1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ ಭಿಕ್ಷೆ ಎಂದ ಬಾಲಿವುಡ್ ನಟಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕಂಗನಾ ರಣಾವತ್ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಓವೈಸಿ, ಮೇಡಂ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತಕ್ಕೆ 2014ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳ್ತಿದ್ದಾರೆ. ಇದೇ ಮಾತನ್ನು ಯಾರಾದರೂ ಮುಸ್ಲಿಮರು ಹೇಳಿದ್ದರೆ ಕಪಾಳ ಮೋಕ್ಷ ಮಾಡಲಾಗ್ತಿತ್ತು ಮೊಣಕಾಲಿಗೆ ಗುಂಡು ಹಾರಿಸಿ ಜೈಲಿಗಟ್ಟುತ್ತಿದ್ದರು ಎಂದು ಹೇಳಿದ್ದಾರೆ.
ಇದೇ ಮಾತನ್ನು ಮುಸ್ಲಿಮರು ಹೇಳಿದ್ದರೆ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿತ್ತು. ಆದರೆ ಆಕೆ ರಾಣಿ ನೀವು ರಾಜ. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಂಗನಾ ಹಾಗೂ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಶೇರ್ ಆಗುತ್ತಿರುವ 24 ಸೆಕೆಂಡ್ಗಳ ವಿಡಿಯೋದಲ್ಲಿ ಕಂಗನಾ ರಣಾವತ್, 1947ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸ್ವಾತಂತ್ರ್ಯವಲ್ಲ. ಅದು ಭಿಕ್ಷೆ. ನಾವು ನಿಜವಾದ ಸ್ವಾತಂತ್ರ್ಯವನ್ನು 2014ರಲ್ಲಿ ಪಡೆದಿದ್ದೇವೆ ಎಂದು ಹೇಳಿದ್ದರು.
ಕಂಗನಾ ರಣಾವತ್ರ ಈ ಮಾತಿಗೆ ಕಾಂಗ್ರೆಸ್ಸಿಗರಿಂದ ವ್ಯಾಪಕ ವಿರೋಧ ಕೇಳಿಬರುತ್ತಿದ್ದಂತೆಯೇ ಇನ್ಸ್ಟಾಗ್ರಾಂನಲ್ಲಿ ತಮ್ಮ ವಿವಾದಾತ್ಮಕ ಹೇಳಿಕೆಗೆ ಸಮರ್ಥನೆ ನೀಡಿದ್ದರು. ಸಂದರ್ಶನದಲ್ಲಿ ನಾನು ಸ್ವಾತಂತ್ರ್ಯ ಹೋರಾಟಗಾರರಿಗೆ ಅಥವಾ ಹುತಾತ್ಮರಿಗೆ ಅಪಮಾನ ಮಾಡಿದ್ದೇ ಹೌದು ಎಂಬುದನ್ನು ಸಾಬೀತು ಪಡಿಸಿದಲ್ಲಿ ಪದ್ಮಶ್ರೀಯನ್ನು ವಾಪಸ್ ನೀಡೋದಾಗಿ ಹೇಳಿದ್ದರು.
ಇತ್ತ ಕಂಗನಾ ರಣಾವತ್ ಅವರ ವಿವಾದಾತ್ಮಕ ಹೇಳಿಕೆಯನ್ನು ಹಿರಿಯ ನಟ ವಿಕ್ರಮ್ ಗೋಖಲೆ ಬೆಂಬಲಿಸಿದ್ದು, ”ಕಂಗನಾ ಹೇಳಿಕೆಗೆ ನನ್ನ ಸಹಮತವಿದೆ. ಭಿಕ್ಷೆಯಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಬಯಸಿದ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು ಹಾಗೂ ಆ ಸಮಯದಲ್ಲಿ ದೊಡ್ಡವರು ಅವರನ್ನು ಉಳಿಸಲು ಪ್ರಯತ್ನಿಸಲಿಲ್ಲ. ನಾನು ಬಹಳಷ್ಟು ಓದಿದ್ದೇನೆ’ ಎಂದು ಗೋಖಲೆಯವರು ಪದೇ ಪದೇ ರಣಾವತ್ ಹೇಳಿಕೆಗೆ ತಮ್ಮ ಬೆಂಬಲವನ್ನು ಒತ್ತಿ ಹೇಳಿದರು.
ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಸ್ಪಷ್ಟನೆ ಕೊಟ್ಟ ನಟಿ ಕಂಗಾನ
ತನ್ನ ಹೇಳಿಕೆ ವಿವಾದವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿದ ಕಂಗನಾ , ತಾವು ನೀಡಿದ ಸ್ವಾತಂತ್ರ್ಯದ ಕುರಿತ ಹೇಳಿಕೆ ತಪ್ಪೆಂದು ಸಾಬೀತಾದರೆ ಕ್ಷಮೆಯಾಚಿಸುವುದಾಗಿ ಹಾಗೂ ಪ್ರತಿಷ್ಠಿತ ಪದ್ಮಶ್ರೀಪ್ರಶಸ್ತಿ ಹಿಂದಿರುಗಿಸುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪುಸ್ತಕವೊಂದರ ಆಯ್ದ ಭಾಗವನ್ನು ಹಂಚಿಕೊಂಡಿರುವ ನಟಿ, 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆಗೆ ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ ಮತ್ತು ವೀರ ಸಾವರ್ಕರ್ ಅವರಂತಹ ಶ್ರೇಷ್ಠರ ತ್ಯಾಗವನ್ನು ಸಂದರ್ಶನದಲ್ಲಿ ಉಲ್ಲೇಖಿಸಲಾಗಿದೆ.
1857ರ ಸ್ವಾತಂತ್ರ್ಯ ಹೋರಾಟ ನನಗೆ ತಿಳಿದಿದೆ. 1947 ರಲ್ಲಿ ಯಾವ ಯುದ್ಧ ನಡೆಯಿತು ಎಂಬುದು ನನಗೆ ತಿಳಿದಿಲ್ಲ. ಯಾರಾದರೂ ನನ್ನ ಅರಿವಿಗೆ ತಂದರೆ ನಾನು ನನ್ನ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ ಮತ್ತು ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಇದಕ್ಕೆ ನನಗೆ ಸಹಾಯ ಮಾಡಿ ಎಂದು ಬರೆದುಕೊಂಡಿದ್ದಾರೆ.
ಕಂಗನಾ ಹಂಚಿಕೊಂಡಿರುವ ಪುಸ್ತಕವೊಂದರ ಆಯ್ದ ಭಾಗದಲ್ಲಿ ಬಾಲಗಂಗಾಧರ ತಿಲಕ್, ಅರವಿಂದ್ ಘೋಷ್, ಬಿಪಿನ್ ಚಂದ್ರಪಾಲ್ರಂತಹ ಕ್ರಾಂತಿಕಾರಿ ಹೋರಾಟಗಾರರು ಐಎನ್ಸಿ (INC -Indian National Congress) ವಿರುದ್ಧ ನೀಡಿರುವ ಹೇಳಿಕೆಗಳು ಇವೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲು ಭಾರತ ಸಜ್ಜಾಗುತ್ತಿರುವಾಗ ನಟಿಯ ಈ ಹೇಳಿಕೆಯನ್ನು ಕಾಂಗ್ರೆಸ್, ಎಎಪಿ, ಶಿವಸೇನೆ, ಎನ್ಸಿಪಿ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಖಂಡಿಸಿದ್ದು, ಕಂಗನಾಗೆ ನೀಡಿದ ಪ್ರಶಸ್ತಿಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸುತ್ತಿವೆ.