ಸುಸಂಸ್ಕೃತ ಅನ್ನಿಸಿಕೊಂಡ ನಾಗರಿಕ ಸಮಾಜ ಶತಮಾನದಿಂದಲೂ ಆದಿವಾಸಿ, ಬುಡಕಟ್ಟು ಜನಾಂಗಗಳನ್ನು ಅನಾಗರಿಕವಾಗಿಯೇ ನಡೆಸಿಕೊಂಡು ಬಂದಿದೆ. ಕಳ್ಳತನ, ದರೋಡೆ, ದಂಗೆ ಎದ್ದಾಗೆಲ್ಲಾ ಈ ಜನಾಂಗಗಳನ್ನೇ ಮೊದಲು ಅನುಮಾನಿಸಲಾಗುತ್ತದೆ. ಈ ದೇಶದ ಜೈಲಿನ ರೆಕಾರ್ಡ್‌ಗಳನ್ನು ಒಮ್ಮೆ ತೆರೆದು ನೋಡಿದರೆ ಸಾಕು ಸಾಲು ಸಾಲು ಆದಿವಾಸಿಗಳ ಹೆಸರು ಕಣ್ಣಿಗೆ ರಾಚುತ್ತವೆ. ಕಾಡಲ್ಲೇ ಬದುಕುವ, ಅಕ್ಷರ ಜ್ಞಾನವಿಲ್ಲದ, ಇದ್ದರೂ ನ್ಯಾಯಕ್ಕಾಗಿ ಹೋರಾಡುವ ಸಾಮರ್ಥ್ಯವಿಲ್ಲದ ಇವರನ್ನು ಬಂಧಿಸುವುದು, ನಕ್ಸಲ್ ಅನ್ನುವ ಹಣೆಪಟ್ಟಿ ಕಟ್ಟುವುದು ಸುಲಭ. ನಮ್ಮ ಪೊಲೀಸ್ ವ್ಯವಸ್ಥೆಗಂತೂ ಇವರು ಅತ್ಯಂತ ಸುಲಭ ಗುರಿ.
ಇದಕ್ಕೊಂದು ತಾಜಾ ಉದಾಹರಣೆ ಛತ್ತೀಸ್ಗಢದ ದಂತೇವಾಡದ ಪೊಲೀಸ್ ಡಿಟೆನ್ಷನ್ ಸೆಂಟರ್ ಅಥವಾ ಪೊಲೀಸರ ಮಾತಿನಲ್ಲಿ ಹೇಳುವುದಾದರೆ ‘ಶಕ್ತಿಕುಂಜ್’. ಅಲ್ಲಿ ನಡೆಯುತ್ತಿರುವ ದಬ್ಬಾಳಿಕೆ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತಿದೆ. ಭಯ, ಆತಂಕ, ಅಸಹಾಯಕತೆಗಳೊಂದಿಗೆ ನೂರಾರು ಆದಿವಾಸಿ ಜನ ಈ ಡಿಟೆನ್ಷನ್ ಸೆಂಟರ್‌ಗಳಲ್ಲಿ ದಿನ ದೂಡುತ್ತಿದ್ದಾರೆ. ಪೊಲೀಸರ ಪ್ರಕಾರ ಇವರೆಲ್ಲಾ ಒಂದು ಕಾಲದ ನಕ್ಸಲರು ಮತ್ತು ಈಗ ಸ್ವ-ಇಚ್ಛೆಯಿಂದ ಪೊಲೀಸರಿಗೆ ಶರಣಾಗಿರುವವರು. ಇತ್ತೀಚೆಗೆ ಈ ಡಿಟೆನ್ಷನ್ ಸೆಂಟರಿನಲ್ಲಿ ಸಾಮೂಹಿಕ ವಿವಾಹದ ಏರ್ಪಾಡನ್ನೂ ಮಾಡಲಾಗಿತ್ತು. ಪೊಲೀಸರ ಪ್ರಕಾರ ಇದೂ ಸ್ವ ಇಚ್ಛೆಯಿಂದಲೇ ಆಗುತ್ತಿರುವ ವಿವಾಹ ಬಂಧನ. ಆದರೆ ಅಲ್ಲಿಗೆ ಭೇಟಿ ನೀಡಿದ ಪತ್ರಕರ್ತರು ಅಲ್ಲಿ ‘ಸ್ವ-ಇಚ್ಛೆ’ಯ ಯಾವ ಕುರುಹೂ ಕಾಣಿಸಲಿಲ್ಲ ಎನ್ನುತ್ತಾರೆ.
‘ದಿ ವೈರ್’ನ ಪತ್ರಕರ್ತ ಸೋಮುಲು ಎಂಬ ಈಗಷ್ಟೇ ಮದುವೆಯಾದ ಯುವಕನಲ್ಲಿ ಈ ಬಗ್ಗೆ ಪ್ರಶ್ನಿಸಿದಾಗ “ಈ ಬಂಧನ ಶಿಬಿರದಲ್ಲಿ ಬದುಕುಳಿಯಲು ನನಗೆ ಲಭ್ಯವಿರುವ ಏಕೈಕ ಆಯ್ಕೆಯಿದು” ಎಂದು ಹೇಳಿರುವುದಾಗಿ ವರದಿಯಾಗಿದೆ. ಸೋಮುಲು ಅವರ ಪತ್ನಿ ಹದಿನೇಳು ವರ್ಷದ, ಸ್ಥಳೀಯ ಗೋಂಡಿ ಭಾಷೆ ಮಾತ್ರ ಮಾತನಾಡಬಲ್ಲ ಕೋಸಿ ಪತ್ರಕರ್ತರ ಯಾವ ಪ್ರಶ್ನೆಗಳಿಗೂ ಉತ್ತರಿಸುವ ಉತ್ಸಾಹವನ್ನೇ ತೋರಲಿಲ್ಲ. ಅವರ ಕಣ್ಣುಗಳಲ್ಲಿ ಮಡುಗಟ್ಟಿದ ಆತಂಕ ಇಡೀ ಸಮುದಾಯದ ಆತಂಕವನ್ನು ಪ್ರತಿನಿಧಿಸುವಂತಿತ್ತು.

ಆಕೆಯ ಆತಂಕಕ್ಕೂ ಕಾರಣವಿಲ್ಲದಿರಲಿಲ್ಲ. ಆಕೆಯನ್ನು ಡಿಟೆನ್ಷನ್ ಸೆಂಟರಿಗೆ ಫೆಬ್ರವರಿ 26ರಂದು ಕರೆತರಲಾಗಿತ್ತು. ಅದಕ್ಕಿಂತ ಮೂರೇ ದಿನಗಳ ಮೊದಲು ಅಂದರೆ ಫೆಬ್ರವರಿ 23 ರಂದು 20 ವರ್ಷದ ಯುವತಿ ಪಾಂಡೆ ಕವಾಸಿ ಎನ್ನುವವರು ಸಾವನ್ನಪ್ಪಿದ್ದರು. ಪೊಲೀಸರ ಪ್ರಕಾರ ಪಾಂಡೆ ಕವಾಸಿಯದು ಆತ್ಮಹತ್ಯೆ. ಆದರೆ ಅದನ್ನು ನಂಬಲು ಯಾರೂ ಸಿದ್ಧವಿಲ್ಲ.
ಯಾಕೆಂದರೆ ಪೊಲೀಸರ ಪ್ರಕಾರ ಪಾಂಡೆ ಕವಾಸಿ ಐದು ಅಡಿಗಿಂತ ಸ್ವಲ್ಪ ಎತ್ತರದ ಕಿಟಕಿಯ ರೇಲಿಂಗ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆದರೆ ಆಕೆ ಸುಮಾರು ನಾಲ್ಕು ಅಡಿ 11 ಇಂಚು ಎತ್ತರವಿದ್ದಳು ಎಂದು ಆಕೆಯ ಕುಟುಂಬದವರು ಹೇಳುತ್ತಾರೆ. ಸ್ನಾನಗೃಹದಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಪೊಲೀಸರ ವಾದ. ಆದರೆ ಸ್ನಾನಗೃಹದ ಚಿಲಕ ಮುರಿದು ಬಾಗಿಲು ಹಾಕಲಾಗಿದೆ. ಆದರೂ ಅಲ್ಲೇ ಕೊಠಡಿಯಲ್ಲಿದ್ದ ಅವರ ಗೆಳತಿ ಜೋಗಿ ಮತ್ತು ಡಿಆರ್‌ಜಿ ಬೆಂಗಾವಲು ಸಿಬ್ಬಂದಿಗೆ ಕವಾಸಿಯ ‘ಆತ್ಮಹತ್ಯೆ ಯತ್ನ’ ಬಗ್ಗೆ ತಿಳಿಯಲಿಲ್ಲ ಎನ್ನುವುದು ಅನುಮಾನ ಹುಟ್ಟಿಸುತ್ತದೆ.
ಗೆಳತಿಯರಾಗಿದ್ದ ಜೋಗಿ ಮತ್ತು ಪಾಂಡೆ ಅವರನ್ನು ಜೋಗಿಯವರ ಮನೆಯಿಂದಲೇ ಬಂಧಿಸಲಾಗಿತ್ತು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಸುಮಾರು 25-30 ಮಂದಿ ಡಿಆರ್‌ಜಿ ಪಡೆಯ ಪೊಲೀಸರು ಜೋಗಿ ಮನೆಗೆ ಘೇರಾವ್ ಹಾಕಿ ಜೋಗಿಯವರನ್ನು ಬಂಧಿಸುವಾಗ ಅವರನ್ನು ಪಾಂಡೆ ತಡೆಯಲೆತ್ನಿಸಿದ್ದರು. ಹಾಗಾಗಿ ಅವರನ್ನೂ ಬಂಧಿಸಲಾಯಿತು ಎನ್ನುವುದು ಪಾಂಡೆ ಅವರ ಮನೆಯವರ ಆರೋಪ. ಅವರ ಬಂಧನದ ನಂತರ ಕುಟುಂಬದವರಿಗೂ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎನ್ನುತ್ತಾರೆ ಗುಡ್ಸೆ ಹಳ್ಳಿಯ ಜಿಲ್ಲಾ ಪರಿಷತ್ ಸದಸ್ಯರಾದ ಶ್ಯಾಮ ಮರ್ಕಮ್.

ಬಳಿಕ ಫೆಬ್ರವರಿ 20 ರಂದು, ಕುಟುಂಬ ಮತ್ತು ಕೆಲವು ಗ್ರಾಮಸ್ಥರು ಕವಾಸಿಯನ್ನು ಭೇಟಿ ಮಾಡಲು ಮತ್ತೊಂದು ಪ್ರಯತ್ನವನ್ನು ಮಾಡಿದಾಗ, ಅವರಿಗೆ ಕೆಲವೇ ಕೆಲವು ನಿಮಿಷಗಳ ಕಾಲ ಭೇಟಿಯಾಗಲು ಅವಕಾಶ ನೀಡಲಾಯಿತು. ಆ ವೇಳೆಗಾಗುವಾಗ ತನ್ನ ಮಗಳು ‘ಭಯಾನಕ ಸ್ಥಿತಿ,’ಯಲ್ಲಿ ಇದ್ದಳು ಎಂದು ಅವರ ತಾಯಿ ಶಾನು ಕವಾಸಿ ಹೇಳಿದ್ದಾರೆ. “ಅವಳ ದೇಹವು ಗಾಯಗಳಿಂದ ತುಂಬಿತ್ತು ಮತ್ತು ಕಸ್ಟಡಿಯಲ್ಲಿ ತನಗೆ ಮತ್ತು ಜೋಗಿ ಇಬ್ಬರಿಗೂ ಕ್ರೂರವಾಗಿ ಥಳಿಸಲಾಗಿದೆ” ಎಂದು ಅವರು ತನ್ನ ತಾಯಿಯೊಂದಿಗೆ ಹಂಚಿಕೊಂಡಿದ್ದರು. ಅವಳ ತೋಳುಗಳು, ತೊಡೆಗಳು ಮತ್ತು ಹಿಂಭಾಗದಲ್ಲಿ ದೊಡ್ಡ ನೀಲಿ ಗುರುತುಗಳಿದ್ದವು. ಅವರನ್ನು ಪೊಲೀಸರು ಬಂಧಿಸಿ ಮೊದಲು ಹತ್ತಿರದ ಕಾಡಿಗೆ ಕರೆದೊಯ್ಯಲಾಯಿತು ಮತ್ತು ಹಲವಾರು ಗಂಟೆಗಳ ಕಾಲ ಮರಕ್ಕೆ ಕಟ್ಟಿ “ಶರಣಾಗಲು ಒಪ್ಪಿಕೊಳ್ಳಿ ಇಲ್ಲವಾದರೆ ನಾವು ನಿನ್ನನ್ನು ಇಲ್ಲಿಯೇ ಕೊಲ್ಲುತ್ತೇವೆ” ಎಂದು ಬೆದರಿಸಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮಸ್ಥರು ಮತ್ತೆ ಫೆಬ್ರವರಿ 23 ರಂದು ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿದ್ದರು. “ನಾವು ಪೊಲೀಸ್ ಲೈನ್‌ಗೆ ಹೋಗಲು ಕಾಲ್ನಡಿಗೆ ಮತ್ತು ಬಸ್‌ನಲ್ಲಿ ಬಹಳ ದೂರ ಕ್ರಮಿಸಿದ್ದೆವು. ನಾವು ಸಂಜೆಯವರೆಗೆ ಕಾಯುತ್ತಿದ್ದೆವು ಆದರೆ ನಮ್ಮ ಮಕ್ಕಳಿಗೆ ಏನಾಗುತ್ತಿದೆ ಎಂದು ನಮಗೆ ಹೇಳಲು ಯಾರೂ ಸಿದ್ಧರಿರಲಿಲ್ಲ ”ಎಂದು ಮರ್ಕಮ್ ಹೇಳಿದ್ದಾರೆ. “ನಾವು ಕೆಲವು ಅಧಿಕೃತ ಮಾಹಿತಿಗಾಗಿ ಕಾಯುತ್ತಿರುವಾಗ, ಪಾಂಡೆ ಈಗಾಗಲೇ ಕೊಲ್ಲಲ್ಪಟ್ಟಿದ್ದರು ಎಂಬುವುದನ್ನು ಕಲ್ಪಿಸಿಕೊಂಡಿರಲೂ ಇಲ್ಲ” ಎಂದು ಅವರು ಗಾಢ ವಿಷಾದದಿಂದ ಹೇಳುತ್ತಾರೆ.
ಪಾಂಡೆ ಕವಾಸಿಯ ಮೃತದೇಹ ನೋಡಿದ ಮೇಲೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಮತ್ತು ಕೊಲೆ ಮಾಡಲಾಗಿದೆ ಎಂದು ಕುಟುಂಬವು ಆರೋಪಿಸಿದೆ ಆದರೆ ಪೊಲೀಸರು ಅದನ್ನು ಆತ್ಮಹತ್ಯೆ ಎಂದೇ ವಾದಿಸುತ್ತಾರೆ.
ಕವಾಸಿ ಮತ್ತು ಜೋಗಿಯ ಬಂಧನ ಮತ್ತು ನಂತರ ಕವಾಸಿಯ ಅನುಮಾನಾಸ್ಪದ ಸಾವು ತಕ್ಷಣವೇ ದಂತೇವಾಡದಾದ್ಯಂತ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿತು. ಪಾಂಡೆಗೆ ಒದಗಿದ ದುರಂತ ನೋಡಿ ಜೋಗಿಯನ್ನಾದರೂ ತಮಗೆ ಒಪ್ಪಿಸಬೇಕೆಂದು ಎರಡೂ ಕುಟುಂಬಗಳು ಪಟ್ಟು ಹಿಡಿದವು. ಆದರೆ ಜೋಗಿಯನ್ನು ಭೇಟಿ ಮಾಡಲೂ ಅವರಿಗೆ ಅವಕಾಶ ಸಿಗಲಿಲ್ಲ.

ಸ್ಥಳದಲ್ಲಿದ್ದ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಹಾಗೂ ಖ್ಯಾತ ಸಾಮಾಜಿಕ ಮತ್ತು ರಾಜಕೀಯ ನಾಯಕಿ ಶಾಂತಾಸೋನಿ ಸೋರಿ ಕವಾಸಿಯ ದೇಹವನ್ನು ಕುಣಿಕೆಯಿಂದ ಕೆಳಕ್ಕೆ ಇಳಿಸಿದಾಗ, ಕುಟುಂಬದ ಮಹಿಳೆಯರು ಅದನ್ನು ದೈಹಿಕವಾಗಿ ಪರೀಕ್ಷಿಸಿದ್ದರು ಎಂದು ಹೇಳುತ್ತಾರೆ. “ಅವಳ ಎದೆ ಮತ್ತು ಜನನಾಂಗಗಳಲ್ಲಿ ಗೀರುಗಳಿದ್ದವು. ಅವಳನ್ನು ದೈಹಿಕವಾಗಿ ಮತ್ತು ಲೈಂಗಿಕವಾಗಿ ಕ್ರೂರವಾಗಿ ಹಿಂಸಿಸಿದಂತೆ ತೋರುತ್ತಿತ್ತು” ಎಂದು ಸೋರಿ ದಿ ವೈರ್‌ಗೆ ತಿಳಿಸಿದ್ದಾರೆ. ಈ ಮಾತನ್ನು ಅನುಮೋದಿಸುವ ಪಾಂಡೆಯ ತಾಯಿ ಅವರ ದೇಹವು ಕ್ರೂರ ಹಿಂಸೆಯ ಗುರುತುಗಳನ್ನು ಹೊಂದಿತ್ತು ಎಂದು ಹೇಳಿದ್ದಾರೆ. “ಅವಳ ಅಂತ್ಯ ಸಂಸ್ಕಾರದ ಮೊದಲು, ನಾವು ಅವಳ ದೇಹವನ್ನು ನಿಕಟವಾಗಿ ಪರಿಶೀಲಿಸಿದ್ದೇವೆ. ಆಕೆಯ ಜನನಾಂಗಗಳು ಊದಿಕೊಂಡಿತ್ತು ಮತ್ತು ನೀಲಿ ಬಣ್ಣಕ್ಕೆ ತಿರುಗಿದ್ದವು” ಎಂದು ಅವರು ತಿಳಿಸಿದ್ದಾರೆ.
ಗೋಂಡಿ ಬುಡಕಟ್ಟಿನವರು ಆತ್ಮಹತ್ಯೆಯಿಂದಾದ ಸಾವನ್ನು ಗಂಭೀರ ಸಾಮಾಜಿಕ ಅನಿಷ್ಟವೆಂದು ಪರಿಗಣಿಸುತ್ತಾರೆ. ಮೇಲಾಗಿ ಅವರಲ್ಲಿ ಸತ್ತವರನ್ನು ಸಮಾಧಿ
ಮಾಡುವ ಕ್ರಮವಿದೆ, ಇದಕ್ಕೆ ವ್ಯತಿರಿಕ್ತವಾಗಿ ಪಾಂಡೆ ಅವರನ್ನು ದಹನ ಮಾಡಲಾಯಿತು. ಸಾಕ್ಷಿಗಳನ್ನು ನಾಶಮಾಡಲೆಂದೇ ದಹನ ಮಾಡಲಾಯಿತು ಎಂಬುವುದು ಗ್ರಾಮಸ್ಥರ ಆರೋಪ.
ಪಾಂಡೆ ಕವಾಸಿ ಸತ್ತು ಬತೋಬ್ಬರಿ ಒಂಬತ್ತು ತಿಂಗಳುಗಳು ಕಳೆದಿದೆ. ಅತ್ಯಂತ ಮೂಲಭೂತ ತನಿಖಾ ವರದಿಗಾಗಿಯೂ ಕುಟುಂಬವು ಸುಮಾರು 500 ಕಿಮೀ ದೂರದಲ್ಲಿರುವ ಛತ್ತೀಸ್‌ಗಢ ಹೈಕೋರ್ಟ್‌ಗೆ ತೆರಳಬೇಕಾಗಿದೆ. ಕುಟುಂಬವು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮತ್ತು ವಿತ್ತೀಯ ಪರಿಹಾರವನ್ನು ಸಹ ಕೋರಿದೆ ಎಂದು ಕುಟುಂಬದ ವಕೀಲ ಕಿಶೋರ್ ನಾರಾಯಣ್ ಹೇಳುತ್ತಾರೆ. “ಇದುವರೆಗೆ ನ್ಯಾಯಾಲಯವು ಮರಣೋತ್ತರ ಪರೀಕ್ಷೆಯ ವರದಿಯನ್ನು ಹಸ್ತಾಂತರಿಸುವಂತೆ ಮಾತ್ರ ದಂತೇವಾಡ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶಿಸಿದೆ” ಎಂದು ನಾರಾಯಣ್ ಹೇಳುತ್ತಾರೆ.
ಮುಂದುವರೆಯುತ್ತದೆ……………………..