ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರಕ್ಕೆ ಕಾದಿದೆ ಭಾರಿ ನಷ್ಟ: ಮಹಾಮಾರಿ ಓಡಿಸಲು ತಡವಾದಷ್ಟು ಕಷ್ಟ ಕಷ್ಟ

ಕೋವಿಡ್ 19 ಸಾಂಕ್ರಾಮಿಕದಿಂದ ಉಂಟಾಗಿರುವ ಅನಿರೀಕ್ಷಿತ ಖರ್ಚುಗಳು, ನೌಕರಿ ನಷ್ಟ, ಸಂಬಳ ಕಡಿತ ಹಾಗೂ ಗ್ರಾಹಕರ ನಕಾರಾತ್ಮಕ ಮನೋಭಾವವು ಭಾರತದ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಭಾರಿ ಹೊಡೆತ ನೀಡಿದ್ದು, ಈ ವಲಯಕ್ಕೆ 30 ಶತಕೋಟಿ ಡಾಲರ್ ನಷ್ಟ ಆಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಕೋವಿಡ್ ಎರಡನೇ ಅಲೆಯ ಅಬ್ಬರದ ಹತೋಟಿಗಾಗಿ ಸ್ಥಳೀಯವಾಗಿ ಲಾಕ್ ಡೌನ್ ಸೇರಿದಂತೆ ನಾನಾ ಕ್ರಮಗಳನ್ನು ಸರಕಾರಗಳು ಕೈಗೊಂಡಿರುವುದರಿಂದ ಅದರ ಪರಿಣಾಮವೂ ಆರ್ಥಿಕ ವಲಯದ ಮೇಲೆ ಬೀಳುತ್ತಿದೆ. ಕಳೆದ ವರ್ಷದಂತೆಯೇ ಕೊರೋನಾದ ಹಾವಳಿಯು ಭಾರತದ ಆರ್ಥಿಕತೆ ಮತ್ತು ಕ್ರೆಡಿಟ್ ‍ಸ್ಥಿತಿಗತಿಗಳ ಹಳಿ ತಪ್ಪಿಸಲಿದೆ ಎಂದು ಎಸ್ ಅಂಡ್ ಪಿ ಗ್ಲೋಬಲ್ ರೇಟಿಂಗ್ ಹೇಳುತ್ತಿದೆ. ಇದು ಆತಂಕದ ವಿಚಾರ.

ಸಮಾಧಾನಕರ ವಿಚಾರವೆಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಆರ್ಥಿಕ ಪರಿಣಾಮ ಕಳೆದ ವರ್ಷದಷ್ಟು ಕಠಿಣವಾಗಿರದು ಮತ್ತು ಕೋವಿಡ್ ನ ಎರಡನೇ ಅಲೆಯ ಸರಣಿಯನ್ನು ದೇಶವು ಎಷ್ಟು ಶೀಘ್ರ ಮುರಿಯುವುದೋ ಅಷ್ಟೇ ವೇಗದಲ್ಲಿ ಭಾರತದ ಆರ್ಥಿಕತೆಯು ಚೇತರಿಕೆಯ ಹಾದಿ ಹಿಡಿಯಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ, ಕಳೆದ ವರ್ಷ ಇದೇ ಸಮಯದಲ್ಲಿ ದೇಶಾದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಈ ಬಾರಿ ಸ್ಥಳೀಯವಾಗಿ ಲಾಕ್‍ಡೌನ್ ಹೇರುತ್ತಿರುವುದರಿಂದ ಕೊರೋನಾದ ಕಾಟ ಕಡಿಮೆ ಇರುವಲ್ಲಿ ಆರ್ಥಿಕ ಚಟುವಟಿಕೆಗಳು ಸಣ್ಣ ಪ್ರಮಾಣದಲ್ಲಾದರೂ ನಡೆಯುತ್ತಿದೆ.

ಚಿಲ್ಲರೆ, ಸಗಟು ವ್ಯಾಪಾರದ ಮೇಲೆ ದುಷ್ಪರಿಣಾಮ:

ಸ್ಥಳೀಯವಾಗಿ ಲಾಕ್ ಡೌನ್ ಹೇರುತ್ತಿರುವುದರಿಂದಾಗಿ ಕೈಗಾರಿಕಾ ವಲಯಕ್ಕೆ ದೊಡ್ಡ ಆಪತ್ತು ಇಲ್ಲ. ಆದರೆ ಉಳಿದೆಲ್ಲ ಕ್ಷೇತ್ರಗಳಿಗಿಂತ ಅಸಂಖ್ಯ ಚಿಲ್ಲರೆ (ರಿಟೇಲ್) ಮತ್ತು ಸಗಟು (ಹೋಲ್ ಸೇಲ್) ವ್ಯಾಪಾರದ ಮೇಲೆ ಋಣಾತ್ಮಕ ಪರಿಣಾಮವಾಗುತ್ತಿದೆ. ಇದರಿಂದ ಈ ಎರಡೂ ವಲಯಗಳಿಗೆ ಅಪಾರ ನಷ್ಟ ಉಂಟಾಗುತ್ತಿದೆ.

ಖರೀದಿಗೆ ಒಲವಿಲ್ಲ, ಆರ್ಥಿಕ ಬಲವೂ ಇಲ್ಲ:

ಕೋವಿಡ್ ನಿಂದಾಗಿ ಸರಕಾರ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಹೀಗಾಗಿ ಸಿದ್ಧ ಉಡುಪು, ಪಾದರಕ್ಷೆ, ಪ್ರಸಾದನ, ಬಾರ್, ಹೋಟೇಲ್ ಗಳು, ಮಾಲ್ ಗಳು ಕಳೆದೆರಡು ತಿಂಗಳಿನಿಂದ ಬಹುತೇಕ ಬಾಗಿಲು ಮುಚ್ಚಿವೆ. ಆನ್ ಲೈನ್ ನಲ್ಲಿ ಮಾರಾಟಗಳಿಗೆ ಅವಕಾಶವಿದೆ. ಆದರೆ ಬಹುತೇಕ ಗ್ರಾಹಕರು ಅಂಗಡಿಗಳ ಮೂಲಕವೇ ಖರೀದಿ ಮಾಡುವುದರಿಂದ ಆನ್ ಲೈನ್ ಖರೀದಿಗೆ ಮನಸ್ಸು ಮಾಡುತ್ತಿಲ್ಲ. ಮಾಡಿದರೂ ಬಹಳಷ್ಟು ಮಂದಿಯಲ್ಲಿ ಹೊಸ ವಸ್ತು ಖರೀದಿಸುವ ಆರ್ಥಿಕ ಚೈತನ್ಯವಿಲ್ಲ.

ಕೆಲಸವಿಲ್ಲದೆ, ಸಂಬಳ ಕಡಿತವಾಗಿ ಹೀಗೆ ನಾನಾ ಆರ್ಥಿಕ ಕೊರತೆಗಳಿಂದ ಕೊರಗುತ್ತಿರುವ ಕೊಳ್ಳುವ ಕೈಗಳು ಈಗ ಬರಿದಾಗಿವೆ. ಅಲ್ಲದೆ, ಮದುವೆ, ಮುಂಜಿಯಂಥ ಶುಭ ಕಾರ್ಯಗಳೂ ಹೆಚ್ಚು ಕಡಿಮೆ ನಿಂತು ಹೋಗಿರುವುದರಿಂದ ದೊಡ್ಡ ಮಟ್ಟದ ಖರೀದಿಗಳೂ ಸ್ಥಗಿತವಾಗಿವೆ. ಮಳಿಗೆಗಳ ಬಾಡಿಗೆ ಕೊಡಬೇಕು. ಆದರೆ ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬಂಥ ಸ್ಥಿತಿಯಲ್ಲಿ ಚಿಲ್ಲರೆ ವ್ಯಾಪಾರ ಮಾಡುವ ವ್ಯಾಪಾರಿಗಳಿದ್ದಾರೆ. ಕೋವಿಡ್ 19 ಕಳೆದ ಮೂರು ದಶಕಗಳಲ್ಲೇ ದೊಡ್ಡ ಆರ್ಥಿಕ ಹೊಡೆತವನ್ನು ಗ್ರಾಹಕರಿಗೆ ನೀಡಿದೆ. ಗ್ರಾಹಕರಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದರೆ ವ್ಯಾಪಾರಿಯ ಬಳಿ ಯಾರು ತಾನೇ ಹೋಗುತ್ತಾರೆ?

60 ದಿನಗಳಲ್ಲಿ 9 ಲಕ್ಷ ಕೋಟಿ ರೂ. ನಷ್ಟ:

ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ದೇಶದ ನಾನಾ ರಾಜ್ಯಗಳು ಲಾಕ್ ಡೌನ್ ಅಸ್ತ್ರ ಪ್ರಯೋಗಿಸಿರುವುದರಿಂದ ದೇಶದ ಚಿಲ್ಲೆರೆ ವ್ಯಾಪಾರ ಕ್ಷೇತ್ರಕ್ಕೆ ಕಳೆದ 60 ದಿನಗಳಲ್ಲಿ 9 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ತಿಳಿಸಿದೆ.

ಭಾರಿ ನಷ್ಟಕ್ಕೆ ತುತ್ತಾಗಿರುವ ವ್ಯಾಪಾರಿಗಳನ್ನು ಬೆಂಬಲಿಸುವ ಕ್ರಮಗಳನ್ನು ಪ್ರಕಟಿಸಲು ಹಾಗೂ ಆರ್ಥಿಕ ಪ್ಯಾಕೇಜ್ ಮರು ಪರಿಶೀಲಿಸಲು 40 ಸಾವಿರ ವ್ಯಾಪಾರ ಸಂಘಗಳು ಹಾಗೂ ಏಳು ಕೋಟಿ ಸದಸ್ಯರನ್ನು ಹೊಂದಿರುವ ಸಿಎಐಟಿ ಸರಕಾರವನ್ನು ಆಗ್ರಹಿಸಿದೆ.

ಈಗಿನ  ಸನ್ನಿವೇಶವು ಚಿಲ್ಲರೆ ವ್ಯಾಪಾರಿಗಳ ಭವಿಷ್ಯಕ್ಕೆ ಮಾತ್ರ ಕುತ್ತು ತಂದಿಲ್ಲ. ಈ ಕ್ಷೇತ್ರದಲ್ಲಿ ಆಗಿರುವ 9 ಲಕ್ಷ ಕೋಟಿ ರೂ. ನಷ್ಟದ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಜಿಎಸ್ಟಿ ರೂಪದಲ್ಲಿ ಬರಬೇಕಿದ್ದ 1.5 ಲಕ್ಷ ಕೋಟಿ ರೂ. ಆದಾಯಕ್ಕೂ ಕೊಕ್ಕೆ ಹಾಕಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ ವಾಲ್ ತಿಳಿಸಿದ್ದಾರೆ.

ದೇಶದಲ್ಲಿರುವ ಸಣ್ಣ, ಮಧ್ಯಮ ಹಾಗೂ ದೊಡ್ಡ ವ್ಯಾಪಾರಿಗಳ ಸಂಖ್ಯೆ ಸುಮಾರು 7 ಕೋಟಿ ಆಗಿದ್ದು, ಅವರು 45 ಕೋಟಿ ಮಂದಿಗೆ ಕೆಲಸ ನೀಡಿ ಬದುಕು ಕೊಟ್ಟಿದ್ದಾರೆ. ಈ ವ್ಯಾಪಾರಿಗಳು ದೇಶದ್ಯಾಂತ ಏನಿಲ್ಲವೆಂದರೂ 5.2 ಲಕ್ಷ ಕೋಟಿ ರೂ.ಗಳಷ್ಟು ವ್ಯಾಪಾರ ಮಾಡುತ್ತಾರೆ. ಕೊರೋನಾ ಕಾಟ ಮುಗಿದ ನಂತರ ಜಗತ್ತು ಮತ್ತು ಭಾರತದ ಆರ್ಥಿಕತೆ ಶೀಘ್ರವೇ ಚೇತರಿಸಬಹುದು. ಆದರೆ ಚಿಲ್ಲರೆ ವ್ಯಾಪಾರಿಗಳ ಬದುಕು ಸಹಜ ಸ್ಥಿತಿಗೆ ಮರಳಲು ದೀರ್ಘ ಕಾಲ ಬೇಕಾಗಬಹುದು. ಜತೆಗೆ ಭಾರಿ ಬೆಲೆಯನ್ನೂ ತೆರಬೇಕಾಗಬಹುದು ಎಂದು ಪ್ರವೀಣ್ ಖಂಡೇಲ್ ವಾಲ್ ಹೇಳುತ್ತಾರೆ.

ಸಿಎಐಟಿ ಪ್ರಕಾರ, ಕಳೆದ ವರ್ಷ ಕೊರೋನಾ ಕಾಟ ಆರಂಭವಾದ ಮೊದಲ 100 ದಿನಗಳಲ್ಲಿ 15.5 ಲಕ್ಷ ಕೋಟಿ ರೂ. ನಷ್ಟವಾಗಿತ್ತು. ಆದರೆ ಆಶಾವಾದವನ್ನು ಬಿಡಬೇಕಿಲ್ಲ. ವರದಿಗಳ ಪ್ರಕಾರ, ಕೊರೋನಾ ಕಾಟದಿಂದ ದೇಶ ಮುಕ್ತವಾದರೆ 2017ರಲ್ಲಿ 79,500 ಕೋಟಿ ರೂ.ಗಳಷ್ಟಿದ್ದ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ಕ್ಷೇತ್ರವು 2026ರಲ್ಲಿ 1.75 ಲಕ್ಷ ಕೋಟಿ ರೂ.ಗೆ ಬೆಳೆಯಲಿದೆ. ಸಮಗ್ರ ರಾಷ್ಟ್ರೀಯ ಚಿಲ್ಲರೆ ವ್ಯಾಪಾರ ನೀತಿ ಜಾರಿಯಾದರೆ 2024ರ ವೇಳೆಗೆ ಇನ್ನೂ 30 ಲಕ್ಷ ಉದ್ಯೋಗ ಸೃಷ್ಟಿಯಾಗಬಹುದು. ಸದ್ಯ ಜಗತ್ತಿನ ಚಿಲ್ಲರೆ ವಹಿವಾಟು ಸೂಚ್ಯಂಕದ ಪ್ರಕಾರ, ಭಾರತ ದ್ವಿತೀಯ ಸ್ಥಾನದಲ್ಲಿದೆ. ದೇಶದ ಜಿಡಿಪಿಯಲ್ಲಿ ಚಿಲ್ಲರೆ ವ್ಯಾಪಾರ ಕ್ಷೇತ್ರದ ವಹಿವಾಟು ಶೇ.10 ರಷ್ಟಿದೆ. ಈ ಕ್ಷೇತ್ರವು ದೇಶದಲ್ಲಿ ಶೇ.8ರಷ್ಟು ಉದ್ಯೋಗ ಸೃಷ್ಟಿಸಿದೆ. ದೇಶದ ಚಿಲ್ಲರೆ ವಲಯದ ಶೇ.88 ರಷ್ಟು ಅಸಂಘಟಿತವಾಗಿರುವುದರಿಂದ ಜಿಡಿಪಿಗೆ ದೊಡ್ಡ ಕೊಡುಗೆ ನೀಡಲಾಗುತ್ತಿಲ್ಲ ಎನ್ನುವುದು ಈ ಕ್ಷೇತ್ರದ ದೊಡ್ಡ ಕೊರಗು ಎನ್ನುವುದು ಸಿಎಐಟಿ ನೀಡುವ ಮಾಹಿತಿಯಾಗಿದೆ.

2030ರಲ್ಲಿ 2.5 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆ:

ಎಲ್ಲ ಸರಿಯಾದರೆ ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರವು 2030ರ ವೇಳೆಗೆ 2.5 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಟೆಕ್ನೋಪಾರ್ಕ್ ನೊಂದಿಗಿನ ಸಹಯೋಗದೊಂದಿಗೆ ನಾಸ್ಕಾಂ ಬಿಡುಗಡೆ ಮಾಡಿರುವ ರೀಟೇಲ್ 4.0 ವರದಿ ಹೇಳಿದೆ.

ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಬದಲಾವಣೆಯು ಬೆಳವಣಿಗೆಯನ್ನು ಮುನ್ನಡೆಸಲಿದ್ದು, 2030 ರ ವೇಳೆಗೆ ಭಾರತದ ಚಿಲ್ಲರೆ ಮಾರುಕಟ್ಟೆ ಕ್ಷೇತ್ರವು 1.5 ಟ್ರಿಲಿಯನ್ ಡಾಲರ್ ನಷ್ಟು ಅಗಾಧ ಗಾತ್ರಕ್ಕೆ ಬೆಳೆಯಲಿದೆ. ಇದು ಸ್ಥಳೀಯ ಮಾರುಕಟ್ಟೆಯ ಗಾತ್ರವನ್ನು ವೃದ್ಧಿಸಲಿದ್ದು, ಉದ್ಯೋಗ ಸೃಷ್ಟಿ ಮತ್ತು ರಫ್ತು ಪ್ರಮಾಣವನ್ನು ಉಬ್ಬಿಸಲಿದೆ ಎಂದು ಹೊಸ ಅಧ್ಯಯನದಲ್ಲಿ ರೀಟೇಲ್ 4.0 ವಿವರಿಸಿದೆ.

ಸಿಎಐಟಿ ಹಾಗೂ ರೀಟೇಲ್ 4.0 ವರದಿಗಾಗಿ ನಡೆಸಿರುವ ಅಧ್ಯಯನಗಳು ನಮ್ಮಲ್ಲಿ ಆಶಾವಾದಗಳನ್ನು ತುಂಬಬಹುದು. ಆದರೆ ವಾಸ್ತವದಲ್ಲಿ ಅದೆಲ್ಲ ಬೆಳವಣಿಗಳ ಕನಸು ಸಾಕಾರವಾಗಬೇಕಾದರೆ ಮೊದಲು ಭಾರತವು ಕೋವಿಡ್ ಸಾಂಕ್ರಾಮಿಕದ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿದೆ. ಅದು ಸಾಧ್ಯವಾದರೆ ಮಾತ್ರ ಚಿಲ್ಲರೆ ವ್ಯಾಪಾರ ಕ್ಷೇತ್ರವೂ ತೆರೆದುಕೊಳ್ಳಲಿದ್ದು, ಆರ್ಥಿಕ ಚೇತರಿಕೆಗೂ ಕಾರಣವಾಗಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಮುಂದೆ ಸವಾಲು ದೊಡ್ಡದಿದೆ. ಅವುಗಳು ಈ ಸವಾಲುಗಳನ್ನು ಮೆಟ್ಟಿ ನಿಲ್ಲುವ ದಾರಿಗಳನ್ನು ಹುಡುಕಬೇಕಿದೆ. ಇದಕ್ಕಾಗಿ ಪ್ರತಿಪಕ್ಷಗಳು, ಜನಸಾಮಾನ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ. ಎಲ್ಲರ ಸಲಹೆ, ಸಹಕಾರಗಳಿದ್ದರೆ ಮಾತ್ರ ದೇಶ ಮುನ್ನಡೆಯಲು ಸಾಧ್ಯ. ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...