ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ನಡುವಿನ ತಿಕ್ಕಾಟವು ವರ್ಗಾವಣೆಯಲ್ಲಿ ಅಂತ್ಯಗೊಂಡರು ಕೂಡ ರಿಯಲ್ ಎಸ್ಟೇಟ್ ನಂಟು ಹೊಂದಿರುವ ರಾಜಕಾರಣಿಗಳಿಗೆ ರೋಹಿಣಿ ಸಿಂಧೂರಿ ಮೇಲಿನ ಕೋಪ ಮಾತ್ರ ತಣ್ಣಗಾಗಲಿಲ್ಲ. ಮೈಸೂರಿನಲ್ಲಿ ನಡೆದ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ತಿಕ್ಕಾಟ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಈ ಎಲ್ಲಾ ಪ್ರಹಸನದ ನಡುವೆಯೇ ಮಧ್ಯಪ್ರವೇಶಿಸಿದ ಸರ್ಕಾರ, ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರನ್ನ ವರ್ಗಾವಣೆ ಮಾಡಿ ಆದೇಶಿಸಿತ್ತು. ಆದರೆ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಬೆನ್ನಲ್ಲೇ, ಹೊರಬರುತ್ತಿರುವ ಒಂದೊಂದೆ ಆಡಿಯೋ ಕ್ಲಿಪ್ ಗಳು, ಇದೀಗ ಹೊಸ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಸಾಕಷ್ಟು ಷಡ್ಯಂತ್ರ ನಡೆದಿರುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ಈ ಎಲ್ಲಾ ಬೆಳವಣಿಗೆ ನಡುವೆಯೇ ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶ ಹೊರಬಿತ್ತು. ಇದರ ಬೆನ್ನಲ್ಲೇ, ಬಿಜೆಪಿ ಮುಖಂಡರೊಬ್ಬರು, ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಕೆ ವಿಚಾರವಾಗಿ ರೋಹಿಣಿ ಸಿಂಧೂರಿ ಅವರು ಅಧಿಕಾರಿಯೊಬ್ಬರ ಜೊತೆಗೆ ಮಾತನಾಡಿದ್ದ ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ್ದರು. ಇದಾದ ಕೆಲವೇ ಹೊತ್ತಿನ ಬಳಿಕ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಂಭಾಷಣೆಯ ಆಡಿಯೋ ಕ್ಲಿಪ್ ಸಹ ಬಿಡುಗಡೆಯಾಗಿತ್ತು. ಇದರ ನಡುವೆ ಫೇಸ್ ಬುಕ್ ಲೈವ್ ಮಾಡಿದ ಸಂಸದ ಪ್ರತಾಪ್ಸಿಂಹ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತದ ಹಿಂದೆಯೇ ಹೆಸರು ಪ್ರಸ್ತಾಪಿಸದೆ ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆ ಮೂಲಕವೂ ನಿರ್ಗಮಿತ ಜಿಲ್ಲಾಧಿಕಾರಿಗೆ ಟಾಂಗ್ ನೀಡುವ ಪ್ರಯತ್ನ ಮಾಡಿದ್ದರು.
ಇದರ ನಡುವೆ ರೋಹಿಣಿ ಸಿಂಧೂರಿ ವಿರುದ್ಧ ಸಮರ ಮುಂದುವರಿಸಿರುವ ಶಾಸಕ ಸಾ.ರಾ. ಮಹೇಶ್, ಸ್ವಹಿತಾಸಕ್ತಿ, ಸರ್ಕಾರಿ ಹಣ ದುರುಪಯೋಗ, ಸಾರ್ವಜನಿಕ ಹಣದ ವೆಚ್ಚದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದಿರುವುದು, ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟು ಮಾಡಿರುವುದು ಮುಂತಾದ ಲೋಪಗಳನ್ನು ಹಿಂದಿನ ಜಿಲ್ಲಾಧಿಕಾರಿಗಳು ಎಸಗಿರುತ್ತಾರೆ. ಹಾಗಾಗಿ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ಕೂಡಲೇ ಅಮಾನತು ಮಾಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲರು, ಕಂದಾಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪುರಾತತ್ವ ಇಲಾಖೆ ಕಾರ್ಯದರ್ಶಿ, ಮೈಸೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಮೇತ ಎರಡು ಪುಟಗಳ ಪತ್ರ ಬರೆದಿದ್ದಾರೆ.
ಕರೋನಾ ಹಿನ್ನೆಲೆಯಲ್ಲಿ ಹಿಂದಿನ ಡಿಸಿ ರೋಹಿಣಿ ಸಿಂಧೂರಿ ಅವರು ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನ ಇದೀಗ ನೂತನ ಡಿಸಿ ಹಿಂಪಡೆದಿದ್ದಾರೆ. ಆ ಮೂಲಕ ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆಯಾಗಿದ್ದು, ನಾಳೆಯಿಂದ ಜೂ.14ರವರೆಗೆ ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶ ಹಿಂಪಡೆಯುವ ಮೂಲಕ ಹೊಸ ಡಿಸಿ ಬಗಾದಿ ಗೌತಮ್ ಸಹ ಸೆಡ್ಡು ಹೊಡೆದಿದ್ದಾರೆ. ಮೊದಲು ಆ೭ರಕ್ಕೆ ಮೂರು ದಿನ ಮಾತ್ರ ಖರೀದಿಗೆ ಅವಕಾಶ ಇದ್ದುದನ್ನು ಈಗ ವಾರದ ಎಲ್ಲಾ ದಿನ ವಿಸ್ತರಿಸಲಾಗಿದೆ. ಒಟ್ಟಾರೆ, ರೋಹಿಣಿ ಸಿಂಧೂರಿ ವಿರುದ್ಧದ ಮುಸುಕಿನ ಗುದ್ದಾಟ ಸದ್ದಿಲ್ಲದೆ ಮುಂದುವರಿದಿದ್ದು, ಈ ಎಲ್ಲಾ ಜಟಾಪಟಿ ಎಲ್ಲಿಗೆ ಬಂದು ನಿಲ್ಲುತ್ತೇ ಅನ್ನೋದೆ ಯಕ್ಷಪ್ರಶ್ನೆಯಾಗಿದೆ.

ಈ ನಡುವೆ ಶಾಸಕ ಸಾ. ರಾ. ಮಹೇಶ್ ಅವರು ಬೆದರಿಕೆ ಹಾಕಿ ನನ್ನ ಭೂಮಿಯನ್ನು ತಮ್ಮ ಸ್ನೇಹಿತನಿಗೆ ಕೊಡಿಸಿದ್ದಾರೆ. ದಯವಿಟ್ಟು ನಮ್ಮ ಜಮೀನನ್ನು ನನಗೆ ಬಿಡಿಸಿಕೊಡಿ ಎಂದು ಭೂ ಮಾಲೀಕರೊಬ್ಬರು ಮನವಿ ಮಾಡಿದ್ದಾರೆ.
ಭೂ ಮಾಲೀಕನಿಗೆ ಶಾಸಕ ಮಹೇಶ್ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಕುರಿತು ಮಾತನಾಡಿದ ಸಂತ್ರಸ್ತ ಗಣಪತಿ ರೆಡ್ಡಿ, ತಾಲ್ಲೂಕಿನ ಕೆರ್ಗಳ್ಳಿ ಸರ್ವೆ ನಂಬರ್ 115ರಲ್ಲಿ 2014ರಲ್ಲಿ 2 ಎಕರೆ ಜಮೀನನ್ನ ಖರೀದಿಸಿದ್ದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳು ನನ್ನ ಹೆಸರಿನಲ್ಲಿವೆ. ಆದ್ರೆ ಶಾಸಕ ಸಾ.ರಾ. ಮಹೇಶ್ ಅವರು ತಮ್ಮ ಸ್ನೇಹಿತ ಮಂಜುನಾಥ್ ಎಂಬುವರಿಗೆ ಆ ಜಾಗವನ್ನು ಕೊಡಿಸಿದ್ದಾರೆ. ಅಲ್ಲದೆ ತಮ್ಮ ಹುಡುಗರನ್ನು ಬಿಟ್ಟು ತಂತಿ ಬೇಲಿ ಹಾಕಿಸಿದ್ದಾರೆ ಎಂದು ದೂರಿದರು. ಈ ಬಗ್ಗೆ ಸಾ.ರಾ. ಮಹೇಶ್ ಅವರಿಗೆ ಕರೆ ಮಾಡಿ ಕೇಳಿದ್ರೆ, ಅದು ನನ್ನ ಸ್ನೇಹಿತನಿಗೆ ಸೇರಿದ ಜಾಗ, ನಿನ್ನ ಹತ್ತಿರ ದಾಖಲಾತಿ ಇದ್ದರೆ ತೆಗೆದುಕೊಂಡು ಬಾ ಎಂದು ಹೇಳುತ್ತಾರೆ. ತಮ್ಮ ಸ್ನೇಹಿತನ ಮಾತು ಕೇಳಿ ನನ್ನ ಜಮೀನನ್ನು ಅವರಿಗೆ ಕೊಡಿಸಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಭೂ ಮಾಲೀಕ ಗಣಪತಿ ರೆಡ್ಡಿ ಮನವಿ ಮಾಡಿದರು.
ಜೊತೆಗೆ ಈ ಬಗ್ಗೆ ಕಳೆದ 5 ತಿಂಗಳ ಹಿಂದೆಯೇ ಜೈಪುರ ಠಾಣೆಯಲ್ಲಿ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಗಣಪತಿ ರೆಡ್ಡಿ ಅಳಲು ತೋಡಿಕೊಂಡರು.ಒಟ್ಟಿನಲ್ಲಿ ರೋಹಿಣಿ ಅವರ ವರ್ಗಾವಣೆಯಿಂದಾಗಿ ಸಾಂಸ್ಕೃತಿಕ ನಗರಿಯಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯವಾಗಿರುವುದು ತಿಳಿದು ಬಂದಿದೆ.





