ಹೈದರಾಬಾದ್ : ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ 40 ದಿನದ ಹಸುಗೂಸನ್ನು ಕೊಂದಿರುವ ಘಟನೆಯು ಹೈದರಾಬಾದ್ನ ಅಬ್ದುಲ್ಲಾಪುರ್ಮೆಟ್ನಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿ ಧನರಾಜ್ ನಾಲ್ಕು ವರ್ಷಗಳ ಹಿಂದೆ ಲಾವಣ್ಯ ಎಂಬಾಕೆಯನ್ನು ಮದುವೆಯಾಗಿದ್ದ ಎನ್ನಲಾಗಿದೆ. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಮಂಗಳವಾರ ರಾತ್ರಿ ಧನರಾಜ್ ತನ್ನ ಪತ್ನಿಯನ್ನು ಆಕೆಯ ತವರು ಮನೆಯಿಂದ ಅಬ್ದುಲ್ಲಾಪುರಮೆಟ್ನಲ್ಲಿರುವ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ. ಬುಧವಾರ ಮುಂಜಾನೆ ದಂಪತಿ ನಡುವೆ ಯಾವುದೋ ಕಾರಣಕ್ಕೆ ಜಗಳ ಏರ್ಪಟ್ಟಿತ್ತು. ಇದರಿಂದ ಕೋಪಗೊಂಡ ಧನರಾಜ್ ಕೊಡಲಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ. ಇದು ಸಾಲದು ಎಂಬಂತೆ ತನ್ನ 40 ದಿನದ ಮಗುವನ್ನು ನೀರಿನ ತೊಟ್ಟಿಗೆ ಎಸೆದು ಹತ್ಯೆಗೈದಿದ್ದಾನೆ.
ಈ ಕೃತ್ಯದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಮನೆಗೆ ಬಂದು ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಲೆಮರೆಸಿಕೊಂಡಿರುವ ಧನರಾಜ್ನನ್ನು ಬಂಧಿಸಲು ತಂಡಗಳನ್ನು ರಚಿಸಿದ್ದು ಧನರಾಜ್ಗಾಗಿ ತಲಾಶ್ ಆರಂಭಗೊಂಡಿದೆ.