ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್. ಶರ್ಮಿಳಾ ಮುಂದಿನ ತಿಂಗಳು ಅಂದರೆ ಜುಲೈ 8 ರಂದು ತೆಲಂಗಾಣದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸಲಿದ್ದಾರೆ.
ʼವೈ.ಎಸ್.ಆರ್ ತೆಲಂಗಾಣ ಪಕ್ಷ’ ಎಂದು ಹೆಸರಿಸಲಾಗಿರುವ ನೂತನ ಪಕ್ಷ ಜುಲೈ 8 ರಂದು ಶರ್ಮಿಳಾ ಅವರ ತಂದೆ ಹಾಗೂ ದಿವಂಗತ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಜನ್ಮ ದಿನದಂದು ಪಕ್ಷ ಸ್ಥಾಪನೆಯಾಗಲಿದೆ. ವೈಎಸ್ಆರ್ ತೆಲಂಗಾಣ ಪಕ್ಷವನ್ನು ಭಾರತದ ಚುನಾವಣಾ ಆಯೋಗ (ಇಸಿಐ) ಯೊಂದಿಗೆ ನೋಂದಾಯಿಸುವ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ ಎಂದು ಪಕ್ಷದ ಸಂಯೋಜಕ ವಡುಕಾ ರಾಜಗೋಪಾಲ್ ತಿಳಿಸಿದ್ದಾರೆ.
ವೈಎಸ್ಆರ್ ತೆಲಂಗಾಣ ಪಕ್ಷದ ನೋಂದಣಿಗೆ ಏನಾದರೂ ಆಕ್ಷೇಪಣೆಯಿದೆಯೇ ಎಂದು ಕೋರಿ ಮತದಾನ ಸಮಿತಿ ಅಧಿಸೂಚನೆ ಹೊರಡಿಸಿತ್ತು. ಈ ಸಂಬಂಧ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಅವರು ವೈಎಸ್ಆರ್ ತೆಲಂಗಾಣ ಪಕ್ಷದ ನೋಂದಣಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಆಯೋಗಕ್ಕೆ ತಿಳಿಸಿದ್ದಾರೆ.

ಏಪ್ರಿಲ್ 9 ರಂದು ಖಮ್ಮಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ತೆಲಂಗಾಣದಲ್ಲಿ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಮಗಳು ಶರ್ಮಿಳಾ ಘೋಷಿಸಿದಾಗ ತಾಯಿ ವಿಜಯಲಕ್ಷ್ಮಿ ಕೂಡ ಹಾಜರಿದ್ದರು. ಮಗಳನ್ನು ಆಶೀರ್ವದಿಸುವಂತೆ ಕೋರಿದ್ದರು. ಒಂದೆಡೆ ಸಹೋದರ ಜಗನ್ ಮೋಹನ್ ರೆಡ್ಡಿಯು ತಂಗಿಯ ರಾಜಕೀಯ ವಿಚಾರದಲ್ಲಿ ಮೌನವಹಿಸಿದ್ರೆ, ತಾಯಿ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ರಾಜಕೀಯ ಪ್ರವೇಶ ಹಾಗು ಹೊಸ ಪಕ್ಷಗಳ ಯೋಜನೆಗಳನ್ನು ಪ್ರಕಟಿಸುವ ಸಂಬಂಧ ಶರ್ಮಿಳಾ ಕೆಲವು ತಿಂಗಳಿಂದ ತೆಲಂಗಾಣದ ವಿವಿಧ ಜಿಲ್ಲೆಗಳ ನಿಷ್ಠಾವಂತ ವೈಎಸ್‌ಆರ್ ನಾಯಕರೊಂದಿಗೆ ಸಭೆ ನಡೆಸುತ್ತಿದ್ದರು. ಇದೀಗ ಹೊಸ ಪಕ್ಷದೊಂದಿಗೆ ರಾಜಕೀಯಕ್ಕೆ ಎಂಟ್ರಿಯಾಗ್ತಿರುವ ಶರ್ಮಿಳಾ ತೆಲಂಗಾಣದಲ್ಲಿ ಈಗ ಆಡಳಿತ ನಡೆಸುತ್ತಿರುವ ಕೆ ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್‌ಎಸ್ ವಿರುದ್ಧ ಶರ್ಮಿಳಾ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಮೂರು ದಿನ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ತೆಲಂಗಾಣದಲ್ಲಿ ಅಭಿವೃದ್ಧಿ ಕುಂಟಿತತೆಯ ಬಗ್ಗೆ ಕೋವಿಡ್ ನಿರ್ವಹಣೆಯ ಬಗ್ಗೆ, ನಿರುದ್ಯೋಗದ ಬಗ್ಗೆ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಿದ್ದರು.

ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿಗಳನ್ನು ಪ್ರಶ್ನೆ ಮಾಡುವುದಕ್ಕೆ ನಮ್ಮ ಪಕ್ಷದ ಅಗತ್ಯಯಿದೆ. ಈಗಿರುವ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಿಲ್ಲ ಎಂದು ಶರ್ಮಿಳಾ ಅವರು ಹಲವು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ಜೊತೆಗೆ ತಂದೆ ವೈಎಸ್ ರಾಜಣ್ಣ ಅವರ ಧ್ಯೆಯ, ಅಭಿವೃದ್ಧಿ ಕಾರ್ಯವನ್ನು ಮುಂದಿಟ್ಟು ಕೊಂಡು ಶರ್ಮಿಳಾ ತೆಲಂಗಾಣ ರಾಜಕೀಯಕ್ಕೆ ಎಂಟ್ರಿ ಕೊಡ್ತಿಯಿದ್ದಾರೆ. ಪಕ್ಷದ ಚಿನ್ಹೆ, ಧ್ವಜ, ಸಿದ್ಧಾಂತ ಜುಲೈ 8 ರಂದು ಬಹಿರಂಗವಾಗಲಿದೆ. ತೆಲಂಗಾಣದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಚುನಾವಣಾ ಸಿದ್ದತೆಗೂ ಸಾಕಷ್ಟು ಸಮಯ ಸಿಕ್ಕಂತಾಗಿದೆ.
2014 ರಲ್ಲಿ ಆಂಧ್ರಪ್ರದೇಶ, ತೆಲಂಗಾಣ ವಿಭಜನೆಯಾಗುವವರೆಗೂ ತೆಲಂಗಾಣ ಆಂಧ್ರಪ್ರದೇಶಕ್ಕೆ ಸೇರಿತ್ತು. 2004 ರಿಂದ 2009 ರವರೆಗೆ ಕಾಂಗ್ರೆಸ್ ಪಕ್ಷದಿಂದ ವೈ ಎಸ್ ರಾಜಶೇಖರ ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಮತ್ತೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸ್ವಲ್ಪ ದಿನಗಳಲ್ಲಿಯೇ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದರು.