ಭಾರತಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳೇ ಕಳೆದಿದ್ದರೂ ಈವೆರಗೂ ಒಂದು ಸ್ಪಷ್ಟ ಪ್ರಜಾಸತ್ತಾತ್ಮಕ ಭಾಷಾ ನೀತಿ ರೂಪಿಸಲು ಸಾಧ್ಯವಾಗದಿರುವುದು ಅಚ್ಚರಿ ಮೂಡಿಸುತ್ತದೆ. ರಾಜ್ಯ ಮಟ್ಟದಲ್ಲೂ ಸಹ ಕರ್ನಾಟಕದಲ್ಲಿ ಶೈಕ್ಷಣಿಕ ಭಾಷಾ ಮಾಧ್ಯಮವಾಗಿ ಕನ್ನಡವನ್ನು ಬಳಸಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಪ್ರಯತ್ನಗಳಿಗೆ ಬಂಡವಾಳ ವ್ಯವಸ್ಥೆಯ ಶೈಕ್ಷಣಿಕ ನೀತಿಗಳೇ ಅಡ್ಡಿಯಾಗುತ್ತಿವೆ. ಬಹುಭಾಷಿಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಕನ್ನಡದ ಬೆಳವಣಿಗೆಗೆ ಮತ್ತು ಇಲ್ಲಿಯದೇ ಆದ ತುಳು, ಕೊಂಕಣಿ, ಕೊಡವ, ಬ್ಯಾರಿ ಮುಂತಾದ ಸ್ಥಳೀಯ ಭಾಷೆಗಳ ಬೆಳವಣಿಗೆಗೆ ಪೂರಕವಾದ ಒಂದು ಸಾಂಸ್ಥಿಕ ಪರಿಸರವನ್ನೇ ಈವರೆಗೂ ರೂಪಿಸಲು ಸಾಧ್ಯವಾಗಿಲ್ಲ. ಗ್ರಾಂಥಿಕ ಭಾಷೆ, ಸಾಹಿತ್ಯಕ ಭಾಷೆ, ಆಡು ಭಾಷೆ ಮತ್ತು ಪ್ರಭುತ್ವದ ಭಾಷೆ ಹೀಗೆ ನಾಲ್ಕು ಸ್ತರಗಳಲ್ಲಿ ಭಾಷೆ ತನ್ನ ಬೆಳವಣಿಗೆಯ ಆಯಾಮಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಈ ವ್ಯತ್ಯಯಗಳನ್ನು ಬದಿಗೊತ್ತಿ ಕನ್ನಡ ಭಾಷೆಯ ಅಳಿವು ಉಳಿವಿನ ಪ್ರಶ್ನೆಯೂ ನಮ್ಮನ್ನು ಬಾಧಿಸುತ್ತಿದೆ.
ಸಾರ್ವಜನಿಕ ವಲಯದಲ್ಲಿ, ನಾಗರಿಕರ ನಡುವಿನ ಸಂವಹನ ಮಾಧ್ಯಮಗಳಲ್ಲಿ, ನಿತ್ಯ ಜೀವನದ ಪರಿಸರದಲ್ಲಿ ಕನ್ನಡ ಒಂದು ಆಡುಭಾಷೆಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿದ್ದರೂ, ದಕ್ಷಿಣ ಭಾಗದಲ್ಲಿ ಇತರ ಪ್ರಾದೇಶಿಕ ಭಾಷೆಗಳ ಪ್ರಭಾವವೂ ದಟ್ಟವಾಗಿಯೇ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಒಂದು ಅಪರೂಪದ ಭಾಷೆಯಂತೆ ಕಾಣಿಸಿಕೊಳ್ಳುತ್ತಿರುವುದು ಭಾಷಾ ಪ್ರೇಮಿಗಳಲ್ಲಿ ಆತಂಕ ಮೂಡಿಸಿರುವುದೂ ವಾಸ್ತವ.. ಶಿಕ್ಷಣ ಮಾಧ್ಯಮದ ಮೂಲಕ, ಸಾಂಸ್ಕೃತಿಕ ನೆಲೆಗಳಲ್ಲಿ ಕನ್ನಡವನ್ನು ಕಾಪಾಡುತ್ತಲೇ, ಈ ಸಮೃದ್ಧ ಭಾಷೆಯ ಚಾರಿತ್ರಿಕ ನೆಲೆಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಸರ್ಕಾರಗಳ ಮೇಲಿರುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಮತ್ತು ಪುಸ್ತಕ ಪ್ರಾಧಿಕಾರದಂತಹ ಸಂಸ್ಥೆಗಳು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸಬೇಕು ಎನ್ನುವುದೂ ವಾಸ್ತವ. ಕನ್ನಡ ಭಾಷೆಯೊಂದಿಗೇ ಈ ನೆಲದ ಪ್ರಾಂತೀಯ ಭಾಷೆಗಳ ಅಭಿವೃದ್ಧಿಗೂ ಶ್ರಮಿಸುವುದು ಇಂದಿನ ಅಗತ್ಯತೆಯಾಗಿದೆ.
ಈ ನಿಟ್ಟಿನಲ್ಲಿ ಕರ್ನಾಟಕದ ಜನತೆಯ ಹಲವು ವರ್ಷಗಳ ಪರಿಶ್ರಮ ಹಾಗೂ ನಿರಂತರ ಹೋರಾಟದ ಫಲವಾಗಿ 2008ರಲ್ಲಿ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಒದಗಿತ್ತು. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದ್ದ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೂ ಈ ಸಮ್ಮಾನ ದೊರೆಯಬೇಕು ಎಂದು ಒತ್ತಾಯಿಸುವ ಮೂಲಕ ಕನ್ನಡದ ಹಿರಿಯ ಸಾಹಿತಿಗಳು, ಕಲಾವಿದರು, ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಮತ್ತು ಸಾರ್ವಜನಿಕರು ವರ್ಷಗಟ್ಟಲೆ ನಡೆಸಿದ ಹೋರಾಟದ ಪರಿಣಾಮ ಈ ಬೇಡಿಕೆ ಈಡೇರಿತ್ತು. ಇದರ ಪರಿಣಾಮವಾಗಿ ಮೈಸೂರಿನಲ್ಲಿ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರವು ಸ್ಥಾಪನೆಯಾಗಿದ್ದು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆಯ ಆಶ್ರಯದಲ್ಲೇ ಪ್ರಾಚೀನ ಕನ್ನಡ ಸಾಹಿತ್ಯದ ಸಂಶೋಧನೆಗಳೂ ನಡೆಯುತ್ತಿದ್ದು ಕನ್ನಡದ ಇತಿಹಾಸದ ಶೋಧ ಮುಂದುವರೆಯುತ್ತಿದೆ.

ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಸ್ಥಾಪಿಸುವಂತೆ ನಾಡಿನ ಜನತೆ, ಮೈಸೂರಿನ ಸಾಹಿತಿ ಕಲಾವಿದರು, ಒತ್ತಾಯಿಸುತ್ತಿದ್ದು ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿರುವುದು ಗಮನಕ್ಕೆ ಬಂದ ನಂತರ ಕೊಂಚ ಭರವಸೆಯೂ ಮೂಡಿತ್ತು. ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್) ಆಶ್ರಯದಲ್ಲೇ ಕಾರ್ಯನಿರ್ವಹಿಸುತ್ತಿರುವ ಈ ಶಾಸ್ತ್ರೀಯ ಕೇಂದ್ರಕ್ಕೆ ಸ್ವಾಯತ್ತತೆ ನೀಡಲು ಕೇಂದ್ರ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಈ ಸಂಸ್ಥೆಯ ಸ್ವಂತ ಕಟ್ಟಡಕ್ಕಾಗಿ ನಾಲ್ಕು ಎಕರೆ ಭೂಮಿಯನ್ನು ನೀಡಲು ನಿರ್ಧರಿಸಲಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ ಕನ್ನಡಿಗರ ಈ ಬೇಡಿಕೆಯನ್ನು ಕಡೆಗಣಿಸುತ್ತಲೇ ಬಂದಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರವು, ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಕೂಡಲೇ, ಅಲ್ಪಾವಧಿಯಲ್ಲೇ ಸ್ವಾಯತ್ತ ಸಂಸ್ಥೆಯಾಗಿ ಮಾನ್ಯತೆ ಪಡೆದು ಇಂದು ನೂರಾರು ಸಂಶೋಧಕರೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಶಾಸ್ತ್ರೀಯ ತಮಿಳು ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕಿಸಿಕೊಡುವಲ್ಲಿ ಅಲ್ಲಿನ ರಾಜಕೀಯ ನಾಯಕರು ಪಕ್ಷಾತೀತವಾಗಿ ಕೈಜೋಡಿಸಿ ಯಶಸ್ವಿಯಾಗಿದ್ದುದನ್ನು ಸ್ಮರಿಸಬಹುದು. ಇತ್ತೀಚೆಗೆ ಪ್ರಧಾನಿ ಮೋದಿ ಈ ಸಂಸ್ಥೆಯ ಒಂದು ಭವ್ಯ ಕಟ್ಟಡದ ಉದ್ಘಾಟನೆಯನ್ನೂ ನೆರವೇರಿಸಿದ್ದಾರೆ. ಈ ಸಮಾರಂಭವನ್ನು ಕರ್ನಾಟಕದ ಬಿಜೆಪಿ ಶಾಸಕರು ಕಂಠಪೂರ್ತಿಯಾಗಿ ಸ್ವಾಗತಿಸಿ ಸಂಭ್ರಮಿಸಿರುವುದು ವಿಡಂಬನೆ ಎನಿಸುವುದಿಲ್ಲವೇ?
ಆದರೆ ಈಗ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ಶೈಕ್ಷಣಿಕ ನೀತಿಗಳು ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತಹ ಕೆಲವು ನೀತಿಗಳು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಂಚಕಾರ ತರುವಂತೆ ತೋರುತ್ತಿದೆ. ಮೈಸೂರಿನಲ್ಲಿರುವ ಕೇಂದ್ರೀಯ ಭಾರತೀಯ ಭಾಷಾ ಸಂಸ್ಥಾನವನ್ನು (ಸಿಐಐಎಲ್) ಭಾರತೀಯ ಭಾಷಾ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಸಿದ್ಧತೆಗಳನ್ನು ನಡೆಸಿದ್ದು, ಈಗಿರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ನೂತನ ಭಾಷಾ ವಿಶ್ವವಿದ್ಯಾಲಯದ ಒಂದು ವಿಭಾಗವನ್ನಾಗಿ ಪರಿವರ್ತಿಸಲು ಯೋಜಿಸಲಾಗುತ್ತಿದೆ. ಈ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗಳು ಕೇಂದ್ರ ಮಟ್ಟದಲ್ಲಿ ಚಾಲನೆ ಪಡೆದಿದೆ. ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರದ ಉಳಿವಿವಾಗಿ ಮೈಸೂರಿನ ಸಾಹಿತ್ಯಕ ಮನಸುಗಳು ನಡೆಸಿದ ಹೋರಾಟದ ಫಲವಾಗಿ ಇಂದಿಗೂ ಈ ಸಂಸ್ಥೆ ಉಸಿರಾಡುತ್ತಿದೆ.
ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಸಾಂಸ್ಕೃತಿಕ ರಾಜಕಾರಣ
ಈ ಅವಧಿಯಲ್ಲೇ ಕರ್ನಾಟಕ ಸರ್ಕಾರ 2010ರಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವನ್ನೂ ಸ್ಥಾಪಿಸಿದೆ. ಸಂಸ್ಕೃತ ಭಾಷೆಯ ಅಭಿವೃದ್ಧಿಗಾಗಿ ಸ್ಥಾಪಿಸಲಾಗಿರುವ ಈ ವಿಶ್ವವಿದ್ಯಾಲಯದ ಮೂಲಕ ವೈಜ್ಞಾನಿಕ, ಸಾಹಿತ್ಯಕ, ಸಾಂಸ್ಕೃತಿಕ ಪರಂಪರೆಗಳ ಅಧ್ಯಯನ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. 31 ಸಂಸ್ಕೃತ ವಿದ್ಯಾಲಯಗಳು, 243 ಅನುದಾನಿತ ವೇದ ಮತ್ತು ಸಂಸ್ಕೃತ ಪಾಠಶಾಲೆಗಳು ಈ ವಿಶ್ವವಿದ್ಯಾಲಯದೊಡನೆ ಸಂಯೋಜನೆಯನ್ನು ಹೊಂದಿದ್ದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ಈ ಸಂಸ್ಥೆಗಳ ಆಡಳಿತ ನಿರ್ವಹಣೆಯನ್ನು ಮಾಡುತ್ತಿದೆ. “ಸಂಸ್ಕೃತವಿಲ್ಲದೆ ವೇದವಿಲ್ಲ, ವೇದವಿಲ್ಲದೆ ಸಂಸ್ಕೃತವಿಲ್ಲ, ವೇದವಿಲ್ಲದೆ ಹಿಂದು ಧರ್ಮವಿಲ್ಲ, ಹಿಂದು ಧರ್ಮ ಇಲ್ಲದೆ ಭಾರತೀಯ ಸಂಸ್ಕೃತಿಗೆ ಅರ್ಥವಿಲ್ಲ” ಇದು ಹಿಂದುತ್ವವಾದಿಗಳ ಭೈರವಿ ರಾಗ. ಈ ಪ್ರತಿಪಾದನೆಯ ಹಿನ್ನೆಲೆಯಲ್ಲೇ ವೇದಗಳ ಶ್ರೇಷ್ಠತೆಯನ್ನು ಎತ್ತಿಹಿಡಿಯುವ ಮೂಲಕ ಹಿಂದುತ್ವವಾದವನ್ನು ಪುಷ್ಟೀಕರಿಸುವ ಒಂದು ಪ್ರಯತ್ನವನ್ನೂ ಈ ವಿಶ್ವವಿದ್ಯಾಲಯದ ಮೂಲಕ ಮಾಡಲಾಗುತ್ತದೆ.