ಚಿಕ್ಕಮಗಳೂರಿನ ಶಾಂತವೇರಿಯಲ್ಲಿ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮೋಜುಮಸ್ತಿಗೆ ಸ್ಥಳೀಯ ಕೋವಿಡ್ ಟಾಸ್ಕ್ ಫೋರ್ಸ್ ತಡೆಯೊಡ್ಡಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಮೇ 20ರಿಂದ ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್ ಡೌನ್ ಮತ್ತು ಸೆಕ್ಷನ್ 144 ಎ ಹಿನ್ನೆಲೆಯಲ್ಲಿ, ಸರ್ಕಾರದ ನಿರ್ದೇಶನದಂತೆ ಸ್ಥಳೀಯ ಗ್ರಾಮ ಪಂಚಾಯ್ತಿಯ ಕೋವಿಡ್ ಕಾರ್ಯಪಡೆ ಸದಸ್ಯರು, ಹತ್ತಾರು ವಾಹನಗಳಲ್ಲಿ ಗುಂಪಾಗಿ ಬಂದಿದ್ದ 50ಕ್ಕೂ ಹೆಚ್ಚು ಮಂದಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತಡೆದು ವಾಪಸು ಕಳಿಸಿದ ಘಟನೆ ಗುರುವಾರ ನಡೆದಿತ್ತು.
ಅಂತರ್ ಜಿಲ್ಲಾ ಸಂಚಾರ ಮತ್ತು ತುರ್ತು ಆರೋಗ್ಯ ವಿಷಯವಲ್ಲದೆ ಇತರೆ ಯಾವುದೇ ಕಾರಣಕ್ಕೂ ವಾಹನ ಸಂಚಾರಕ್ಕೆ ಅವಕಾಶವೇ ಇಲ್ಲದಿರುವಾಗ ಬೆಂಗಳೂರಿನ ಅಧಿಕಾರಿಗಳು ಗುಂಪುಗುಂಪಾಗಿ ಹತ್ತಾರು ವಾಹನಗಳಲ್ಲಿ ನಾಟಿ ಕೋಳಿ, ಮದ್ಯದೊಂದಿಗೆ ಹಳ್ಳಿಗಳಿಗೆ ಲಗ್ಗೆ ಇಟ್ಟಿರುವುದು ಸಹಜವಾಗೇ ಗ್ರಾಮಸ್ಥರಲ್ಲಿ ಕರೋನಾದ ಆತಂಕ ಹುಟ್ಟಿಸಿತ್ತು. ಆ ಹಿನ್ನೆಲೆಯಲ್ಲಿ ಕೋವಿಡ್ ಕಾರ್ಯಪಡೆಯ ಸದಸ್ಯರೂ ಆಗಿ ಕೋವಿಡ್ ವಾರಿಯರ್ಸ್ ಆದ ಸ್ಥಳೀಯ ಪಂಚಾಯ್ತಿ ಸದಸ್ಯರು ಗ್ರಾಮಸ್ಥರ ಪರವಾಗಿ ಅಧಿಕಾರಿಗಳನ್ನು ಪ್ರಶ್ನಿಸಿ, ಅವರ ಸಂಚಾರಕ್ಕೆ ತಡೆಯೊಡ್ಡಿದ್ದರು. ಬಳಿಕ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಮ್ಮ ಪಾರ್ಟಿ ಜಾಗ ಬದಲಿಸಿಕೊಂಡು, ಕೆಮ್ಮಣ್ಣುಗುಂಡಿ ಭೇಟಿ ನೀಡಿ, ಬಳಿಕ ಲಕ್ಕವಳ್ಳಿ ರೆಸಾರ್ಟಿಗೆ ಹೋಗಿ ತಂಗಿದ್ದರು.
ಆದರೆ, ಅರಣ್ಯಾಧಿಕಾರಿಗಳು ತಾವು ಪಾರ್ಟಿ ಮಾಡಲು ಬಂದ ವಿಷಯ ಮರೆಮಾಚಿ ಏ.30ರಂದು ಹುಲಿ ಸತ್ತ ಜಾಗದ ಪರಿಶೀಲನೆಗೆ ಬಂದಿರುವುದಾಗಿ ಹೇಳಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇದೀಗ ಕೋವಿಡ್ ವಾರಿಯರ್ಸ್ ಗಳ ವಿರುದ್ಧವೇ ಪೊಲೀಸ್ ದೂರು ನೀಡಿದ್ದಾರೆ! ಅದೂ ಘಟನೆ ನಡೆದ ಮಾರನೇ ದಿನ(ಶುಕ್ರವಾರ) ಸಂಜೆ ಸಮೀಪದ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಇಲಾಖೆಯ ಸಿಬ್ಬಂದಿಯ ಹೆಸರಿನಲ್ಲಿ ಶಾಂತವೇರಿ ಗ್ರಾಮದ ಕೋವಿಡ್ ಕಾರ್ಯಪಡೆ ಸದಸ್ಯರೂ ಆದ ಪಂಚಾಯ್ತಿ ಸದಸ್ಯರಾದ ರಂಗಸ್ವಾಮಿ, ಜನಾರ್ಧನ್, ಮುಬಾರಕ್ ಹಾಗೂ ಸ್ಥಳೀಯ ನಿವಾಸಿ ನೌಷಾದ್ ವಿರುದ್ದ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ವಿವಿಧ ಪ್ರಕರಣಗಳಡಿ ಎಫ್ ಐಆರ್ ದಾಖಲಿಸಲಾಗಿದೆ.
ಅದೇ ಹೊತ್ತಿಗೆ, ಕೋವಿಡ್ ವಾರಿಯರ್ಸ್ ಆಗಿ ಗ್ರಾಮ ಪಂಚಾಯ್ತಿ ಸದಸ್ಯರು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ನೀಡಿದ ದೂರನ್ನು ಲಿಂಗದಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದರೂ, 24 ತಾಸು ಕಳೆದರೂ ಎಫ್ ಐಆರ್ ದಾಖಲಿಸದೆ, ಎನ್ ಸಿ(ನಾನ್ ಕಾಗ್ನಿಜಬಲ್ ಅಫೆನ್ಸ್) ರಶೀದಿ ನೀಡಿ ಕೈತೊಳೆದುಕೊಂಡಿದ್ದಾರೆ! ಲಿಂಗದಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಈ ಬಗ್ಗೆ ‘ಪ್ರತಿಧ್ವನಿ’ ಸಂಪರ್ಕಿಸಿದಾಗ, “ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ದೂರು ದಾಖಲಿಸಿಕೊಂಡು, ಎಫ್ ಐಆರ್ ಮಾಡಲಾಗಿದೆ ಮತ್ತು ಶನಿವಾರ ಬೆಳಗ್ಗೆ ಸ್ಥಳಪರಿಶೀಲನೆ ಮಾಡಿ ಮುಂದಿನ ಕ್ರಮ ಜರುಗಿಸಲಾಗಿದೆ. ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ನೀಡಿದ ದೂರನ್ನು ಎನ್ ಸಿ ಎಂದು ಪರಿಗಣಿಸಲಾಗಿದೆ” ಎಂದು ಎಎಸ್ ಐ ತಿಳಿಸಿದ್ದಾರೆ.
ಅಂದರೆ, ಮಂಗಳೂರಿನಲ್ಲಿ ಮಾಸ್ಕ್ ಧರಿಸದೇ ಮನೆ ಪಕ್ಕದ ಅಂಗಡಿಗೆ ಹೋದ ವೈದ್ಯರೊಬ್ಬರ ವಿರುದ್ಧ ಸಾಂಕ್ರಾಮಿಕ ತಡೆ ಕಠಿಣ ಕಾನೂನು ಬಳಸಿ ಎಫ್ ಐಆರ್ ಹಾಕಿದ ರಾಜ್ಯ ಬಿಜೆಪಿ ಸರ್ಕಾರ, ಅದೇ ಕೋವಿಡ್ ನಿಯಮ ಉಲ್ಲಂಘಿಸಿ, ಲಾಕ್ ಡೌನ್ ಗಾಳಿಗೆ ತೂರಿ, ಪಾರ್ಟಿ ಮಾಡಿ, ಗುಂಪುಗೂಡಿ ಅಂತರ್ ಜಿಲ್ಲಾ ಪ್ರವಾಸ ಮಾಡಿದ ಅಧಿಕಾರಿಗಳ ವಿಷಯದಲ್ಲಿ ಮಾತ್ರ ಕಾನೂನು ಉಲ್ಲಂಘಿಸಿದವರ ಪರ ನಿಂತಿದೆ. ಅಷ್ಟೇ ಅಲ್ಲ; ಕೋವಿಡ್ ನಿಯಮ ಜಾರಿಗೆ ಪ್ರಯತ್ನಿಸಿದ ಸ್ಥಳೀಯ ಗ್ರಾಮ ಪಂಚಾಯ್ತಿಯ ಕಾರ್ಯಪಡೆಯ ಸದಸ್ಯರ ವಿರುದ್ಧವೇ ಎಫ್ ಐಆರ್ ದಾಖಲಿಸಿ ಕಾನೂನು ಪಾಲನೆ ಮಾಡಿದ್ದನ್ನೇ ಅಪರಾಧೀಕರಣಗೊಳಿಸಿ ಅವರನ್ನು ಜೈಲಿಗೆ ಅಟ್ಟಲು ಸಜ್ಜಾಗಿದೆ!
ಗಮನಿಸಬೇಕಾದ ಸಂಗತಿ ಎಂದರೆ; ಕೋವಿಡ್ ನಿಯಮ ಗಾಳಿಗೆ ತೂರಿ ಮೋಜು ಮಸ್ತಿಯಲ್ಲಿ ಮೈಮರೆತಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದ ಮೂವರೂ ಪಂಚಾಯ್ತಿ ಸದಸ್ಯರು, ಯಾವುದೇ ಪಕ್ಷದ ಬೆಂಬಲಿತರಲ್ಲ. ಬದಲಾಗಿ ಅವರು ಕಳೆದ ಚುನಾವಣೆಯಲ್ಲಿ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆದ್ದುಬಂದವರು. ಹಾಗೇ ಈಗ ಎಫ್ ಐಆರ್ ದಾಖಲಾಗಿರುವ ನಾಲ್ವರಲ್ಲಿ ಇಬ್ಬರು ಒಂದು ಕೋಮಿನವರಾದರೆ, ಉಳಿದಿಬ್ಬರು ಮತ್ತೊಂದು ಕೋಮಿಗೆ ಸೇರಿದವರು. ಹಾಗಾಗಿ ಕೋಮು ರಾಜಕಾರಣಕ್ಕೆ ಹೆಸರಾದ ಚಿಕ್ಕಮಗಳೂರಿನಲ್ಲಿ ಈ ಪ್ರಕರಣ ಪಕ್ಷ ಪಾರ್ಟಿ ಆಯಾಮದಲ್ಲಾಗಲೀ, ಕೋಮು ಬಣ್ಣ ಕಟ್ಟುವ ಆಯಾಮದಲ್ಲಾಗಲೀ ರಾಜಕಾರಣಿಗಳಿಗೆ ಪ್ರಯೋಜನಕ್ಕೆ ಬಾರದು. ಹಾಗಾಗಿ, ಪ್ರತಿ ಗ್ರಾಮವನ್ನು ಕರೋನಾ ತಡೆಯ ಪ್ರಬಲ ಕೋಟೆಯಾಗಿ ರೂಪಿಸಬೇಕು ಎಂಬ ಪ್ರಧಾನಿ ಮೋದಿಯವರ ಸೂಚನೆಯಂತೆ ಕರೋನಾ ವಾರಿಯರ್ಸ್ ಆಗಿ ದಿಟ್ಟತನ ತೋರಲು ಹೋದವರು ಈಗ ಸ್ವತಃ ಅಪರಾಧಿಗಳ ಸ್ಥಾನದಲ್ಲಿ ನಿಂತಿದ್ದಾರೆ.
ಈ ನಡುವೆ, ಉನ್ನತ ಅಧಿಕಾರಿಗಳ ಮೋಜುಮಸ್ತಿಯ ಕುರಿತ ಇನ್ನಷ್ಟು ವಿವರಗಳು ಹೊರಬರುತ್ತಿದ್ದು, ವಾಸ್ತವವಾಗಿ ಸದ್ಯದಲ್ಲೇ ನಿವೃತ್ತಿಯಾಗಲಿರುವ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ ಮತ್ತು ಆರ್ ಕೆ ಸಿಂಗ್ (ಪಿಸಿಸಿಎಫ್ -ಅಭಿವೃದ್ಧಿ) ಅವರುಗಳೇ ಈ ಪಾರ್ಟಿಯನ್ನು ಆಯೋಜಿಸಿದ್ದು, ತಮ್ಮೊಂದಿಗೆ ಪಿಸಿಸಿಎಫ್(ಅರಣ್ಯ ಪಡೆ ಮುಖ್ಯಸ್ಥ) ಸಂಜಯ್ ಮೋಹನ್ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡವನ್ನು ಕಟ್ಟಿಕೊಂಡು, ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ವಲಯಗಳ ಉನ್ನತ ಅಧಿಕಾರಿಗಳೊಂದಿಗೆ ಮುತ್ತೋಡಿಯ ಸೀಗೇಕಾನ್ ಅತಿಥಿ ಗೃಹದಲ್ಲಿ ಭರ್ಜರಿ ಪಾರ್ಟಿ ಮಾಡಿದ್ದರು. ಮಾರನೇ ದಿನ ಮಧ್ಯಾಹ್ನ ಶಾಂತವೇರಿ ಬೇಟೆ ನಿಗ್ರಹ ಕ್ಯಾಂಪಿನಲ್ಲಿ ಊಟ ಮಾಡಿ, ಟ್ರೆಕ್ಕಿಂಗ್ ಮೂಲಕ ಕೆಮ್ಮಣ್ಣುಗುಂಡಿಗೆ ತೆರಳಿ ಅಲ್ಲಿ ಆ ರಾತ್ರಿ ಮತ್ತೊಂದು ಸುತ್ತಿನ ಪಾರ್ಟಿ ಮಾಡುವ ಯೋಜನೆ ಇತ್ತು. ಸ್ಥಳೀಯರ ಪ್ರಕಾರ ಅದಕ್ಕಾಗಿ ಶಾಂತವೇರಿ ಸೇರಿದಂತೆ ಸುತ್ತಮುತ್ತಲ ಊರುಗಳಲ್ಲಿ 60-70 ನಾಟಿ ಕೋಳಿಗಳನ್ನು ಅರಣ್ಯ ಸಿಬ್ಬಂದಿಗಳು ಸಂಗ್ರಹಿಸಿದ್ದರು ಮತ್ತು ಭಾರೀ ಪ್ರಮಾಣದ ಮದ್ಯವನ್ನೂ ಜೋಡಿಸಲಾಗಿತ್ತು ಎನ್ನಲಾಗಿದೆ.
ಆದರೆ, ಯಾವಾಗ ಶಾಂತವೇರಿ ಗ್ರಾಮದ ಕೋವಿಡ್ ಟಾಸ್ಕ್ ಫೋರ್ಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ತಡೆಯೊಡ್ಡಿತೋ, ಆಗ ತಾವು ಬಂದಿರುವುದು ಏ.30ರಂದು ಸಂಭವಿಸಿದ ಹುಲಿ ಸಾವು ಘಟನೆಯ ಸ್ಥಳ ಪರಿಶೀಲನೆಗೆ ಮತ್ತು ಮುಳ್ಳಯ್ಯನಗಿರಿ ಸಂರಕ್ಷಣಾ ಮೀಸಲು ಪರಿಶೀಲನೆಗೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ತಣಿಗೆಬೈಲು ಭದ್ರಾ ವನ್ಯಜೀವಿ ವಲಯ ಅರಣ್ಯಾಧಿಕಾರಿ ನೀಡಿರುವ ಪೊಲೀಸ್ ದೂರಿನಲ್ಲಿ, ಅಧಿಕಾರಿಗಳು ಬಂದಿರುವುದು ಅಧಿಕೃತ ಪ್ರವಾಸದ ಭಾಗವಾಗಿ ಎಂಬುದನ್ನು ಎಲ್ಲಿಯೂ ನಮೂದಿಸಿಲ್ಲ. ಅಲ್ಲದೆ, ಇಲಾಖೆಯ ಆಂತರಿಕ ಮಾಹಿತಿ ವ್ಯವಸ್ಥೆಯಲ್ಲಿ ಕೂಡ ಉನ್ನತ ಅಧಿಕಾರಿಗಳ ಎರಡು-ಮೂರು ದಿನಗಳ ಈ ಭೇಟಿಯ ಕುರಿತ ಅಧಿಕೃತ ಪ್ರವಾಸ ಪಟ್ಟಿ ಕೂಡ ಬಿಡುಗಡೆಯಾಗಿಲ್ಲ. ಜೊತೆಗೆ ಕರ್ತವ್ಯದ ಮೇಲೆ ಅಂತರ್ ಜಿಲ್ಲಾ ಪ್ರವಾಸ ಮಾಡುವ, ಸರ್ಕಾರಿ ವಾಹನದಲ್ಲಿ ಪ್ರಯಾಣ ಮಾಡುವ ಮುನ್ನ ಕೋವಿಡ್ ನಿಯಮಾನುಸಾರ ಮುಖ್ಯ ಕಾರ್ಯದರ್ಶಿಗಳಿಂದ ಅಧಿಕೃತ ಪರವಾನಗಿ ಪಡೆದ ಬಗ್ಗೆಯೂ ಯಾವ ದಾಖಲೆಗಳಿಲ್ಲ ಎಂದು ಇಲಾಖೆಯ ಮೂಲಗಳು ಹೇಳಿವೆ.
ಜೊತೆಗೆ, ಹುಲಿ ಸಾವಿನ ವಿಷಯವನ್ನು ಎಫ್ ಐಆರ್ ನಲ್ಲಿ ಪ್ರಸ್ತಾಪಿಸಿದ್ದರೂ, ಹುಲಿ ಸಾವು ನಡೆದ ಸ್ಥಳಕ್ಕೂ, ಈ ಅಧಿಕಾರಿಗಳು ಹೊರಟಿದ್ದ ಸ್ಥಳಕ್ಕೂ ಸಂಬಂಧವೇ ಇಲ್ಲ. ಜೊತೆಗೆ ವನ್ಯಜೀವಿ ವ್ಯಾಪ್ತಿಗೊಳಪಡುವ ಹುಲಿ ಸಾವಿನ ಕುರಿತು ಪರಿಶೀಲಿಸಲು ವನ್ಯಜೀವಿ ವಿಭಾಗದ ತಮ್ಮ ಸಮಾನ ದರ್ಜೆಯ ಉನ್ನತ ಅಧಿಕಾರಿಗಳೇ ಇಲ್ಲದೆ, ನೇರವಾಗಿ ಸಂಬಂಧವೇ ಪಡದ ಅಧಿಕಾರಿಗಳು ಯಾಕೆ ಬಂದರು ಎಂಬುದು ಪ್ರಶ್ನೆ. ಸ್ಥಳೀಯ ವನ್ಯಜೀವಿ ವಿಭಾಗದ ಅಧಿಕಾರಿಗಳು ಕೂಡ ಕೆಲವರು ಈ ಭೇಟಿ ವೇಳೆ ಹಾಜರಿರಲಿಲ್ಲ ಎನ್ನಲಾಗಿದೆ. ಆದರೆ, ಈ ಮೊದಲು ವಲಯದ ವನ್ಯಜೀವಿ ಡಿಸಿಎಫ್ ಆಗಿದ್ದ ಮತ್ತು ಈಗ ಪದೋನ್ನತಿ ಪಡೆದು ಕೊಡಗು ವಿಭಾಗದಲ್ಲಿ ಸಿಎಫ್ ಆಗಿರುವ ತಾಕತ್ ಸಿಂಗ್ ಅವರನ್ನೇ ವನ್ಯಜೀವಿ ವಿಭಾಗದ ಉನ್ನತಾಧಿಕಾರಿ ಎಂದು ಬಿಂಬಿಸುವ ಮೂಲಕ ತಾವು ಅಧಿಕೃತ ಕರ್ತವ್ಯದ ಮೇಲೆ ಬಂದಿರುವುದಾಗಿ ವಾಸ್ತವಾಂಶ ತಿರುಚುವ ಯತ್ನ ಕೂಡ ನಡೆದಿದೆ.
ಈ ನಡುವೆ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗಳು ಕೋವಿಡ್ ನಿಯಮ ಉಲ್ಲಂಘಿಸಿ ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮದ ಕೋವಿಡ್ ವಾರಿಯರ್ಸ್ ಮತ್ತು ಟಾಸ್ಕ್ ಫೋರ್ಸ್ ಸದಸ್ಯರ ವಿರುದ್ಧ ನೀಡಿದ ದೂರಿನ ವಿಷಯದಲ್ಲಿ ತತಕ್ಷಣವೇ ಎಫ್ ಐಆರ್ ದಾಖಲಿಸಿದ್ದಾರೆ. ಆದರೆ, ಗ್ರಾಮಸ್ಥರು ಕೋವಿಡ್ ನಿಯಮ ಉಲ್ಲಂಘನೆಯಡಿ ನೀಡಿರುವ ದೂರಿನ ವಿಷಯದಲ್ಲಿ 24 ಗಂಟೆ ಕಳೆದರೂ ಎಫ್ ಐಆರ್ ದಾಖಲಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹಾಗಾಗಿ, ಸದ್ಯಕ್ಕೆ ಅಧಿಕಾರಶಾಹಿಯ ಅಧಿಕಾರ ಬಲ ಮತ್ತು ಪ್ರಭಾವದ ಎದುರು, ಗ್ರಾಮದ ಜನರ ಆರೋಗ್ಯದ ದೃಷ್ಟಿಯಿಂದ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರು ಪಕ್ಷಪಾತಿ ವ್ಯವಸ್ಥೆಯ ಬಲಿಪಶುವಾಗಿದ್ದಾರೆ! ಕೋವಿಡ್ ನಿಯಮ ಪಾಲನೆಯ ವಿಷಯದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಪಕ್ಷಪಾತಿ ಧೋರಣೆಗೂ ಈ ಪ್ರಕರಣ ಮತ್ತೊಂದು ನಿದರ್ಶನವಾಗಿ ಕಣ್ಣಮುಂದಿದೆ.