ನರೇಂದ್ರ ಮೋದಿ ಅಥವಾ ಇನ್ಯಾರಿಗೂ ನಾನು ಹೆದರುವುದಿಲ್ಲ. ನಾನೊಬ್ಬ ಸ್ವಚ್ಛ ವ್ಯಕ್ತಿ, ನನ್ನನ್ನು ಸುಮ್ಮನಿರಿಸಲು ಯಾರಿಗೂ ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪಕ್ಷದ ಪ್ರಧಾನ ಕಛೇರಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಖೇತಿ ಕಾ ಕಾನೂನ್ ಬುಕ್ಲೆಟ್ ಬಿಡುಗಡೆಗೊಳಿಸಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಾನು ಪ್ರಾಮಾಣಿಕ ಚಾರಿತ್ರ್ಯ ಇರುವ ವ್ಯಕ್ತಿ, ನನ್ನಲು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ನಾನೊಬ್ಬ ದೇಶಭಕ್ತ. ನನ್ನ ದೇಶವನ್ನು ನಾನು ರಕ್ಷಿಸುತ್ತೇನೆ. ಎಲ್ಲರೂ ನನ್ನ ವಿರುದ್ಧ ನಿಂತರೂ ಹೋರಾಟವೇ ನನ್ನ ಧರ್ಮವೆಂಬಂತೆ ನಾನು ಒಬ್ಬಂಟಿಯಾಗಿಯೇ ಹೋರಾಡುತ್ತೇನೆ. ಭಾರತ ಮತ್ತೊಮ್ಮೆ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದೆ ಎಂದು ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳು ಭಾರತೀಯ ಕೃಷಿ ವ್ಯವಸ್ಥೆಯನ್ನು ನಾಶಮಾಡಲು ಉದ್ದೇಶಿಸಿವೆ.ಒಂದು ದೊಡ್ಡ ದುರಂತವು ನಮ್ಮೆದುರಿದೆ. ನಾನು ಕೇವಲ ರೈತರ ಬಗ್ಗೆ ಮಾತನಾಡುತ್ತಿಲ್ಲ, ಏಕೆಂದರೆ ಅದು ಒಂದೇ ಸಮಸ್ಯೆ ಅಲ್ಲ. ಈ ದೇಶವನ್ನು ನಂಬುವ ಯುವಕರು, ಅವರು ಎಚ್ಚರಿಕೆಯಿಂದ ಈ ಮಾತನ್ನು ಆಲಿಸಬೇಕಾಗಿದೆ. ನಾವು ಸರ್ಕಾರಿ ಉದ್ಯಮಗಳು, ವಿಮಾನ ನಿಲ್ದಾಣಗಳು, ಟೆಲಿಕಾಂ, ವಿದ್ಯುತ್, ಚಿಲ್ಲರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ಎಲ್ಲಾ ಕ್ಷೇತ್ರಗಳು ಭಾರತದ ಬೆರಳೆಣಿಕೆಯ ಮಂದಿಯ ಕೈ ಸೇರುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಏಕಸ್ವಾಮ್ಯಗೊಳಗಾಗುತ್ತಿವೆ. ಪ್ರಧಾನ ಮಂತ್ರಿಗಳಿಗೆ ಹತ್ತಿರವಿರುವ ಮತ್ತು ಮಾಧ್ಯಮ ಬೆಂಬಲ ಹೊಂದಿರುವ ಬೆರಳೆಣಿಕೆಯ ಮಂದಿ ಈ ದೇಶದ ಪಾರುಪತ್ಯ ಹೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಇಡೀ ವ್ಯವಸ್ಥೆಯನ್ನು ಈ ಬೆರಳೆಣಿಕೆಯ ಮಂದಿ ಕೊಂಡುಕೊಳ್ಳುತ್ತಿದ್ದಾರೆ. ಹಾಗೂ ರೈತರು ಅವರ ಬೆಲೆಯನ್ನು ಪಡೆಯುವುದಿಲ್ಲ, ಇದರಿಂದ ಮಧ್ಯಮ ವರ್ಗದವರಿಗೂ ತೊಂದರೆ ಉಂಟಾಗಲಿದೆ ಎಂದು ರಾಹುಲ್ ಎಚ್ಚರಿಸಿದ್ದಾರೆ.