
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆ ವಿಚಾರವಾಗಿ ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದು, ನಾನು ಅಷ್ಟೋಂದು ದೊಡ್ಡವನಲ್ಲ, ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಜನರ ಸೇವೆ ಮಾಡುವದೇ ನನ್ನ ಕೆಲಸ ಎಂದಿದ್ದಾರೆ.

ನಮ್ಮ ಪಕ್ಷದ ನಾಯಕರು ಏನು ನಿರ್ಣಯ ಮಾಡುತ್ತಾರೋ ಆ ಕೆಲಸ ಮಾಡುವೆ. ಒಂದು ವೇಳೆ ನನ್ನನ್ನು ಕರೆದು ಕೇಳಿದರೆ ಒಳ್ಳೆಯ ಸಲಹೆ ಕೊಡುವೆ. ಆದರೆ ಅವರು ನನಗೆ ಕರೆದಿಲ್ಲ, ಕೇಳುವುದೂ ಇಲ್ಲ ಎಂದಿದ್ದಾರೆ ಸಂಸದ ರಮೇಶ್ ಜಿಗಜಿಣಗಿ. ಕಾರ್ಯಕರ್ತರ ಮನಸ್ಸಿನಲಿ ಇಂದು ಅತ್ಯಂತ ನೋವಿದೆ ಅಂದಿದ್ದಾರೆ.
ನಾನು ಪಕ್ಷದಲ್ಲಿ ಅತ್ಯಂತ ಹಿರಿಯ ರಾಜಕಾರಣಿ. ಆದರೆ ನನ್ನನ್ನು ಬಿಜೆಪಿ ಪಕ್ಷ ಸರಿಯಾಗಿ ಬಳಸಿಕೊಂಡಿಲ್ಲ ಎಂಬ ನೋವು ನನಗೆ ಇದೆ. ನಾನು ಪಕ್ಷದಲ್ಲಿ ಹಿರಿಯ ರಾಜಕಾರಣಿ, ಯಡಿಯೂರಪ್ಪ ಬಿಟ್ಟರೆ ನಾನೇನೆ. ಹೆಗಡೆ, ಪಟೇಲರ ಜೊತೆ ರಾಜಕಾರಣ ಮಾಡಿದ ಅನುಭವ ಇತ್ತು ಆದರೆ ಅವರು ಬಳಸಿಕೊಂಡಿಲ್ಲ. ನಾವು ಸಂಘ ಪರಿವಾರದಿಂದ ಬಂದಿಲ್ಲ ಹೀಗಾಗಿ ನಮ್ಮನ್ನು ಬಳಸಿಕೊಂಡಿರಲಿಕಿಲ್ಲ ಎನ್ನುವ ಮೂಲಕ ಬಿಜೆಪಿಯಲ್ಲಿ ಸಂಘ ಪರಿವಾರದ ಪ್ರಭಾವ ಬಿಚ್ಚಿಟ್ಟಿದ್ದಾರೆ.

ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ, ದೇವರ ನನಗೆ ಎಲ್ಲವನ್ನು ಕೊಟ್ಟಿದ್ದಾನೆ ಎಂದಿದ್ದಾರೆ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ. ಬಿಜೆಪಿಯಲ್ಲಿ ಪ್ರಮುಖ ಸ್ಥಾನಮಾನ ಬೇಕಿದ್ದರೆ ಸಂಘ ಪರಿವಾರದ ಮೂಲಕ ಬಂದಿರಬೇಕು ಅನ್ನೋದನ್ನು ನೇರಾನೇರವಾಗಿ ಹೇಳಿದ್ದಾರೆ.