ಕೊವ್ಯಾಕ್ಸ್ ಕೊರತೆಗೆ ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಕಾರಣ – ಜಾಗತಿಕ ಆರೋಗ್ಯ ಸಂಸ್ಥೆಗಳ ಅಭಿಪ್ರಾಯ

ಶಿವಕುಮಾರ್‌ ಎ

ಭಾರತದಲ್ಲಿ ಕರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗಿದ್ದು ಜಾಗತಿಕ ಕರೋನಾ ಲಸಿಕಾ ಅಭಿಯಾನದ (ಕೊವ್ಯಾಕ್ಸ್) ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು, WHO, UNICEF, GAVI ಮತ್ತು CEPI ಜಂಟಿ ಹೇಳಿಕೆ ನೀಡಿದೆ. ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್’ಗಳಷ್ಟು ಲಸಿಕೆ ಕೊರತೆಯನ್ನು ಈ ಜಗತ್ತು ಎದುರಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Coalition of Preparedness Innovations (CEPI) CEO, ಡಾ. ರಿಚರ್ಡ್ ಹಚೆಟ್, ಗ್ಲೋಬಲ್ ವ್ಯಾಕ್ಸಿನ್ ಅಲಾಯನ್ಸ್ (GAVI) ಸಿಇಒ ಡಾ. ಸೆತ್ ಬರ್ಕ್ಲಿ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕರಾದ ಡಾ. ತೆಡ್ರಸ್ ಅಧನಮ್ ಘೆಬ್ರೆಯೇಸಸ್ ಮತ್ತು UNICEFನ ಕಾರ್ಯಕಾರಿ ನಿರ್ದೇಶಕರಾದ ಹರನ್ರಿಯೆಟ್ಟಾ ಫೋರ್ ಅವರು ಬಿಡುಗಡೆ ಮಾಡಿರುವ ಜಂಟಿ ಹೇಳಿಕೆ ಇದಾಗಿದೆ. ಲಸಿಕಾ ಅಭಿಯಾನವನ್ನು ಸಶಕ್ತವಾಗಿ ನಡೆಸಿರುವ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗಿವೆ, ಎಂದು ಅವರು ಹೇಳಿದ್ದಾರೆ.

“ಲಸಿಕಾಕರಣ ಹೆಚ್ಚಾಗಿರುವ ದೇಶದಲ್ಲಿ ಕೋವಿಡ್ ಪ್ರಕರಣಗಳೊಂದಿಗೆ, ಆಸ್ಪತ್ರೆಯಲ್ಲಿ ದಾಖಲಾಗುವವರ ಸಂಖ್ಯೆಯೂ ಇಳಿಮುಖವಾಗಿದೆ. ಇದರೊಂದಿಗೆ ಸಾಮಾನ್ಯ ಪರಿಸ್ಥಿತಿ ಹಿಂತಿರುಗುವ ಸೂಚನೆಗಳು ಲಭಿಸುತ್ತಿವೆ. ಆದರೆ, ಜಾಗತಿಕವಾಗಿ ಈ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ,” ಎಂದು ಹೇಳಲಾಗಿದೆ.

ದಕ್ಷಿಣ ಏಷಿಯಾ ಭಾಗದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಏರುತ್ತಿದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಲಸಿಕೆಗಳ ಕೊರತೆ ಉಂಟಾಗಿದೆ. ಭಾರತದಲ್ಲಿ ತೀವ್ರಗತಿಯಲ್ಲಿ ಏರುತ್ತಿರುವ ಕೋವಿಡ್ ಪ್ರಕರಣಗಳು ಜಾಗತಿಕ ಲಸಿಕಾ ಕೊರತೆಗೆ ಪ್ರಮುಖ ಕಾರಣ. ಜೂನ್ ಅಂತ್ಯದ ವೇಳೆಗೆ 190 ಮಿಲಿಯನ್ ಡೋಸ್ಗಳ ಕೊರತೆ ಎದುರಾಗಲಿದೆ. ಹಾಗಾಗಿ, 2021ರ ಅಂತ್ಯದ ವೇಳಗೆ ಎರಡು ಬಿಲಿಯನ್ ಡೋಸ್ ಲಸಿಕೆಗಳ ಉತ್ಪಾದನೆಯ ಅಗತ್ಯತೆ ಎದುರಾಗಲಿದೆ, ಎಂದು ಅಂದಾಜಿಸಿದ್ದಾರೆ.

“ಲಸಿಕೆ ಉತ್ಪಾದಿಸುವ ಕಂಪನಿಗಳೊಂದಿಗೆ ಈಗಾಗಲೇ ನಡೆಸಿರುವ ವ್ಯವಹಾರದಿಂದ ಈ ವರ್ಷಾಂತ್ಯಕ್ಕೆ ಕೊವ್ಯಾಕ್ಸ್ (ಜಾಗತಿಕ ಕೋವಿಡ್ ವ್ಯಾಕ್ಸಿನ್ ಸರಬರಾಜು) ಲಸಿಕೆ ಸಿಗಲಿದೆ. ಆದರೆ, ಅದು ಸರಿಯಾದ ಸಮಯಕ್ಕೆ ಲಭಿಸದಿದ್ದರೆ ಇದರ ಪರಿಣಾಮ ಭೀಕರವಾಗಿರಲಿದೆ, ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಲಸಿಕೆ ಕೊರತೆಯನ್ನು ನೀಗಿಸಲು ದೇಶಗಳು ಲಸಿಕೆಗಳನ್ನು ಹಂಚಬೇಕು ಎಂದು ಕರೆ ನೀಡಿದೆ. ಅಮೇರಿಕಾ ಮತ್ತು ಯೂರೋಪ್ ಒಕ್ಕೂಟ ರಾಷ್ಟ್ರಗಳು ಜಾಗತಿಕವಾಗಿ 180 ಮಿಲಿಯನ್ ಡೋಸ್ ಲಸಿಕೆಯನ್ನು ಹಂಚುವ ಭರವಸೆ ನೀಡಿವೆ. ಆದರೆ, ಇಷ್ಟು ಮಾತ್ರ ಸಾಕಾಗುವುದಿಲ್ಲ. ಇತರ ರಾಷ್ಟ್ರಗಳು ಕೂಡಾ ಲಸಿಕೆ ಹಂಚಲು ಮುಂದಾಗಬೇಕು ಎಂದು ಈ ಏಜೆನ್ಸಿಗಳು ಮನವಿ ಮಾಡಿಕೊಂಡಿವೆ.

ಪ್ರಪಂಚದ ಅತೀ ದೊಡ್ಡ ಲಸಿಕೆ ತಯಾರಿಕಾ ಕಂಪೆನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ GAVIಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತಕ್ಕೆ ಕೋವಿಡ್ ಲಸಿಕೆ ನೀಡುವುದರೊಂದಿಗೆ, ಜಾಗತಿಕೆ ಲಸಿಕಾಕರಣ ಅಭಿಯಾನಕ್ಕೆ ಕೈಜೋಡಿಸಲಿದೆ. ಆದರೆ, ಭಾರತದಲ್ಲಿ ಈಗ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಕೊವ್ಯಾಕ್ಸ್ ಗೆ ಅಗತ್ಯವಿರುವಷ್ಟು ಡೋಸ್’ಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ತಿಳಿಗೊಂಡ ನಂತರ ಕೊವ್ಯಾಕ್ಸ್ ಗೆ ಅಗತ್ಯವಿರುವ ಲಸಿಕೆಗಳನ್ನು ನೀಡಲು ಎಸ್್ಐಐ ಮುಂದಾಗಬೇಕು ಎಂದು ಕಳೆದ ವಾರ ವಿಶ್ವ ಆರೋಗ್ಯ ಸಂಸ್ಥೆಯ ಡಾ. ತೆಡ್ರಸ್ ಅವರು ಹೇಳಿದ್ದರು.

ಸದ್ಯದ ಮಟ್ಟಿಗೆ ಕೊವ್ಯಾಕ್ಸ್ ಸರಬಾರಾಜು 65 ಮಿಲಿಯನ್ ಡೋಸ್’ಗಳಷ್ಟು ತಲುಪಿದೆ. ಆದರೆ, ಇಲ್ಲಿಯವರೆಗೆ ಕಡಿಮೆ ಎಂದರೂ 170 ಮಿಲಿಯನ್ ಡೋಸ್’ಗಳಷ್ಟು ತಲುಪಬೇಕಿತ್ತು. ಈಗಾಗಲೇ ಕೊವ್ಯಾಕ್ಸ್ ಅಂದುಕೊಂಡ ಗುರಿ ತಲುಪದಿರುವುದರಿಂದ ಮುಂಬರುವ ದಿನಗಳಲ್ಲಿ ಲಸಿಕೆ ಉತ್ಪಾದನೇ ಇನ್ನಷ್ಟು ಹೆಚ್ಚಿಸಬೇಕಾಗಿದೆ.

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರಸ್ ಅವರು ಇತ್ತೀಚಿಗೆ Ikeaದೊಂದಿಗಿನ ವರ್ಚುವಲ್ ಸಭೆಯಲ್ಲಿ ಮಾತನಾಡುತ್ತಾ, ಸುಮಾರು ಎಂಬತ್ತು ಸಾವಿರ ಜನರು ಪ್ರತಿ ವಾರ ಕೋವಿಡ್’ನಿಂದ ಸಾವನ್ನಪ್ಪುತ್ತಿದ್ದಾರೆ. ಈ ವೈರಸ್ ನೊಂದಿಗಿನ ಯುದ್ದದಲ್ಲಿ ನಾವಿದ್ದೇವೆ. ನಿಜವಾದ ಜಾಗತಿಕ ಲಸಿಕಾ ಯೋಜನೆ ಮಾತ್ರ ಈ ಯುದ್ದದಲ್ಲಿ ನಮ್ಮನ್ನು ಗೆಲ್ಲಿಸಲಿದೆ ಎಂದು ಹೇಳಿದ್ದಾರೆ.

UNICEF ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆ ಸರಬರಾಜು ಮಾಡಲು ವಿಳಂಬ ಮಾಡಿರುವುದೇ ಜಾಗತಿಕವಾಗಿ ಲಸಿಕೆಗಲ ಕೊರತೆ ಉಂಟಾಗಲು ಕಾರಣ ಎಂದು ಹೇಳಿದೆ. ಇತರ ಕಂಪನಿಗಳು ತಮ್ಮ ಒಪ್ಪಂದದಂತೆ ಜೂನ್ ಅಂತ್ಯದ ವೇಳೆಗೆ ಲಸಿಕೆಗಳನ್ನು ಸರಬರಾಜು ಮಾಡಲಿವೆ ಎಂಬ ವಿಶ್ವಾಸವಿದೆ. ಆದರೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ವಿಳಂಬಕ್ಕೆ ಯಾವುದೇ ದಿನಾಂಕವನ್ನು ನಿಗದಿಗೊಳಿಸಲು ಸಾಧ್ಯವಾಗುತ್ತಿಲ್ಲ, ಎಂದು ವಿಷಾದ ವ್ಯಕ್ತಪಡಿಸಿದೆ.

ಭಾರತದಲ್ಲಿಯೇ ಕೋವಿಡ್ ಲಸಿಕೆಗಳ ತೀವ್ರ ಅಭಾವವು ಲಸಿಕಾ ಅಭಿಯಾನಕ್ಕೆ ದೊಡ್ಡ ಮಟ್ಟದ ಪೆಟ್ಟು ನೀಡಿರುವ ಈ ಸಂದರ್ಭದಲ್ಲಿ, ಜಾಗತಿಕ ಸಂಸ್ಥೆಗಳ ಹೇಳಿಕೆಯು ನಿಜವಾಗಿಯೂ ಭಾರತ ಮೂಲದ ಲಸಿಕೆ ತಯಾರಿಕ ಸಂಸ್ಥೆಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ. ಈಗಾಗಲೇ 18ರಿಂದ 44ರ ವಯಸ್ಸಿನವರಿಗೆ ಲಸಿಕೆ ಪಡೆಯಲು ಸಾಧ್ಯವಾಗದೇ ಇರುವುದರಿಂದ ಜನರಲ್ಲಿಯೂ ಆತಂಕದ ಪರಿಸ್ಥಿತಿ ಎದುರಾಗಿದೆ. ಅಂತರಾಷ್ಟ್ರೀಯ ಮಟ್ಟದ ಲಸಿಕಾ ತಯಾರಕರಿಂದ ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳು ಇನ್ನಷ್ಟು ತೀವ್ರಗತಿಯಲ್ಲಿ ಸಾಗಬೇಕಾದ ಅವಶ್ಯಕತೆಯಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...