ಕರೋನಾ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆಸಿಗದೆ ಉಳಿಯುವ ಜೀವಗಳು ಪ್ರಾಣ ಬಿಟ್ಟಿವೆ. ಬೆಡ್, ಆಕ್ಸಿಜನ್, ಔಷಧಿಗಳು ರಾಜ್ಯದಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿರುವುದು ವರದಿಯಾಗುತ್ತಲೇ ಇದೆ. ಈ ಮಧ್ಯೆ ಗದಗದಲ್ಲಿ ರೆಮಿಡಿಸಿವರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.
ಮಹ್ಮದ್ ಇಸ್ಮಾಯಿಲ್, ಪಿರೋಜ್ ಖಾನ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್ ಗವಿಸಿದ್ದಯ್ಯ, ರಮೇಶ್ ಬಂಧಿತ ಆರೋಪಿಗಳಾಗಿದ್ದು, ರೆಮಿಡಿಸಿವಿರ್ ಇಂಜಕ್ಷನ್ನನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ಗುಪ್ತ ಮಾಹಿತಿ ಸಂಗ್ರಹಿಸಲಾಗಿತ್ತು. ಸೈಬರ್ ಪೊಲೀಸ್ ಇನ್ಸಪೆಕ್ಟರ್ ಮಹಾಂತೇಶ ಟಿ ಅವರ ನೇತೃತ್ವದ ತಂಡ ಮುಳಗುಂದ ರಸ್ತೆಯ ರಾಧಾಕೃಷ್ಣ ನಗರದ ಹತ್ತಿರ ಆರೋಪಿಗಳನ್ನು ಬಂಧಿಸಿದ್ದಾರೆ. ಖಾಸಗಿ ಆಸ್ಪತ್ರೆ ನರ್ಸ್ ಜ್ಯೋತಿ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ನರ್ಸ್, ಜಿಮ್ಸ್ ನ ಲ್ಯಾಬ್ ಟೆಕ್ನಿಷಿಯನ್, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಬಂಧಿತ ಆರೋಪಿಗಳು 3 ಸಾವಿರ ರೂಪಾಯಿ ಔಷಧವನ್ನು 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಂಧಿತರಿಂದ ವಶಪಡಿಸಿಕೊಂಡಿರುವ 14 ರೆಮಿಡಿಸಿವರ್ ಸರ್ಕಾರ ನಿಗದಿಪಡಿಸಿದ ಮೌಲ್ಯ ರೂ. 48,860 ಇದೆ. ಆದರೆ, ಆರೋಪಿತರು ರೂ. 30 ಸಾವಿರದಂತೆ ರೂ. 4,20,000ನ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಸದ್ಯ ಬಂಧಿತರಿಂದ ರೂ. 2,500 ನಗದು ಹಾಗೂ 4 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ತನಿಖೆಯನ್ನು ಗದಗ ಗ್ರಾಮೀಣ ಸಿಪಿಐ ರವಿ ಕಪ್ಪತ್ತನವರು ಮುಂದುವರೆಸಲಿದ್ದಾರೆ ಎಂದು ಎಸ್ಪಿ ಯತೀಶ್ ಎನ್ ಹೇಳಿದ್ದಾರೆ.