ಹೋಟೆಲ್ಗಲ್ಲಿ ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಕವರ್ ಬಳಕೆ ವಿಚಾರದ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇನ್ಮುಂದೆ ಇಡ್ಲಿ ಮಾಡುವಾಗ ಪ್ಲಾಸ್ಟಿಕ್ ಪೇಪರ್ ಬಳಸುವಂತಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ನಿರ್ಧಾರ ತೆಗೆದುಕೊಂಡಿದ್ದು, ಒಂದೆರಡು ದಿನದಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳಲಿದೆ.

ಇಡ್ಲಿ ತಯಾರು ಮಾಡುವ ಪ್ಲೇಟ್ಗಳ ಮೇಲೆ ಬಟ್ಟೆ ಬದಲು ಇತ್ತೀಚಿಗೆ ಪ್ಲಾಸ್ಟಿಕ್ ಬಳಸಲಾಗ್ತಿತ್ತು. ಈ ಬಗ್ಗೆ ಬೆಂಗಳೂರಿನ 500 ಹೋಟೆಲ್ಗಳಿಂದ ಇಡ್ಲಿ ಸ್ಯಾಂಪಲ್ ಪಡೆದಿದ್ದ ಆಹಾರ ಇಲಾಖೆ ಪರೀಕ್ಷೆಗೆ ಒಳಪಡಿಸಿತ್ತು. ಆ 500 ಸ್ಯಾಂಪಲ್ಗಳ ಪೈಕಿ ಸುಮಾರು 35 ಸ್ಯಾಂಪಲ್ಗಳಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆ ಆಗಿದೆ. ಅದೇ ಕಾರಣದಿಂದ ಪ್ಲಾಸ್ಟಿಕ್ ಬಳಸದಂತೆ ಆದೇಶ ಮಾಡಲು ಮುಂದಾಗಿದೆ.

ಸಾಮಾನ್ಯವಾಗಿ ಇಡ್ಲಿ ತಯಾರಿಯ ಪ್ಲೇಟ್ಗಳ ಮೇಲೆ ಹತ್ತಿಯ ಶುಭ್ರವಾದ ಬಟ್ಟೆ ಹಾಕಲಾಗುತ್ತದೆ. ಆದರೆ ಇತ್ತೀಚಿಗೆ ಸುಲಭ ಉಪಾಯ ಎನ್ನುವಂತೆ ಬಟ್ಟೆ ಬದಲು ಪ್ಲಾಸ್ಟಿಕ್ ಕವರ್ ಬಳಕೆ ಮಾಡಲಾಗ್ತಿತ್ತು. ಇಡ್ಲಿ ಮಾಡುವಾಗ ಮಾತ್ರವಲ್ಲದೆ ಆಹಾರವನ್ನು ಬಡಿಸುವಾಗ ಮತ್ತು ಪ್ಯಾಕ್ ಮಾಡುವಾಗಲೂ ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಬಿಸಿ ಆಹಾರ ತಯಾರಿ ಮತ್ತು ಪ್ಯಾಕಿಂಗ್ ವೇಳೆ ಪ್ಲಾಸ್ಟಿಕ್ ಬಳಸಿದರೆ ಪ್ಲಾಸ್ಟಿಕ್ನ ಕೆಮಿಕಲ್ ಆಹಾರ ಪದಾರ್ಥ ಸೇರುತ್ತದೆ ಎನ್ನುವುದು ಸಾಬೀತಾಗಿದೆ.

ಹೋಟೆಲ್ ಮಾಲೀಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ಲಾಸ್ಟಿಕ್ ಬಳಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಆದರೆ ಹಣ ಕೊಟ್ಟು ಆಹಾರ ಸೇವನೆ ಮಾಡುವ ಜನರು ಸ್ಟೀಲ್ ಪಾತ್ರೆಯಲ್ಲಿ ಕೊಟ್ಟರೆ ಮಾತ್ರ ಊಟ ಮಾಡ್ತೇವೆ. ಪ್ಲಾಸ್ಟಿಕ್ ಪೇಪರ್ನ ಮೇಲೆ ಇಡ್ಲಿ ಮಾಡಿದ್ದೀರಾ..? ಹಾಗಿದ್ದರೆ ನಮಗೆ ಬೇಡ ಎಂದು ಹೇಳುವ ಮೂಲಕ ತಿರಸ್ಕಾರ ಮಾಡಬೇಕು. ಆಗ ಅನಿವಾರ್ಯವಾಗಿ ಹೋಟೆಲ್ನವರು ಸಾಮಾನ್ಯ ಪದ್ಧತಿಗೆ ಬರುತ್ತಾರೆ. ಇಲ್ಲದಿದ್ದರೆ ಸರ್ಕಾರ ಬ್ಯಾನ್ ಮಾಡಿದರೂ ನಡೆಯುವುದು ನಡೆಯುತ್ತಲೇ ಇರುತ್ತದೆ.
ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆ ವಿಚಾರದ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಸ್ಪಷ್ಟನೆ ನೀಡಿದ್ದಾರೆ. ಪ್ರತಿಷ್ಠಿತ ಹೋಟೆಲ್ಗಳಲ್ಲಿ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಬಳಕೆ ಮಾಡಲ್ಲ. ನಾನ್ ಸ್ಟಿಕ್ ಪ್ಲೇಟ್, ಹಾಗೆ ಇಡ್ಲಿ ಮಾಡುವಾಗ ಬಟ್ಟೆ ಬಳಕೆ ಮಾಡ್ತೇವೆ. ಸದ್ಯ ಎಲ್ಲಾ ಹೋಟೆಲ್ಗಳಲ್ಲಿ ಈ ರೂಲ್ಸ್ ಪಾಲನೆ ಆಗ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡದಂತೆ ಎಚ್ಚರಿಕೆ ಕೊಡಲಾಗಿದೆ ಎಂದಿದ್ದಾರೆ.
ಐಶಾರಾಮಿ ಹೋಟೆಲ್ನಲ್ಲಿ ಎಲ್ಲವೂ ಸರಿಯಿದೆ. ಕೇವಲ ಬೀದಿಬದಿ ಹೋಟೆಲ್ನವರು ಮಾತ್ರ ತಪ್ಪು ಮಾಡುತ್ತಿದ್ದಾರೆ ಎಂದು ಹೇಳುವುದು ಸರಿಯಲ್ಲ. ಎಲ್ಲಿಯೇ ಆದರೂ ಆಹಾರದ ಜೊತೆಗೆ ಪ್ಲಾಸ್ಟಿಕ್ ಬಳಕೆ ಮಾರಕ ಎನ್ನಬಹುದು. ಬಟ್ಟೆಗಳಲ್ಲಿ ಸುಟ್ಟುಹೋಗುವ ಪ್ರಮಾಣ ಕಡಿಮೆ ಇರುತ್ತದೆ. ಅದೇ ಕಾರಣಕ್ಕೆ ಬಟ್ಟೆ ಬಳಸಿದರೆ ಆರೋಗ್ಯ ಪೂರ್ಣ. ಇಲ್ಲದಿದ್ರೆ ಅನಾರೋಗ್ಯ ಗ್ಯಾರಂಟಿ.











