‘ದೇಶದಲ್ಲಿ ಕೇವಲ 37.13% ಶಾಲೆಗಳು ಮಾತ್ರ ಕ್ರಿಯಾತ್ಮಕ ಕಂಪ್ಯೂಟರ್ ಸೌಲಭ್ಯವನ್ನು ಹೊಂದಿದ್ದು, 2019-20ರಲ್ಲಿ ಕೇವಲ 22.28% ಶಾಲೆಗಳು ಮಾತ್ರ ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ’ ಎಂದು ಯುನಿಫೈಡ್ ಡಿಸ್ಟ್ರಿಕ್ ಇನ್ಫೋರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ (UDISE) ಪ್ಲಸ್ ವರದಿ ಮಾಡಿದೆ.
‘ಸರ್ಕಾರಿ ಶಾಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೇವಲ 28.55% ಶಾಲೆಗಳು ಮಾತ್ರ ಕ್ರಿಯಾತ್ಮಕ ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿವೆ ಮತ್ತು 11.58% ಶಾಲೆಗಳಲ್ಲಿ ಇಂಟರ್ನೆಟ್ ಲಭ್ಯವಿವೆ. ಆದರೆ ಇದು ಕಳೆದ ವರ್ಷಕ್ಕಿಂತ ಅಲ್ಪ ಮಟ್ಟದ ಸುಧಾರಣೆ ಕಂಡಿದ್ದು, ಕಂಪ್ಯೂಟರ್ ಸೌಲಭ್ಯದಲ್ಲಿ ಸುಮಾರು 6% ರಷ್ಟು ಮತ್ತು ಇಂಟರ್ನೆಟ್ ಸಂಪರ್ಕವು ಸುಮಾರು 3.5% ರಷ್ಟು ಹೆಚ್ಚಿದೆ’ ಎಂದು ವರದಿ ತಿಳಿಸಿದೆ.

‘2012-13 ರಲ್ಲಿ 36.3% ರಷ್ಟು ಶಾಲೆಗಳು ಕೈ ತೊಳೆಯುವ ಸೌಲಭ್ಯವನ್ನು ಹೊಂದಿತ್ತು. ಆದರೆ 2019-20ರಲ್ಲಿ 90% ರಷ್ಟು ಶಾಲೆಗಳು ಈ ಸೌಲಭ್ಯವನ್ನು ಹೊಂದುವ ಮೂಲಕ ಅಭಿವೃದ್ಧಿಯ ಪಥ ಕಂಡಿದೆ. 2019-20ರಲ್ಲಿ 83% ಕ್ಕಿಂತ ಹೆಚ್ಚು ಶಾಲೆಗಳು ವಿದ್ಯುತ್ ಸೌಕರ್ಯ ಹೊಂದಿದ್ದು, ಹಿಂದಿನ ವರ್ಷಕ್ಕಿಂತ 7% ರಷ್ಟು ಸುಧಾರಣೆಯಾಗಿದೆ. ಅದಾಗ್ಯೂ, ಕೇವಲ 80.16% ಶಾಲೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಸಮರ್ಪಕವಾಗಿದೆ. 2012-13ರಲ್ಲಿ ಸುಮಾರು 54.6% ಶಾಲೆಗಳು ವಿದ್ಯುತ್ ವ್ಯವಸ್ಥೆಯನ್ನು ಹೊಂದಿದ್ದವು ‘ಎಂದು ವರದಿಯಲ್ಲಿ ತಿಳಿಸಲಾಗಿದೆ.

‘2019-20ರಲ್ಲಿ 82% ಕ್ಕೂ ಹೆಚ್ಚು ಶಾಲೆಗಳು ವಿದ್ಯಾರ್ಥಿಗಳ ವೈದ್ಯಕೀಯ ತಪಾಸಣೆ ನಡೆಸಿದ್ದು, ಹಿಂದಿನ ವರ್ಷಕ್ಕಿಂತ (2018-19) 4% ಕ್ಕಿಂತ ಹೆಚ್ಚಾಗಿದೆ. ಹಾಗೂ 2012-13ರ ಸಂದರ್ಭದಲ್ಲಿ ಸುಮಾರು 61.1% ಶಾಲೆಗಳು ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿದೆ.‘ದೇಶದಲ್ಲಿ 2019-20ರಲ್ಲಿ 84% ಕ್ಕಿಂತ ಹೆಚ್ಚು ಶಾಲೆಗಳು ಗ್ರಂಥಾಲಯವನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ ಸುಮಾರು 4% ರಷ್ಟು ಸುಧಾರಣೆಯಾಗಿದೆ. 2012-13ರಲ್ಲಿ ಸುಮಾರು 69.2% ಶಾಲೆಗಳು ಗ್ರಂಥಾಲಯವನ್ನು ಹೊಂದಿದ್ದವು” ಎಂದು ವಿವರಿಸಿದೆ.
‘93.77% ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ವ್ಯವಸ್ಥೆಯಿದ್ದು, 93.23% ಬಾಲಕಿಯರ ಶಾಲೆ ಮತ್ತು ಸಹ-ಶಿಕ್ಷಣ ಶಾಲೆಗಳಲ್ಲಿ ಬಾಲಕಿಯರ ಹಾಗೂ 91.07% ಬಾಲಕರ ಶಾಲೆ ಮತ್ತು ಸಹ-ಶಿಕ್ಷಣ ಶಾಲೆಗಳಲ್ಲಿ ಶೌಚಾಲಯಗಳ ವ್ಯವಸ್ಥೆಯಿದೆ. ಕೇವಲ 20.66% ಶಾಲೆಗಳು ವಿಶೇಷ ಅಗತ್ಯವಿರುವ ಮಕ್ಕಳಿಗೆ (ಸಿಡಬ್ಲ್ಯುಎಸ್ಎನ್) ಶೌಚಾಲಯವನ್ನು ಹೊಂದಿವೆ’ ಎಂದು ವಿಶ್ಲೇಷಿಸಿದೆ.

ಯುನಿಫೈಡ್ ಡಿಸ್ಟ್ರಿಕ್ ಇನ್ಫೋರ್ಮೇಶನ್ ಸಿಸ್ಟಮ್ ಫಾರ್ ಎಜುಕೇಶನ್ (UDISE) ಸಂಸ್ಥೆಯು ಶಿಕ್ಷಣ ಸಚಿವಾಲಯವು 2012-13 ರಲ್ಲಿ ಪ್ರಾರಂಭಿಸಿದ ಸಂಸ್ಥೆಯಾಗಿದ್ದು, ಇದು 1.5 ದಶಲಕ್ಷಕ್ಕೂ ಹೆಚ್ಚು ಶಾಲೆಗಳು, 8.5 ದಶಲಕ್ಷ ಶಿಕ್ಷಕರು ಮತ್ತು 250 ದಶಲಕ್ಷ ಮಕ್ಕಳನ್ನು ಒಳಗೊಂಡ ಶಾಲಾ ಶಿಕ್ಷಣದ ನಿರ್ವಹಣಾ ವ್ಯವಸ್ಥೆಯ ಮಾಹಿತಿಯನ್ನು ಕಲೆಹಾಕುವ ಸಂಸ್ಥೆಯಾಗಿದೆ. UDISE ಪ್ಲಸ್ UDISE ನ ನವೀಕರಿಸಿದ ಆವೃತ್ತಿಯಾಗಿದೆ.
INPUTS:THE NEWS MINUTE