ಕರ್ನಾಟಕದ ಕಾಂಗ್ರೆಸ್ ಎಲ್ಲಾ ಗ್ಯಾರಂಟಿಗಳನ್ನ ಜಾರಿ ಮಾಡಬೇಕು. ಒಂದು ವೇಳೆ ಕೊಟ್ಟ ಗ್ಯಾರಂಟಿಗಳನ್ನ ಜಾರಿ ಮಾಡದಿದ್ರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ದ್ವೇಷ ಸಾಧನೆ ಮೂಲಕ ಬಿಜೆಪಿಯನ್ನು ಕಟ್ಟಿಹಾಕುತ್ತಿದ್ದಾರೆ. ಅವರು ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದರು.
ಹಿಂದು ಕಾರ್ಯಕರ್ತರ ಪ್ರವೀಣ್ ನೆಟ್ಟಾರು ಅವರ ಪತ್ನಿಗೆ ಬಿಜೆಪಿ ಸರ್ಕಾರ ನೀಡಿದ್ಧ ಉದ್ಯೋಗವನ್ನು ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ, ಅವರು ಪ್ರವೀಣ್ ನೆಟ್ಟಾರ್ ಪತ್ನಿಗೆ ನೀಡಿದ್ದ ಉದ್ಯೋಗ ವನ್ನು ಕಾಂಗ್ರೆಸ್ ಕಿತ್ತುಕೊಂಡಿದೆ. ಅನುಕಂಪದ ಆಧಾರದ ಮೇಲೆ ಮತ್ತೆ ಉದ್ಯೋಗ ನೀಡಿ ಎಂದು ಸಿಎಂ ಸಿದ್ಧರಾಮಯ್ಯಗೆ ಮನವಿ ಮಾಡುತ್ತೇನೆ. ನೀವು ಉದ್ಯೋಗ ನೀಡದಿದ್ದರೂ ಕೇಂದ್ರದ ಎನ್ ಎಂಪಿಟಿಯಲ್ಲಿ ಉದ್ಯೋಗ ನೀಡುತ್ತೇವೆ ಎಂದರು.
ಬಿಜೆಪಿ ಸರ್ಕಾರದ ಮೇಲೆ ಮಾಡಿದ ಆರೋಪಗಳ ಪೂರ್ಣ ತನಿಖೆ ನಡೆಯಲಿ. ಸಿದ್ಧರಾಮಯ್ಯ ಮೇಲಿರುವ ಲೋಕಾಯುಕ್ತ ಕೇಸ್ ಅನ್ನೂ ತನಿಖೆ ಮಾಡಲಿ. ಕರಾವಳಿ ಜಿಲ್ಲೆಗೆ ಒಂದೂ ಮಂತ್ರಿ ಪಟ್ಟಇಲ್ಲ, ಈ ಬಗ್ಗೆ ಕೂಡ ಬೇಸರವಿದೆ ಎಂದು ಕಿಡಿಕಾರಿದರು.
20 ದಿನಗಳಾದರೂ ಐದು ಉಚಿತ ಯೋಜನೆಗಳನ್ನು ಹಂಚಿಕೆ ಮಾಡಿಲ್ಲ. ಸರ್ಕಾರಿ ನೌಕರರು ಏಟು ತಿನ್ನುವ ಪರಿಸ್ಥಿತಿ ಬಂದಿದೆ. ವಿದ್ಯುತ್ ಬಿಲ್ ಕಲೆಕ್ಟ್ ಮಾಡಲು ಹೋದವರಿಗೆ ಏಟು ಬೀಳುತ್ತಿದೆ. ಕಾಂಗ್ರೆಸ್ ವಿಜಯೋತ್ಸವದಲ್ಲೇ ಗಲಭೆ ಮಾಡಿದ್ದು, ದ್ವೇಷದ ರಾಜಕಾರಣವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಆರೋಪಿಸಿದರು.