ಕಾಂಗ್ರೆಸ್-ಬಿಜೆಪಿ ಹಾಗು ಜೆಡಿಎಸ್ ಅಧಿಕಾರಕ್ಕೆ ಬರುವುದಕ್ಕಾಗಿ ಭಾರೀ ಸರ್ಕಸ್ ನಡೆಸುತ್ತಿವೆ. ಬಂಡಾಯ ಎದ್ದಿರುವ ನಾಯಕರನ್ನು ಮನವೊಲಿಸಿ ನಾಮಪತ್ರ ವಾಪಸ್ ತೆಗೆಸುವ ಕೆಲಸವೂ ನಡೆಯುತ್ತಿದೆ. ಇಂದು ನಾಮಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದ್ದು, ನಾಳೆಯಿಂದ ಅಧಿಕೃತ ಚುನಾವಣಾ ಪ್ರಚಾರ ಶುರುವಾಗಲಿದೆ. 224 ಕ್ಷೇತ್ರಗಳ ಪೈಕಿ ಯಾವ ಪಕ್ಷ 113 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆಯೋ ಆ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇನ್ನು 2ನೇ ಸ್ಥಾನ ಪಡೆಯುವ ಪಕ್ಷ ವಿರೋಧ ಪಕ್ಷದ ಸ್ಥಾನವನ್ನು ಸಂಪಾದನೆ ಮಾಡಿಕೊಳ್ಳಲಿದೆ. ಆದರೆ ಬಿಜೆಪಿ ಈಗಾಗಲೇ ಕಾಂಗ್ರೆಸ್ನ ಪ್ರಮುಖ ನಾಯಕರ ಪಟ್ಟಿ ಮಾಡಿದ್ದು, ಸಚಿವ ಸಂಪುಟದ ಪಟ್ಟಿ ಕಂಡಂತಿದೆ.

ಸಿದ್ದರಾಮಯ್ಯ ಮಂತ್ರಿ ಮಂಡಲದ ನಾಯಕರು..!
ಬಿಜೆಪಿ ನಾಯಕರು ಸಿದ್ದ ಮಾಡಿರುವ ಪಟ್ಟಿಯಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ, ಆರ್ ವಿ ದೇಶಪಾಂಡೆ, ಯು ಟಿ ಖಾದರ್, ಹೆಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್, ಹೆಚ್ ಸಿ ಮಹದೇವಪ್ಪ, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ರಿಜ್ವಾನ್ ಅರ್ಷದ್, ಕೆ ಹೆಚ್ ಮುನಿಯಪ್ಪ, ಕೃಷ್ಣ ಭೈರೇಗೌಡ, ಜಿ ಪರಮೇಶ್ವರ್, ಕೆ ಎನ್ ರಾಜಣ್ಣ, ಎನ್ ಎ ಹ್ಯಾರಿಸ್, ಸೌಮ್ಯ ರೆಡ್ಡಿ, ಬೈರತಿ ಸುರೇಶ್, ಅಜಯ್ ಸಿಂಗ್, ಈಶ್ವರ ಖಂಡ್ರೆ, ರಮೇಶ್ ಕುಮಾರ್, ಚೆಲುವರಾಯಸ್ವಾಮಿ ಹೆಸರುಗಳಿವೆ. ಈ ಪಟ್ಟಿಯನ್ನು ಸಚಿವ ಸಂಪುಟ ವಿಸ್ತರಣೆಗೆ ಮಾಡಿಟ್ಟಂತೆ ಇದೆ. ಆದರೆ ಈ ಪಟ್ಟಿಯನ್ನು ಬಿಜೆಪಿ ನಾಯಕರು ಮಾಡಿರುವುದು ಸೋಲಿಸುವ ಉದ್ದೇಶದಿಂದ ಎನ್ನುವುದು ವಿಶೇಷ.

ಕಾಂಗ್ರೆಸ್ ಘಟಾನುಘಟಿ ನಾಯಕರು ಟಾರ್ಗೆಟ್..!
ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರನ್ನು ಚುನಾವಣೆಯಲ್ಲಿ ಸೋಲಿಸಲೇಬೇಕು ಎನ್ನುವ ಹಠಕ್ಕೆ ಬಿದ್ದಿದೆ ಬಿಜೆಪಿ. ಇದೇ ಕಾರಣಕ್ಕೆ ಕಾಂಗ್ರೆಸ್ನ 25 ನಾಯಕರ ಪಟ್ಟಿ ಮಾಡಿದ್ದು, ಗೆದ್ದೇ ಗೆಲ್ಲುವ ವಿಶ್ವಾಸದಲ್ಲಿರುವ ನಾಯಕರೂ ಸೋಲುವ ಆತಂಕ ಸೃಷ್ಟಿಯಾಗಿದೆ. ವಿಧಾನಸೌಧಕ್ಕೆ ಬಂದು ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ ಎಲ್ಲೇ ಇದ್ದರೂ ಈ ನಾಯಕರು ಬಿಜೆಪಿಗೆ ಎದುರಾಳಿಗಳು ಎನ್ನುವ ಕಾರಣಕ್ಕೆ ಕ್ಷೇತ್ರದಲ್ಲಿ ಕಟ್ಟಿ ಹಾಕಿ ಸೋಲುಣಿಸಲು ಯೋಜನೆ ರೂಪಿಸಿದೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಆಗಿರಲಿ, ಅಥವಾ ಜೆಡಿಎಸ್ ಅಥವಾ ಯಾವುದೇ ಪಕ್ಷ ಪ್ರಬಲ ಪೈಪೋಟಿ ಆಗಿದ್ದರೂ ಈ 25 ನಾಯಕರನ್ನು ಸೋಲಿಸುವ ಪೂರ್ವ ತಯಾರಿ ನಡೆದಿದೆಯಂತೆ.
25 ಜನರನ್ನು ಸೋಲಿಸಿದ್ರೆ ಬಿಜೆಪಿ ಆಗುವ ಲಾಭಗಳೇನು..?
ಈ 25 ನಾಯಕರ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರನ್ನು ಸೋಲಿಸುವಲ್ಲಿ ಬಿಜೆಪಿ ಯಶಸ್ವಿ ಆದರೆ, ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಬಹುದು. ಒಂದು ವೇಳೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸದಿದ್ದರೂ ಬೇರೊಂದು ಪಕ್ಷದ ಅಭ್ಯರ್ಥಿಗಳು ಗೆಲ್ಲುವುದಕ್ಕೆ ಸಹಕಾರಿ ಆದರೂ ಪರೋಕ್ಷವಾಗಿ ಅದು ಭಾರತೀಯ ಜನತಾ ಪಾರ್ಟಿಗೆ ಅನುಕೂಲ ಆಗುತ್ತದೆ. ಒಂದು ವೇಳೆ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದರೆ ವಿರೋಧ ಪಕ್ಷದಲ್ಲಿ ಈ ನಾಯಕರು ಇಲ್ಲದಿದ್ದರೆ ವಿರೋಧ ಪಕ್ಷವನ್ನು ಎದುರಿಸುವುದು ಬಿಜೆಪಿ ನಾಯಕರಿಗೆ ಸುಲಭ ಆಗಲಿದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ. ಹಾಗಾಗಿ ಈ ಪಟ್ಟಿಯಲ್ಲಿರುವ 25 ಮಂದಿ ಕಾಂಗ್ರೆಸ್ ನಾಯಕರು ತಮ್ಮ ರಾಜಕೀಯ ಲೆಕ್ಕಾಚಾರವನ್ನು ಬಿಗಿಗೊಳಿಸುವುದು ಸೂಕ್ತ. ಒಂದು ವೇಳೆ ನಾನೇ ಗೆಲ್ಲುತ್ತೇನೆ ಎಂದುಕೊಂಡು ಆಲಸ್ಯ ಮಾಡಿದರೆ ಸೋಲು ಕಟ್ಟಿಟ್ಟಬುತ್ತಿ.
ಕೃಷ್ಣಮಣಿ