ ಅವರನ್ನು ನೇಮಿಸಿ ವಾದ ಮಾಡಿಸಬೇಕು. ಇನ್ನೊಂದು ಮುಖ್ಯ ವಿಚಾರವೆಂದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಮಿತ್ ಶಾ ಅವರು ನಡೆಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳ ನಡುವಿನ ಸಂಧಾನ ಸಭೆಗೆ ಹೋಗಬಾರದಿತ್ತು, ಕಾರಣ ಇಲ್ಲಿ ವಿವಾದ ಇದೆ ಎಂಬುದನ್ನು ತೋರಿಸಬೇಕು ಎಂಬುದೇ ಮಹಾರಾಷ್ಟ್ರದ ಉದ್ದೇಶವಾಗಿತ್ತು. ಅವರ ಉದ್ದೇಶ ಇದರಿಂದ ಈಡೇರಿದಂತಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇಂದ್ರದಲ್ಲಿ ತ್ರಿಪಲ್ ಇಂಜಿನ್ ಸರ್ಕಾರ ಇದೆ. ಇಂಥಾ ಸಂದರ್ಭದಲ್ಲಿ ಬಿಕ್ಕಟ್ಟನ್ನು ನಿವಾರಣೆ ಮಾಡುವುದು ಕೇಂದ್ರ ಸರ್ಕಾರದ ಕೆಲಸ. ಕೇಂದ್ರ ಸರ್ಕಾರ ಮಹಾರಾಷ್ಟ್ರದವರಿಗೆ ಕರೆದು ಇದರ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿದೆ, ಹಾಗಾಗಿ ನೀವು ಇಂಥಾ ಪುಂಡಾಟಗಳನ್ನು ನಿಲ್ಲಿಸಿ ಎಂದು ಬುದ್ದಿ ಹೇಳಬೇಕಿತ್ತು.
ಏಕನಾಥ್ ಶಿಂಧೆ ಸರ್ಕಾರ ಬೆಳಗಾವಿಗೆ ತನ್ನ 3 ಜನ ಮಂತ್ರಿಗಳನ್ನು ಕಳಿಸಿಕೊಡುವುದಾಗಿ ಹೇಳಿತ್ತು. ಸರ್ಕಾರ ಆ ಸಂದರ್ಭದಲ್ಲಿ 144 ಸೆಕ್ಷನ್ ಹಾಕಿ ಅವರು ಬರದಂತೆ ಮಾಡಿದೆ, ನಾವು ಈ ಹಿಂದೆ ಅಧಿಕಾರದಲ್ಲಿ ಇದ್ದಾಗ ಇದೇ ರೀತಿ ಅವರನ್ನು ಬರದಂತೆ ತಡೆದಿದ್ದೆವು. ಈ ವಿಚಾರವನ್ನು ಜೀವಂತವಾಗಿಟ್ಟು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂಬುದು ಮಹಾರಾಷ್ಟ್ರ ಸರ್ಕಾರದ ದುರುದ್ದೇಶ. ಈಗ ಮಹಾರಾಷ್ಟ್ರದ ಮೂರು ಸಚಿವರು ಮತ್ತು ಕರ್ನಾಟಕದ ಮೂವರು ಮಂತ್ರಿಗಳನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಲಾಗಿದೆ, ಆದರೆ ಇದಕ್ಕೆ ರಾಜ್ಯ ಸರ್ಕಾರ ಒಪ್ಪಬಾರದಿತ್ತು. ಕರ್ನಾಟಕದ ನಿಲುವು ಮೊದಲಿಂದಲೂ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬುದಾಗಿತ್ತು, ಆದರೆ ಈ ಸಮಿತಿ ರಚನೆ ಮಾಡಿರುವುದರಿಂದ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ನಮ್ಮ ಪಕ್ಷದ ನಾಯಕರುಗಳ ಆತಂಕ. ನೆಲ, ಜಲ, ಭಾಷೆ ಇಂಥಾ ವಿಚಾರಗಳಲ್ಲಿ ನಾವು ಈ ವರೆಗೆ ಒಮ್ಮತದ ನಿಲುವನ್ನು ಹೊಂದಿದ್ದೆವು. ನಾಡಿನ ಒಂದಿಂಚು ಜಾಗವನ್ನು ಬಿಟ್ಟುಕೊಟ್ಟರು ಅದು ನಾಡದ್ರೋಹವಾಗುತ್ತದೆ. ರಾಜ್ಯದ ಒಂದಿಂಚು ಜಾಗವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಸುಖಾಸುಮ್ಮನೆ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಆತಂಕ ನಿರ್ಮಾಣ ಮಾಡುವುದು ಅವರ ಉದ್ದೇಶವಾಗಿದೆ.
1948ರಲ್ಲೇ ಒಂದು ರೆಗ್ಯುಲೇಷನ್ ಮಾಡಿದ್ದರು. ಈಗ ಮತ್ತೆ ಲೋಕಲ್ ಬೋರ್ಡ್ ನಲ್ಲಿ ಅಧಿಕಾರಕ್ಕೆ ಬಂದು ಹೊಸದಾಗಿ ರೆಗ್ಯುಲೇಷನ್ ಮಾಡಿದ್ದಾರೆ. ಮಹಾಜನ್ ಆಯೋಗ ಮಾಡಿರುವುದೇ ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಆದರೂ ಮತ್ತೀಗ ಅವರೇ ಖ್ಯಾತೆ ತೆಗೆಯುತ್ತಿದ್ದಾರೆ. ಕರ್ನಾಟಕದ ಒಂದಿಂಚು ಜಾಗವನ್ನು ಬಿಟ್ಟುಕೊಡುವುದಿಲ್ಲ ಎಂಬ ಸಂದೇಶ ರಾಜ್ಯದ ಜನರಿಗೆ ಹೋಗಬೇಕು.
ಒಂದು ರಾಜ್ಯದವರು ಇನ್ನೊಂದು ರಾಜ್ಯಕ್ಕೆ ಬರಬೇಡಿ ಎಂದು ಹೇಳಲು ಸಾಧ್ಯವಿಲ್ಲ ಆದರೆ ಮಹಾರಾಷ್ಟ್ರದವರ ಉದ್ದೇಶ ಒಳ್ಳೆಯದಿಲ್ಲ ಎಂಬ ಕಾರಣಕ್ಕೆ ಅವರನ್ನು ತಡೆಯಬೇಕಾಗಿದೆ. ಇಲ್ಲಿ ಬಂದು ಎಂಇಎಸ್ ನವರೊಂದಿಗೆ ಸಭೆ ನಡೆಸಿ ಕಿತಾಪಕಿ ಮಾಡಲು ಬರುತ್ತೇವೆ ಎಂದರೆ ಅವರನ್ನು ಸುಮ್ಮನೆ ಒಳಗೆ ಬಿಡಲಾಗುತ್ತದಾ? ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷ ಸಭೆ ಮಾಡಿದೆ, ರಾಜ್ಯದಲ್ಲೂ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆಯುವುದಾಗಿ ಹೇಳಿ ಕರೆಯಲಿಲ್ಲ, ಅಮಿತ್ ಶಾ ಅವರ ಭೇಟಿ ಮಾಡುವ ಮೊದಲು ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದರೆ ಇನ್ನಷ್ಟು ಶಕ್ತಿ ಬರುತ್ತಿತ್ತು, ಸರ್ಕಾರದ ಜೊತೆ ನಾವಿದ್ದೇವೆ ಎಂಬ ಧೈರ್ಯ ತುಂಬುತ್ತಿದ್ದೆವು.
ಸಭೆಗಳು, ಸಂಧಾನ ಇಷ್ಟೆಲ್ಲಾ ಆದರೂ ಮಹಾರಾಷ್ಟ್ರದವರು ಗಡಿಯಲ್ಲಿ ಪುಂಡಾಟಿಕೆಯನ್ನು ನಿಲ್ಲಿಸಿಲ್ಲ, ಅವರಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ ಎಂಬ ಕನಿಷ್ಠ ಜ್ಞಾನವೇ ಇಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ದೇಶದ ಸಾರ್ವಭೌಮತ್ವವನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬನ ಕರ್ತವ್ಯವಾಗಿದ್ದು,. ಮಹಾರಾಷ್ಟ್ರದವರು ಅರ್ಥಮಾಡಿಕೊಳ್ಳಬೇಕು ಎಂದರು