ರಾಜ್ಯದ ಮೂರು ಪಾಲಿಕೆಗಳಿಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬೆಳಗಾವಿಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯಭೇರಿ ಬಾರಿಸಿದರೆ, ಇತ್ತ ಹುಬ್ಬಳ್ಳಿ-ಧಾರವಾಡ, ಕಲಬುರಗಿ ಪಾಲಿಕೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿಯಂತೂ ಮೂರು ಪಾಲಿಕೆಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಈ ಮಧ್ಯೆ ಪಾಲಿಕೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಾಗುತ್ತಾ? ಎಂಬ ಚರ್ಚೆಗಳು ನಡೆಯುತ್ತಿವೆ.
ಕರ್ನಾಟಕ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಮೂರು ಪಾಲಿಕೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದ ವೋಟ್ಗಳು ಮೂರು ಪಕ್ಷಗಳ ಭವಿಷ್ಯವನ್ನ ತೆರೆದಿಟ್ಟಿವೆ. ಈಗ ಬೆಳಗಾವಿಯಲ್ಲಿ ಬಿಜೆಪಿ ಐತಿಹಾಸಿಕ ಗೆಲವು ಸಾಧಿಸಿದೆ. ಹುಬ್ಬಳ್ಳಿ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಮ್ಯಾಜಿಕ್ ನಂಬರ್ ಸಿಕ್ಕಿಲ್ಲ.
ಕಲಬುರಗಿ ಪಾಲಿಕೆ ಚುನಾವಣೆಯಲ್ಲೂ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದಿದೆಯಾದರೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಜೆಡಿಎಸ್, ಪಕ್ಷೇತರರ ಬೆಂಬಲದೊಂದಿಗೆ ಗದ್ದುಗೆ ಹಿಡಿಯಲು ಮುಂದಾಗಿವೆ ಎಂಬುದು ಮಾತ್ರ ಸ್ಪಷ್ಟ.
ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ಆಡಳಿತರೂಢ ಬಿಜೆಪಿ ಪಕ್ಷ ಮೂರರಲ್ಲಿ ಒಂದು ಪಾಲಿಕೆಯನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇನ್ನು ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಅಧಿಕಾರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇನ್ನು ಕಲಬುರಗಿಯಲ್ಲೂ ಕಾಂಗ್ರೆಸ್ ಇದೇ ಸ್ಥಿತಿಯಲ್ಲಿದೆ.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದ ಎದುರಾದ ಮೊದಲ ಚುನಾವಣೆ ಇದಾಗಿದೆ. ಮೂರು ಮಹಾನಗರ ಪಾಲಿಕೆಗಳಲ್ಲೂ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿರುವುದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು.
ಪಾಲಿಕೆ ಚುನಾವಣೆ ಫಲಿತಾಂಶ ಹೊಸ ನಾಯಕರಿಗೆ ಆತ್ಮವಿಶ್ವಾಸ ತುಂಬಿದೆ. ಇನ್ನು ಈ ಚುನಾವಣೆಯಿಂದ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯಾದರೂ ಸ್ಥಳೀಯವಾಗಿ ಮಾತ್ರ ಸಾರ್ವಜನಿಕರು ಪಕ್ಷದೊಂದಿಗೆ ಇದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಮೂರು ಪಾಲಿಕೆಗಳಲ್ಲಿ ಎರಡು ಉತ್ತರ ಕರ್ನಾಟಕಕ್ಕೆ ಸೇರಿವೆ. ಒಂದು ಮಾತ್ರ ಕಲ್ಯಾಣ ಕರ್ನಾಟಕದ ಭಾಗವಾಗಿದೆ. ಈ ಚುನಾವಣೆ ಫಲಿತಾಂಶದಿಂದ ಈಗಲೂ ಉತ್ತರ ಕರ್ನಾಟಕದ ಜನರ ಒಲವು ಬಿಜೆಪಿ ಪರವಾಗಿದೆ ಎಂಬುದು ಸಾಬೀತಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ಗೆ ನೆಲೆಯೇ ಇಲ್ಲ ಎಂಬುದು ಮತ್ತೊಮ್ಮೆ ರುಜುವಾತಾಗಿದೆ.
ಇನ್ನೊಂದೆಡೆ ರಾಜ್ಯದ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಇದರ ಮೇಲೆ ಪಾಲಿಕೆ ಚುನಾವಣೆ ಫಲಿತಾಂಶ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೇ ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಕರೆಯಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹೀಗಾಗಿ ಬಿಜೆಪಿಗೆ ಇನ್ನಷ್ಟು ಬಲ ಸಿಗುವ ಸಾಧ್ಯತೆ ಇದೆ. ಇದು ಮುಂದಿನ ಬಿಬಿಎಂಪಿ ಚುನಾವಣೆ ಮೇಲೆ ಇಂಪಾಕ್ಟ್ ಆಗಲಿದೆ.
ಪಾಲಿಕೆ ಫಲಿತಾಂಶವೂ ಬಿಬಿಎಂಪಿ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕೇಸರಿ ಪಕ್ಷದ್ದೇ ಗೆಲುವು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.