ಬಾಲ್ಯದಲ್ಲಿ ಹರಿಶ್ಚಂದ್ರ, ಶ್ರವಣಕುಮಾರರ ಕತೆಗೆ ಮಿಡಿದು, ಕಣ್ಣೀರಿಟ್ಟ ಮುಗ್ಧ ಮನಸ್ಸನ್ನು ಕೊನೆತನಕ ಉಳಿಸಿಕೊಂಡ ಮಗು. ಕಾನೂನು ಕಲಿತು, ಸ್ಪಷ್ಟವಾಗಿ ಯೋಚಿಸುವ, ನ್ಯಾಯಯುತ ಹೋರಾಟವನ್ನು ತರ್ಕಬದ್ಧವಾಗಿ ಕಟ್ಟುವ, ನ್ಯಾಯ-ನೈತಿಕತೆಗಳನ್ನು ಬೆಸೆದ ನ್ಯಾಯವಾದಿ. ನೈತಿಕತೆ-ಸತ್ಯ ಬೆಸೆದ ಪತ್ರಕರ್ತ. ಸತ್ಯಾಗ್ರಹವನ್ನು ಹೋರಾಟತತ್ವವನ್ನಾಗಿ ಮಾಡಿದ ತತ್ವಜ್ಞಾನಿ. ಅಹಿಂಸೆಯನ್ನು ದೈನಂದಿನ ತತ್ವವಾಗಿ, ಸಂಘಟಿತ ಜನತಾ ಹೋರಾಟದ ಪ್ರಬಲ ಅಸ್ತ್ರವನ್ನಾಗಿ ರೂಪಿಸಿಕೊಟ್ಟ ಮೊದಲ ಲೋಕನಾಯಕ. ಹಿಡಿ ಉಪ್ಪು ತಯಾರಿಸಿ ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲೆಸೆದ ನಿರ್ಭೀತ ಚಳವಳಿಗಾರ. ಉಪ್ಪು, ಚರಕದಂಥ ಪರಿಚಿತ ವಸ್ತುಗಳಿಗೆ ವ್ಯಾಪಕಾರ್ಥ ಕೊಟ್ಟ ಕವಿ. ‘ಸ್ವರಾಜ್ಯ’ವು ಒಂದು ದೇಶ ತನ್ನನ್ನು ತಾನು ಆಳಿಕೊಳ್ಳುವ ತತ್ವವಷ್ಟೇ ಅಲ್ಲ, ಅದು ಮನುಷ್ಯ ತನ್ನನ್ನು ತಾನು ಆಳಿಕೊಳ್ಳುವ ತತ್ವ ಕೂಡ ಎಂಬ ವ್ಯಾಖ್ಯಾನ ಕೊಟ್ಟ ಸೂಕ್ಷ್ಮಚಿಂತಕ…
ದೈಹಿಕ ದುಡಿಮೆಯ ಶ್ರೇಷ್ಠತೆಯನ್ನು ಪ್ರತಿಪಾದಿಸಿ, ಚರಕ, ಖಾದಿಗಳನ್ನು ಗ್ರಾಮದ ಸ್ವಾವಲಂಬನೆಯ ಸಹಜ ಸಾಧನಗಳನ್ನಾಗಿ ಮಾಡಿದ ಗ್ರಾಮಕೇಂದ್ರಿತ ಅರ್ಥಶಾಸ್ತ್ರಜ್ಞ. ಜಗತ್ತಿನ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಒಂದು ದೇಶದ ಸ್ವಾತಂತ್ರ್ಯ ಹೋರಾಟವನ್ನು ಒಂದು ಕೊಳೆತ ಸಮಾಜದ ಪರಿವರ್ತನೆಯ ಹೋರಾಟವನ್ನಾಗಿ ಪರಿವರ್ತಿಸಿದ ಸಾಮಾಜಿಕ ನಾಯಕ. ಅಸ್ಪೃಶ್ಯತೆಯ ವಿರುದ್ಧ ನಿರಂತರ ಹೋರಾಟ ಮಾಡಿದ ಸಮಾಜ ಸುಧಾರಕ.
ಜಗತ್ತಿನ ಎಲ್ಲ ಧರ್ಮಗಳ ಒಳತಿರುಳನ್ನು ಬೆಸೆದು ಮಾನವೀಯ ಹಿಂದೂ ಧರ್ಮವನ್ನು ರೂಪಿಸಲು ಹೊರಟ ಧಾರ್ಮಿಕ ಚಿಂತಕ. ಆಧುನಿಕತೆ, ಆಧುನಿಕ ನಾಗರಿಕತೆ ಹಾಗೂ ಪಶ್ಚಿಮ ರೂಪಿಸಿಕೊಂಡ ದಮನದ ಅಸ್ತ್ರಗಳನ್ನು ಜಗತ್ತಿಗೆ ತೋರಿಸಿದ ಸಂಸ್ಕೃತಿ ವಿಮರ್ಶಕ. ಆಧುನಿಕ ಗುಜರಾತಿ ಗದ್ಯದ ಪ್ರವರ್ತಕ; ಗುಜರಾತಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಿರಂತರವಾಗಿ ಬರೆದು, ಸಾವಿರಾರು ಪುಟಗಳ ಸರಳ, ನೇರ ಬರವಣಿಗೆ ಮಾಡಿ ಕೋಟಿಗಟ್ಟಲೆ ಓದುಗರನ್ನು ತಲುಪಿದ ಹಾಗೂ ತಲುಪುತ್ತಲೇ ಇರುವ ಲೇಖಕ…
ತನ್ನ ಬದುಕು ಹಾಗೂ ಚಿಂತನೆಗಳಲ್ಲಿ ನುಸುಳಿದ ಹಲಬಗೆಯ ವೈರುಧ್ಯಗಳನ್ನು ಪರೀಕ್ಷೆಗೆ ಒಳಪಡಿಸಿಕೊಂಡ ಸ್ವ-ಪರೀಕ್ಷಕ. ಈ ದೇಶದ ಮೂಲ ಕಾಯಿಲೆಗಳಾದ ಅಸ್ಪೃಶ್ಯತೆ, ಅಸಮಾನತೆ, ಮೂಲಭೂತವಾದ, ಕೋಮುವಾದಗಳನ್ನು ಗುಣ ಪಡಿಸಲು ಸದಾ ಶ್ರಮಿಸಿದ ಡಾಕ್ಟರು. ದೇಹ ಕುರಿತು ಆಳವಾಗಿ ಚಿಂತಿಸಿ ಪ್ರಯೋಗಗಳನ್ನು ಮಾಡಿದ ಪ್ರಯೋಗಶೀಲ. ಮೊದಲ ಘಟ್ಟದ ಮುಖ್ಯ ನಿರ್ವಸಾಹತೀಕರಣ ತಾತ್ವಿಕ. ಎದುರಾಳಿಯೆದುರು ದಿಟ್ಟವಾಗಿ ನಿಲ್ಲಬಲ್ಲ ನಿರ್ಭೀತ; ಕುವೆಂಪು ಬಣ್ಣಿಸಿದಂತೆ, ‘ಕ್ರೈಸ್ತ ಬುದ್ಧರ ಮೈತ್ರಿಯಂ ಸಾಧಿಸುತ ವಿಶ್ವನಾಯಕರ ಪಂಕ್ತಿಯಲಿ’ ನಿಂತ, ‘ಯಂತ್ರ ನಾಗರಿಕತೆಯ ರಾಜಕೀಯ ಕುಟಿಲ ತಂತ್ರಕಧ್ಯಾತ್ಮವನು’ ತಂದ ಅನನ್ಯ ಸಂತ..
ಹೀಗೆ, ಗಾಂಧೀ ವ್ಯಕ್ತಿತ್ವ, ಚಿಂತನೆ, ಕ್ರಿಯೆ ಪ್ರಭಾವಗಳನ್ನು ಬಣ್ಣಿಸುತ್ತಲೇ ಹೋಗಬಹುದು. ‘ಗಾಂಧಿಯನ್ನು ಬಣ್ಣಿಸುವುದೆಂದರೆ ಹಿಮಾಲಯವನ್ನು ಬಣ್ಣಿಸಲು ಪ್ರಯತ್ನಿಸಿದಂತೆ’ ಎಂಬ ಬರ್ನಾರ್ಡ್ ಶಾ ಅವರ ಮಾತು ಗಾಂಧೀಜಿಯನ್ನು ಬಣ್ಣಿಸುವ ಸವಾಲಿನ ಜೊತೆಗೇ ಅವರ ವ್ಯಕ್ತಿತ್ವದ ಸಂಕೀರ್ಣತೆ, ಅಗಾಧತೆಯನ್ನೂ ಹೇಳುತ್ತದೆ.