ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, 2017 ರ ದಸರಾ ಜಂಬೂ ಸವಾರಿ ದಿನ ಲಲಿತ್ ಮಹಲ್ ಪ್ಯಾಲೇಸ್‌ನಲ್ಲಿ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ನಂತರ ಅಂಬಾರಿಗೆ ಪುಷ್ಪಾರ್ಚನೆ ಮಾಡಿದ್ದರು. ಇದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರೇ ನಿಮ್ಮ ಶ್ರೀಮತಿಯವರ ಬಳಿ ಮಾಂಸ ತಿಂದು ಚಾಮುಂಡಿ ತಾಯಿ ದರ್ಶನಕ್ಕೆ ಅವರು ಹೋಗುತ್ತಾರಾ ಅಂತಾ ಕೇಳಿ. ನಿಮ್ಮ ಮಾತನ್ನು ಒಪ್ತಾರ? ಸಿದ್ದರಾಮನ ಹುಂಡಿಯಲ್ಲಿ ಸಿದ್ದರಾಮೇಶ್ವರ ಜಾತ್ರೆಯಲ್ಲಿ ಸಿಹಿ ಊಟ ಮಾಡಿಸಿದ್ದು ಯಾಕೆ? ಮಾಂಸದ ಊಟ ಯಾಕೆ ಮಾಡಿಸಲಿಲ್ಲ? ಜಮೀರ್ ಖಾನ್ ಗೆ ನೀವು ಹಂದಿ ಮಾಂಸ ತಿನ್ನಬಾರದು ಅಂತಾ ದೇವರು ಹೇಳಿಲ್ಲ ಅಂತಾ ಹೇಳಿ ನೋಡೋಣಾ ಎಂದು ಕೇಳಿದ್ದಾರೆ.

ಸಿದ್ದರಾಮಯ್ಯ ಅವರು ಅವತ್ತು ವೀರಶೈವ – ಲಿಂಗಾಯತ ಧರ್ಮ ಒಡೆದರು. ಇವತ್ತು ಮಾಂಸ ತಿಂದು ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬಸವ ಅನುಯಾಯಿಗಳ ನಂಬಿಕೆ ಒಡೆದಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದ ಪರಿಣಾಮ ಇದನ್ನು ವಿರೋಧಿಸಿ ಇದೇ ತಿಂಗಳು 26ರಂದ ಕೊಡಗು ಚಲೋ ಮಾಡ್ತಿವಿ ಎಂದು ಕಾಂಗ್ರೆಸ್ ಹೇಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೊಡಗಿಗೆ ಟಿಪ್ಪು ಸುಲ್ತಾನ್ ಬಂದಾಗಲೇ ಕೊಡವರು ಹೆದರಲಿಲ್ಲ. ಇನ್ನು ಸಿದ್ದು ಸುಲ್ತಾನ್ ಬಂದರೆ ಹೆದರುತ್ತೀವಾ? ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ಮೈಸೂರು, ಮಂಡ್ಯ, ಹಾಸನ ಮಾತ್ರವಲ್ಲ ಪಕ್ಕದ ಕೇರಳದ ನಿಮ್ಮ ಸಾಕು ಮಕ್ಕಳನ್ನು ಕರೆದುಕೊಂಡು ಬನ್ನಿ.